ಬುಧವಾರ, ನವೆಂಬರ್ 20, 2019
20 °C

ವರ್ಷದಲ್ಲಿ ಹಾಳಾದ ಕಾಲುವೆ

Published:
Updated:

ಮಸ್ಕಿ: ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆ ಹಾಗೂ ಅದರ ವ್ಯಾಪ್ತಿಯಲ್ಲಿ ಇರುವ ವಿತರಣಾ ಕಾಲುವೆಗಳ ಶಾಶ್ವತ ದುರಸ್ತಿಗಾಗಿ ರಾಜ್ಯ ಸರ್ಕಾರ 900 ಕೋಟಿ ರೂಪಾಯಿಗಳ ಅನುದಾನ ನೀಡಿದೆ. 2009ರಲ್ಲಿ ಕಾಮಗಾರಿ ಆರಂಭಿಸಿ ಮೂರು ವರ್ಷದಲ್ಲಿ ಇಡೀ ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ವಿತರಣಾ ಕಾಲುವೆಗಳು ಆಧುನೀಕರಣಗೊಳ್ಳಬೇಕು ಎಂಬುದು ಸರ್ಕಾರದ ನಿಯಮ.ಇದಕ್ಕಾಗಿ ಪ್ರತಿ ವರ್ಷ 300 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ಸರ್ಕಾರದ ಕೋಟ್ಯಂತರ ರೂಪಾಯಿ ತುಂಗಭದ್ರಾ ಕಾಲುವೆಯಲ್ಲಿ ನೀರಿನಂತೆ ಹರಿದು ಹೋಗುತ್ತಿದೆ ಎಂಬುದಕ್ಕೆ 54ನೇ ವಿತರಣಾ ಕಾಲುವೆಯಲ್ಲಿ ನಡೆದ ಕಳಪೆ ಕಾಮಗಾರಿಯೇ ಉದಾಹರಣೆ.ಮುಖ್ಯ ಕಾಲುವೆಯ ಕಾಮಗಾರಿಯನ್ನು ಡಿ.ವೈ. ಉಪ್ಪಾರ ಕಂಪೆನಿಗೆ ನೀಡಿದೆ. ವಿತರಣಾ ಕಾಲುವೆಗಳ ಕಾಮಗಾರಿಯ ಗುತ್ತಿಗೆಯನ್ನು ಆಡಳಿತರೂಢ ಪಕ್ಷದ ಜಿಲ್ಲೆಯ ಪ್ರಭಾವಿ ಶಾಸಕರ ಸಹೋದರ ಸಂಬಂಧಿಯೊಬ್ಬರು ಪಡೆದುಕೊಂಡಿದ್ದಾರೆ.ವಿತರಣಾ ಕಾಲುವೆಗಳ ದುರಸ್ತಿ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರಂಭದಿಂದಲೂ ಅಪಸ್ವರ ಎದ್ದಿತ್ತು. ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸುವಂತೆ ಜಲಸಂಪನ್ಮೂಲ ಸಚಿವರ ಗಮನಕ್ಕೆ ತಂದಿದ್ದರು. ಆದರೆ, ಸಚಿವರು ಈ ಕಡೆ ಗಮನ ಹರಿಸದೆ ಮೌನ ವಹಿಸಿದ್ದರು.ಮಸ್ಕಿ ಉಪ ವಿಭಾಗದ 54ನೇ ವಿತರಣಾ ಕಾಲುವೆ 9 ಕಿ.ಮೀ. ವರೆಗೆ 10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಮೂರು ವರ್ಷದಲ್ಲಿ ಈ ಅನುದಾನ ಖರ್ಚಾಗಬೇಕು. ಇದರ ಆಧುನೀಕರಣದ ಕಾಮಗಾರಿಯ ಗುತ್ತಿಗೆಯನ್ನು ಕಳೆದ ಮೂರು ವರ್ಷಗಳಿಂದ ಮಾಡಿಲಾಗಿತ್ತಿದೆ. ಆದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಆಗಲೇ ವಿತರಣಾ ಕಾಲುವೆಯು ಎಲ್ಲೆಂದರಲ್ಲಿ ಕಿತ್ತುಕೊಂಡು ಹೋಗಿದೆ ಎಂದು ಈ ಭಾಗದ ರೈತರು ದೂರಿದ್ದಾರೆ.54ನೇ ವಿತರಣಾ ಕಾಲುವೆಯ ಉಳಿದ ಕಾಮಗಾರಿ ಪೂರ್ಣಗೊಳಿಸುಲು ಇಲಾಖೆಯಿಂದ ಈಗಾಗಲೆ 4 ಭಾರಿ ನೋಟಿಸ್‌ಗಳನ್ನು ಈ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಗೆ ತಿಳಿಸಿದ್ದಾರೆ.  ನಿಯಮದಂತೆ ಕಿತ್ತುಹೋದ ಕಡೆ ದುರಸ್ತಿಗೊಳಿಸುವಂತೆಯೂ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.ಆದರೆ, ರಾಜಕೀಯ ಪ್ರಭಾವ ಇರುವ ಗುತ್ತಿಗೆದಾರರು ಅಧಿಕಾರಿಗಳ ನೋಟಿಸ್‌ಗೆ ಕವಡೆ ಕಾಸಿನ ಕಿಮ್ಮತ್ತು ಕೂಡಾ ನೀಡಿಲ್ಲ.ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಈ ವಿತರಣಾ ಕಾಲುವೆಯ ಒಳಮೈ ಈಗಾಗಲೇ ಎಲ್ಲೆಂದರಲ್ಲಿ ಕಿತ್ತುಹೋಗಿದ್ದನ್ನು ಮುಚ್ಚಿ ತೆಪೆ ಹಾಕುವ ಕೆಲಸವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಸರ್ಕಾರದ ನಿಯಮದಂತೆ ಗುತ್ತಿಗೆದಾರರು ಕೆಲಸ ಪೂರ್ಣಗೊಳಸಿದ ನಂತರ ಎರಡು ವರ್ಷ ಅವರೇ ಅದನ್ನು ಮೇಲ್ವಿಚಾರಣೆ ಮಾಡಬೇಕು. ಆದರೆ, ಇಲ್ಲಿ ಗುತ್ತಿಗೆದಾರರ ರಾಜಕೀಯ ಪ್ರಭಾವಕ್ಕೆ ಅಂಜಿರುವ ಅಧಿಕಾರಿಗಳು ತಮ್ಮ ಮರ್ಯಾದೆ ಮುಚ್ಚಿಕೊಳ್ಳುವ ಸಲುವಾಗಿ ಇಲಾಖೆಯ ವತಿಯಿಂದಲೇ ಕಿತ್ತುಹೋದ ಕಡೆ ದುರಸ್ತಿಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಖರ್ಚಾದ ಹಣವನ್ನು ನಂತರ ಗುತ್ತಿಗೆದಾರರಿಂದಲೇ ವಸೂಲಿ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)