ಶನಿವಾರ, ನವೆಂಬರ್ 23, 2019
17 °C

ವರ್ತುಲದೊಳಗೊಂದು ಕಪ್ಪು ಚುಕ್ಕಿ

Published:
Updated:
ವರ್ತುಲದೊಳಗೊಂದು ಕಪ್ಪು ಚುಕ್ಕಿ

ಕಲಾಪ

ಚಿತ್ರಕಲಾ ಪರಿಷತ್‌ಗೆ ಹೊಸ ಕಳೆ. ವಿಶಾಲವಾದ ಆಲದ ಮರದ ಕೆಳಗೆ ಸುಮವೊಂದು ಅರಳಿದೆ. ಆ ಸುಮಕ್ಕೆ ಮನಸ್ಸಿನ ಅಂಧಕಾರವನ್ನು ಕಳೆದು ಬೆಳಕಿನತ್ತ ಕರೆದೊಯ್ಯುವ ಶಕ್ತಿ ಇದೆ. ಅಂದಹಾಗೆ ಈ ಸುಮವನ್ನು ಮೂಡಿಸಿದ್ದು ಸರೋಜ ರೇವಣ್ಣಕರ್.ಈ ಕಲಾವಿದೆ ಹುಟ್ಟಿದ್ದು ಪ್ರಕೃತಿಯ ಮಡಿಲಲ್ಲಿ. ಭಟ್ಕಳದಂತಹ ಊರಿನಲ್ಲಿ ಹಸಿರಿಗೆ ಬರವಿಲ್ಲ. ಎತ್ತ ನೋಡಿದರಲ್ಲಿ ಹಸಿರಿನ ತೋರಣ. ಆ ಹಸಿರೇ ನನ್ನ ಕಲೆಯ ಹೂರಣ ಅಂತಾರೆ ಇವರು. ಅಮ್ಮನಿಂದ ಕಲೆಯ ನಂಟನ್ನು ಬಳುವಳಿಯಾಗಿ ಪಡೆದುಕೊಂಡವರು. ಚಿತ್ರ ಬಿಡಿಸುವುದರಲ್ಲಿ ಸಿಗುವ ಆನಂದವನ್ನು ಬಣ್ಣಿಸಲು ಇವರಿಗೆ ಪದಗಳೇ ಸಾಕಾಗುವುದಿಲ್ಲವಂತೆ.ಇವರ ತಾಯಿ ಕಲೆ, ಸಾಹಿತ್ಯ, ಸಂಗೀತ ಪ್ರೇಮಿ. ಅವರ ಗರಡಿಯಲ್ಲಿ ಪಳಗಿದ ಇವರಿಗೂ ಕಲೆಯ ಮೇಲೆ ಒಲವು. ನೆನಪಿನ ಬುತ್ತಿಯಿಂದ ದೊರೆತ ಅನುಭವಗಳನ್ನೆಲ್ಲಾ ಕ್ಯಾನ್ವಾಸ್ ಮೇಲೆ ಮೂಡಿಸಿ ರಂಗು ತುಂಬುತ್ತಾರೆ ಕಲಾವಿದೆ ಸರೋಜಾ.`ಬಾಲ್ಯದಲ್ಲಿ ನನ್ನ ಕಣ್ಣಿಗೆ ಬಿದ್ದದ್ದೆಲ್ಲವನ್ನೂ ಕುಂಚದಲ್ಲಿ ಹಿಡಿದಿಡುವ ಆಸೆ ಇತ್ತು. ಆ ಆಸೆಯೇ ನನ್ನನ್ನು ಒಬ್ಬ ಪುಟ್ಟ ಕಲಾವಿದೆಯನ್ನಾಗಿ ಮಾಡಿತ್ತು. ಸುಮಾರು ಇಪ್ಪತ್ತು ವರ್ಷಗಳಿಂದ ಚಿತ್ರ ಬಿಡಿಸುವ ಹವ್ಯಾಸದಲ್ಲಿ ನಿರತಳಾಗಿದ್ದೇನೆ. ನಾನು ಬಿಡಿಸಿದ ಮೊದಲ ಚಿತ್ರ ಹಾವಾಡಿಗ. ಮನೆಗೆ ಹಾವು ಹಿಡಿದು ಹಾವಾಡಿಗ ಬರುತ್ತಿದ್ದ. ಆ ಚಿತ್ರ ನನ್ನ ಕಣ್ಮುಂದೆ ಇನ್ನೂ ಹಾಗೆಯೇ ಇದೆ. ಜತೆಗೆ ನನ್ನೂರಿನ ಪರಿಸರ ಕೂಡ ನನ್ನ ಮೇಲೆ ಪ್ರಭಾವ ಬೀರಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಸಿರಿ. ಯೌವನದ ನನ್ನ ಭಾವನೆಗಳಿಗೆ ನೀರೆರೆದು ಪೋಷಿಸಿದ್ದು ವನ್ಯಸಿರಿ'.`ಚಿತ್ರಕಲಾ ತರಬೇತಿಗೆ ನಾನು ಹೋಗಿಲ್ಲ. ಒಂದು ಚಿತ್ರ ಬಿಡಿಸುವುದಕ್ಕೆ ನಾನು ಯಾವತ್ತೂ ದೂರದ ಊರಿಗೆ ಪಯಣಿಸಿಲ್ಲ. ಕಣ್ಣಿಗೆ ಕಂಡದ್ದು, ಅನುಭವದ ತೆಕ್ಕೆಗೆ ಸಿಕ್ಕಿದ್ದನ್ನು ಕ್ಯಾನ್ವಾಸ್ ಮೇಲೆ ಮೂಡಿಸಲು ಪ್ರಯತ್ನಪಟ್ಟಿದ್ದೆ. ಇನ್ನು ಮಾರ್ಗದರ್ಶಕರಾಗಿ ಕಲಾವಿದ ಎಂ.ಜಿ. ದೊಡ್ಡಮನಿ ಸಲಹೆ ನೀಡುತ್ತಿದ್ದರು. ದೊಡ್ಡ ದೊಡ್ಡ ಕಲಾವಿದರ ಚಿತ್ರಕಲೆಯನ್ನು ನೋಡಿ ನಾನು ನನ್ನನ್ನು ತಿದ್ದಿಕೊಳ್ಳುತ್ತೇನೆ. ಒಬ್ಬ ಕಲಾವಿದೆಗೆ ಬೇಕಾಗಿರುವುದು ತಾಳ್ಮೆ' ಎಂದು ಮಂದಹಾಸ ಬೀರುತ್ತಾರೆ ಸರೋಜಾ.ಇವರ ಕಲಾಕೃತಿಗಳತ್ತ ನೋಡಿದರೆ ಒಂದಕ್ಕಿಂತ ಒಂದು ಹೊಸ ಅನುಭವವನ್ನು ನೀಡುತ್ತವೆ. ಸುತ್ತಲೂ ಕಪ್ಪು ವರ್ತುಲವಿದ್ದು ಒಳಗೆ ಒಂದು ಕೆಂಪುಚುಕ್ಕಿ ಇಟ್ಟ ಕಲಾಕೃತಿ ನೋಡುಗರ ಮನಸ್ಸನ್ನು ಯೋಚನೆಗೆ ಹಚ್ಚುತ್ತದೆ. ಸಾವಿರ ಸುಳ್ಳುಗಳ ಜಾಲ ಹೆಣೆದು ಸತ್ಯವನ್ನು ಮುಚ್ಚಿಟ್ಟರೂ ಅದು ಎದ್ದು ಕಾಣುತ್ತದೆ ಎಂಬ ಕಲಾವಿದೆಯ ಆಶಾಭಾವ ಇಲ್ಲಿ ವ್ಯಕ್ತವಾಗಿದೆ. ಜಾಲದ ಒಳಗೆ ಚಿಕ್ಕ ಚಿಕ್ಕ ಮರಗಳನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ. ವಿವಿಧ ಸಂಸ್ಕೃತಿಯ ಜನರಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕಲಾಕೃತಿ ಹಲವು ರಂಗು ತುಂಬಿಕೊಂಡು ಕಣ್ಣಿಗೆ ಹಿತ ನೀಡುತ್ತದೆ.ಕಪ್ಪು ಎಲೆಗಳ ಮಧ್ಯೆ ಬಿಳಿಯ ಹೂವೊಂದು ತನ್ನ ಪಕಳೆಯನ್ನು ಬಿಡಿಸಿಕೊಂಡು ಅರಳಿದ ಬಗೆ ಕುತೂಹಲ ಕೆರಳಿಸುತ್ತದೆ. ಪರಿಸ್ಥಿತಿಗಳು ನಮ್ಮನ್ನು ಎಷ್ಟೇ ಕಟುವಾಗಿಸಿದರೂ ಎಲ್ಲರ ಮನಸ್ಸಲ್ಲೂ ಮುಗ್ಧತೆಯ ಹೂವೊಂದು ಸದಾ ಅರಳಿರುತ್ತದೆ ಎಂದು ಪ್ರತಿಪಾದಿಸುವ  ಕಲಾವಿದೆಯ ಸೂಕ್ಷ್ಮ ಮನಸ್ಸು ಅಚ್ಚರಿ ಮೂಡಿಸುತ್ತದೆ. ಇನ್ನು ಗಂಡ ಹೆಂಡತಿಯ ನಡುವಿನ ಸಂಬಂಧ ತಿಳಿಸುವ ಎರಡು ಸುಮಗಳ ಚಿತ್ರ ಮನಸ್ಸಿನಲ್ಲಿ ಮಧುರ ಭಾವ ಹುಟ್ಟುಹಾಕುವುದರ ಜತೆಗೆ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಹೆಣ್ಣಿಗೆ ಇಲ್ಲಿ ಹಳದಿ ಬಣ್ಣ, ಗಂಡಿಗೆ ನೀಲಿ ಬಣ್ಣ ನೀಡಿದ್ದಾರೆ. ಒಂದು ತುದಿಯಲ್ಲಿ ಹುಟ್ಟಿದ ಹೂವು ಇನ್ನೊಂದು ತುದಿಯಲ್ಲಿ ಹುಟ್ಟಿದ ಹೂವನ್ನು ಸಂಧಿಸಿ ತನ್ನ ಗಂಧವನ್ನು ಸೂಸುವುದೇ ಮಧುರಾನುಭೂತಿ ಎಂದು ಭಾವುಕರಾಗಿ ನುಡಿಯುತ್ತಾರೆ ಕಲಾವಿದೆ ಸರೋಜಾ.ಪ್ರಕೃತಿ, ಹೂವು, ಹಸಿರುಗಳೇ ಇವರ ಕಲಾಕೃತಿಯ ಹೂರಣ. ಬೆಳದಿಂಗಳ ರಾತ್ರಿಯ ಕಾಡಿನ ಸೌಂದರ್ಯ ಸೇರಿದಂತೆ ಹಲವು ಕಲ್ಪನೆಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಿದ್ದಾರೆ. ಚಾರ್‌ಕೋಲ್, ಮಿಕ್ಸ್‌ಡ್ ಮೀಡಿಯಾ, ಆಯಿಲ್ ಹೀಗೆ ತಮಗೆ ಇಷ್ಟವಾದ ಮಾಧ್ಯಮದಲ್ಲಿ ಕಲ್ಪನೆಯ ಎಳೆಗೆ ರೂಪು ನೀಡಿದ್ದಾರೆ.

ಸ್ಥಳ: ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್, ಬುಧವಾರ (ಏ. 17)ದವರೆಗೆ ಇವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಸಮಯ ಬೆಳಿಗ್ಗೆ 10ರಿಂದ ಸಂಜೆ 7.

 

ಪ್ರತಿಕ್ರಿಯಿಸಿ (+)