ಮಂಗಳವಾರ, ಮೇ 11, 2021
24 °C
ಬದಲಾಗದ ನಿಯಮ, ಈಡೇರದ ಕನಸು

ವರ್ಗಾವಣೆ ಕೋರಿದ ಸಾವಿರಕ್ಕೂ ಹೆಚ್ಚು ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವರ್ಗಾವಣೆ ಬಯಸಿರುವ 1,032 ಶಿಕ್ಷಕರು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಜಿಲ್ಲೆಯಲ್ಲಿರುವ ಸುಮಾರು 4 ಸಾವಿರ ಶಿಕ್ಷಕರ ಪೈಕಿ ಶೇ 25ರಷ್ಟು ಶಿಕ್ಷಕರು ವರ್ಗಾವಣೆ ಬಯಸಿದ್ದಾರೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಕ್ಷಕರು ವರ್ಗಾವಣೆ ಬಯಸಿದ್ದರೂ ಸರ್ಕಾರದ ನಿಯಮಗಳ ಪ್ರಕಾರ ಘಟಕದ ಹೊರಗೆ ಶೇ 1 ಮತ್ತು ಘಟಕದೊಳಗೆ ಶೇ 5ರಷ್ಟು ಶಿಕ್ಷಕರಿಗೆ ಮಾತ್ರ ವರ್ಗಾವಣೆ ಅವಕಾಶವಿದೆ. 2007ರ ವರ್ಗಾವಣೆ ಕಾಯ್ದೆಯ ಹಲವು ನಿಯಮಗಳಿಗೆ ಶಿಕ್ಷಕರು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದ ವರ್ಗಾವಣೆ ಪ್ರಮಾಣವನ್ನಾದರೂ ಹೆಚ್ಚಿಸಬೇಕು ಎನ್ನುವ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ವರ್ಷ ಮತ್ತೆ ವರ್ಗಾವಣೆಗೆ ಶಿಕ್ಷಕರು ಅರ್ಜಿ ಸಲ್ಲಿಸಿದ್ದರೂ ಅವಕಾಶಗಳು ಅತಿ ಕಡಿಮೆ ಇರುವುದರಿಂದ ಶಿಕ್ಷಕರಲ್ಲಿ ಭರವಸೆಯೇನೂ ಉಳಿದಿಲ್ಲ.ಸಾಮಾನ್ಯವಾಗಿ ಬೇಸಿಗೆ ರಜೆಯಲ್ಲಿಯೇ ವರ್ಗಾವಣೆ ಪ್ರಕ್ರಿಯೆ ನಡೆದರೂ, ಈ ಬಾರಿ ಚುನಾವಣೆ ಕೆಲಸ ಕಾರ್ಯಗಳಲ್ಲಿ ಶಿಕ್ಷಕರು ತೊಡಗಿಕೊಂಡಿದ್ದರಿಂದ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ.ಜೂನ್12ಕ್ಕೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಮುಗಿದಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಘಟಕದೊಳಗೆ ವರ್ಗಾವಣೆಗೆ ಜುಲೈ 2ರಿಂದ 4ವರೆಗೆ ಕೌನ್ಸೆಲಿಂಗ್ ನಡೆಯಲಿದೆ. ಘಟಕದ ಹೊರಗೆ ವರ್ಗಾವಣೆ ಬಯಸಿದ ಪ್ರಾಥಮಿಕ ಶಿಕ್ಷಕರಿಗೆ ಜುಲೈ 6ರಿಂದ 17 ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಜುಲೈ 18ರಿಂದ 22ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.ಶಿಕ್ಷಕರ ಸಂಘದ ಆಕ್ಷೇಪಗಳೇನು?

*ಜೇಷ್ಠತೆಯ ಆಧಾರದಲ್ಲಿ ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆ ಬೇಕಾದರೆ ಶಿಕ್ಷಕರು 2005ರ ಮೇ 2ಕ್ಕೆ 5 ವರ್ಷ ಸೇವೆ ಪೂರ್ಣಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ. ಅಂದರೆ 2001ರ ನಂತರ ನೇಮಕಗೊಂಡವರು ಇನ್ನೂ ವರ್ಗಾವಣೆ ಕೋರುವುದು ಸಾಧ್ಯವಿಲ್ಲವೇ? ಕಾಲಕಾಲಕ್ಕೆ ಈ ನಿಯಮ ಬದಲಾಗಬೇಡವೇ ಎಂಬುದು ಶಿಕ್ಷಕರ ಪ್ರಶ್ನೆ.

*ಪರಸ್ಪರ ವರ್ಗಾವಣೆ (ಮ್ಯೂಚುವಲ್) ಬಯಸಿದಾಗಲೂ ಶಿಕ್ಷಕರು ಮೂರು ವರ್ಷಗಳ ಸೇವಾವಧಿ ಪೂರೈಸಬೇಕು ಎನ್ನುವ ಷರತ್ತು ಯಾಕೆ?

*ಒಂದೇ ಕ್ಲಸ್ಟರ್‌ನೊಳಗೆ ವರ್ಗಾವಣೆಗೆ ಅವಕಾಶವಿಲ್ಲ ಎಂದು ನಿಯಮ ಹೇಳುತ್ತದೆ. ಆದರೆ ಕ್ಲಸ್ಟರ್‌ನೊಳಗೆ ವರ್ಗಾವಣೆ ಕೊಟ್ಟಲ್ಲಿ ಶಿಕ್ಷಕರು ಮತ್ತಷ್ಟು ನೆಮ್ಮದಿಯಿಂದ ಪಾಠ ಮಾಡಬಹುದಲ್ಲವೇ?

*2001ರ ನಂತರ ನೇಮಕಗೊಂಡವರಿಗೆ ಘಟಕ ಎಂದರೆ ತಾಲ್ಲೂಕು ಎಂದೂ, ಅದಕ್ಕೂ ಮೊದಲು ನೇಮಕಗೊಂಡವರಿಗೆ ಘಟಕ ಎಂದರೆ ಜಿಲ್ಲೆ ಎಂದೂ ಪರಿಗಣಿಸಲಾಗುವುದು. ಇದರಿಂದ ಹೊಸದಾಗಿ ನೇಮಕಗೊಂಡವರಿಗೆ ವರ್ಗಾವಣೆ ಅವಕಾಶ ಮತ್ತಷ್ಟು ಕಿರಿದಾಗುತ್ತದೆ.

*ಇನ್ನು ನಿಯಮಗಳು ಹೇಳುವ ಆದ್ಯತೆಗಳನ್ನು ಗಮನಿಸಿದರೆ ಅವಿವಾಹಿತ ಶಿಕ್ಷಕರಿಗೆ ವರ್ಗಾವಣೆ ಅವಕಾಶ ಇಲ್ಲವೇ ಇಲ್ಲ ಎನ್ನುವಂತಾಗಿದೆ.ಘಟಕದೊಳಗೆ ಮತ್ತು ಹೊರಗೆ ವರ್ಗಾವಣೆ ಅವಕಾಶವನ್ನು ಹೆಚ್ಚಿಸಬೇಕು ಎಂಬ ನಮ್ಮ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಬಾರಿಯಾದರೂ ವರ್ಗಾವಣೆ ಪ್ರಮಾಣವನ್ನು ಹೆಚ್ಚಿಸುತ್ತಾರೆ ಎಂಬ ನಿರೀಕ್ಷೆ ನಮ್ಮದು.

ಶಿವಶಂಕರ ಭಟ್ ಕೆ., ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ.

ಘಟಕದೊಳಗೆ ಮತ್ತು ಹೊರಗೆ ವರ್ಗಾವಣೆ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ವರ್ಗಾವಣೆ ಕೋರಿ ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ನೋಡಬೇಕಾಗಿದೆ. ಆದ್ಯತೆಯ ಮೇಲೆ ಅವುಗಳನ್ನು ಪರಿಗಣಿಸಲಾಗುವುದು.

ಮೋಸೆಸ್ ಜಯಶೇಖರ್, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.