ಗುರುವಾರ , ಜೂನ್ 17, 2021
22 °C
ನಾಗರಿಕ ಸೇವಾ ಮಂಡಳಿಗೆ ತಾತ್ಕಾಲಿಕ ತಡೆ

ವರ್ಗಾವಣೆ ಅಧಿಕಾರ ಬಿಟ್ಟುಕೊಡದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಗರಿಕ ಸೇವಾ ಅಧಿಕಾರಿಗಳು (ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌), ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಮುಖ್ಯ ಎಂಜಿನಿಯರ್‌ ದರ್ಜೆ ಅಧಿಕಾರಿಗಳ ವರ್ಗಾವಣೆ  ಸಲುವಾಗಿ ರಚಿಸಲಾಗಿದ್ದ ಐದು ನಾಗರಿಕ ಸೇವಾ ಮಂಡಳಿಗಳಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.



ಈ ಮೂಲಕ ಅಧಿಕಾರಿಗಳನ್ನು ವರ್ಗಾಯಿಸುವ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಂಡಂತಾಗಿದೆ.

ನಾಗರಿಕ ಸೇವಾ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರ ವರ್ಗಾವಣೆಗೆ ನಿಯಮ ರೂಪಿಸಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಆದೇಶ ನೀಡಿತ್ತು. ಆ ಪ್ರಕಾರ ಕೇಂದ್ರ ಸರ್ಕಾರ ವರ್ಗಾವಣೆ ನಿಯಮ ರೂಪಿಸಿ, ಅದನ್ನು ಎಲ್ಲ ರಾಜ್ಯ ಸರ್ಕಾರಗಳು ಪಾಲಿಸಬೇಕು ಎನ್ನುವ ಆದೇಶ ಕೂಡ ನೀಡಿತ್ತು.



ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಜನವರಿ 31ರಂದು ಐದು ನಾಗರಿಕ ಸೇವಾ ಮಂಡಳಿಗಳನ್ನು ರಚಿಸಿ ಆದೇಶ ಹೊರಡಿಸಿತ್ತು. ‘ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷಗಳ ಕಾಲ ವರ್ಗಾಯಿಸುವಂತಿಲ್ಲ, ಒಂದು ವೇಳೆ ಅವಧಿಗೂ ಮುನ್ನ ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕು ಮತ್ತು ಅಂತಹ ಸಂದರ್ಭಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ಅಭಿಪ್ರಾಯ ಪಡೆಯಬೇಕು’ ಎನ್ನುವ ಷರತ್ತುಗಳನ್ನು ವಿಧಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು.



ಚುನಾವಣೆ ಸಂದರ್ಭದಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅದಕ್ಕೆ ಈ ಬಾರಿ ಸ್ವಲ್ಪ ಅಡೆತಡೆಯಾಯಿತು ಎಂದು ಗೊತ್ತಾಗಿದೆ. ಇತ್ತೀಚೆಗೆ ಕೆಲವು ಸಚಿವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ವರ್ಗಾವಣೆಗೆ ಪಟ್ಟುಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ.



ಈ ಕಾರಣದಿಂದ ಮಾರ್ಚ್‌ 3ರ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಷಯ ಇಲ್ಲದಿದ್ದರೂ ನಾಗರಿಕ ಸೇವಾ ಮಂಡಳಿಗಳನ್ನು ಸದ್ಯಕ್ಕೆ ತಡೆಹಿಡಿಯಲು ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ.



ಸುಪ್ರೀಂಕೋರ್ಟ್‌ ತೀರ್ಪು ಮತ್ತು ಕೇಂದ್ರ ಸರ್ಕಾರದ ನಿರ್ದೇಶನ– ಈ ಎರಡನ್ನೂ ಅಧ್ಯಯನ ನಡೆಸಿ, ಹೊಸ ನಿಯಮಗಳನ್ನು ರೂಪಿಸಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸ­ಲಾಗಿದೆ. ಸಚಿವರಾದ ಆರ್‌.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್‌, ಎಚ್‌.ಕೆ.ಪಾಟೀಲ್‌ ಈ ಸಮಿತಿಯ ಸದಸ್ಯರು.



ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಮತ್ತು  ಕೆಎಎಸ್‌ ಅಧಿಕಾರಿಗಳಿಗೆ ನಾಲ್ಕು ಪತ್ರ್ಯೇಕ ಮಂಡಳಿಗಳು, ಇಲಾಖೆಗಳ ಮುಖ್ಯಸ್ಥರು, ಮುಖ್ಯ ಎಂಜಿನಿಯರ್‌ ಮತ್ತು ಸಚಿವಾಲಯದ ಅಧಿಕಾರಿಗಳಿಗೆ (ಅಧೀನ ಕಾರ್ಯದರ್ಶಿ ಮತ್ತು ಮೇಲ್ಪಟ್ಟ ಅಧಿಕಾರಿಗಳು) ಮತ್ತೊಂದು ನಾಗರಿಕ ಮಂಡಳಿಯನ್ನು ರಚಿಸಲಾಗಿತ್ತು. ಈ ಮಂಡಳಿಗಳು ಫೆಬ್ರುವರಿ ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದವು.



ಎಲ್ಲ ಮಂಡಳಿಗಳಿಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿದ್ದರು.



ಅಧಿಕಾರಿಗಳ ವರ್ಗಾವಣೆ ಜತೆಗೆ ಅವರ ಸೇವಾ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೂಡ ಈ ಮಂಡಳಿಗಳಿಗೆ ಇತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.