ವಸತಿನಿಲಯವೋ? ಧರ್ಮಛತ್ರವೋ...!

7

ವಸತಿನಿಲಯವೋ? ಧರ್ಮಛತ್ರವೋ...!

Published:
Updated:

ಗುಲ್ಬರ್ಗ: ಅಲ್ಲಿ ಅಪರಿಚಿತರು ಯಾರು ಕಾಲಿಟ್ಟರೂ ಅವರೆದುರು ಧುತ್ತೆಂದು ಗುಂಪು, ಗುಂಪಾಗಿ ಪ್ರತ್ಯಕ್ಷರಾಗುವ ವಿದ್ಯಾರ್ಥಿಗಳು ಅಲ್ಲಿನ ಸಮಸ್ಯೆಗಳ ಪಟ್ಟಿಯನ್ನು ಬಿಚ್ಚಿಡುತ್ತಾರೆ. ಈಗ ನಾವು ಏನ್ ಮಾಡಬೇಕು ನೀವೇ ಹೇಳ್ರಿ... ಎಂದು ಅಲ್ಲಿಗೆ ಭೇಟಿ ನೀಡಿದವರನ್ನೇ ಪ್ರಶ್ನಿಸಿ ದಂಗು ಬಡಿಸುತ್ತಾರೆ.ಹಾಗೆಂದ ಮಾತ್ರಕ್ಕೆ ಇದು ಅನುಗಾಲದಿಂದಲೂ ಉಳಿದು ಬಂದಿರುವ ಕಾವೇರಿ ನದಿ ನೀರಿನ ಸಮಸ್ಯೆಯಂತೂ ಖಂಡಿತ ಅಲ್ಲ. ಇದು ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್‌ನಲ್ಲಿರುವ ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ಸಮಸ್ಯೆ!100 ವಿದ್ಯಾರ್ಥಿಗಳು ವಸತಿ ಇರಬಹುದಾದ ಈ ಹಾಸ್ಟೆಲ್‌ನಲ್ಲಿ ಸುಮಾರು 275 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಕೋಣೆಗಳಲ್ಲಿ ಫ್ಯಾನ್ ಇದ್ದರೆ, ಲೈಟಿಲ್ಲ. ಮಂಚವಿದ್ದರೆ ಹಾಸಿಗೆ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತೆಯೇ ಪ್ರತಿ ಕೋಣೆಯಲ್ಲಿ ಆರೇಳು ವಿದ್ಯಾರ್ಥಿಗಳು ವಾಸಿಸುವ ಸರ್ಕಾರಿ ದೊಡ್ಡಿಯಾಗಿ ಪರಿಣಮಿಸಿದೆ.ವಿದ್ಯಾರ್ಥಿಗಳಿಗೆ ಇಲ್ಲಿ ನೀಡಲಾಗುತ್ತಿರುವ ಊಟವಂತೂ ಆ ದೇವರಿಗೆ ಪ್ರೀತಿ ಎನ್ನುವಂತಿದೆ. ಬೆಳಿಗ್ಗೆ 8.30ರಿಂದ 10.30ರವರೆಗೆ ಬೆಳಗಿನ ಊಟ ನೀಡುತ್ತಿದ್ದು, ಈ ಅವಧಿಯಲ್ಲಿ ಎಲ್ಲರೂ ಧರ್ಮಛತ್ರದಲ್ಲಿ ಸಾಲಾಗಿ ನಿಂತು ಪ್ರಸಾದ ಪಡೆಯುವಂತೆ ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ತಟ್ಟೆ ತೆಗೆದುಕೊಂಡು ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಹೀಗೆ  ಅಲ್ಲಿನ ಅಡುಗೆ ಭಟ್ಟರು ಹಾಕುವ ಚಪಾತಿ ಗುತ್ತಿಗೆ (ಕ್ಯಾಚ್) ಹಿಡಿಯಲು ಹೋಗಿ ಜಾರಿ ಬಿದ್ದು ಆಸ್ಪತ್ರೆ ಸೇರಿದ ಉದಾಹರಣೆಗಳು ಇಲ್ಲಿವೆ. “ಜಿಗ್‌ಜಾಗ್ ಆಗಿರುವ ಚಪಾತಿ, ಯಾರಿಗೂ ಬೇಡವಾದ ತರಕಾರಿ, ತಿಳಿಯಾದ ಸಾರು, ಪಡಿತರ ಅಂಗಡಿಯಲ್ಲಿ ಸಿಗುವ ಅಕ್ಕಿ ಬಳಸಿ ತಯಾರಿಸುವ ಇಲ್ಲಿನ ಆಹಾರವನ್ನು ಸೇವಿಸುವುದೆಂದರೆ ಎಲ್ಲಿಲ್ಲದ ಸಂಕಟ. ನಾವು ಗಂಟಲೊಳಗೆ ತುರುಕಿದರೆ ಅದು ಹೊರಗೆ ಹಾಕುತ್ತಿರುತ್ತದೆ. ಬೆಳಿಗ್ಗೆ ಮಾಡಿದ ಅನ್ನವನ್ನೇ ಚಿತ್ರಾನ್ನ ಮಾಡಿ ಮಧ್ಯಾಹ್ನ ಕೊಡುವ ಉಪಹಾರವನ್ನು ದನಗಳೂ ಬಹುಶಃ ಮೂಸಿ ನೋಡುವುದಿಲ್ಲ. ಈ ಅವ್ಯವಸ್ಥೆ ಬಗ್ಗೆ ವಾರ್ಡ್‌ನ್ ಅವರನ್ನು ವಿಚಾರಿಸಲಾಗಿ, ಇದು ಧರ್ಮಛತ್ರ ಇದ್ದಹಾಗೆ. ಹೊಂದಾಣಿಕೆ ಮಾಡಿಕೊಳ್ಳಬೇಕು” ಎಂದು ಹೇಳುತ್ತಾರೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.ಕಳೆದ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ತತ್ತಿ, ಬಾಳೆಹಣ್ಣು, ವಾರಕ್ಕೊಂದು ಸಲ ಸಿಹಿ ತಿಂಡಿ ನೀಡುತ್ತಿದ್ದರು. ಆದರೆ ಈ ಬಾರಿ ಮಾತ್ರ ಇದ್ಯಾವುದನ್ನು ನೀಡುತ್ತಿಲ್ಲ. ಸಿಲಿಂಡರ್ ಬಳಸದೆ ಕಟ್ಟಿಗೆ ಒಲೆ ಬಳಸುತ್ತಿರುವುದರಿಂದ ಅಡುಗೆಯ ಹೊಗೆ ಕೋಣೆಯನ್ನು ಆವರಿಸಿ `ಹೋಗಲಾರದವರಿಗೆ ಹೊಗೆ ಇಟ್ಟರು~ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಆಪಾದನೆಯಾಗಿದೆ. ಈ ಮಧ್ಯೆ ಅನೇಕ ರಾಜಕಾರಣಿ ಹಾಗೂ ಅಧಿಕಾರಿಗಳ ಶಿಫಾರಸಿನಿಂದ ಪ್ರವೇಶ ಪಡೆದವರು, ಬೇರೆ ಎಲ್ಲೋ ನೌಕರಿ ಮಾಡುತ್ತಿರುವ ಉದ್ಯೋಗಸ್ಥರೂ ಇಲ್ಲಿ ವಾಸವಾಗಿದ್ದಾರೆ. `ಹೊರಗಿನ ದೆವ್ವ ಬಂದು ಮನ್ಯಾಗಿನ ದೆವ್ವವನ್ನು ಓಡಿಸಿತು~ ಎನ್ನುವಂತೆ ನಮ್ಮ ಪರಿಸ್ಥಿತಿಯಾಗಿದೆ ಎಂದು ವಿದ್ಯಾರ್ಥಿಗಳು ಗೋಳಿಡುತ್ತಾರೆ.ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಇಲ್ಲಿಗೇ ಭೇಟಿ ನೀಡಿದಾಗಿನಿಂದ ವಸತಿ ನಿಲಯಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ. ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಆದರೆ ವಸತಿ ನಿಲಯದ ಒಳಗಿನ ಅವ್ಯವಸ್ಥೆ ಇನ್ನೂ ಜೀವಂತವಾಗಿರುವುದು ಕಂಡುಬಂದಿತು. ಊಟದ ಸಮರ್ಪಕ ಪೂರೈಕೆ ಜೊತೆಗೆ ದಿನಪತ್ರಿಕೆ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರುವ ಯಾವುದೇ ಕರುಹುಗಳು ಅಲ್ಲಿ ಕಂಡು ಬರಲಿಲ್ಲ.ಇಲ್ಲಿನ ಅವ್ಯವಸ್ಥೆಗೆ ರೋಸಿ ಹೋಗಿರುವ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ ಊಟ ಮಾಡದೆ ನೇರವಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಳಿ ದೂರು ಸಲ್ಲಿಸಿದ್ದಾರೆ. ಸಮಸ್ಯೆ ಹೀಗೆಯೇ ಮುಂದುವರಿದರೆ ಊಟ ತಯಾರಿಸುವ ಹಾಗೂ ಊಟ ಮಾಡುವ ಸಾಮಗ್ರಿಗಳ ಪ್ರದರ್ಶನದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅಲ್ಲಿನ ವಿದ್ಯಾರ್ಥಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry