ಸೋಮವಾರ, ಮೇ 25, 2020
27 °C

ವರ್ಗಾವಣೆಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸರ್ಕಾರಿ ನೌಕರರ ಎರ್ರಾಬಿರ್ರಿ ವರ್ಗಾವಣೆಗೆ ಕಡಿವಾಣ ಹಾಕಿರುವ ಹೈಕೋರ್ಟ್, ವರ್ಗಾವಣೆಗೆ ಸಂಬಂಧಿಸಿದಂತೆ 2001ರ ನವೆಂಬರ್ ತಿಂಗಳಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶದ ಅನ್ವಯ ವರ್ಗಾವಣೆ ಮಾಡುವಂತೆ ಶನಿವಾರ ಮಹತ್ವದ ತೀರ್ಪು ನೀಡಿದೆ.ವರ್ಗಾವಣೆ ನೀತಿ ಪ್ರಶ್ನಿಸಿ ಕೋರ್ಟ್‌ಗೆ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳಲ್ಲಿ ವಿಭಿನ್ನ ಆದೇಶಗಳು ಹೊರಟಿದ್ದ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ನ್ಯಾಯಮೂರ್ತಿ ವಿ.ಜಿ.ಸಭಾಹಿತ ನೇತೃತ್ವದ ವಿಶೇಷ ಪೂರ್ಣ ಪೀಠವು ಬಗೆಹರಿಸಿದೆ. 2001ರಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಜಾರಿಯಾಗಿದ್ದ ಆದೇಶದ ಅನ್ವಯವೇ ವರ್ಗಾವಣೆ ನೀತಿ ಅನುಸರಿಸಲು ಆದೇಶಿಸುವಂತೆ ಕೋರಿಕೊಂಡಿದ್ದ ಹಲವು ನೌಕರರ ವಾದವನ್ನು ಪೀಠ ಮಾನ್ಯ ಮಾಡಿದೆ.ಇದರಿಂದಾಗಿ ಶೈಕ್ಷಣಿಕ ವರ್ಷದ ಮಧ್ಯೆ ಅಥವಾ ಇನ್ನಾವುದೋ ತಿಂಗಳಿನಲ್ಲಿ ವರ್ಗಾವಣೆ ಭೀತಿ ಎದುರಿಸುತ್ತಿರುವ ಲಕ್ಷಾಂತರ ಸರ್ಕಾರಿ ನೌಕರರು ನಿರಾಳವಾಗಿ ಉಸಿರಾಡುವಂತಾಗಿದೆ.ಸರ್ಕಾರಿ ಆದೇಶದಲ್ಲಿ ಏನಿದೆ?: 2001ರ ನವೆಂಬರ್ 22ರ ಸರ್ಕಾರಿ ಆದೇಶದನ್ವಯ ವೃಂದ ನಿರ್ವಹಣಾ ಪ್ರಾಧಿಕಾರವು ಏಪ್ರಿಲ್-ಮೇ ತಿಂಗಳಿನಲ್ಲಿ ಮಾತ್ರ ವರ್ಗಾವಣೆ ಮಾಡಬೇಕು. ಇದನ್ನು ಮೀರಿ ವರ್ಗಾವಣೆ ಮಾಡಲೇಬೇಕಾದ ಪ್ರಸಂಗ ಬಂದಲ್ಲಿ, ಅದರ ಬಗ್ಗೆ ಬರವಣಿಗೆ ಮೂಲಕ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು. ಅಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ ಪೂರ್ವಾನುಮತಿ ಕಡ್ಡಾಯ.ಒಂದು ವರ್ಷದಲ್ಲಿ ವರ್ಗಾವಣೆಗೊಳ್ಳುವ ನೌಕರರ ಸಂಖ್ಯೆ ಆ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಖ್ಯೆಯ ಶೇ 5ರಷ್ಟನ್ನು ಮೀರಿರಬಾರದು ಎಂದೂ ಸರ್ಕಾರಿ ಆದೇಶದಲ್ಲಿ ಉಲ್ಲೇಖಗೊಂಡಿದೆ.ಎಷ್ಟು ವರ್ಷಕ್ಕೆ ವರ್ಗಾವಣೆ?: ನೌಕರರ ವರ್ಗಾವಣೆ ಅವಧಿಯ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಗ್ರೂಪ್-ಎ ಹುದ್ದೆಯ ನೌಕರರು ಒಂದು ಸ್ಥಳದಲ್ಲಿ ಕನಿಷ್ಠ 3 ವರ್ಷ, ಗ್ರೂಪ್-ಬಿ ನೌಕರರು ನಾಲ್ಕು, ಗ್ರೂಪ್-ಸಿ ನೌಕರರು ಐದು ಹಾಗೂ ಗ್ರೂಪ್-ಡಿ ನೌಕರರು ಏಳು ವರ್ಷ ಸೇವೆ ಸಲ್ಲಿಸಿರಬೇಕು.ಅದರಂತೆ ಪೊಲೀಸ್ ಇಲಾಖೆ, ವಾಣಿಜ್ಯ ತೆರಿಗೆ, ಅಬಕಾರಿ, ಅರಣ್ಯ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ, ಲೋಕೋಪಯೋಗಿ, ನೀರಾವರಿ, ಪಂಚಾಯತ್ ರಾಜ್ ಹಾಗೂ ಕರ್ನಾಟಕ ಆಡಳಿತಾತ್ಮಕ ಇಲಾಖೆಗಳಲ್ಲಿನ ಸಿಬ್ಬಂದಿಯು ಕನಿಷ್ಠ 2 ವರ್ಷ ಹಾಗೂ ಗರಿಷ್ಠ 3 ವರ್ಷ ಒಂದು ಕಡೆ ಸೇವೆ ಸಲ್ಲಿಸಿರಬೇಕು.ಸರ್ಕಾರದ ಯಾವುದೇ ಇಲಾಖೆ ಸಿಬ್ಬಂದಿ ನಿವೃತ್ತಿ ಹೊಂದುವ2 ವರ್ಷಗಳ ಪೂರ್ವದಲ್ಲಿ ಅವರು ಇಚ್ಛಿಸಿರುವ ಅಥವಾ ಸಮೀಪದ ಊರುಗಳಿಗೆ ಅವರಿಗೆ ವರ್ಗಾವಣೆ ಮಾಡಬೇಕು.ಇದಕ್ಕೆ ಅನ್ವಯವಿಲ್ಲ: ಕೆಲವೊಂದು ಸಂದರ್ಭಗಳಲ್ಲಿ ಮೇಲೆ ತಿಳಿಸಿರುವ ವರ್ಗಾವಣೆ ನೀತಿಗೆ ಸಡಿಲಿಕೆ ನೀಡಲಾಗಿದೆ. ಅವುಗಳೆಂದರೆ ಪತಿ-ಪತ್ನಿ ಒಂದೇ ಕಡೆ ಕೆಲಸ ನಿರ್ವಹಿಸಲು ಬಯಸಿದರೆ, ವಿಧವೆಯಾಗಿದ್ದರೆ, ದೈಹಿಕ ಅಂಗವಿಕಲರಾಗಿದ್ದರೆ ಹೀಗೆ ಕೆಲವು ಸಂದರ್ಭಗಳಲ್ಲಿ ವರ್ಗಾವಣೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಅವಶ್ಯಕತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ಆದೇಶದಲ್ಲಿ ‘ವರ್ಗಾವಣೆ’ ಎಂದರೆ ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ, ಕೇಂದ್ರದಲ್ಲಿನ ಒಂದು   ಕಚೇರಿಯಿಂದ ಇನ್ನೊಂದಕ್ಕೆ ಹಾಗೂ ಇನ್ನೊಂದು ಊರಿಗೆ ಎಲ್ಲವೂ ಒಳಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.