ಗುರುವಾರ , ಆಗಸ್ಟ್ 5, 2021
23 °C

ವರ್ಷಾಂತ್ಯಕ್ಕೆ ಉಣಕಲ್ಲ ಕೆರೆ ವಿಹಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಈ ವರ್ಷದ ಅಂತ್ಯಕ್ಕೆ ನಗರದ ಉಣಕಲ್ಲ ಕೆರೆ ಸಾರ್ವಜನಿಕರ ವಿಹಾರಕ್ಕೆ ಸಜ್ಜುಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ಪ್ರಕಟಿಸಿದರು.ಉಣಕಲ್ಲ ಕೆರೆಯ ಕಾಮಗಾರಿಗಳನ್ನು ಸೋಮವಾರ ವೀಕ್ಷಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ‘ಉಣಕಲ್ಲ ಕೆರೆ ಒಟ್ಟು 230 ಎಕರೆ ವಿಸ್ತೀರ್ಣವಿದೆ. ಇದನ್ನು ಒಟ್ಟು ನಾಲ್ಕು ವಿಭಾಗಗಳೆಂದು ವಿಂಗಡಿಸಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೊದಲ ವಿಭಾಗ ನವೀನ್ ಹೋಟೆಲ್‌ನಿಂದ ಸೇತುವೆಯವರೆಗೆ ಈಗಾಗಲೇ ವಾಕಿಂಗ್‌ಪಾತ್ ನಿರ್ಮಿಸಲಾಗತ್ತಿದೆ. ಉದ್ದೇಶಿತ ಚತುಷ್ಪಥ ರಸ್ತೆಗೆ ಅಡ್ಡಿಯಾಗದ ಹಾಗೆ ಇದು ಸಿದ್ಧಗೊಳ್ಳುತ್ತಿದೆ. ಇದು ಕೆರೆಯ ಒಡ್ಡಿನವರೆಗೆ ಮುಂದುವರಿಯಲಿದ್ದು, ಒಟ್ಟು ಮೂರು ಕಿ.ಮೀ. ಉದ್ದ ಇರುತ್ತದೆ. ಅಲ್ಲಲ್ಲಿ ಕೂಡಲು ಆಸನಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನವೀನ್ ಹೋಟೆಲ್ ಪಕ್ಕ ಪ್ರವೇಶದ್ವಾರವನ್ನು ನಿರ್ಮಿಸಲಾಗುತ್ತದೆ. ಇಲ್ಲಿ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಶೌಚಾಲಯ ಇರುತ್ತದೆ. ಇದರೊಂದಿಗೆ ಡೆಕ್ ಪೆವಿಲಿಯನ್ ನಿರ್ಮಿಸಲಾಗುತ್ತಿದೆ.ಇದು ಕೆರೆ ವೀಕ್ಷಣೆಗೆ ಹೆಚ್ಚು ಅನುಕೂಲವಾಗಲಿದೆ. ಮೊದಲ ಅಂತಸ್ತು ಕೂಡಾ ಇರುತ್ತದೆ. ಸ್ಟೀಲ್ ಬಳಸಿ ಇದನ್ನು ಕಟ್ಟಲಾಗುತ್ತಿದೆ. ಇದನ್ನು ಮೇ 15ರೊಳಗೆ ಮುಗಿಸಲು ಗಡುವು ನೀಡಲಾಗಿದೆ’ ಎಂದು ತಿಳಿಸಿದರು.

‘ಎರಡನೇ ಹಂತದ ವಾಕಿಂಗ್‌ಪಾತ್‌ನಲ್ಲಿ 200 ಪ್ರೇಕ್ಷಕರು ಕೂಡುವಂಥ ಬಯಲು ರಂಗಮಂದಿರ ಸಿದ್ಧಗೊಳ್ಳಲಿದೆ. ಇದರಲ್ಲಿ ಸಣ್ಣಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಳನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ನಾಟಕಗಳನ್ನೂ ಪ್ರದರ್ಶಿಸಬಹುದು. ಇವುಗಳೊಂದಿಗೆ ಮಕ್ಕಳಾಡಲು ಉಪಕರಣಗಳಿವೆ. ಜೊತೆಗೆ ಆಧುನಿಕ ಆಟಿಕೆಗಳನ್ನು ತರಲಾಗುತ್ತದೆ. ಮಕ್ಕಳಿಗೆ ಹಾಗೂ ದೊಡ್ಡವರಿಗೂ ಆಡಲು ಅನುಕೂಲವಾಗುವ ಹಾಗೆ ಆಟಿಕೆಗಳನ್ನು ಜೋಡಿಸಲಾಗುತ್ತದೆ. ಈಗಿರುವ ಕ್ಯಾಂಟೀನ್ ತೆಗೆದು ಹೊಸ ಕ್ಯಾಂಟೀನ್ ಸಿದ್ಧವಾಗುತ್ತದೆ.

 

ಕ್ಯಾಂಟೀನ್ ಕಡೆಯಿಂದಲೂ ಪ್ರವೇಶದ್ವಾರ ಇರುತ್ತದೆ. ಜೊತೆಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇವುಗಳೊಂದಿಗೆ ಗಿಡಗಳನ್ನು ಬೆಳೆಸಲಾಗುತ್ತದೆ’ ಎಂದು ಅವರು ಹೇಳಿದರು.‘ಮೂರನೇ ಹಂತದಲ್ಲಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಸುತ್ತ ಕೆಂಪುಕಲ್ಲಿನ ಮೆಟ್ಟಿಲುಗಳನ್ನು ಜೋಡಿಸಲಾಗುತ್ತಿದೆ. ಇದರ ಸುತ್ತ ಗ್ರಿಲ್ ಹಾಕಲಾಗುತ್ತಿದೆ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ. ಬಟ್ಟೆ ತೊಳೆಯಲು ಎರಡು ದೋಭಿಘಾಟ್‌ಗಳು ಸಿದ್ಧಗೊಳ್ಳುತ್ತಿವೆ. ಇವುಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ಇನ್ನು 2-3 ದಿನಗಳಲ್ಲಿ ಇವು ಆರಂಭವಾಗುತ್ತವೆ. ಉಣಕಲ್ಲಿನ ಚರ್ಚ್ ಹಿಂದಿರುವ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಇಲ್ಲಿ ದನಕರುಗಳ ಮೈ ತೊಳೆಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾಲ್ಕನೆಯ ವಿಭಾಗವಾದ ಒಡ್ಡಿಗೆ ಕಲ್ಲು ಹಾಕಲಾಗಿದೆ. ಹುಲ್ಲುಗಾವಲು ಬರಲಿದೆ. ಕೆರೆಯ ಸುತ್ತ ಗ್ರಿಲ್ ಇರುತ್ತದೆ. ನವನಗರದಿಂದ ಬರುವ ಕೊಳಚೆ ನೀರನ್ನು ತಡೆಯಲಾಗುತ್ತದೆ. ಈ ಎಲ್ಲ ಕಾಮಗಾರಿಗಳು ಮೇ 31ರೊಳಗೆ ಮುಗಿಯುತ್ತವೆ. ನಂತರ ಕ್ಯಾಂಟೀನ್ ನಿರ್ಮಾಣವಾಗುತ್ತದೆ’ ಎಂದು ಅವರು ವಿವರಿಸಿದರು.‘ಕೆರೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ರೂ. 5 ಕೋಟಿ ರೂಪಾಯಿ ಮಂಜೂರಾಗಿದೆ. ಇನ್ನೂ ಒಂದು ಕೋಟಿ ರೂಪಾಯಿ ಅನುದಾನ ಪಡೆದು ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

‘ಉಣಕಲ್ಲ ಕೆರೆ ಒತ್ತುವರಿಯಾಗಿಲ್ಲ. ದಾಖಲೆಗಳನ್ನು ಪರಿಶೀಲಿಸುತ್ತೇವೆ. ಒತ್ತುವರಿ ಕಂಡು ಬಂದರೆ ತಕ್ಷಣ ತೆರವುಗೊಳಿಸಲಾಗುತ್ತದೆ’ ಎಂದು ಒತ್ತುವರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಸದ್ಯದಲ್ಲೇ ಗಾಜಿನಮನೆಗೆ ಅವಕಾಶ: ‘ನಗರದಲ್ಲಿಯ ಇಂದಿರಾಗಾಜಿನ ಮನೆಗೆ ಪ್ರವೇಶವನ್ನು ಮೇ 1ರಿಂದ ಎಂದು ತಿಳಿಸಿದ್ದೆವು. ಆದರೆ ಮಕ್ಕಳ ರೈಲು ಹಾಗೂ ಸಂಗೀತ ಕಾರಂಜಿ ಕಾಮಗಾರಿಗಳು ಮುಗಿದಿಲ್ಲ. ಮುಗಿದ ತಕ್ಷಣ ಉದ್ಘಾಟನೆಯಾಗಲಿದೆ’ ಎಂದರು.‘ಕಳೆದ ತಿಂಗಳು ಧಾರವಾಡದಲ್ಲಿ ಉದ್ಘಾಟನೆಗೊಂಡ ಸಾಧನಕೇರಿಗೆ 15 ಸಾವಿರ ಜನರು ಭೇಟಿ ಕೊಟ್ಟಿದ್ದಾರೆ. ನಗರದಲ್ಲಿಯ ನೃಪತುಂಗ ಬೆಟ್ಟಕ್ಕೆ ಪ್ರತಿ ತಿಂಗಳು ಸರಾಸರಿ 20 ಸಾವಿರ ಜನರು ಭೇಟಿ ಕೊಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.