ಶನಿವಾರ, ನವೆಂಬರ್ 23, 2019
18 °C

`ವರ್ಷದೊಳಗೆ ದೂರು ವಿಲೇವಾರಿ'

Published:
Updated:

ಮಂಗಳೂರು: `ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ದೂರುಗಳನ್ನು ವರ್ಷದೊಳಗೆ ವಿಲೇವಾರಿ ಮಾಡುವ ಗುರಿ ಹೊಂದಿದ್ದೇವೆ. ಪ್ರಸ್ತುತ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥವಾದ ತಕ್ಷಣವೇ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ' ಎಂದು ಲೋಕಾಯುಕ್ತ ನ್ಯಾ.ವೈ.ಭಾಸ್ಕರ ರಾವ್ ತಿಳಿಸಿದರು.ಇಲ್ಲಿನ ಉರ್ವ ಸ್ಟೋರ್‌ನಲ್ಲಿ ನಿರ್ಮಿಸಲಾದ ನೂತನ ಲೋಕಾಯುಕ್ತ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.`ಲೋಕಾಯುಕ್ತ ಸಂಸ್ಥೆಗೆ ಬರುವ ದೂರುಗಳ ತ್ವರಿತ ವಿಲೇವಾರಿಗಾಗಿ ಸರ್ಕಾರಿ ನೌಕರರಿಗೆ ತಿಳಿವಳಿಕೆ ಪತ್ರ ಜಾರಿ ವಿಧಾನದಲ್ಲಿ ಮಾರ್ಪಾಡು ಮಾಡಲಾಗಿದೆ. ತಿಳಿವಳಿಕೆ ಪತ್ರವನ್ನು ಇದುವರೆಗೆ ಅಂಚೆ ಮೂಲಕ ಜಾರಿ ಮಾಡಲಾಗುತ್ತ್ದ್ದಿದು, ಇನ್ನು  ಫ್ಯಾಕ್ಸ್ ಅಥವಾ ಇ-ಮೇಲ್ ಮೂಲಕ ಜಾರಿ ಮಾಡಲಾಗುವುದು. ಇದರಿಂದ ಸಮಯವೂ ಉಳಿಯಲಿದೆ, ವೆಚ್ಚವೂ ಕಡಿಮೆಯಾಗಲಿದೆ' ಎಂದರು.`ನಾನು ಕಳೆದ ಫೆ.14ರಂದು ಅಧಿಕಾರ ವಹಿಸಿಕೊಂಡಾಗ ಲೋಕಾಯುಕ್ತರ ಮುಂದೆ 4,587 ದೂರು, ಉಪಲೋಕಾಯುಕ್ತ-1 ಅವರ ವ್ಯಾಪ್ತಿಯ 3,644 ದೂರುಗಳು, ಉಪಲೋಕಾಯುಕ್ತ-2ರ ವ್ಯಾಪ್ತಿಯ 5,101 ದೂರುಗಳು ಸೇರಿ ಒಟ್ಟು 13,332 ದೂರುಗಳ ತನಿಖೆ ಬಾಕಿ ಇದ್ದವು. ಈ ಪೈಕಿ ಕೆಲವು ದೂರುಗಳು 2001-02ನೇ ಸಾಲಿನವು. ಅಧಿಕಾರ ಸ್ವೀಕರಿಸಿದ ಬಳಿಕ 46 ದಿನಗಳಲ್ಲಿ ನಾನು 802 ದೂರುಗಳನ್ನು, ಉಪಲೋಕಾಯುಕ್ತರು-1 ಅವರು 416 ದೂರುಗಳನ್ನು ಹಾಗೂ ಉಪಲೋಕಾಯುಕ್ತ-2 ಅವರು 664 ದೂರುಗಳನ್ನು  ವಿಲೇವಾರಿ ಮಾಡಿದ್ದೇವೆ' ಎಂದರು.`ರಾಜ್ಯದ ಬೇರೆ ಕಡೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಜಾಸ್ತಿ. ಬೆಂಗಳೂರಿನಲ್ಲಿ ದಾಖಲಾದ ಶೇ 66ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿದೆ. ರಾಜ್ಯದ ಉಳಿದೆಡೆ ಈ ಪ್ರಮಾಣ ಶೇ 38ರಷ್ಟಿದೆ. ಆರೋಪಿಗಳನ್ನು ಬಲೆಗೆ ಬೀಳಿಸಿದ ಪ್ರಕರಣಗಳಲ್ಲಿ ಕೆಲವೊಮ್ಮೆ ಸಾಕ್ಷಿಗಳು ತಿರುಗಿಬೀಳುವ ಪ್ರಮೇಯವೂ ಇದೆ. ನಮ್ಮ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ' ಎಂದರು.`ಮಂಗಳೂರಿನ ಲೋಕಾಯುಕ್ತ ಕಚೇರಿಯ ಕಟ್ಟಡವನ್ನು ರೂ 65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡವನ್ನು ಮೇಲ್ದರ್ಜೆಗೇರಿಸಲು ಇನ್ನೂ 95 ಲಕ್ಷ ಮಂಜೂರಾಗಿದೆ' ಎಂದು ಅವರು ತಿಳಿಸಿದರು.`ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ದಾಖಲಾಗುವ ದೂರುಗಳ ಪ್ರಮಾಣ ಕಡಿಮೆ. ಆದರೆ ಉಡುಪಿಯಲ್ಲಿ ಹೆಚ್ಚಿನ ಪ್ರಮಾಣದ ದೂರು ದಾಖಲಾಗುತ್ತಿದೆ' ಎಂದು ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ತಿಳಿಸಿದರು.`ಲೋಕಾಯುಕ್ತ ಸಂಸ್ಥೆ ಕೇವಲ ಲಂಚ ಪ್ರಕರಣದ ದೂರು ವಿಲೇವಾರಿ ಮಾಡಲು ಮಾತ್ರ ಇರುವುದಲ್ಲ. ಯೋಜನೆಗಳ ಸಮರ್ಪಕ ಅನುಷ್ಠಾನ ಆಗದ ಬಗ್ಗೆ, ಸರ್ಕಾರಿ ಸೇವೆ ವಿಳಂಬವಾದ ಬಗ್ಗೆಯೂ ದೂರು ನೀಡಬಹುದು' ಎಂದು ಸಂಸ್ಥೆಯ ರಿಜಿಸ್ಟ್ರಾರ್ ಬಿ.ಯೋಗಿನಾಥ್ ತಿಳಿಸಿದರು.ಲೋಕಾಯುಕ್ತ ಡಿಐಜಿ ಪಿ.ಎಚ್.ರಾಣೆ, ಲೋಕಾಯುಕ್ತ ಎಸ್.ಪಿ.ಮೋಹನದಾಸ್, ಎಚ್.ವಿ.ಹರೀಶ್ ಉಪಸ್ಥಿತರಿದ್ದರು.

ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಪ್ರಕಾಶ್, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಪೊಲೀಸ್ ಉಪಾಯುಕ್ತರಾದ ಮುತ್ತೂರಾಯ, ಧರ್ಮಯ್ಯ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

`ದ.ಕ.ಶೇ 37 ಪ್ರಕರಣದಲ್ಲಿ ಶಿಕ್ಷೆ'

`ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಾಯುಕ್ತರ ಮುಂದೆ 225, ಉಪಲೋಕಾಯುಕ್ತರ ಮುಂದೆ 272 ಸೇರಿ ಒಟ್ಟು 497 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಜಿಲ್ಲಾ ಮಟ್ಟದಲ್ಲಿ 132 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಮಂಗಳೂರಿನಲ್ಲಿ ಕಳೆದ 12 ವರ್ಷಗಳಲ್ಲಿ ದಾಖಲಾದ ಒಟ್ಟು 96 ಪ್ರಕರಣಗಳ ಪೈಕಿ 6ಕ್ಕೆ ಮಾತ್ರ ಬಿ ವರದಿ ಸಲ್ಲಿಸಿದ್ದೇವೆ. 66 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ್ದೇವೆ. 24 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಇಲ್ಲಿ 2004-09ರವರೆಗೆ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಕೇವಲ ಶೇ 15.2ರಷ್ಟಿತ್ತು. 2010ರ ಬಳಿಕ ಇದು ಶೇ 37.05ಕ್ಕೆ ಹೆಚ್ಚಿದೆ' ಎಂದು ಲೊಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)