ಭಾನುವಾರ, ಜೂನ್ 13, 2021
25 °C

ವರ್ತುಲ ರಸ್ತೆ ನಿರ್ಮಾಣಕ್ಕೆ ಯೋಜನೆ: ಹರ್ಷಗುಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡುವ ಮೂಲಕ ನಗರದ ಪರಿಮಿತಿಯಲ್ಲಿ ಭಾರೀ ವಾಹನಗಳ ಸಂಚಾರದಟ್ಟಣೆ ತಡೆಯಲು ಯೋಜನೆ ರೂಪಿಸಲಾಗುತ್ತಿದೆ~ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಿರ್ವಾಹಕ ನಿರ್ದೇಶಕ ಹರ್ಷಗುಪ್ತ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ಕೈಗೆತ್ತಿಕೊಂಡಿರುವ ಒಳಚರಂಡಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಅವರು ಚರ್ಚಿಸಿದರು. ಜಿಲ್ಲಾ ಕೇಂದ್ರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಅವಶ್ಯವಿರುವ ತಾಂತ್ರಿಕ ಮಾರ್ಗದರ್ಶನದ ಉಸ್ತುವಾರಿಯನ್ನು ನಿಗಮವೇ ವಹಿಸಿಕೊಳ್ಳಲಿದೆ. ಕಾಮಗಾರಿಯ ಅನುಷ್ಠಾನಕ್ಕೆ ಅಗತ್ಯವಾದ ಮಾಹಿತಿ ಕೌಶಲ್ಯವನ್ನು ಅಧಿಕಾರಿಗಳು ಹೊಂದಬೇಕು ಎಂದು ಸೂಚಿಸಿದರು.ವರ್ತುಲ ರಸ್ತೆ ನಿರ್ಮಾಣದಿಂದ ರಸ್ತೆ ಹಾದುಹೋಗುವ ಮಾರ್ಗದ ಭೂಮಿಯ ಮೌಲ್ಯ ಹೆಚ್ಚಳವಾಗಲಿದೆ. ಇದರಿಂದ  ರೈತರಿಗೆ ಆರ್ಥಿಕ ಆದಾಯ ಹೆಚ್ಚಾಗಲಿದೆ. ನಾಗರಿಕರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದೆ. ರಸ್ತೆ ನಿರ್ಮಾಣದ ಉದ್ದೇಶ ಹಾಗೂ ಇದರಿಂದ ಆಗುವ ಲಾಭದ ಬಗ್ಗೆ ಭೂಮಾಲೀಕರಿಗೆ ಮನವರಿಕೆ ಮಾಡಬೇಕು. ಈ ಸಂಬಂಧ ಅಧಿಕಾರಿಗಳು ಸಭೆ ಕರೆದು  ಚರ್ಚಿಸಬೇಕು ಎಂದರು.26 ಕೋಟಿ ರೂ ವೆಚ್ಚದಡಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ, ಜನವಸತಿ ಪ್ರದೇಶ ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸಬೇಕು. ಮಲಿನ ನೀರು ಶುದ್ಧೀಕರಣ ಕೆಲಸ ಉತ್ತಮವಾಗಿ ಮಾಡಬೇಕು ಎಂದರು.ಕಾಮಗಾರಿಯ ಉಸ್ತುವಾರಿ ಯೋಜನಾ ವ್ಯವಸ್ಥಾಪಕ ಗಂಗಾಧರ್ ಮಾತನಾಡಿ, ಈಗಾಗಲೇ ಒಳಚರಂಡಿ ಯೋಜನೆಗೆ 60 ಕಿ.ಮೀ. ಸರ್ವೇಕಾರ್ಯ ಪೂರ್ಣಗೊಂಡಿದೆ. ಉಳಿದ ಕಾರ್ಯ ಈ ತಿಂಗಳ ಮಾಸಾಂತ್ಯಕ್ಕೆ ಪೂರ್ಣವಾಗಲಿದೆ. ಸಣ್ಣಪುಟ್ಟ ತೊಡಕು ನಿವಾರಣೆಯಾದರೆ ಏಪ್ರಿಲ್ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಹರ್ಷಗುಪ್ತ, `ತ್ವರಿತವಾಗಿ ಕಾಮಗಾರಿ ಆರಂಭಿಸಲು ಕ್ರಮಕೈಗೊಳ್ಳಬೇಕು. 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದ ಅವರು, ಜಿಲ್ಲಾಧಿಕಾರಿ ಕೂಡ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು.ಸುಮಾರು 8 ಕೋಟಿ ರೂ ವೆಚ್ಚದಡಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ತೀವ್ರತೆ ಎದುರಿಸುತ್ತಿರುವ ನಗರದ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು, ಚೂಡಾ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ನಗರಸಭೆ ಸದಸ್ಯರಾದ ಸುರೇಶನಾಯಕ, ಸುದರ್ಶನಗೌಡ, ಮಹಮ್ಮದ್ ಅಸ್ಗರ್, ಗಣೇಶ್ ದೀಕ್ಷಿತ್ ಇತರರು ಹಾಜರಿದ್ದರು.ಪರಿಶೀಲನೆ: ನಗರದ ಹೊರವಲಯದಲ್ಲಿ ನಗರಸಭೆಯಿಂದ ನಡೆಯುತ್ತಿರುವ ಕುಡಿಯುವ ನೀರು ಪೂರೈಕೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವಾರ್ತಾ ಇಲಾಖೆಯ ವಾರ್ತಾ ಭವನದ ಕಟ್ಟಡ ಕಾಮಗಾರಿಯನ್ನೂ ಪರಿಶೀಲಿಸಿದರು.ಸಹಾಯಕ ಯೋಜನಾ ನಿರ್ದೇಶಕ ಎನ್. ರಾಜು, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.