ಗುರುವಾರ , ಏಪ್ರಿಲ್ 22, 2021
30 °C
ಪ್ರತಿ ವಾರ್ಡ್‌ನಲ್ಲಿ ಶೀಘ್ರವೇ ಅಭಿವೃದ್ಧಿ ಕಾರ್ಯ: ಮೇಯರ್ ಪ್ರಕಟಣೆ

ವಲಯ ಮಟ್ಟದಲ್ಲಿ ಕಡತ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಲಯ ಮಟ್ಟದಲ್ಲಿ ಕಡತ ವಿಲೇವಾರಿ

ಬೆಂಗಳೂರು: `ಬಾಕಿ ಉಳಿದಿರುವ ವಾರ್ಡ್ ಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಶೀಘ್ರ ಚಾಲನೆ ನೀಡಲು ಡಿ. 10ರಿಂದ ನಾಲ್ಕು ದಿನಗಳ ಕಾಲ ವಲಯ ಮಟ್ಟದಲ್ಲಿ ವಿಶೇಷ ಕಡತ ವಿಲೇವಾರಿ ಸಭೆ ನಡೆಸಲಾಗುವುದು' ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ತಿಳಿಸಿದರು.

ಶುಕ್ರವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಪಕ್ಷಭೇದ ಮರೆತು ಎಲ್ಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು. `ಪ್ರತಿದಿನ ಎರಡು ವಲಯಗಳಂತೆ ನಾಲ್ಕು ದಿನಗಳಲ್ಲಿ ಎಂಟೂ ವಾರ್ಡ್‌ಗಳ ಕಡತಗಳನ್ನು ವಿಲೇವಾರಿ ಮಾಡಲಾಗುವುದು' ಎಂದು ಹೇಳಿದರು.

`ಸಭೆ ನಡೆಸಲು ಇನ್ನೂ ಹತ್ತು ದಿನ ಬಾಕಿ ಇರುವುದರಿಂದ ಸದಸ್ಯರು ಹಾಗೂ ಅಧಿಕಾರಿಗಳು ಎಲ್ಲ ಕಡತ ಮತ್ತು ಮಾಹಿತಿಯೊಂದಿಗೆ ಸನ್ನದ್ಧರಾಗಬೇಕು. ಇದರಿಂದ ವಿಳಂಬಕ್ಕೆ ಆಸ್ಪದ ಇಲ್ಲದಂತೆ ಕಡತ ವಿಲೇವಾರಿ ಮಾಡಲು ಅನುಕೂಲವಾಗುವುದು' ಎಂದು ತಿಳಿಸಿದರು.

ಇದಕ್ಕೂ ಮುನ್ನ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಸದಸ್ಯರಾದ ಪದ್ಮನಾಭ ರೆಡ್ಡಿ, ಎಂ.ನಾಗರಾಜ್, ಗಂಗಬೈರಯ್ಯ ಮತ್ತಿತರರು, ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗುತ್ತಿಲ್ಲ. ರೂ 50 ಲಕ್ಷ ಮೊತ್ತದವರೆಗಿನ ಕಾಮಗಾರಿಗಳಿಗೆ ಜಂಟಿ ಆಯುಕ್ತರೇ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದ್ದರೂ ಆಯುಕ್ತರ ಕಡೆಗೆ ಕೈತೋರಿಸುತ್ತಿದ್ದಾರೆ' ಎಂದು ದೂರಿದರು.

`ರೂ 5 ಲಕ್ಷ ಮೊತ್ತದೊಳಗಿನ ಯಾವುದೇ ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಮಾಡಿಸಬಾರದು. ಇದರಿಂದ ಕಾಮಗಾರಿ ಅನಗತ್ಯ ವಿಳಂಬ ಆಗುವುದಲ್ಲದೆ, ಹೊರಗಿನವರು ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಕಾರಣ ಗುಣಮಟ್ಟ ಸರಿ ಇರುವುದಿಲ್ಲ' ಎಂದರು.

ತೆರಿಗೆಯಲ್ಲಿ ಸೋರಿಕೆ: ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಬಿಬಿಎಂಪಿಗೆ ಬರಬೇಕಾದ ದೊಡ್ಡ ಪ್ರಮಾಣದ ವಾಣಿಜ್ಯ ತೆರಿಗೆ ಸೋರಿಕೆಯಾಗುತ್ತಿದೆ ಎಂದು ಸದಸ್ಯ ಎಸ್.ಹರೀಶ್ ದೂರಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 16.90 ಲಕ್ಷ ಆಸ್ತಿಗಳಿದ್ದು, 1,066 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಸ್ಕಾಂನಿಂದ ಪಡೆದ ಮಾಹಿತಿ ಪ್ರಕಾರ ನಗರದಲ್ಲಿ 6 ಲಕ್ಷ ವಿದ್ಯುತ್ ಸಂಪರ್ಕಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯಲಾಗಿದೆ. ಅಷ್ಟೊಂದು ವಾಣಿಜ್ಯ ಮಳಿಗೆಗಳು ಇದ್ದು, ವಾಣಿಜ್ಯ ತೆರಿಗೆ ಸಂಗ್ರಹಕ್ಕಾಗಿ ಆಂದೋಲನ ನಡೆಸಲಾಗುವುದು. ಸ್ವಯಂ ಆಸ್ತಿ ತೆರಿಗೆ ವ್ಯವಸ್ಥೆಯಿಂದ ಹಲವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ಆಯುಕ್ತರು ಹೇಳಿದರು.

ಗುರುತಿನ ಪತ್ರ ನೀಡಲ್ಲ: ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಹಕ್ಕು ಇಲ್ಲವೆ ಗುರುತಿನ ಪತ್ರ ನೀಡಲು ರಾಜ್ಯ ಸರ್ಕಾರದ ಯಾವುದೇ ಸೂಚನೆ ಇಲ್ಲ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಅಂತಹ ಪತ್ರ ಕೊಡಲು ಆಗುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಕೆ.ಚಂದ್ರಶೇಖರ್ ಸೇರಿದಂತೆ ಹಲವು ಸದಸ್ಯರು ಕೇಳಿದ ಪ್ರಶ್ನೆಗೆ ಆಯುಕ್ತರು ಈ ಸ್ಪಷ್ಟನೆ ನೀಡಿದರು.`ಬಡವರಿಗೆ ಗುರುತಿನ ಪತ್ರ ನೀಡದಿದ್ದರೆ ವಿಷ ಕುಡಿಯಬೇಕಾಗುತ್ತದೆ' ಎಂದು ಚಂದ್ರಶೇಖರ್ ಹೇಳಿದರು. `ಗುರುತಿನ ಪತ್ರ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಂಡರೆ ಸರ್ಕಾರಕ್ಕೆ ಕಳುಹಿಸಿ ಅದರ ನಿರ್ದೇಶನದಂತೆ ನಡೆಯಲಾಗುವುದು' ಎಂದರು.

ವಾಜಪೇಯಿ ಆರೋಗ್ಯಶ್ರೀ ಸೇರಿದಂತೆ ಬಡವರಿಗೆ ಆರೋಗ್ಯ ಸೇವೆ ಕಲ್ಪಿಸುವಂತಹ ಎಲ್ಲ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೋಯಲ್ ಹೇಳಿದರು.

ಮಂತ್ರಿ ಮಾಲ್: ವರದಿಗೆ ಸೂಚನೆ

ಮಂತ್ರಿ ಮಾಲ್ ಕಟ್ಟಡದ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇದುವರೆಗಿನ ಬೆಳವಣಿಗೆಗಳ ಸಮಗ್ರ ಮಾಹಿತಿಯನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು ಎಂದು ಮೇಯರ್ ವೆಂಕಟೇಶಮೂರ್ತಿ, ಆಯುಕ್ತರಿಗೆ ಸೂಚನೆ ನೀಡಿದರು.

ಮಂತ್ರಿ ಮಾಲ್ ಅವ್ಯವಹಾರಗಳ ತನಿಖೆಗೆ ನೇಮಕ ಮಾಡಲಾಗಿದ್ದ ಸದನ ಸಮತಿ ತನ್ನ ವರದಿಯನ್ನು ಸದನದಲ್ಲಿ ಮಂಡಿಸುವ ಮುನ್ನವೇ ಅದರ ಮಾಲೀಕರಿಗೆ ಗೊತ್ತಾಗಿದ್ದು ಹೇಗೆ ಎಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆ ಎಂದೂ ಆರೋಪಿಸಿದರು.

ವಲಯ ಅಧಿಕಾರಿಗಳು ನೀಡಿದ ನೋಟಿಸ್ ಆಧಾರದ ಮೇಲೆ ಅದರ ಮಾಲೀಕರು ಕೋರ್ಟ್‌ಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಮಂತ್ರಿ ಮಾಲ್ ಮಾಲೀಕರು ತಮ್ಮ ಒಡೆತನದ ಭೂಮಿಗಿಂತ ಹತ್ತು ಎಕರೆ ಹೆಚ್ಚುವರಿ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.