ವರ್ಷಕ್ಕೆ 9 ಸಬ್ಸಿಡಿ ಸಿಲಿಂಡರ್?

7

ವರ್ಷಕ್ಕೆ 9 ಸಬ್ಸಿಡಿ ಸಿಲಿಂಡರ್?

Published:
Updated:

ನವದೆಹಲಿ (ಪಿಟಿಐ): ಆರ್ಥಿಕ ಸುಧಾರಣಾ ಕ್ರಮವಾಗಿ ಅಡುಗೆ ಅನಿಲ (ಎಲ್‌ಪಿಜಿ) ಗ್ರಾಹಕರಿಗೆ ಒಂದು ವರ್ಷಕ್ಕೆ ಆರು ಸಿಲಿಂಡರ್‌ಗಳನ್ನು ಮಾತ್ರ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡುವ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ, ಈ  ಮಿತಿಯನ್ನು ಒಂಬತ್ತಕ್ಕೆ ಏರಿಸುವ ಕುರಿತು ಚಿಂತಿಸಿದೆ.`ಖಂಡಿತವಾಗಿಯೂ ಎಲ್‌ಪಿಜಿ ಸಿಲಿಂಡರ್ ಮಿತಿಯು ಆರರಿಂದ ಒಂಬತ್ತಕ್ಕೆ ಏರಿಕೆ ಆಗುತ್ತದೆ. ಈ ಕುರಿತು ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಮಂಗಳವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಬ್ಸಿಡಿ ಸಹಿತ ಎಲ್‌ಪಿಜಿ ಸರಬರಾಜಿಗೆ ವಿಧಿಸಿರುವ ಮಿತಿಯನ್ನು ಏರಿಕೆ ಮಾಡಿದರೆ ಸರ್ಕಾರ ವಾರ್ಷಿಕವಾಗಿ ರೂ 9000 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ. ಆದಕಾರಣ ಹಣಕಾಸು ಸಚಿವ ಪಿ.ಚಿದಂಬರಂ ಅವರೊಂದಿಗೆ ಎರಡು ಸುತ್ತು ಚರ್ಚಿಸಿದ್ದೇನೆ.

ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ. `ಒಂದು ಕುಟುಂಬಕ್ಕೆ ವಾರ್ಷಿಕವಾಗಿ ಆರು ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ನೀಡಬೇಕು ಎಂಬ ನಿರ್ಧಾರವನ್ನು ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಸೆ. 13ರಂದು ಕೈಗೊಂಡಿತ್ತು. ಇದನ್ನು ಕೇಂದ್ರ ಸಂಪುಟ ಅನುಮೋದಿಸಿತ್ತು' ಎಂದೂ ಅವರು ಹೇಳಿದ್ದಾರೆ.ವರ್ಷಕ್ಕೆ ಆರು ಮಾತ್ರ ಸಬ್ಸಿಡಿ ದರದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಆಡಳಿತಾರೂಢ ಯುಪಿಎ ಮಿತ್ರಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಮತ್ತು ದೇಶವ್ಯಾಪಿಯಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.ಮೊಯಿಲಿಗೆ ಚುನಾವಣಾ ಆಯೋಗ ನೋಟಿಸ್

ನವದೆಹಲಿ (ಪಿಟಿಐ):
ಸಬ್ಸಿಡಿ ದರದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಿತಿ ಹೆಚ್ಚಳ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಇಂತಹ ಘೋಷಣೆಯನ್ನು ಮಾಡದಂತೆ ಚುನಾವಣಾ ಆಯೋಗ ತಾಕೀತು ನೀಡಿದೆ.ವಾರ್ಷಿಕವಾಗಿ ಆರಕ್ಕೆ ನಿಗದಿಯಾಗಿರುವ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತಕ್ಕೆ ಏರಿಕೆ ಮಾಡುವ ಕುರಿತು ಸರ್ಕಾರ ಚಿಂತಿಸುತ್ತಿದೆ ಎಂಬ ಹೇಳಿಕೆ ನೀಡಿರುವ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಅವರಿಗೆ ಚುನಾವಣಾ ಆಯೋಗ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡಿದ್ದು, ವಿವರಣೆ ಕೇಳಿದೆ.ಮೊಯಿಲಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಚುನಾವಣಾ ಆಯೋಗ, ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂತಹ ಘೋಷಣೆಯನ್ನು ಮಾಡದಂತೆ ಎಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry