ವರ್ಗಾವಣೆಗೆ ಶಾಸಕರ ಅತೃಪ್ತಿ

7

ವರ್ಗಾವಣೆಗೆ ಶಾಸಕರ ಅತೃಪ್ತಿ

Published:
Updated:

ಬೆಂಗಳೂರು:  ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಮಾತು ನಡೆಯುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಅಸಮಾಧಾನ­ಗೊಂಡಿದ್ದಾರೆ. ಬುಧವಾರ ರಾತ್ರಿ 600ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಪಟ್ಟಿ ಪ್ರಕಟವಾದ ನಂತರ ಶಾಸಕರ ಸಿಟ್ಟು ಇನ್ನಷ್ಟು ಹೆಚ್ಚಾಗಿದ್ದು ಗುರುವಾರ ಕೆಲವು ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಅಲ್ಲದೆ ಕೆಪಿಸಿಸಿ ಅಧ್ಯಕ್ಷರಿಗೂ ಈ ಬಗ್ಗೆ ಮೌಖಿಕ ವಾಗಿ ದೂರು ನೀಡಿದ್ದು ಕರ್ನಾಟಕದ ಉಸ್ತುವಾರಿ ನೋಡಿಕೊ­ಳ್ಳು­ತ್ತಿರುವ ದಿಗ್ವಿಜಯ್‌ ಸಿಂಗ್‌ ಅವರಿಗೂ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ವರ್ಗಾವಣೆ ವಿಚಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಮಾತಿಗೆ ಬೆಲೆ ಕೊಡುತ್ತಿಲ್ಲ. ತಮ್ಮ ಆತ್ಮೀಯ ಶಾಸಕರು ಮಾಡಿದ ಶಿಫಾರಸುಗಳಿಗೆ ಬೆಲೆ ನೀಡುತ್ತಾರೆ. ಉಳಿದ ಶಾಸಕರಿಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂದರು.‘ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹಸ್ತಕ್ಷೇಪ ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಕುಟುಂಬದ ಸದಸ್ಯರೂ ಕೂಡ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿ, ಜೆಡಿಎಸ್‌ ಶಾಸಕರ ಮಾತಿಗೆ ಸಿಕ್ಕಷ್ಟು ಬೆಲೆ ಕೂಡ ಕಾಂಗ್ರೆಸ್‌ ಶಾಸಕರಿಗೆ ಸಿಗುತ್ತಿಲ್ಲ ಎಂದು ಹೆಸರು ಬಹಿರಂಗಪ­ಡಿಸಲು ಸಿದ್ಧರಿಲ್ಲದ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಪಟ್ಟಿಯನ್ನು ಖುದ್ದು ಮುಖ್ಯಮಂತ್ರಿ ಅವರೇ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಸಹಾಯದಿಂದ ಅಂತಿಮಗೊ­ಳಿಸಿದ್ದಾರೆ. ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರ ಮಾತನ್ನೂ ಕೇಳಿಲ್ಲ’ ಎಂದರು. ‘ಈ ಹಿಂದೆ, ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಿಸಲಾಗಿತ್ತು. ಆದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ’ ಎಂದು ಅವರು ದೂರಿದರು.‘ಪೊಲೀಸ್‌ ಅಧಿಕಾರಿಗಳ ವರ್ಗಾವಣೆ­ಯನ್ನು ಪೊಲೀಸ್‌ ಸಿಬ್ಬಂದಿ ಮಂಡಳಿಯೇ ಮಾಡಿದೆ. ಆದರೂ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ­ಗೊಳ್ಳಲು ಕಾರಣವೇನು’ ಎಂದು ಪ್ರಶ್ನೆ ಮಾಡಿದರೆ ‘ಮಂಡಳಿ ಕೂಡ ಮುಖ್ಯ­ಮಂತ್ರಿಗಳ ಅಧೀನದಲ್ಲಿಯೇ ಇದೆ’ ಎಂದು ಅವರು ಹೇಳಿದರು.ಜಯಚಂದ್ರ ಸ್ಪಷ್ಟನೆ

ವರ್ಗಾವಣೆ ಕುರಿತು ಶಾಸಕರು ಅಸಮಾಧಾನಗೊಂಡಿರುವ ಬಗ್ಗೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟನೆ ನೀಡಿ ‘ಎಲ್ಲ ರನ್ನೂ ಸಮಾಧಾನ ಮಾಡಲು ಸಾಧ್ಯವಿಲ್ಲ’ ಎಂದರು.ಶಾಸಕರ ವಿರೋಧ: ಸರ್ಕಾರಿ ಸಿಬ್ಬಂದಿಯನ್ನೇ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳಬೇಕು ಎಂಬ ಆದೇಶ ಕೂಡ ಕೆಲ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.‘ಈಗಾಗಲೇ ನಾವು ಖಾಸಗಿಯಾಗಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರ ಮೇಲೆ ನೇಮಕ ಮಾಡಿಕೊಂಡಿದ್ದು, ಅವರನ್ನೇ ಮುಂದುವರಿಸಬೇಕು’ ಎಂದು ಹಲವು ಶಾಸಕರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಸರ್ಕಾರಿ ನೌಕರರ ನೇಮಕಕ್ಕೆ ಆದೇಶ: ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೆ ಈಗಿರುವ ಒಬ್ಬ ಆಪ್ತ ಸಹಾಯಕನ ಜತೆಗೆ ಮತ್ತೊಬ್ಬ­ರನ್ನು ನೇಮಕ ಮಾಡಿ ಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.ಇದುವರೆಗೂ ಗುತ್ತಿಗೆ ಆಧಾರದ ಮೇಲೆ ತಮಗೆ ಬೇಕಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಸರ್ಕಾರ ಮಂಗಳವಾರ ಹೊರಡಿಸಿರುವ ಹೊಸ ಆದೇಶದಲ್ಲಿ ಶಾಸಕರ ಆಪ್ತ ಸಹಾಯಕರು ಸರ್ಕಾರಿ ನೌಕರರೇ ಆಗಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.ಸರ್ಕಾರದ ಇಲಾಖೆ, ಸ್ಥಳೀಯ ಸಂಸ್ಥೆ ಅಥವಾ ಶಾಸನ ಬದ್ಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ ಅಥವಾ ಶೀಘ್ರಲಿಪಿ­ಗಾರ ಅಥವಾ ದ್ವಿತೀಯ ದರ್ಜೆ ಸಹಾಯಕನನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳ­ಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಆಪ್ತ ಸಹಾಯಕರು ಬೆಂಗಳೂರಿನಲ್ಲಿ ಕಾರ್ಯನಿರ್ವ ಹಿಸುವುದರಿಂದ ಸರ್ಕಾರದ ಸಚಿವಾಲಯ ಸಿಬ್ಬಂದಿಗೆ ನಿಗದಿಪಡಿಸಿದ ಬಜೆಟ್‌ನಲ್ಲೇ ವೇತನ ನೀಡಲು ಸೂಚಿಸಲಾಗಿದೆ. ಈಗಾಗಲೇ ನೇಮಕಗೊಂಡಿರುವ ಆಪ್ತ ಸಹಾಯಕರು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿನ ಕೆಲಸಗಳನ್ನು ನೋಡಿಕೊಳ್ಳಲು ಮತ್ತೊಬ್ಬ ಆಪ್ತ ಸಹಾಯಕನ ಅಗತ್ಯ ಇದೆ ಎಂದು ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ವಿಧಾನಸಭಾಧ್ಯಕ್ಷರನ್ನು ಕೋರಿದ್ದರು.ಕುಮಾರಸ್ವಾಮಿಗೆ ದೂರು

ಶಾಸಕರ ಜತೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಹೆಚ್ಚು ಸಿಬ್ಬಂದಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಗುರುವಾರ ಭೇಟಿ ಮಾಡಿ ತಮ್ಮನ್ನೇ ಮುಂದುವರಿಸಲು ಸರ್ಕಾರವನ್ನು ಒತ್ತಾಯಿ ಸುವಂತೆ ಆಗ್ರಹಪಡಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸರ್ಕಾರದ ಇತರೆ ಇಲಾಖೆಗಳಿಂದ ನೌಕರರನ್ನು ಆಪ್ತ ಸಹಾ ಯ ಕರು­ಗಳೆಂದು ನೇಮಿಸಿಕೊಳ್ಳುವುದರಿಂದ ಸರ್ಕಾರದ ಹಾಗೂ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯ ಗಳಿಗೆ ತೊಂದರೆಯಾಗಲಿದೆ ಎಂದೂ ಅವರು ಮನ ವರಿಕೆ ಮಾಡಿಕೊಟ್ಟರು. ಈ ಕುರಿತು ಸಂಬಂಧ ಪಟ್ಟವರ ಜತೆ ಚರ್ಚೆ ನಡೆಸುವ ಭರವಸೆಯನ್ನು ಕುಮಾರಸ್ವಾಮಿ ನೀಡಿದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry