ವರ್ಣಮಯ ಸುಯಿನ್

7

ವರ್ಣಮಯ ಸುಯಿನ್

Published:
Updated:
ವರ್ಣಮಯ ಸುಯಿನ್

`ಚೈನಾ ಇನ್ ದಿ ಇಯರ್ 2001' (1967) ಕೃತಿಯ ಮೂಲಕ ಜಗತ್ತಿನಲ್ಲೆಲ್ಲ ಸುದ್ದಿಯಾದ ಲೇಖಕಿ ಹಾನ್ ಸುಯಿನ್. ಕೃತಿಗಳಷ್ಟೇ ಆಕೆಯ ಬದುಕು ಕೂಡ ಚಲನಶೀಲ, ವರ್ಣರಂಜಿತ. ಸುಯಿನ್‌ಳ `ಚೈನಾ ಇನ್ ದಿ ಇಯರ್ 2001' ಕೃತಿಯನ್ನು ಯೂರೋಪಿನ ಕೆಲವು ರಾಷ್ಟ್ರಗಳು ಹಾಗೂ ಅಮೇರಿಕಾದ ಓದುಗರು ಗುಮಾನಿಯಿಂದ ನೋಡಿದರೂ; ಒಂದು ರೀತಿಯ ಕುತೂಹಲದಿಂದ ಕೈಗೆ ತೆಗೆದುಕೊಂಡರು.`ಮುಂದಿನ ಮೂವತ್ತಮೂರು ವರ್ಷಗಳಲ್ಲಿ ಚೀನಾ ಏನಾಗಬಹುದೆಂದು' ಅಂದಾಜು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಇಂಥ ಮಹಾನ್ ಚಿಂತಕಿ, ಲೇಖಕಿ ಮತ್ತು ಕಾದಂಬರಿಕಾರಳಾದ ಹಾನ್ ಸುಯಿನ್ ಕಳೆದ ನವೆಂಬರ್‌ನಲ್ಲಿ ಚೀನಾದಲ್ಲಿ ನಿಧನಳಾದಳು. 95 ವರ್ಷಗಳ ದೀರ್ಘಕಾಲದ ಬದುಕಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ; ಅಷ್ಟೇ ವರ್ಣಮಯವಾಗಿ ಬದುಕಿದವಳು. ಈ ವರ್ಣಮಯತೆ ಲೋಲುಪತೆಗಾಗಿ ಬಂದದ್ದಲ್ಲ, ಬದುಕಿನ ಹುಡುಕಾಟಕ್ಕಾಗಿ ಬಂದದ್ದು.ಹಾನ್ ಸುಯಿನ್ ತಂದೆ ಚೀನಿ ಭಾಷೆ ಮತ್ತು ಸಂಸ್ಕೃತಿಗೆ ಸೇರಿದ ಎಂಜಿನಿಯರ್. ತಾಯಿ ಬೆಲ್ಜಿಯಂ ಹಿನ್ನೆಲೆಗೆ ಸೇರಿದವಳು. ಹಾನ್ ಸುಯಿನ್ ಹೆಚ್ಚು ತಾಯಿಯ ಪ್ರಭಾವದಲ್ಲಿಯೇ ಬೆಳೆದವಳು. ಡಾಕ್ಟರ್ ಆಗಿ ಅಮೆರಿಕದವನನ್ನು ಮದುವೆಯಾಗು ಎನ್ನುವ ಅಮ್ಮನ  ತಾಕೀತಿಗೆ ಸುಯಿನ್ ಹೆಚ್ಚು ಒಲವು ತೋರಲಿಲ್ಲ. ಆದರೆ, ಬೇರೊಂದು ರೀತಿಯಲ್ಲಿ ಜನ ಸೇವೆಯನ್ನು ಮಾಡಲು ವೈದ್ಯಳಾಗಲು ಹಂಬಲಿಸಿದಳು. ಯಾಕೆಂದರೆ ಚೀನಾದಲ್ಲಿ ಬಡತನ ತುತ್ತತುದಿಯನ್ನು ಮುಟ್ಟಿತ್ತು. ಜನ ಹೊಟ್ಟೆಗಿಲ್ಲದೆ ಸಾಯುತ್ತಿದ್ದರು. ಇದನ್ನು ನೋಡಿ ಚಿಕ್ಕವಯಸ್ಸಿನಲ್ಲಿಯೇ ಸೇವಾ ಮನೋಭಾವವನ್ನು ಸುಯಿನ್ ಬೆಳೆಸಿಕೊಂಡಿದ್ದಳು.ಬೆಲ್ಜಿಯಂನ ವ್ಯಾಪಾರಿಯೊಬ್ಬ ಬ್ರಸೆಲ್ಸ್‌ನಲ್ಲಿ ಸುಯಿನ್‌ಳ ವೈದ್ಯಕೀಯ ಅಧ್ಯಯನಕ್ಕೆ ನೆರವು ನೀಡಿದ. 1938ರಲ್ಲಿ ಚೀನಾಕ್ಕೆ ಮರಳಿದ ಆಕೆ ಫ್ರೆಂಚ್ ಆಸ್ಪತ್ರೆಯೊಂದರಲ್ಲಿ ವೈದ್ಯಳಾಗಿ ಸೇರಿಕೊಂಡಳು. ಈ ಸಮಯದಲ್ಲಿ ಪರಿಚಿತನಾದ ಸ್ಫುರದ್ರೂಪಿ ತರುಣ ತಾಂಗ್ ಪಾವೋ ಹಾಂಗ್, ದೇಶಭಕ್ತಿ ಮತ್ತು ರಾಷ್ಟ್ರೀಯತೆ ಕುರಿತಂತೆ ಸುಯಿನ್ ಮೇಲೆ ಸಾಕಷ್ಟು ಪ್ರಭಾವ ಬೀರಿದ. ಇದರಿಂದ ಚೀನಾದ ಸಾಮಾಜಿಕ ಮತ್ತು ರಾಜಕೀಯ ಬದುಕನ್ನು ಒಳಗಡೆಯಿಂದ ಅರಿಯಲು ಆಕೆಗೆ ಸಾಧ್ಯವಾಯಿತು. ಇಬ್ಬರ ಗೆಳೆತನ ಮದುವೆಯಾಗಿ ಬದಲಾಯಿತು. ಜಪಾನಿಗಳ ಆಕ್ರಮಣ ಒಂದೆಡೆಯಾದರೆ, ಇನ್ನೊಂದು ಮಗ್ಗುಲಲ್ಲಿ ಚಿಯಾಂಗ್ ಕೈಷೇಕ್‌ನ ರಾಷ್ಟ್ರೀಯ ಸರ್ಕಾರದಲ್ಲಿ ರೈತರನ್ನು, ಕೂಲಿ ಕಾರ್ಮಿಕರನ್ನು ಸಂಘಟಿಸುವ ಮನಸ್ಸುಗಳು ದಟ್ಟತೆಯನ್ನು ಪಡೆಯುತ್ತಿದ್ದ ಕಾಲಘಟ್ಟವದು.ಇಂಥ ಸಮಯದಲ್ಲಿ ಜನರ ನಡುವೆ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡೇ ಬರೆಯುವುದು ಹೇಗೆ ಎನ್ನುವುದು ಸುಯಿನ್‌ಗೆ ಸವಾಲಾಗಿ ಪರಿಣಮಿಸಿತು.  ಸಂಘರ್ಷದ ಸಂದರ್ಭದಲ್ಲಿ ಸುಯಿನ್‌ಗೆ ಬೆಂಬಲವಾಗಿ ನಿಂತದ್ದು ಚರ್ಚ್‌ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಮರಿಯನ್ ಮಾನ್‌ಲೀ ಎಂಬ ವೈದ್ಯ. ತನಗೆ ಹೊಸ ಚಿಂತನೆಯನ್ನು ಕೊಟ್ಟ ಪಾವೋ ಜೊತೆಗಿನ ಒಕ್ಕೂಟವನ್ನು ಕುರಿತು ದಾಖಲಿಸುವಂತೆ ಆತ ಒತ್ತಾಯಿಸಿದ. ಇದರಿಂದ ಸುಯಿನ್‌ಳ ಬರವಣಿಗೆಯ ದಿಕ್ಕು ಹೊಸ ರೂಪ ಪಡೆದುಕೊಂಡಿತು. ಆದರ್ಶ ಮತ್ತು ವಾಸ್ತವದ ನಡುವಿನ ಅಂತರವನ್ನು ಕಂಡುಕೊಂಡು ಬರವಣಿಗೆಗೆ ಸಾಪೇಕ್ಷತೆ ತಂದುಕೊಳ್ಳುವುದರತ್ತ ಹೆಚ್ಚು ಯೋಚಿಸಿ ಬರೆಯತೊಡಗಿದಳು. ಚೀನಾವನ್ನು ಗುಮಾನಿಯಿಂದ ನೋಡುವ ರಾಷ್ಟ್ರಗಳಿಗೆ ಸ್ಪಷ್ಟ ಚಿತ್ರಣವನ್ನು ಕೊಡುವಲ್ಲಿ ನನ್ನ ಬರವಣಿಗೆ ಸಾರ್ಥಕವಾಗಬೇಕು ಎನ್ನುವ ಆಕೆಯ ಹಂಬಲವಾಗಿತ್ತು.1942ರಲ್ಲಿ ಸೇನೆಗೆ ಸಂಬಂಧಿಸಿದ ರಾಯಭಾರಿಯನ್ನಾಗಿ ಲಂಡನ್‌ಗೆ ತೆರಳಿದ ಪಾವೋನನ್ನು ಸುಯಿನ್ ಕೂಡ ಹಿಂಬಾಲಿಸಿದಳು. ಸುಯಿನ್‌ಗೆ ಲಂಡನ್ ಪರಿಸರ ಹೊಸ ಚಿಂತನೆಗಳ ದಿಕ್ಕುಗಳನ್ನು ತೋರಿಸಿತು. ಅಲ್ಲಿ ಏಷ್ಯಾದ ಬಗ್ಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದ ಬುದ್ಧಿಜೀವಿಗಳ ಗುಂಪು ಪರಿಚಯವಾಯಿತು. ಜೆ.ಬಿ. ಪ್ರಿಸ್ಟೆಲೇ, ಕಿಂಗ್‌ಸ್ಸೇ ಮಾರ್ಟಿನ್, ದೊರೋತಿವುಡ್‌ಮನ್, ಮರ್ಗರಿಫ್ರೈ ಮುಂತಾದವರು ನಡೆಸುತ್ತಿದ್ದ ಪ್ರಗತಿಪರ ಚಿಂತನೆಗಳ ಚಾವಡಿಯಲ್ಲಿ ಆಕೆ ತನ್ನನ್ನು ತೊಡಗಿಸಿಕೊಂಡಳು. ಇನ್ನೊಂದೆಡೆ ತನ್ನ  ವೈದ್ಯಕೀಯ ಅಧ್ಯಯನವನ್ನು ಮುಂದುವರಿಸಿದಳು. ಲಂಡನ್‌ನಲ್ಲಿದ್ದರೂ ಆಕೆಯ ಮನಸ್ಸಿನ ತುಂಬ ಚೀನಾದ ಬಡತನದ ಚಿತ್ರಪಟ.ಲಂಡನ್‌ನಿಂದ ವಾಷಿಂಗ್‌ಟನ್, ಅಲ್ಲಿಂದ ಮಂಚೂರಿಯ ಗಡಿ ಪ್ರದೇಶಕ್ಕೆ ಪಾವೋ ವರ್ಗಾವಣೆಯಾದರೂ, ಸುಯಿನ್ ತನ್ನ ವೈದ್ಯಕೀಯ ಶಿಕ್ಷಣಕ್ಕಾಗಿ ಲಂಡನ್‌ನಲ್ಲಿಯೇ ಉಳಿದಳು. ದುರದೃಷ್ಟವಶಾತ್, ಪಾವೋ 1947ರಲ್ಲಿ ಕಮ್ಯುನಿಸ್ಟ್‌ರ ವಿರುದ್ಧದ ಹೋರಾಟದಲ್ಲಿ ಜೀವ ಕಳೆದುಕೊಂಡ. ಸುಯಿನ್‌ಗೆ ನಿಂತ ನೆಲ ಕುಸಿದ ಅನುಭವ. ಆದರೂ, ಎದೆಗುಂದದೆ ತನ್ನ ವೈದ್ಯಕೀಯ ಶಿಕ್ಷಣದ ಕೊನೆಯ ಹಂತವನ್ನು ಮುಗಿಸಿ ಆಕೆ ಹಾಂಕಾಂಗ್‌ಗೆ ತೆರಳಿದಳು. ಅಲ್ಲಿ `ದಿ ಟೈಮ್ಸ' ಪತ್ರಿಕೆಯ ಬಾತ್ಮಿದಾರ ಇಯಾನ್ ಮಾರಿಸನ್ ಪರಿಚಯ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ. ಇಯಾನ್ ಒಡನಾಟದ ಸಂದರ್ಭದಲ್ಲಿ ರೂಪುಗೊಂಡ ಕೃತಿಯೇ `ಎ ಮೆನಿ ಸ್ಪೆಂಡರ್ಡ್ ಥಿಂಗ್'. ಸುಯಿನ್‌ಳ ಈ ಕೃತಿ ಚಲನಚಿತ್ರವಾಗಿಯೂ ಹೆಸರುಗಳಿಸಿತು.1952ರಲ್ಲಿ ಮಲಯಾಗೆ ತೆರಳಿದ ಸುಯಿನ್, ಅಲ್ಲಿ ಲಿಯಾನ್ ಕಾಂಬರ್ ಎಂಬ ಪೊಲೀಸ್ ಅಧಿಕಾರಿಯನ್ನು ಪ್ರೇಮಿಸಿ ಮದುವೆಯಾದಳು. ಇದೇ ಸಮಯದಲ್ಲಿ ರಚನೆಯಾದ ಆಕೆಯ ಮತ್ತೊಂದು ಜನಪ್ರಿಯ ಕೃತಿ `ಅಂಡ್ ದಿ ರೈನ್ ಮೈ ಡ್ರಿಂಕ್' ಮತ್ತು `ದಿ ಮೌಂಟೆನ್ ಈಸ್ ಯಂಗ್' ಪುಸ್ತಕಗಳು ಮಲಯಾ ಮತ್ತು ನೇಪಾಳ ಬ್ರಿಟೀಷರ ಆಡಳಿತದಲ್ಲಿ ಸಾಕಷ್ಟು ಪ್ರತಿರೋಧ ಎದುರಿಸಿದವು.ಕಠ್ಮಂಡುವಿನಲ್ಲಿ ಭಾರತೀಯ ಸೈನ್ಯದ ಕರ್ನಲ್ ವಿನ್ಸೆಂಟ್ ರುತ್ನ ಸ್ವಾಮಿಯನ್ನು ಭೇಟಿಯಾಗುವುದರೊಂದಿಗೆ ಸುಯಿನ್‌ಳ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ. ವಿನ್ಸೆಂಟ್‌ರೊಂದಿಗೆ ಸುಯಿನ್ ಮದುವೆಯಾಗುತ್ತಾಳೆ. ವೈಯಕ್ತಿಕ ಬದುಕಿನಲ್ಲಿನ ಏನೆಲ್ಲ ಏರಿಳಿತಗಳ ನಡುವೆಯೂ ಚೀನಾದ ವಿದ್ಯಮಾನಗಳಿಗೆ ಸುಯಿನ್‌ಳದು ತೆರೆದ ಕಣ್ಣು. ಚೀನಾದ `ಸಾಂಸ್ಕೃತಿಕ ಕ್ರಾಂತಿ' ಹಾಗೂ ಕೆಮ್ಯುನ್‌ಗಳ ಬೆಳವಣಿಗೆ ಆಕೆಯನ್ನು ಸೆಳೆಯುತ್ತದೆ. ಚೀನಾದ ಪ್ರಧಾನ ಮಂತ್ರಿ ಚೌಯೆನ್‌ಲಾಯ್ ಅವರನ್ನು ಅನೇಕ ಸಲ ಭೇಟಿಯಾಗುವ ಸುಯಿನ್ ತನ್ನ ದೇಶದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಾಳೆ. ಈ ಎಲ್ಲ ತಿಳಿವಳಿಕೆ `ಚೈನಾ ಇನ್ ದಿ ಯಿಯರ್ ಆಫ್ 2001' ಕೃತಿಯಲ್ಲಿ ಒಡಮೂಡುತ್ತದೆ. ಚೀನಾದ್ಲ್ಲಲಿ ನಡೆಯುತ್ತಿದ್ದ ರಾಜಕೀಯ, ಸಾಂಸ್ಕೃತಿಲ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಮೂವತ್ತು ವರ್ಷಗಳಲ್ಲಿ ಈ ಮಹಾನ್ ರಾಷ್ಟ್ರ ಪ್ರಪಂಚದ ಭೂಪಟದಲ್ಲಿ ಹೇಗಿರಬಹುದೆಂದು ಸುಯಿನ್ ಚಿತ್ರಿಸಿದ ರೀತಿ ಅದ್ಭುತ.ನಾನು 1985ರಲ್ಲಿ ಚೀನಾಕ್ಕೆ ಹೋದಾಗ ಸುಯಿನ್‌ಳ ದಾರ್ಶನಿಕ ಕೃತಿ ನನಗೆ ಮಾರ್ಗಸೂಚಿ ಕೈಪಿಡಿಯಂತೆ ಭಾಸವಾಗಿತ್ತು. ಈ ಕೃತಿ ಚೀನಾದ ಒಳಗೆ ಮತ್ತು ಹೊರಗೆ ತನ್ನ ಪ್ರಭಾವ ಬೀರಿತ್ತು. ಚೌಯೆನ್‌ಲಾಯ್ ಅವರನ್ನು `ಸಾಂಸ್ಕೃತಿಕ ಕ್ರಾಂತಿಯ' ವಿರೋಧಿ ಎಂದು ನೋಡಲು ಹೋದಾಗ; ಆತ ಎಂಥ ದೇಶಪ್ರೇಮಿ ಎಂದು ಸುಯಿನ್ ಪ್ರೀತಿಯಿಂದ ಉದ್ಗಾರ ತೆಗೆಯುವಳು. ಒಂದು ದೃಷ್ಟಿಯಿಂದ ಮಾವೋ ಅವರಿಗಿಂತ ಚೌಯೆನ್‌ಲಾಯ್ ಅವರನ್ನು ಚೀನಾದ ಯುವಜನತೆ ಹೆಚ್ಚು ಇಷ್ಟಪಡುತ್ತಿತ್ತು. ಇದನ್ನು ಸುಯಿನ್ ಕೂಡ ದಾಖಲಿಸುತ್ತಾಳೆ.ಸುಯಿನ್‌ಳ ಜೀವನ ಚರಿತ್ರೆಯ ಸಂಪುಟಗಳಂತೂ ಇಂದಿಗೂ ಚೀನಾದಲ್ಲಿ ಮತ್ತು ಹೊರಗೆ ಅತ್ಯಂತ ಜನಪ್ರಿಯ. `ಮೈ ಹೌಸ್ ಹ್ಯಾಸ್ ಟು ಡೋರ್ಸ್' ಕೃತಿ ಸುಯಿನ್‌ಳನ್ನು ಅರಿಯಲು ನಾನಾ ಬಾಗಿಲುಗಳನ್ನು ತೆರೆಯಿತು. ಮಹಾನ್ ನಾಯಕರೊಂದಿಗೆ ನಿಕಟ ನಂಟು ಹೊಂದಿದ್ದ ಆಕೆ, ನರಳುವವರ ನೋವಿಗೆ ಸ್ಪಂದಿಸುವ ಹೃದಯವಂತಳೂ ಆಗಿದ್ದಳು. ಸುಯಿನ್ ಭಾರತಕ್ಕೆ ಅನೇಕ ಸಲ ಭೇಟು ಕೊಟ್ಟಿದ್ದಳು. 1989ರಲ್ಲಿ ಚೀನಿ ವಿದ್ಯಾರ್ಥಿಗಳು ಮತ್ತು ಚಿಂತಕರು ನಡೆಸಿದ ಪ್ರಜಾಪ್ರಭುತ್ವ ಹೋರಾಟ ಆಕೆಗೆ ಆರೋಗ್ಯಕರವಾಗಿ ಕಾಣಿಸಿತ್ತು. ಈ ಹೋರಾಟಕ್ಕೆ ಪ್ರತಿಕ್ರಿಯಿಸುತ್ತ, `ಪ್ರಜಾಪ್ರಭುತ್ವ ಜೀವ ಪಡೆಯುವ ಸುವರ್ಣ ಅವಕಾಶವನ್ನು ಚೀನಾ ಕಳೆದುಕೊಂಡಿತು' ಎಂದು ಆಕೆ ನೊಂದುಕೊಂಡಳು.ಹಾನ್ ಸುಯಿನ್ ತನ್ನ ಬುದ್ಧಿಮಾಂದ್ಯ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಮಾಡಿದ ಸಾಧನೆ ಅಸಾಧಾರಣವಾದುದು. ತನ್ನ ಸಂಗಾತಿ ವಿನ್ಸೆಂಟ್ ರುತ್ನಸ್ವಾಮಿ 2003ರಲ್ಲಿ ನಿಧನರಾದ ನಂತರ ಆಕೆ ಸ್ವಿಟ್ಜರ್‌ಲೆಂಡ್‌ನಲ್ಲಿ ಜೀವಿಸತೊಡಗಿದಳು. 95ರ ವಯಸ್ಸಿನಲ್ಲಿ ಆಕೆ ವಿಧಿವಶಳಾದಾಗ, `ಹಾನ್ ಸುಯಿನ್ ಎಷ್ಟು ಚೆನ್ನಾಗಿ ಬದುಕಿದಳು' ಎಂದು ಆಕೆಯನ್ನು ಬಲ್ಲವರೆಲ್ಲ ಅಭಿಮಾನದಿಂದ ಉದ್ಗರಿಸಿದ್ದು ತುಂಬು ಬದುಕಿಗೆ ಸಂದ ಅರ್ಥಪೂರ್ಣ ವಿದಾಯವಾಗಿತ್ತು. ್ಢ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry