ಶುಕ್ರವಾರ, ಜನವರಿ 24, 2020
17 °C
ಭಗತ್‌ ಸಿಂಗ್‌ ನಗರದಲ್ಲಿ ನಿರ್ಮಾಣ; ಶೀಘ್ರವೇ ಉದ್ಘಾಟನೆ

ವಸತಿರಹಿತರಿಗೆ ಬೆಚ್ಚನೆಯ ಸೂರು

ಎಂ.ಮಹೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನೆಲವೇ ಹಾಸಿಗೆ... ಗಗನವೇ ಹೊದಿಕೆ... ಎಂದುಕೊಂಡು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಮೈಕೊರೆಯುವ ಚಳಿಯಲ್ಲಿಯೇ ರಾತ್ರಿ ಕಳೆಯುವ ವಸತಿರಹಿತರಿಗೆ ಕೆಲವೇ ದಿನಗಳಲ್ಲಿ ನಗರಪಾಲಿಕೆ ವತಿಯಿಂದ ಬೆಚ್ಚನೆಯ ‘ಸೂರು’ ಲಭ್ಯವಾಗಲಿದೆ.ಇಲ್ಲಿನ ಭಗತ್‌ಸಿಂಗ್‌ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ‘ವಸತಿರಹಿತರ ರಾತ್ರಿ ತಂಗುದಾಣ’ ನಿರ್ಮಿಸಲಾಗಿದೆ. ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಸುಣ್ಣ ಬಣ್ಣ ಬಳಿದುಕೊಂಡು ಮೈದಳೆದಿರುವ ಕಟ್ಟಡದ ಉದ್ಘಾಟನೆ ಶೀಘ್ರವೇ ನೆರವೇರಲಿದ್ದು, ರಾತ್ರಿ ವೇಳೆ ವಸತಿ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವ ನಿರ್ಗತಿಕರು ಇಲ್ಲಿ ಉಳಿದುಕೊಳ್ಳಬಹುದು. ‘ಯಾರದೋ ಹಂಗಿನಲ್ಲಿ’ ರಾತ್ರಿ ಕಳೆಯುವ ಪರಿಸ್ಥಿತಿ ತಪ್ಪಲಿದೆ.ಏನಿದು ಯೋಜನೆ?: ನಗರದಲ್ಲಿ ಹಳೇ ತಾಲ್ಲೂಕು ಕಚೇರಿ ಸುತ್ತಮುತ್ತ, ಬೇತೂರು ರಸ್ತೆಯ ವಿವಿಧೆಡೆ, ಬಸ್‌ ನಿಲ್ದಾಣಗಳ ಬಳಿ, ತಂಗುದಾಣಗಳ ಬಳಿ, ರೈಲು ನಿಲ್ದಾಣ, ವಿದ್ಯಾರ್ಥಿ ಭವನ ಸುತ್ತಮುತ್ತ... ಹೀಗೆ ವಿವಿಧೆಡೆ ರಾತ್ರಿ ವೇಳೆ ಹಲವಾರು ಮಂದಿ ಮಲಗಿರುವುದನ್ನು ಗುರುತಿಸಲಾಗಿದೆ. ಇಂತಹ ರಾತ್ರಿ ವಸತಿರಹಿತರಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳು ಆಶ್ರಯ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ನಗರಪಾಲಿಕೆ, ₨ 50 ಲಕ್ಷ ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ವಸತಿರಹಿತರ ರಾತ್ರಿ ತಂಗುದಾಣ ನಿರ್ಮಿಸಲಾಗಿದೆ.‘ನಗರದಲ್ಲಿ ಭಿಕ್ಷಾಟನೆ ಮಾಡುವವರು, ಎಲ್ಲಿಂದಲೋ ಇಲ್ಲಿಗೆ ಬಂದು ವಿವಿಧ ಕೂಲಿ ಕೆಲಸ ಮಾಡುವವರು, ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದವರು ಇಲ್ಲಿ ತಂಗಬಹುದು. ಮಂಚ ಹಾಗೂ ಹಾಸಿಗೆಯ ವ್ಯವಸ್ಥೆ ಇಲ್ಲಿರುತ್ತದೆ. ಸ್ನಾನಕ್ಕೆ ಅನುಕೂಲವಿರುತ್ತದೆ.ಮನರಂಜನೆಗೆಂದು ಟಿವಿ ಇಡಲಾಗುವುದು. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 100 ಮಂದಿ ಉಳಿದುಕೊಳ್ಳಲು ಅವಕಾಶವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ. ರಾತ್ರಿ ವಸತಿರಹಿತರಿಂದ ಬರುವ ಪ್ರತಿಕ್ರಿಯೆ ಆಧರಿಸಿ 2ನೇ ಹಂತದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ನಗರಪಾಲಿಕೆಯ ಸಮುದಾಯ ವ್ಯವಹಾರಗಳ ಅಧಿಕಾರಿ ಗದ್ದಿಗೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ನಿರಂತರ ಸಮೀಕ್ಷೆ: ನಗರಪಾಲಿಕೆ ವತಿಯಿಂದ ಒಂದೂವರೆ ವರ್ಷದಿಂದ ರಾತ್ರಿ ವಸತಿರಹಿತರಿಗೆ ತಂಗುದಾಣದ ವ್ಯವಸ್ಥೆಯನ್ನು ಬಸವ ಮಹಾಮನೆ ಬಳಿ ಹಾಗೂ ಡಾನ್‌ಬಾಸ್ಕೊ ಶಾಲೆ ಬಳಿ (ಮಹಿಳೆಯರು ಮತ್ತು ಮಕ್ಕಳಿಗೆ) ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಮಾಡಲಾಗುತ್ತಿದೆ. ಮೊದಲು 30 ಮಂದಿ ಬಂದಿದ್ದರು. ಈಗ, ಈ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಆದರೂ, ಭಗತ್‌ಸಿಂಗ್‌ ನಗರದಲ್ಲಿ ಶಾಶ್ವತ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ನಿರಾಶ್ರಿತರಿಗೆ ಯಾವುದೇ ತೊಂದರೆಯಾಗಬಾರದು ಎಂಬುದು ಸರ್ಕಾರದ ಉದ್ದೇಶ ಎನ್ನುತ್ತಾರೆ ಅವರು.ನಗರದಲ್ಲಿ ರಾತ್ರಿ ವಸತಿರಹಿತರ ಸಂಖ್ಯೆ ದಾಖಲಿಸಲು ಪ್ರತಿ 15 ದಿನಕ್ಕೊಮ್ಮೆ ಸಮೀಕ್ಷೆ ನಡೆಸಲಾಗುತ್ತಿದೆ. ನಗರದ ಪ್ರಮುಖ ಹಾಗೂ ಈಗಾಗಲೇ ನಿಗದಿಪಡಿಸಿರುವ ಸ್ಥಳಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದೆ. ಮೊದಲ ಸಮೀಕ್ಷೆ ನಡೆದಾಗ 351 ಮಂದಿಯನ್ನು ಗುರುತಿಸಲಾಗಿತ್ತು. ಈಗ, ಈ ಸಂಖ್ಯೆ 10–12ಕ್ಕೆ ಇಳಿದಿದೆ ಎಂದು ಗದ್ದಿಗೇಶ್‌ ತಿಳಿಸಿದರು.ವಸತಿರಹಿತರಿಗೆ ತಾತ್ಕಾಲಿಕ ತಂಗುದಾಣದಲ್ಲಿ ಅನ್ನ ಹಾಗೂ ತಿಳಿಸಾರಿನ ವ್ಯವಸ್ಥೆ ಮಾಡಲಾಗಿತ್ತು. ಶಾಶ್ವತ ವ್ಯವಸ್ಥೆಯಾಗಿರುವ ತಂಗುದಾಣದಲ್ಲಿ ಊಟ ನೀಡಬೇಕೇ ಬೇಡವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ತಂಗುದಾಣದ ಸುತ್ತಲೂ ಉದ್ಯಾನ ನಿರ್ಮಿಸಲಾಗುವುದು. ಮಕ್ಕಳಿಗಾಗಿ ಆಟಿಕೆ ಅಳವಡಿಸಲಾಗುವುದು. ಸ್ಥಳೀಯರಿಗೆ ಇದು, ವಾಯುವಿಹಾರದ ತಾಣವಾಗಿಯೂ ಮಾರ್ಪಾಡು ಆಗಬೇಕು ಎಂಬುದು ನಗರಪಾಲಿಕೆಯ ಉದ್ದೇಶ.ವಸತಿರಹಿತರಿಂದ ನಿರಾಸಕ್ತಿ!

ಪಾಲಿಕೆಯೇನೋ ರಾತ್ರಿ ವಸತಿರಹಿತರಿಗೆ ತಂಗುದಾಣದ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಿದೆ. ಆದರೆ, ಇಂತಹ ಜನರಿಂದ ಅಷ್ಟೇನು ಆಸಕ್ತಿ ಕಂಡುಬರುತ್ತಿಲ್ಲ!

ಮೊದಲಿಗೆ ನೂರಕ್ಕೂ ಹೆಚ್ಚು ಮಂದಿ ಸೌಲಭ್ಯ ಪಡೆಯುತ್ತಿದ್ದರು. ಈಗ ಕೆಲವೇ ಮಂದಿ ಬರುತ್ತಿದ್ದಾರೆ. ಎಚ್‌ಐವಿ ಪೀಡಿತರು, ಲೈಂಗಿಕ ಕಾರ್ಯಕರ್ತರು, ಕೆಲವು ವೇಳೆ ಭಿಕ್ಷುಕರು ಇಂತಹ ಸರ್ಕಾರಿ ತಂಗುದಾಣದಲ್ಲಿ ‘ನಾಲ್ಕು ಗೋಡೆಗಳ ಮಧ್ಯೆ’ ಇರುವುದಕ್ಕೆ ಇಷ್ಟಪಡುವುದಿಲ್ಲ. ಸ್ವಚ್ಛಂದವಾಗಿ ಇರಲು ಬಯಸುತ್ತಾರೆ. ಸರ್ಕಾರದಿಂದ ದೊರೆಯುವ ವೈದ್ಯಕೀಯ ಸೌಲಭ್ಯ ಪಡೆಯುವುದಕ್ಕೂ ಆಸಕ್ತಿ ತೋರುವುದು ಕಂಡುಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.ಇದರಿಂದ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಇಂತಹ ವಸತಿರಹಿತರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸಗಳು ನಡೆಯಬೇಕಿದೆ ಎಂಬ ಅಭಿಪ್ರಾಯಗಳು ಸಹ ಕೇಳಿಬರುತ್ತಿವೆ.

ಪ್ರತಿಕ್ರಿಯಿಸಿ (+)