ವರ್ಣರಂಜಿತ ಪ್ರತಿಭಾ ಕಾರಂಜಿ

7

ವರ್ಣರಂಜಿತ ಪ್ರತಿಭಾ ಕಾರಂಜಿ

Published:
Updated:

ಕೋಲಾರ: ಅಲ್ಲಿ ಎಳೆಯ ಪ್ರತಿಭೆಗಳ ಕಾರಂಜಿ ಹಲವು ಬಣ್ಣಗಳಲ್ಲಿ ಚಿಮ್ಮಿತ್ತು. ಜಿಲ್ಲೆಯ ಐದೂ ತಾಲ್ಲೂಕಿನಿಂದ ಬಂದಿದ್ದ ಸಾವಿರಾರು ಮಕ್ಕಳು ತಮ್ಮ ಪ್ರತಿಭೆ­ಗಳನ್ನು ಅತ್ಯುತ್ಸಾಹದಿಂದ ಪ್ರದರ್ಶಿಸಿದರು. ಹಾಡು, ಕುಣಿತ, ನಾಟಕ, ಛದ್ಮ­ವೇಶ, ಕಂಠಪಾಠ, ಲಘುಸಂಗೀತ, ಜಾನಪದ ನೃತ್ಯ, ಆಶುಭಾಷಣ, ಪ್ರಬಂಧ ರಚನೆ ಹೀಗೆ 32 ಸ್ಪರ್ಧೆಗಳಲ್ಲಿ ತಾವು ಕಲಿತಿದ್ದನ್ನು ವಿಶಿಷ್ಟವಾಗಿ ಮಂಡಿಸಿದರು.ನಗರದ ಅಲ್ ಅಮೀನ್ ಪ್ರೌಢಶಾಲೆ ಮತ್ತು ದರ್ಗಾ ಮೊಹಲ್ಲಾದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಆವರಣವು ಇಂಥ ಸಾವಿರಾರು ಪ್ರತಿಭೆಗಳ ಕಾರಂಜಿಯಿಂದ ತುಂಬಿಹೋಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮ.

ಸುಮಾರು ಒಂದೂವರೆ ಸಾವಿರ ಮಕ್ಕಳು ಸ್ಪರ್ಧೆಗಳಿಗೆ ಜೀವ ತುಂಬಿದರು.

ಸಾಮೂಹಿಕ ಜಾನಪದ ನೃತ್ಯ, ಕೋಲಾಟ, ಛದ್ಮವೇಷ, ಕನ್ನಡ ಕಂಠಪಾಠ, ಇಂಗ್ಲಿಷ್, ಹಿಂದಿ ಕಂಠಪಾಠ, ದೇಶಭಕ್ತಿ ಗೀತೆ, ಅನುಕರಣ, ಸ್ಥಳದಲ್ಲೇ ಮಾದರಿ ಪಾಠೋಪಕರಣ ತಯಾರಿಕೆ,  ಸ್ಪರ್ಧೆಗಳಲ್ಲೂ ಬೆಳಿಗ್ಗೆಯಿಂದ ಸಂಜೆವರೆಗೂ ಪಾಲ್ಗೊಂಡರು. ‘ಸಕಾಲ’ ಕುರಿತ ನಾಟಕ ಸ್ಪರ್ಧೆಯೂ ನಡೆದಿದ್ದು ವಿಶೇಷ. 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 

ಗಮನ ಸೆಳೆದವರು: ಛದ್ಮ ವೇಷ ಸ್ಪರ್ಧೆಯಲ್ಲಿ ಮುಳಬಾಗಲು ತಾಲ್ಲೂಕಿನ ಮಂಡಿಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆದರ್ಶ, ಪ್ರೌಢಶಾಲಾ ವಿಭಾಗದ ಭರತನಾಟ್ಯ ಸ್ಪರ್ಧೆಗೆ ಬಂದಿದ್ದ ಕೆಜಿಎಫ್ ಬೆಮೆಲ್ ಪ್ರೌಢಶಾಲೆಯ ಸೌಜನ್ಯ, ಮಾಲೂರುಇನ ಮಂಜುಳಾ ಮತ್ತು ಶ್ರೀನಿವಾಸಪುರದ ಪ್ರಶಾಂತಿ ಗಮನ ಸೆಳೆದರು.

ಜಾನಪದ ನೃತ್ಯದಲ್ಲಿ ಕೆಜಿಎಫ್ ಬೆಮೆಲ್ ಪ್ರೌಢಶಾಲೆಯ ಬಾಲಕಿಯರು ಮಳೆರಾಯನ ಕುರಿ ನೃತ್ಯ ಪ್ರದರ್ಶಿಸಿ ಮೊದಲ ಬಹುಮಾನ ಗಳಿಸಿದರು. ಮಾಲೂರಿನ ಹುಲಿಮಂಗಲ ಶಾಲೆಯ, ಶ್ರೀನಿವಾಸಪುರ ಕೂರಿಗೆಪಲ್ಲಿಯ ಶಾಲೆಯ ವಿದ್ಯಾರ್ಥಿಗಳ ಪ್ರದರ್ಶನ ಆಕರ್ಷಕವಾಗಿತ್ತು. ಕಿರಿಯ ಮತ್ತು ಹಿರಿಯಪ್ರಾಥಮಿಕ ಶಾಲೆ ವಿಭಾಗದಲ್ಲಿ ಗೆದ್ದವರಿಗೆ ಪ್ರಥಮ ₨ 400, ದ್ವಿತೀಯ ₨ 300 ಮತ್ತು ತೃತೀಯ ₨ 200 ಬಹುಮಾನ ನೀಡಲಾಯಿತು.. ಪ್ರೌಢಶಾಲೆ ವಿಭಾಗದಲ್ಲಿ  ಕ್ರಮವಾಗಿ ₨ 500, ದ್ವಿತೀಯ ₨ 400 ಮತ್ತು ತೃತೀಯ ₨ 300 ಬಹುಮಾನ ನೀಡಲಾಯಿತು.ಉದ್ಘಾಟನೆ: ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಉದ್ಘಾಟಿಸಿದರು. ಜಿ.ಪಂ.ಉಪ­ಕಾರ್ಯದರ್ಶಿ ಜಿ.ಎಫ್.ಬದನೂರು ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಉಪ­ನಿರ್ದೇಶಕ ಎಸ್.ವಿ.ಪದ್ಮನಾಭ್,  ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ, ಎ.ಎನ್.ನಾಗೇಂದ್ರಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಗದೀಶ್, ಸುಬ್ರ­ಮಣ್ಯಂ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ, ವಿಷಯ ಪರಿವೀಕ್ಷಕರಾದ ಬಾಬು ಜನಾರ್ದನ ನಾಯ್ಡು, ರಾಜಣ್ಣ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry