ಮಂಗಳವಾರ, ನವೆಂಬರ್ 12, 2019
28 °C

ವಲಸಿಗರ ಕ್ಷೇತ್ರದಲ್ಲಿ ಪಕ್ಷಾಂತರಿಗಳ ಸ್ಪರ್ಧೆ!

Published:
Updated:

ಕನಕಗಿರಿ: 1978ರಲ್ಲಿ ನೂತನ ವಿಧಾನಸಭಾ ಕ್ಷೇತ್ರವಾಗಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿ ವರೆಗೆ ನಡೆದ 8 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯರಾಗಿದ್ದ ನಾಗಪ್ಪ ಸಾಲೋಣಿ ಒಂದೇ ಸಲ (1994ರಲ್ಲಿ) ಜಯ ಶಾಲಿಯಾಗಿದ್ದು ಬಿಟ್ಟರೆ ಉಳಿದ ಏಳು ಚುನಾವಣೆಯಲ್ಲಿಯೂ ವಲಸಿಗರೆ ಆಯ್ಕೆಯಾಗಿರುವುದು ಈ ಕ್ಷೇತ್ರದ ವಿಶೇಷ.2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರವಾಗಿದ್ದು ಪಕ್ಷಾಂತರಿಗಳೆ ಅಧಿಕೃತವಾಗಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವುದು ಮತ್ತೊಂದು ವಿಶೇಷ.2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಆಗಿನ ಬಿಜೆಪಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವರಾಜ ತಂಗಡಗಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಪಕ್ಷ ಟಿಕೆಟ್ ನೀಡದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿದರು.ಸರ್ಕಾರ ರಚನೆಗೆ ಅಲ್ಪ ಬಹುಮತ ಎದುರಿಸುತ್ತಿದ್ದ ಯಡಿಯೂರಪ್ಪರ ಬಿಜೆಪಿ ಸರ್ಕಾರಕ್ಕೆ ತಂಗಡಗಿ ಬೆಂಬಲ ಸೂಚಿಸಿ ಎರಡು ಖಾತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.ತಾಪಂ ಉಪ ಚುನಾವಣೆ, ವಿಧಾನ ಪರಿಷತ್, ಲೋಕಸಭೆಯ ಚುನಾವಣೆಯಲ್ಲಿ ತಂಗಡಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಬದಲಾದ ರಾಜಕೀಯದ ಘಟನೆಯಿಂದ ಶಾಸಕತ್ವದಿಂದ ಅನರ್ಹಗೊಂಡರು. ಈ ಸಮಯದಲ್ಲಿ ನಡೆದ ತಾಪಂ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸಹೋದರರು ಹಾಗೂ ಬೆಂಬಲಿಗರನ್ನು ಜೆಡಿಎಸ್‌ಗೆ ಸೇರಿಸಿ ಪರೋಕ್ಷವಾಗಿ ತಾವು ಸಹ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದರು. ಸದಾನಂದಗೌಡದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಮತ ಹಾಕಿ ಗಮನ ಸೆಳೆದರು.2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿರುವ ಶಿವರಾಜ ತಂಗಡಗಿ ಗುರುವಾರ ಬೆಂಗಳೂರಿನಲ್ಲಿ ಪಕ್ಷ ಸೇರಿದರು. 2008ರ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಭವಾನಿಮಠ ಮುಕುಂದರಾವ್ ಅವರು ಕಳೆದ ಐದು ವರ್ಷಗಳ ಕಾಲ ಕಾಂಗ್ರೆಸ್ ಸಂಘಟನೆ ಜತೆಗೆ ತಂಗಡಗಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅನೇಕ ಹೋರಾಟ ನಡೆಸಿ ಕಾರ್ಯಕರ್ತರ ಜತೆಗೆ ಬೆರೆತುಕೊಂಡಿದ್ದರು.ತಂಗಡಗಿ ಕಾಂಗ್ರೆಸ್ ಸೇರ್ಪಡೆ ವಿಷಯ ತಿಳಿಯುತ್ತಿದ್ದಂತೆಯೆ ಕಳೆದ ಮೂರ‌್ನಾಲ್ಕು ತಿಂಗಳ ಹಿಂದೆ ಕೆಪಿಸಿಸಿ ಸದಸ್ಯತ್ವ ಸ್ಥಾನಕ್ಕೆ ಭವಾನಿಮಠ ರಾಜೀನಾಮೆ ನೀಡಿ ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆಗೊಂಡು ಈಗ ಅದೇ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.ಗಂಗಾವತಿ ನಗರಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಸದಸ್ಯರಾಗಿದ್ದ ರಾಮನಾಯ್ಕ ಈಗ ಬಿಜೆಪಿ ನಿಯೋಜಿತ ಅಭ್ಯರ್ಥಿಯಾದರೆ, ಕುಷ್ಟಗಿಯ ಚಳಗೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರಕಾಶ ರಾಠೋಡ್ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈಗಿನ ಕೆಜೆಪಿ ನಿಯೋಜಿತ ಅಭ್ಯರ್ಥಿ ಬಸವರಾಜ ಧಡೇಸೂಗರು ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡು ಕ್ಷೇತ್ರಕ್ಕೆ ಆಗಮಿಸಿದರು.ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಧಡೇಸೂಗರು ನಂತರ ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿ ಈಗ ಕೆಜೆಪಿಯ ನಿಯೋಜಿತ ಅಭ್ಯರ್ಥಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ವಲಸಿಗರ ಕ್ಷೇತ್ರದಲ್ಲಿ ಪಕ್ಷಾಂತರಿಗಳ ಹಾವಳಿ ಹೆಚ್ಚಾಗಿದ್ದು ಜಯ ಯಾರಿಗೆ ಎಂಬುದು ಮೇ 8 ವರೆಗೆ ಕಾಯಬೇಕಾಗಿದೆ.

 

ಪ್ರತಿಕ್ರಿಯಿಸಿ (+)