ಮಂಗಳವಾರ, ಜೂನ್ 15, 2021
20 °C

ವರ್ಷವಿಡೀ ಬೆಳೆಯುವ ಚೆಂಡು ಹೂವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷವಿಡೀ ಬೆಳೆಯುವ ಚೆಂಡು ಹೂವು

ಚೆಂಡು ಹೂವು ನಮ್ಮ ದೇಶದ ವಾಣಿಜ್ಯ ಬೆಳೆಗಳಲ್ಲೊಂದು. ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬೆಳೆಸುವ ಈ ಹೂವನ್ನು ಹಾರಕ್ಕಾಗಿ, ವೇದಿಕೆ ಅಲಂಕರಣ, ಬಣ್ಣ ತಯಾರಿಕೆ ಮತ್ತಿತರ ಉದ್ದೇಶಗಳಿಗೆ ಕೂಡ ಬಳಸುತ್ತಾರೆ.



ಚೆಂಡು ಹೂವನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ಮಣ್ಣಿನ ರಸಸಾರ (ಪಿಎಚ್) 6 ರಿಂದ 7.5 ಇದ್ದರೆ ಉತ್ತಮ. ವರ್ಷವಿಡೀ ಬೆಳೆಯಬಹುದಾದ ಈ ಹೂವಿನ ಬೇಸಾಯದಿಂದ ಮಳೆಗಾಲದಲ್ಲಿ  ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ. ಮೇ ಮತ್ತು ಜೂನ್ ಸೂಕ್ತವಾದ ಸಮಯ.



ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ಹಳದಿ ಬಣ್ಣದ ಪೂಸಾ ಬಸಂತಿ ಗೇಂಡಾ ಮತ್ತು ಕಿತ್ತಳೆ ಬಣ್ಣದ ಪೂಸಾ ನಾರಂಗಿ ಗೇಂಡಾ ಇವು ಮೂಲತಃ ಆಫ್ರಿಕನ್ ತಳಿಗಳಾಗ್ದ್ದಿದರೂ ಇವನ್ನು ರೈತರು ಹೆಚ್ಚು ಹೆಚ್ಚಾಗಿ ಬೆಳೆಯುತ್ತಾರೆ. ಪ್ರೆಂಚ್ ತಳಿಗಳು ಗಿಡ್ಡ ಮತ್ತು ಸಣ್ಣ ಗಾತ್ರದ ಹೂಗಳನ್ನು ಬಿಡುತ್ತವೆ. ಬೀಜದಿಂದಲೇ ಸಸ್ಯಾಭಿವೃದ್ಧಿ ಹೊಂದುವ ಈ ಹೂ ಬೆಳೆಯಲು ಪ್ರತಿ ಎಕರೆಗೆ 80 ರಿಂದ 100 ಗ್ರಾಂ ಬೀಜ ಬೇಕಾಗುತ್ತದೆ.



ಬೇಸಾಯ ಕ್ರಮ

ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 6 ಮೀ ಉದ್ದ, 1.2 ಮೀ ಅಗಲ ಹಾಗೂ 10 ಸೆಂ.ಮೀ ಎತ್ತರದ 4 ಏರು ಮಡಿಗಳನ್ನು ಸಿದ್ಧ ಮಾಡಿಕೊಳ್ಳಬೇಕು.

 

ಪ್ರತಿ ಮಡಿಗೆ 30 ಕಿಲೊ ಕೊಟ್ಟಿಗೆ ಗೊಬ್ಬರ ಹಾಗೂ ಅರ್ಧ ಕಿಲೊ ಎನ್‌ಪಿಕೆ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಹಾಕಿ ಮಣ್ಣಿನ ಸಾಲುಗಳಲ್ಲಿ ಚೆನ್ನಾಗಿ ಬೆರೆಸಬೇಕು. ಬೀಜಗಳನ್ನು 7.5 ಸೆ.ಮೀ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಿ ಅದರ ಮೇಲೆ ತೆಳುವಾದ ಕೊಟ್ಟಿಗೆ ಗೊಬ್ಬರ ಹಾಕಿ ನಿಯಮಿತವಾಗಿ ನೀರು ಒದಗಿಸಿದರೆ ನಾಲ್ಕು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧಗೊಳ್ಳುತ್ತವೆ.



ನಾಟಿ ಮಾಡುವ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸ್ವಚ್ಛಗೊಳಿಸಿ ಪ್ರತಿ ಹೆಕ್ಟೇರ್‌ಗೆ 20 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಹದ ಮಾಡಬೇಕು. ನಂತರ 60 ಸೆ.ಮೀ. ಅಂತರದಲ್ಲಿ ಬೋದುಗಳನ್ನು ತಯಾರಿಸಿ ಅವುಗಳ ಒಂದು ಬದಿಯಲ್ಲಿ 45 ಸೆ.ಮೀ. ಅಂತರದಲ್ಲಿ ಸಸಿಗಳನ್ನು  ನಾಟಿ ಮಾಡಬೇಕು. ಸಾಯಂಕಾಲದ ವೇಳೆ ನಾಟಿ ಮಾಡುವುದು ತುಂಬಾ ಯೋಗ್ಯ.



ನಾಟಿ ಸಮಯದಲ್ಲಿ ಪ್ರತಿ ಹೆಕ್ಟೇರ್‌ಗೆ ಸಾರಜನಕ, ರಂಜಕ ಮತ್ತು ಪೊಟಾಷ್ ಗೊಬ್ಬರಗಳನ್ನು ಕ್ರಮವಾಗಿ 113;60;60 ಕಿಲೊದಂತೆ ಒದಗಿಸಬೇಕು. ನಾಟಿ ಮಾಡಿದ 30 ರಿಂದ 45 ದಿನಗಳ ನಂತರ ಗಿಡಗಳ ತುದಿ ಚಿವುಟಿ ಉಳಿದ 112 ಕಿಲೊ ಸಾರಜನಕವನ್ನು ಮೇಲು ಗೊಬ್ಬರವಾಗಿ ಒದಗಿಸಿ ಸಸಿಗಳಿಗೆ ಮಣ್ಣು ಏರಿಸಬೇಕು.



ಚೆಂಡು ಹೂವಿನ ಬೆಳೆಗೆ ಬಾಧಿಸುವ ಮುಖ್ಯ ಕೀಟವೆಂದರೆ ಜಿಗಿಹುಳು. ಇದು ಎಲೆಗಳ ರಸ ಹೀರುವುದರಿಂದ ಹಳದಿ ಚುಕ್ಕೆಗಳಾಗಿ ಕ್ರಮೇಣ ಒಣಗಲು ಪ್ರಾರಂಭವಾಗಿ ಇಳುವರಿಯಲ್ಲಿ ತೀವ್ರ ಕುಸಿತವಾಗುತ್ತದೆ. ಇದನ್ನು ನಿಯಂತ್ರಿಸಲು 1 ಲೀ. ನೀರಿಗೆ 1.5 ಮಿ.ಲೀ. ಮಾನೋಕ್ರೊಟೋಪಾಸ್ ಅಥವಾ ಮೀಥೈಲ್ ಪ್ಯಾರಾಥಿಯಾನ್ ಔಷಧಿಯನ್ನು ಬೆರೆಸಿ ಸಿಂಪರಿಸಬೇಕು.



ರೋಗಗಳಲ್ಲಿ ಮುಖ್ಯವಾಗಿ ಬರುವುದು ಬುಡ ಕೊಳೆ ರೋಗ. ಇದಕ್ಕೆ ತುತ್ತಾದ ಗಿಡವು ಹಳದಿಯಾಗಿ ನಂತರ ಕೆಂಪು ಕಂದು ಬಣ್ಣ ಕೊನೆಗೆ ಕಪ್ಪು ಬಣ್ಣಕ್ಕೆ ತಿರುಗಿ ಸಾಯುತ್ತದೆ. ಇದರ ಹತೋಟಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮ್ಯೋಂಕೋಜೆಬ್ ಅಥವಾ 1 ಗ್ರಾಂ. ಕಾರ್ಬನ್‌ಡೈಜಿಮ್ ಶಿಲೀಂದ್ರನಾಶಕವನ್ನು ಸಿಂಪರಣೆ ಮಾಡಬೇಕಲ್ಲದೆ ಗಿಡದ ಬುಡಕ್ಕೂ ಸ್ವಲ್ಪ ಸುರಿಯುವುದು ಪರಿಣಾಮಕಾರಿ ವಿಧಾನ.



ಇನ್ನು ಎಲೆಚುಕ್ಕೆ ಮತ್ತು ಅಂಗಮಾರಿ ಕೂಡ ಮುಖ್ಯವಾದ ರೋಗ. ಇದರ ಚಿಹ್ನೆಗಳೆಂದರೆ ಎಲೆಗಳ ಮೇಲೆ ಚುಕ್ಕೆಗಳಾಗಿ ಹೂವಿನ ಮೊಗ್ಗು ಮತ್ತು ದಳಗಳನ್ನು ಆವರಿಸಿಕೊಳ್ಳುತ್ತದೆ. ಇದರ ಬಾಧೆ ತೀವ್ರವಾದಾಗ ಗಿಡಗಳು ಬಿದ್ದು ಸಾಯುತ್ತವೆ.



ಅಂತಹ ಗಿಡಗಳನ್ನು ದೂರ ಎಸೆದು ನಾಶ ಪಡಿಸಬೇಕಲ್ಲದೆ ಬೆಳೆಗೆ ಮೇಲೆ ತಿಳಿಸಿದ ಶಿಲೀಂದ್ರ ನಾಶಕಗಳನ್ನು ಬಳಸಿ ನಿಯಂತ್ರಿಸಬಹುದಾಗಿದೆ.  ಎಲೆ ಮುಟುರು ನಂಜು ರೋಗಕ್ಕೆ ತುತ್ತಾದ ಗಿಡಗಳನ್ನು ನಾಶಪಡಿಸಿ ರೋಗ ಹರಡುವುದನ್ನು ತಡೆಗಟ್ಟಬಹುದು.



  ನಾಟಿ ಮಾಡಿದ ಎರಡರಿಂದ ಎರಡೂವರೆ ತಿಂಗಳ ನಂತರ ಹೂಗಳ ಕೊಯ್ಲು ಆರಂಭವಾಗಿ ಮುಂದೆ ಸುಮಾರು ಎರಡೂವರೆ ತಿಂಗಳವರೆಗೂ ನಿರಂತರವಾಗಿ ಮುಂದುವರಿಯುತ್ತದೆ. ಯಾವಾಗಲೂ ಸಂಜೆ ವೇಳೆಯಲ್ಲಿಯೇ ಕೊಯ್ಲು ಮಾಡುವುದು ಸೂಕ್ತ. ಕೊಯ್ಲು ಮಾಡುವಾಗ ಹೂಗಳಲ್ಲಿ ಸ್ವಲ್ಪ ತೊಟ್ಟು ಉಳಿಯುವಂತೆ ನೋಡಿಕೊಳ್ಳಬೇಕು. ಪ್ರತಿ ಹೆಕ್ಟೇರಿಗೆ 8 ರಿಂದ 10 ಟನ್ ಇಳುವರಿ ನಿರೀಕ್ಷಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.