ವರ್ತಮಾನದ ತಲ್ಲಣಗಳಿಗೆ ಕಾವ್ಯಸ್ಪಂದನ

7

ವರ್ತಮಾನದ ತಲ್ಲಣಗಳಿಗೆ ಕಾವ್ಯಸ್ಪಂದನ

Published:
Updated:

ಬೆಂಗಳೂರು: ನಾಡದೇವಿಯ ಸ್ತುತಿ, ನಾಡವರ ದುಃಸ್ಥಿತಿ, ದೇಶದ ಭವಿಷ್ಯದ ಬಗ್ಗೆ ಆತಂಕ, ದೀನದಲಿತರ ಬಗ್ಗೆ ದುಃಖ, ರಾಜಕಾರಣಿಗಳಿಗೆ ಮಾತಿನ ಚಾಟಿಯೇಟು, ಆದರ್ಶಗಳ ಸಾರೋಟು- ಇವಿಷ್ಟು ಶನಿವಾರ ನಡೆದ ಎರಡನೇ ಕವಿಗೋಷ್ಠಿಯಲ್ಲಿ ಅನುರಣಿಸಿದ ಕವಿತೆಗಳ ಹೂರಣ.ಕವಿಗೋಷ್ಠಿಯ ಅಧ್ಯಕ್ಷರಾದ ಹಿರಿಯ ಕವಿ ಡಾ.ಬಿದರಹಳ್ಳಿ ನರಸಿಂಹಮೂರ್ತಿ ಹಾಗೂ ಆಶಯ ನುಡಿಗಳನ್ನಾಡಿದ ಮಾರ್ಕಂಡಪುರಂ ಶ್ರೀನಿವಾಸ್ ಸೇರಿದಂತೆ ವೇದಿಕೆಯ ಮೇಲೆ ಇಪ್ಪತ್ತನಾಲ್ಕು ಕವಿಗಳಿದ್ದರು.‘ಕನ್ನಡ ಕಾವ್ಯದ ಔನ್ನತ್ಯದ ದಿನಗಳು ಇಂದಿನವಾಗಿದ್ದು, ಕವಿಗಳು ಬದುಕಿನ ಹೊಸ ಮೌಲ್ಯಗಳನ್ನು ಆವಿರ್ಭವಿಸಿಕೊಂಡು ಉತ್ತಮ ಕಾವ್ಯರಚನೆಯಲ್ಲಿ ತೊಡಗಿದ್ದಾರೆ’ ಎಂದು ಆಶಯಭಾಷಣ ಮಾಡಿದ ಮಾರ್ಕಂಡಪುರಂ ಶ್ರೀನಿವಾಸ್ ಹೇಳಿದರು.ಕವಿಗೋಷ್ಠಿಗೆ ಚಾಲನೆ ನೀಡಿದ ಕವಯತ್ರಿ ವಿಜಯಾ ಹಾಲಪ್ಪನ್, ‘ಕೆಂಪೇಗೌಡನ ಉದ್ಯಾನನಗರಿಯಲಿ ನಡೆದ ಸಾಹಿತ್ಯ ಸಮ್ಮೇಳನ’ ಎಂದು ಕವಿತೆಗೆ ಸಮ್ಮೇಳನದ ಭಾವುಕತೆಯ ಸ್ಪರ್ಶ ನೀಡಿದರು. ಒಡವೆ ಮೊಡವೆ ಮದುವೆ ಒಡವೆ ಎಂದು ಪ್ರಾಸಕ್ಕೆ ಪ್ರಾಸ ಜೋಡಿಸಿದ ಯುವಕವಿ ಸಂಪತ್ತಾರಾಧ್ಯರ ‘ಹೆಣ್ಣಲ್ಲಿ ಗಂಡೆದೆ’ ಕವಿತೆ ಮಹಿಳಾಕುಲಕ್ಕೆ ನೀತಿಭೋದೆಯಂತಿತ್ತು. ಎಂ.ಡಿ.ರೇವಡಿಗಾರ ಅವರು ‘ಭರತವ್ವನ ರೋದನ’ವನ್ನು ಪರಿಪರಿಯಾಗಿ ಬಿಡಿಸಿಟ್ಟರೆ, ಬ್ಯಾಡರಹಳ್ಳಿ ಎಚ್. ಹನುಮಂತರಾಯಪ್ಪ ಅವರ ‘ಪ್ರಚಲಿತ ವಿದ್ಯಮಾನಗಳು’ ಕವಿತೆ ಪತ್ರಿಕೆಗಳಲ್ಲಿನ ಶೀರ್ಷಿಕೆಗಳನ್ನೇ ಕವಿತೆಯ ಸಾಲುಗಳನ್ನಾಗಿ ಪ್ರಸಕ್ತ ಸಂದರ್ಭಕ್ಕೆ ಕನ್ನಡಿ ಹಿಡಿದರು.ಕವಿಗೋಷ್ಠಿಗೆ ಕಾವು ಏರಿದ್ದು ಬೆಳಗಾವಿಯ ಕವಿ ನಾಗೇಶ ಜಿ. ನಾಯಕ ಸವಣೂರಿನ ಭಂಗಿಗಳ ಕುರಿತಾದ ‘ನಾವೂ ಮನುಷ್ಯರು’ ಕವಿತೆಯನ್ನು ಆರ್ದ್ರ ದನಿಯಲ್ಲಿ ಓದಿದಾಗ. ‘ಕಂಪ್ಯೂಟರಿನ ಕೀಲಿಮಣೆಯಲಿ ಕಳೆದುಹೋಗಿರುವ ಕನ್ನಡಕಗಳೇ/ ಒಂಚೂರು ಕರುಣೆ ನಮ್ಮ ಮೇಲೂ ಇರಲಿ’ ಎನ್ನುವ ಆಶಯದ ಕವಿತೆ, ಭಂಗಿ ಸಮುದಾಯದ ತಲೆಮಾರುಗಳ ಅಳಲನ್ನು ವರ್ತಮಾನಕ್ಕೆ ಮುಖಾಮುಖಿ ಮಾಡಿದಂತಿತ್ತು. ‘ನಮ್ಮ ಕಂಡು ಮೂಗು ಮುಚ್ಚಿಕೊಳ್ಳುವಿರಲ್ಲ/ ಎಷ್ಟು ಹತ್ತಿಕ್ಕಿಕೊಂಡರೂ ಕಣ್ಣು ಚುಳ್ಳೆನ್ನುತ್ತವೆ’ ಎನ್ನುವಾಗ ಸಭಾಂಗಣದಲ್ಲಿ ಅರೆಕ್ಷಣ ಮೌನ.ಮುಂಬಯಿಯಿಂದ ಬಂದಿದ್ದ ಜಿ.ಪಿ.ಕುಸುಮ ‘ಮುಂಬೈ ಕನ್ನಡಿಗ’ ಕನ್ನಡಪ್ರೀತಿಗೆ ಕಾವ್ಯದ ರೂಪ ಕೊಟ್ಟಿದ್ದರು. ವಿಜಯಲಕ್ಷ್ಮಿ ಶಾನಭಾಗ್, ಸಂಧ್ಯಾಭಟ್, ಮುದ್ದುವೀರಸ್ವಾಮಿ, ಡಿ.ಬಿ.ಶಂಕರಪ್ಪ, ಗೊರೂರು ಪಂಕಜ, ಎಂ.ಎಸ್.ವೆಂಕಟರಾಮಯ್ಯ, ಮಂಜುನಾಥ ಬಮ್ಮನಕಟ್ಟಿ, ವೀರಣ್ಣ ವಾಲಿ, ಬಾಗೂರು ಮಾರ್ಕಂಡೇಯ, ಶ್ರೀಮಿವಾಸ ಸೂರಿ ಅವರ ಕವಿತೆಗಳದು ಆಧುನಿಕ ಸಂದರ್ಭದ ತಲ್ಲಣಗಳನ್ನು ಹಿಡಿದಿಡುವ ಪ್ರಯತ್ನವಾಗಿತ್ತು.ಗಂ.ದಯಾನಂದ ಗೂಬೆಯನ್ನು ಸಾಕ್ಷಿಪ್ರಜ್ಞೆಯಾಗಿಸಿ ಇಂದಿನ ರಾಜಕೀಯವನ್ನು ವಿಡಂಬಿಸಿ ಚಪ್ಪಾಳೆ ಗಿಟ್ಟಿಸಿಕೊಂಡರೆ, ನಾಗಸುಬ್ರಹ್ಮಣ್ಯ ಶಾಸ್ತ್ರಿಗಳು ಶಾರ್ದೂಲ ಹಾಗೂ ಮತ್ತೇಭವಿಕ್ರೀಡಿತ ವೃತ್ತಗಳಲ್ಲಿ ರಚಿಸಿದ ಕವಿತೆಗಳನ್ನು ವಾಚಿಸಿ ಸಹೃದಯರ ಗಮನಸೆಳೆದರು.ಕಲಘಟಗಿಯ ಎಂ.ಎಂ.ಪುರದನಗೌಡ್ರ, ‘ಅಣ್ಣ ನೀನಂದು ಹತ್ತಿದ ಕುದುರೆ ನಡೆಯುತ್ತಿಲ್ಲ/ ಬಡವರ ದಲಿತರ ಕೇರಿಗೆ’ ಎಂದು ವಿಷಾದಿಸಿದರೆ, ಎಂ.ವಿ.ನೆಗಳೂರ ಅವರ ‘ಸಿದ್ಧಗಂಗೆಯ ಸಿರಿ’ ಕವಿತೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಮೂಲಕ 12ನೇ ಶತಮಾನದ ಶರಣರ ಆದರ್ಶ ಕಾಣುವ ಪ್ರಯತ್ನವಿತ್ತು.ಕೊನೆಯವರಾಗಿ ಕವಿತೆ ಓದಿದ ವೀರಣ್ಣ ಮಡಿವಾಳರ ‘ಖಾಲಿ ಬೀದಿಯಲ್ಲೊಂದು ವಸಂತನ ಭಿಕ್ಷಾಪದ’ ಕವಿತೆ ವಾಚಿಸಿದರು. ‘ಬಡಪಾಯಿ ಕಣ್ಣೀರು ತುಂಬಾ ಸೋವಿ’, ‘ರಣಾಂಗಣದಲ್ಲಿ ನಿಂತಾಗಿದೆ ಹೂಡಿ ಹೊಡೆಯುವುದೊಂದೇ ದಾರಿ/ ಏನು ಮಾಡುವುದೀಗ ಎದುರಲ್ಲಿ ನಾವೇ ನಿಂತಿರುವಾಗ’ ಎನ್ನುವ ಸಾಲುಗಳ ಮಡಿವಾಳರ ಕವಿತೆ, ವರ್ತಮಾನದ ತವಕತಲ್ಲಣಗಳ ಶೋಧನೆಯಂತಿತ್ತು.ಕವಿತೆ ವಾಚಿಸಿದ ಕವಿಗಳ ಉತ್ಸಾಹವನ್ನು ಮೆಚ್ಚಿಕೊಂಡ ಗೋಷ್ಠಿಯ ಅಧ್ಯಕ್ಷರಾದ ಬಿದರಹಳ್ಳಿ ನರಸಿಂಹಮೂರ್ತಿ, ‘ಇವತ್ತಿನ ಕಾವ್ಯದ ಎಲ್ಲ ಮಾದರಿಗಳೂ ಇಂದಿನ ಕವಿಗೋಷ್ಠಿಯಲ್ಲಿ ವ್ಯಕ್ತವಾದವು’ ಎಂದು ಹೇಳಿ, ತಮ್ಮದೊಂದು ಕವಿತೆ ವಾಚಿಸಿದರು.

ವೇದಿಕೆಯ ಹಿಂಭಾಗದಲ್ಲಿ ಕವಿಗಳನ್ನು ಕೂರಿಸಿ, ಮುಂಭಾಗದಲ್ಲಿ ಅಧ್ಯಕ್ಷರೊಂದಿಗೆ ನಿರೂಪಕಿ ಕುಳಿತ ಔಚಿತ್ಯದ ಬಗ್ಗೆ ಕಥೆಗಾರರಾದ ಆನಂದ ಋಗ್ವೇದಿ ಮತ್ತು ಚಿದಾನಂದ ಸಾಲಿ ಎದ್ದುನಿಂತು ಪ್ರತಿಭಟಿಸಿದ್ದಕ್ಕೆ ಕೂಡ ಕವಿಗೋಷ್ಠಿ ಸಾಕ್ಷಿಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry