ಶುಕ್ರವಾರ, ಏಪ್ರಿಲ್ 16, 2021
31 °C

ವರ್ತೂರು ಕೆರೆಗೆ ಅಣೆಕಟ್ಟು ನಿರ್ಮಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ವರ್ತೂರು ಕೆರೆಗೆ ಅಣೆಕಟ್ಟು ನಿರ್ಮಿಸುವ ಮೂಲಕ ಕೆರೆಯ ನೀರು ತಮಿಳುನಾಡಿಗೆ ಹರಿದು ಹೋಗುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕನ್ನಡ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೋಮವಾರ ವರ್ತೂರು ಕೆರೆ ಕಟ್ಟೆಯ ಮೇಲೆ ಪ್ರತಿಭಟನಾ ಸಭೆ ನಡೆಸಿದರು.ವರ್ತೂರು ಕೆರೆಯ ನೀರು ಅನಗತ್ಯವಾಗಿ ನಮ್ಮ ರಾಜ್ಯದಿಂದ ಹರಿದು ಹೋಗಿ ತಮಿಳುನಾಡು ಸೇರುತ್ತಿದೆ. ಈ ನೀರಿನ ಲಾಭವನ್ನು ತಮಿಳುನಾಡಿನ ರೈತರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರಿಗೆ ನೀರಿನ ಅಭಾವ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಕೆರೆಯ ನೀರನ್ನು ಇಲ್ಲಿಯೇ ಸಂಗ್ರಹ ಮಾಡುವಂತಹ ಯೋಜನೆಗೆ ಸರ್ಕಾರ ಕೈಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಪ್ರಭಾಕರ ರೆಡ್ಡಿ ಮಾತನಾಡಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಮಳೆ ನೀರು ಹಾಗೂ ಕೊಳಚೆ ನೀರು ವರ್ತೂರು ಕೆರೆಗೆ ಬಂದು ಸೇರುತ್ತಿದೆ. ಈ ಕೆರೆಯ ನೀರು ಸುಮಾರು 167 ಕಿ.ಮೀ. ದೂರದವರೆಗೆ ತಮಿಳುನಾಡಿನಲ್ಲಿ ಹರಿಯುತ್ತದೆ.

 

ಹಾಗೆ ಹರಿಯುವ ನೀರು ಕಾವೇರಿ ನದಿಯ ಮೂಲಕ ಹೊಸೂರು ಬಳಿಯ ಕೃಷ್ಣಗಿರಿ ಅಣೆಕಟ್ಟನ್ನು ಸೇರುತ್ತದೆ. ಅಲ್ಲದೆ ಈ ಕೆರೆಯ ನೀರು ಪಾತಕೋಟ ಅಣೆಕಟ್ಟು ಹಾಗೂ ಕಡಿಯಾಳಂ ಅಣೆಕಟ್ಟನ್ನು ಸೇರುತ್ತದೆ. ಇದರಿಂದಾಗಿ ಕೆರೆಯ ನೀರಿನ ಸಂಪೂರ್ಣ ಲಾಭವನ್ನು ತಮಿಳುನಾಡಿನ ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದರು.ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಮಾತನಾಡಿ, ವರ್ತೂರು ಕೆರೆಯಿಂದ ಹೊಸಕೋಟೆ ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರೊದಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.ನೀರಾವರಿ ತಜ್ಞ ಹೃಷಿಕೇಶ, ಸ್ಥಳೀಯ ಮುಖಂಡರಾದ ಎಂ.ಸಿ.ಸಿ. ರವಿ, ವಿ. ಸತೀಶ್‌ಕುಮಾರ್, ಸೋರಹುಣಸೆ ಬಾಬುರೆಡ್ಡಿ, ವರಪುರಿ ನಾರಾಯಣಸ್ವಾಮಿ, ಸುಬ್ಬಣ್ಣ, ಆರ್.ರಾಮಕೃಷ್ಣಪ್ಪ, ವಿ.ಟಿ.ಬಿ. ವೆಂಕಟಸ್ವಾಮಿರೆಡ್ಡಿ ಸೇರಿದಂತೆ ಬಳಗೆರೆ, ಸಿದ್ದಾಪುರ, ರಾಮಗೊಂಡನಹಳ್ಳಿ, ಮಧುರಾನಗರ ಗ್ರಾಮಗಳ ಜನತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.