ವರ್ಷ ನಾಲ್ಕು ಭರವಸೆ ನೂರು!

7

ವರ್ಷ ನಾಲ್ಕು ಭರವಸೆ ನೂರು!

Published:
Updated:

ಕಾರವಾರ: ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸ್ವಂತ ಕಟ್ಟಡದ ಭಾಗ್ಯವಿಲ್ಲದೆ ನಾಲ್ಕು ವರ್ಷ ಕಳೆದಿದೆ. ತಾಲ್ಲೂಕಿನ ಮಾಜಾಳಿಯಲ್ಲಿ ಕಾಲೇಜಿನ ನೂತನ ಕಟ್ಟಡ ನಿರ್ಮಿಸುವ ಬಗ್ಗೆ ಸ್ಥಳೀಯ ಶಾಸಕರೂ ಮೀನುಗಾರಿಕೆ ಸಚಿವರೂ ಆಗಿರುವ ಆನಂದ ಅಸ್ನೋಟಿಕರ್ ಭರವಸೆ ನೀಡಿದ್ದು ನೂರಾರು ಬಾರಿ ಆಗಿದೆ. ಆದರೆ ಕಟ್ಟಡ ಮಾತ್ರ ನಿರ್ಮಾಣ ಆಗುತ್ತಿಲ್ಲ.ನೂತನ ಕಟ್ಟಡ ಮತ್ತು ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಕಳೆದ ವರ್ಷ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಉಗ್ರವಾದ ರೀತಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಆದರೆ ಯಾವುದೇ ಫಲ ದೊರೆಯಲಿಲ್ಲ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಅವ್ಯವಸ್ಥೆಗಳ ಮಧ್ಯೆಯೇ ಎಂಜಿನಿಯರಿಂಗ್ ಕಾಲೇಜಿನ ತರಗತಿಗಳು ನಡೆಯುತ್ತಿವೆ.ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿಗಳು ಮತ್ತು ತರಗತಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲೂ ತರಗತಿಗಳನ್ನು ನಡೆಸಲಾಗುತ್ತಿದೆ. ವಸತಿ ನಿಯಲದಲ್ಲಿಪ್ರಾರಂಭಿಸಿರುವ ಕ್ಲಾಸ್ ರೂಮ್‌ಗಳು ಚಿಕ್ಕದಾಗಿದ್ದರೂ ಅಲ್ಲಿಯೇ ಪಾಠ ಕೇಳಬೇಕಾಗಿರುವ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ.ಎಂಜಿನಿಯರಿಂಗ್ ಕಾಲೇಜು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ನಂತರವಾದರೂ ಕಾಲೇಜಿನ ಸ್ವಂತ ಕಟ್ಟಡ ಶೀಘ್ರ ಆಗಬಹುದು ಎನ್ನುವು ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಕಾಲೇಜು ನಿರ್ಮಾಣ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮುಖ್ಯವಾಗಿರುವ ಪ್ರಯೋಗಾಲಯ ಇಲ್ಲಿ ಇಲ್ಲದೇ ಇರುವುದರಿಂದ ಪ್ರಾಯೋಗಿಕ ಪಾಠ ಕೇಳಲು ವಿದ್ಯಾರ್ಥಿಗಳು ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ದೂರದ ಬೆಳಗಾವಿಗೆ ಹೋಗಬೇಕಾಗಿದೆ.

ಬೇರೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್‌ನಲ್ಲಿ ಕನಿಷ್ಟ ಮೂರು ತಿಂಗಳುಗಳ ಕಾಲ ಕಲಿಯುವ ಪ್ರಾಯೋಗಿಕ ಪಾಠವನ್ನು ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎರಡೇ ದಿನದಲ್ಲಿ ಕಲಿಯಬೇಕಾಗಿರುವುದು ಆಶ್ವರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry