ವರ್ಷವಾದರೂ ಕಾಣಲಿಲ್ಲ ಡಾಂಬರ್!

7

ವರ್ಷವಾದರೂ ಕಾಣಲಿಲ್ಲ ಡಾಂಬರ್!

Published:
Updated:

ರಾಯಚೂರು:  ಇದೇ ಮಾರ್ಚ್‌ಗೆ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡು ಒಂದು ವರ್ಷ. ಆದರೆ, ನಗರದ ಹೃದಯ ಭಾಗವಾದ ಮಾರುಕಟ್ಟೆ ಅತಿಕ್ರಮಣ ಕಟ್ಟಡ ತೆರವುಗೊಂಡವೇ ಹೊರತು. ಜಿಲ್ಲಾಡಳಿತ ಮತ್ತು ನಗರಸಭೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಅಷ್ಟಕ್ಕಷ್ಟೇಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಎಂಬುದು ಆರಂಭ ಶೂರತ್ವ ಅಷ್ಟೇ. ಈಗ ಕಣ್ಮೆರೆಯಾಗಿದೆ ಎಂದು ನಗರದ ಜನತೆಯ ಟೀಕೆಗೆ ಗುರಿಯಾಗಿದೆ. ಈ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡಾಗ ಜನತೆ ಸ್ವಯಂ ಪ್ರೇರಣೆಯಿಂದ ಬೆಂಬಲ ವ್ಯಕ್ತಪಡಿಸಿದ್ದರು. ಸಂಘಟನೆಗಳು ರಾಯಚೂರು ಉದ್ಧಾರವಾದರೆ ಸಾಕು ಎಂದು ಜಿಲ್ಲಾಧಿಕಾರಿಗಳ ಧೋರಣೆಗೆ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಕೆಲವೇ ದಿನಗಳಲ್ಲಿ ಈ ಭರವಸೆ ಹುಸಿಯಾಗಿದ್ದಕ್ಕೆ ಅದೇ ಸಂಘಟನೆಗಳು, ಜನತೆ ಆಕ್ರೋಷ ವ್ಯಕ್ತಪಡಿಸುವಂತಾಗಿದೆ.ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಸುವುದಿರಲಿ. ಈಗಾಗಲೇ ಕಾರ್ಯಾಚರಣೆ ಕೈಗೊಂಡ ಪ್ರದೇಶದಲ್ಲಿ ಚರಂಡಿ, ರಸ್ತೆ ಡಾಂಬರೀಕರಣ, ವಿದ್ಯುತ್ ಕಂಬ ಅಳವಡಿಸುವುದು ಹೀಗೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಹರಿಹರ ರಸ್ತೆ, ಬಟ್ಟೆ ಬಜಾರದ ಎರಡು ರಸ್ತೆಗೆ ಡಾಂಬರ್ ಸುರಿದಿದ್ದು ಬಿಟ್ಟರೆ ಮತ್ಯಾವ ರಸ್ತೆ ಅಭಿವೃದ್ಧಿ ಕಂಡಿಲ್ಲ.ಬಂಗಿಕುಂಟ, ಪಟೇಲ್ ವೃತ್ತದ ಹತ್ತಿರ ರಸ್ತೆ ಹದಗೆಟ್ಟು ಹೋಗಿವೆ.ಬಂಗಿ ಕುಂಟ ರಸ್ತೆಯಂತೂ ಸದಾ ಧೂಳಿನಿಂದ ಆವರಿಸಿರುತ್ತದೆ. ಈ ರಸ್ತೆಯಲ್ಲಿ ಸಂಚರಿಸಲೂ ಜನತೆ ಹಿಂದೇಟು ಹಾಕುತ್ತಾರೆ. ಧೂಳು, ಎಲ್ಲೆಂದರಲ್ಲಿ ತ್ಯಾಜ್ಯ, ಚರಂಡಿ ನೀರು ರಸ್ತೆಗೆ ಹರಿಯುವುದು ಇವು ಈ ರಸ್ತೆಯ ಅಧೋಗತಿಗೆ ಕಾರಣ. ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಂಡ ಬಳಿಕ ಮತ್ತೆ ಈ ರಸ್ತೆಯನ್ನು ಆಡಳಿತ ಯಂತ್ರ ಕಣ್ತೆರೆದು ನೋಡಿಲ್ಲ. ಇಲ್ಲಿನ ನಿವಾಸಿಗಳು, ವರ್ತಕರು ರೋಸಿ ಹೋಗಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ಈ ನಡುವೆ ರಸ್ತೆ ಅಭಿವೃದ್ಧಿಯನ್ನು ಜಿಲ್ಲಾಡಳಿತ ಕೈಗೊಳ್ಳುತ್ತದೆ. ಲೋಕೋಪಯೋಗಿ ಇಲಾಖೆ ಕೈಗೊಳ್ಳಲಿದೆ. ನಗರಸಭೆಯೇ ಟೆಂಡರ್ ಕರೆದಿದೆ. ಹೀಗೆ ಒಂದೊಂದು ಬಗೆಯ ಹೇಳಿಕೆಗಳು ಜನತೆಯನ್ನು ದಿಕ್ಕು ತಪ್ಪಿಸುತ್ತಿವೆ. ಅತಿಕ್ರಮಣ ಕಟ್ಟಡ ತೆರವುಗೊಳಿಸಲಿ. ಬಿಡಲಿ. ಈಗಾಗಲೇ ಕೈಗೊಂಡ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಿದರೆ ಸಾಕಪ್ಪಾ ಎಂದು ಅಳಲು ತೋಡಿಕೊಳ್ಳುತ್ತಾರೆ.ಸಚಿವರ ಮನೆಗೆ ರಸ್ತೆ: ನಗರದ ರಸ್ತೆಗಳೇ ಹದಗೆಟ್ಟು ಜನತೆಯಿಂದ ಆಕ್ರೋಷಕ್ಕೆ ಗುರಿಯಾಗಿದ್ದರೆ, ಅದೇ ಆಡಳಿತ ಯಂತ್ರ ಮಂತ್ರಾಲಯ ರಸ್ತೆಯ ಪಕ್ಕದ ಖಾಸಗಿ ಬಡಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರ ನಿವಾಸಕ್ಕೆ ತೆರಳುವ ರಸ್ತೆಗೆ ಹಗಲು ರಾತ್ರಿ ಡಾಂಬರ್ ಸುರಿದು ಸುಸಜ್ಜಿತ ರಸ್ತೆ ನಿರ್ಮಿಸಿದ್ದಾರೆ. ಇದಕ್ಕೆ ಆಕ್ರೋಷಗೊಂಡ ಜನತೆ ನಗರದ ಹದಗೆಟ್ಟ ರಸ್ತೆಗೆ ಡಾಂಬರ್ ಇಲ್ಲ. ಸಚಿವರ ಮನೆ ರಸ್ತೆಗೆ ಅದೆಲ್ಲಿಂದ ಡಾಂಬರ್ ಬಂತು ಎಂದು ಪ್ರಶ್ನಿಸುತ್ತಿದ್ದಾರೆ.ಅಧಿಕಾರಿಗಳು, ಸಚಿವರು ಈ ಬಗ್ಗೆ ಮೊದಲೇ ಟೆಂಡರ್ ಆಗಿತ್ತು ಎಂದು ನೀಡಿದ ಸಮಜಾಯಿಷಿಯು ಜನತೆಯ ಆಕ್ರೋಷವನ್ನು ತಣ್ಣಗಾಗಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry