ಶನಿವಾರ, ನವೆಂಬರ್ 23, 2019
18 °C

ವರ್ಣರಂಜಿತ ನೃತ್ಯೋತ್ಸವ

Published:
Updated:
ವರ್ಣರಂಜಿತ ನೃತ್ಯೋತ್ಸವ

ಪ್ರೊ. ಎಂ.ಪಿ.ಎಲ್. ಶಾಸ್ತ್ರಿ (1910-2001) ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ಉದ್ಧಾಮ ಪಂಡಿತರಾಗಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಸೇವೆ ಮೌಲಿಕವಾದುದು. ಗಾಂಧಿನಗರ ಪ್ರೌಢ ಶಾಲೆ ಅಲ್ಲದೆ ಮೈಸೂರು ಎಜುಕೇಶನ್ ಸೊಸೈಟಿಯನ್ನು ಬೆಳೆಸಿ, ಬೃಹದಾಕಾರವಾಗಿ ಪೋಷಿಸಿ, ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿಸಿದರು. ಅಲ್ಲದೆ ಲಲಿತಕಲೆಗಳ ಪೋಷಣೆಗಾಗಿ ಕಲಾವೇದಿ ಸ್ಥಾಪಿಸಿ, ನಿಯತವಾಗಿ ಕಛೇರಿ, ಕಾರ್ಯಾಗಾರ, ಸ್ಪರ್ಧೆಗಳನ್ನು ನಡೆಸುವ ವ್ಯವಸ್ಥೆ ಮಾಡಿದರು. ಅವರ ಸ್ಮರಣಾರ್ಥ ಪ್ರತಿವರ್ಷ ನೃತ್ಯೋತ್ಸವ ನಡೆಸುತ್ತಿರುವುದು ಅಭಿನಂದನೀಯ.ಈ ವರ್ಷ ನೃತ್ಯೋತ್ಸವದ ಚೊಚ್ಚಲ ಕಾರ್ಯಕ್ರಮ ನೀಡಿದ ಸುಭಾಷಿಣಿ ವಸಂತ್ ಅವರು ನರ್ಮದಾ ಅವರ ಶಿಷ್ಯೆ. ಡಾ. ಮಾಯಾರಾವ್ ಮತ್ತು ಚಿತ್ರಾ ವೇಣುಗೋಪಾಲ್ ಅವರಲ್ಲಿ ಕಥಕ್ ಕಲಿತಿರುವರಲ್ಲದೆ ಕಳಾನಿಧಿ ನಾರಾಯಣ್ ಅವರಲ್ಲಿ ಅಭಿನಯದಲ್ಲಿ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಸುಭಾಷಿಣಿ ತಮ್ಮ ಅಂದಿನ ಭರತನಾಟ್ಯ ಕಾರ್ಯಕ್ರಮವನ್ನು ಪುಷ್ಪಾಂಜಲಿಯೊಂದಿಗೆ ಪ್ರಾರಂಭಿಸಿ, ಶ್ಲೋಕದೊಂದಿಗೆ ಮುಂದುವರಿದರು. ಮೊದಲ ಹೆಜ್ಜೆಯಲ್ಲೇ ಒಂದು ಕಾಲಿನ ಗೆಜ್ಜೆ ಕಳಚಿ ಬಿದ್ದರೂ ಧೃತಿಗೆಡದೆ ಮುಂದುವರಿದರು.

ಭೈರವಿ ರಾಗದ ಘನವಾದ ವರ್ಣ ಮೋಹಮಾಯ ಅವರ ಶಿಕ್ಷಣ-ಸಾಧನೆಗಳಿಗೆ ದ್ಯೊತಕವಾಗಿ ನಿಂತಿತು. ನೃತ್ತ-ನೃತ್ಯಗಳೆರಡರಲ್ಲೂ ಕಂಡ ಪ್ರಗತಿ ಅಭಿನಂದನಾರ್ಹ. ಮೀರಾ ಭಜನ್‌ನಲ್ಲಿ ಪ್ರಹ್ಲಾದ, ನರಸಿಂಹ, ದ್ರೌಪದಿ ಪ್ರಸಂಗಗಳನ್ನು ಸುಂದರವಾಗಿ ಅಭಿನಯಿಸಿದರು. ಮೋಹನ ಕಲ್ಯಾಣಿ ತಿಲ್ಲಾನವನ್ನು ಚುರುಕಾಗಿ ಮಾಡಿ ಮೈತ್ರಿಂಭಜತಾದೊಂದಿಗೆ ಮುಕ್ತಾಯಗೊಳಿಸಿದರು.ಶ್ರಿವತ್ಸ ಅವರ ಗಾಯನ ನೃತ್ಯದ ಪರಿಣಾಮವನ್ನು ಇಮ್ಮಡಿಗೊಳಿಸಿತು. ಸೌಂದರ್ಯ ಶ್ರಿವತ್ಸ ಅವರ ದಕ್ಷ ನಟುವಾಂಗ, ಗುರುಮೂರ್ತಿ ಅವರ ಮೃದಂಗದ ಕೈಚಳಕ ಹಾಗೂ ನರಸಿಂಹಮೂರ್ತಿ ಅವರ ಮಧುರ ಕೊಳಲು- ನೃತ್ಯಕ್ಕೆ ಪೂರಕವಾಗಿ ಹೊಮ್ಮಿತು.ಪ್ರತಿಭಾವಂತ ವಾದಕರು

ಸಂಗೀತ ಸಂಭ್ರಮದವರು ಕಳೆದ ವಾರ `ಯುವ ಸಂಭ್ರಮ'ವನ್ನು ನಡೆಸಿದರು. ಯುವ ಕಲಾವಿದರು ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನೀಡಿ, ವೇದಿಕೆಯನ್ನು ಬೆಳಗಿದರು. ಯುಗಳ ಪಿಟೀಲು ನುಡಿಸಿದ ಸಿಂಧು ಸುಚೇತನ್ ಮತ್ತು ಎಚ್.ಎಸ್. ಸ್ಮಿತಾ, ಸರಸ್ವತಿ ರಾಗವನ್ನು ಹಿತಮಿತವಾಗಿ ಬೆಳೆಸಿದರು. ಔಡವ ಷಾಡವ ರಕ್ತಿರಾಗವಾದ `ಸರಸ್ವತಿ'ಯು ತ್ಯಾಗರಾಜರ `ಅನುರಾಗಮುಲೇನ' ಮೂಲಕ ಸುಪರಿಚಿತವಾಗಿದೆ. ಸಹೋದರಿಯರು ಹಿತಮಿತವಾಗಿ ಆಲಾಪನೆ, ಸ್ವರ ಪ್ರಸ್ತಾರ ಮಾಡಿ, ಕೃತಿಯನ್ನು ಬೆಳಗಿಸಿದರು.ಇನ್ನೊಂದು ಜನಾನುರಾಗಿ ರಾಗ ಮೋಹನವನ್ನು ಇಬ್ಬರೂ ಹಂಚಿಕೊಂಡು ಮಾಧುರ್ಯವಾಗಿ ಬೆಳೆಸಿದರು. ಅವರು ಪಡೆದಿರುವ ದಕ್ಷ ಶಿಕ್ಷಣ, ಉತ್ತಮ ಸಾಧನೆಗಳಿಂದ ವಿನಿಕೆ ಪರಿಣಾಮಕಾರಿಯಾಗಿ ಹೊಮ್ಮಿತು. ಇನ್ನಿಬ್ಬರು ತರುಣ ಲಯವಾದ್ಯಗಾರರಾದ ಬಿ.ಎಸ್.ಪ್ರಶಾಂತ್ ಮತ್ತು ಕಾರ್ತಿಕ್ ಹೊಂದಾಣಿಕೆಯಿಂದ ನುಡಿಸಿ ನೆರವಾದರು.ಬೀಬಿ ನಾಚಿಯಾರ್

ಮೇಲುಕೋಟೆಯ ಬೀಬಿ ನಾಚಿಯಾರ್ ಕಥೆ ಜನಪ್ರಿಯವಾದುದು. ಈ ಕಥೆಯನ್ನು ಆಧರಿಸಿ ವೈಷ್ಣವಿ ನಾಟ್ಯ ಶಾಲಾದ ವಿದ್ಯಾರ್ಥಿನಿಯರು ನೃತ್ಯ  ರೂಪಕವನ್ನು ಮಾಡಿದರು. 6ರಿಂದ 30 ವರ್ಷದವರೆಗಿನ 35 ಜನ ಯುವತಿಯರು ಕ್ಷಣಾರ್ಧದಲ್ಲಿ ಪಾತ್ರಗಳನ್ನು ಬದಲಾಯಿಸಿಕೊಳ್ಳುತ್ತಾ, ಮಿಂಚಿನ ವೇಗದಲ್ಲಿ ದೃಶ್ಯಗಳನ್ನು ಬೆಳೆಸುತ್ತಾ ರೂಪಕದ ಸ್ವಾರಸ್ಯವನ್ನು ಉಳಿಸಿಕೊಂಡರು. ಕಿರಿಯರಾದರೂ ಒಳ್ಳೆಯ ಅಭಿನಯ, ಆಕರ್ಷಕ ಪಾದಚಲನೆಗಳಿಂದ ಸಭೆಯ ಮೆಚ್ಚುಗೆ ಗಳಿಸಿದರು. ಯುವ ನಿರ್ದೇಶಕ ಮಿಥುನ್ ಶ್ಯಾಂ ಅಭಿನಂದನಾರ್ಹರು.ಅಪ್ಪ ಮಕ್ಕಳ ಗಾಯನ ಜೋಡಿ

ಡಾ. ನಾಗರಾಜ ಹವಾಲ್ದಾರ್ ಅವರು ನಗರದ ಸಂಗೀತಾಭಿಮಾನಿಗಳಿಗೆ ಸುಪರಿಚಿತರೇ. ಸಂಗೀತದಲ್ಲಿ  ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪಡೆದು ಕಿರಾಣಾ ಘರಾಣೆಯ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಗಾಯಕ, ಬೋಧಕ, ಬರಹಗಾರರಾಗಿ ಸಂಗೀತ ಕೈಂಕರ್ಯ ಸಲ್ಲಿಸುತ್ತಿದ್ದಾರೆ. ಅವರ ಮಗ ಓಂಕಾರನಾಥ ಹವಾಲ್ದಾರ್ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದು, ರಾಜ್ಯದ ಒಳ- ಹೊರಗೆ, ವಿದೇಶಗಳಲ್ಲೂ ಕಛೇರಿ ಮಾಡಿದ್ದಾರೆ. ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆ, ಕಿಶೋರ್ ಪ್ರತಿಭಾ ಪುರಸ್ಕಾರ ಸ್ಪರ್ಧೆಗಳ ಬಹುಮಾನ ವಿಜೇತ.ನಾಗರಾಜ್ ಮತ್ತು ಓಂಕಾರನಾಥ್ ಹವಾಲ್ದಾರ್ ತಮ್ಮ ಯುಗಳ ಗಾಯನವನ್ನು ಪೂರ್ಯಧನಾಶ್ರಿ ರಾಗದೊಂದಿಗೆ ಪ್ರಾರಂಭಿಸಿದರು. ಸ್ವರದಿಂದ ಸ್ವರಕ್ಕೆ ಏರುತ್ತಾ, ರಕ್ತಿಯ ಸಂಗತಿಗಳಿಂದ ರಾಗವನ್ನು ಅರಳಿಸಿ, ರಾಗಕ್ಕೆ ಪೂರ್ಣತ್ವ ನೀಡಿದರು. ನಂತರ ಪುಂಖಾನುಪುಂಖವಾಗಿ ಕನ್ನಡ ಗೀತೆಗಳು: `ಆಡ ಪೋಗೋಣ ಬಾರೊ ರಂಗ' (ದುರ್ಗಾ), `ಕರುಣಿಸೊ ರಂಗ' (ಜೋಗಿಯ), `ಅಕ್ಕ ಕೇಳವ್ವ' (ಪಹಾಡಿ) ಮತ್ತು `ನೀನೆ ದಯಾಳು ನಿರ್ಮಲ ಚಿತ್ತ' (ಭೈರವಿ) ತಂದೆ, ಮಗನ ಕಂಠದಲ್ಲಿ ಭಾವಪೂರ್ಣವಾಗಿ ಹೊಮ್ಮಿದವು. ತಬಲದಲ್ಲಿ ಕೇದಾರನಾಥ ಹವಾಲ್ದಾರ್ ಹಾಗೂ ಹಾರ್ಮೋನಿಯಂನಲ್ಲಿ  ಸಮೀರ್ ಹವಾಲ್ದಾರ್ ಸಾಥ್ ನೀಡಿದರು.

ಪ್ರತಿಕ್ರಿಯಿಸಿ (+)