ಮಂಗಳವಾರ, ಮೇ 24, 2022
31 °C

ವರ್ಣಾಶ್ರಮ ವ್ಯವಸ್ಥೆ; ಅನಾರೋಗ್ಯಕರ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಜಾಗತೀಕರಣದ ಸಂದರ್ಭದಲ್ಲೂ ವರ್ಣಾಶ್ರಮ ಧರ್ಮದ ಪ್ರಕ್ರಿಯೆ ಪೈಶಾಚಿಕವಾಗಿ ಮುಂದುವರಿಯುತ್ತಿದೆ. ಇದು ಆಧುನಿಕ ಸಮಾಜದ ಅನಾರೋಗ್ಯಕರ ಬೆಳವಣಿಗೆ ಎಂದು ಪ್ರಾಧ್ಯಾಪಕ ಡಾ.ಕೆ.ಕೃಷ್ಣಪ್ಪ ಹೇಳಿದರು.

ಅವರು ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಚಲವಾದಿ ನೌಕರರ ಘಟಕವನ್ನು ಉದ್ಘಾಟಿಸಿ  ಮಾತನಾಡಿದರು.

ಜಾತಿ ಪ್ರದರ್ಶನಕ್ಕಿಂತ ಸೇವಾ ಭೂಮಿಕೆಯ ಮೂಲಕ ಅಧಿಕಾರ ಪಡೆಯಲು ಚಲವಾದಿಗಳು ಮುಂದಾಗಬೇಕು. ಸಂಘಟನಾತ್ಮಕವಾಗಿ ಜಾಗೃತರಾದಾಗ ಮಾತ್ರ ಸಂವಿಧಾನಾತ್ಮಕ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.

`ಉಪಕಸುಬುಗಳಿಲ್ಲದ ಚಲವಾದಿಗಳಿಗೆ ಸಂಘಟನಾತ್ಮಕ ಮತ್ತು ಸಂವಿಧಾನಾತ್ಮಕ  ಪ್ರಜ್ಞೆ ಇಲ್ಲದಿದ್ದರೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಇಲ್ಲ. ಚಲವಾದಿಗಳು ಸ್ವಾಭಿಮಾನ ಕಳೆದುಕೊಂಡರೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸ್ವಾತ್ಥ್ಯ ಕಳೆದುಕೊಂಡಂತಾಗುತ್ತದೆ~ ಎಂದು ಕಿವಿಮಾತು ಹೇಳಿದರು.

ಚಲವಾದಿ ಬಂಧುಗಳು ಸಾಮಾಜಿಕ ನ್ಯಾಯದ ಜೊತೆ ಜೊತೆಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಊರಿನ ಹೊರಗಡೆ ಇದ್ದವರು ಊರ ಒಳಗಡೆ ಬಂದಾಗ ತಮ್ಮತನವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹೊಂದಿರಬೇಕು ಎಂದರು.

ಬೆಂಗಳೂರು ವಿಶ್ವ ವಿದ್ಯಾಲಯದ ಸಾಂಸ್ಕೃತಿಕ  ಸಂಯೋಜಕ ಹಾಗೂ ಯೋಗಾ ಕೇಂದ್ರ ನಿರ್ದೇಶಕ ಡಾ.ವಿ. ನಾಗೇಶ್‌ಬೆಟ್ಟಕೋಟೆ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ನಂತರ ಹೋರಾಟ ಮಾಡಬೇಕು ಎಂದಿದ್ದಾರೆ. ಆದರೆ ಈಗ ದಲಿತ ಸಂಘಟನೆಗಳು ಮೊದಲು ಹೋರಾಟ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ದಲಿತ ಸಂಘಟನೆಗಳ ಹೋರಾಟಗಳು ಸೋಲುತ್ತಿವೆ. ಶೈಕ್ಷಣಿಕ ಜಾಗೃತಿ  ಮೂಲಕ ಯಾವುದೇ ಹೋರಾಟಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಕೊಂಗಾಡಿಯಪ್ಪ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಂಗಸ್ವಾಮಿ ಬೆಳಕವಾಡಿ ಮಾತನಾಡಿ, ಚಲವಾದಿ ನೌಕರರು ಸಂಘಟಕರಾಗುವುದರ ಮೂಲಕ ತಮಗಾಗುವ ಅನ್ಯಾಯಗಳನ್ನು ಬಗೆಹರಿಸಿ ಕೊಳ್ಳಬಹುದು ಮತ್ತು ಉತ್ತಮ ಬಾಂಧವ್ಯಗಳನ್ನು ಬೆಳಸಿಕೊಳ್ಳಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡದ ಪ್ರೊ.ಚಂದ್ರಪ್ಪ, ಚಲವಾದಿಗಳು ಪ್ರಜ್ಞಾವಂತರಾಗಿ ಸಾಮಾಜಿಕ ಕಾಳಜಿಗಳ ಪರವಾದ ಕಾರ್ಯಕರ್ತರಂತೆ ಕ್ರಿಯಾಶೀಲರಾದಾಗ ಮಾತ್ರವೇ ನಮ್ಮ ಸಮಾಜದಲ್ಲಿ ಆವರಿಸಿಕೊಂಡಿರುವ ಮೌಢ್ಯ, ಅಸಹಾಯಕತೆ, ಕೀಳಿರಿಮೆ, ಮುಂತಾದ ಅನಿಷ್ಟಗಳನ್ನು ತೊಲಗಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಜಿ.ರಾಮಕೃಷ್ಣಪ್ಪ, ಚಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ, ಪನ್ನೂರ್, ಕೆ.ಸಂಜೀವಕುಮಾರ್, ಕೆ.ರಾಮಕೃಷ್ಣಯ್ಯ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.