ಶನಿವಾರ, ನವೆಂಬರ್ 16, 2019
22 °C
ಕಳ್ಳತನ ಮಾಡಿದ ಅಡುಗೆ ಸಹಾಯಕಿ ಅಮಾನತಿಗೆ ಆಗ್ರಹ

ವಸತಿ ನಿಲಯದ ವಿದ್ಯಾರ್ಥಿನಿಯರ ಪ್ರತಿಭಟನೆ

Published:
Updated:
ವಸತಿ ನಿಲಯದ ವಿದ್ಯಾರ್ಥಿನಿಯರ ಪ್ರತಿಭಟನೆ

ಹಾವೇರಿ: ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಊಟ ತಯಾರಿಸಲು ನೀಡಿದ ಅಕ್ಕಿ, ಬೇಳೆ ಸೇರಿದಂತೆ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡುವ ಅಡುಗೆ ಸಹಾಯಕಿಯನ್ನು ಅಮಾನತ್ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ವಿದ್ಯಾನಗರದಲ್ಲಿರುವ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿನಿಯರು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.ಶುಕ್ರವಾರ ವಸತಿ ನಿಲಯದ ಮೇಲ್ವಿಚಾರಕಿ ವನಿತಾ ಸುಂಕದ ಅವರು, ಅಡುಗೆ ಸಹಾಯಕಿಗೆ ಅಕ್ಕಿ, ಬೇಳೆ, ವಠಾಣಿ ಸೇರಿದಂತೆ ಇತರ ವಸ್ತುಗಳನ್ನು ನೀಡಿದ್ದರು. ಆದರೆ, ಅಡುಗೆ ಸಹಾಯಕಿ ನಿರ್ಮಲಾ ಮಾಹೂರಕರ ಆ ಸಾಮಗ್ರಿಗಳಲ್ಲಿ ಕೆಲವೊಂದಿಷ್ಟನ್ನು ತೆಗೆದು ಇಟ್ಟುಕೊಂಡು ಅಡುಗೆ ಕಾರ್ಯ ಮುಗಿಸಿದ ನಂತರ ಮನೆಗೆ ಒಯ್ಯುತ್ತಿದ್ದಾಗ ವಿದ್ಯಾರ್ಥಿನಿಯರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.ಆಗ ವಿದ್ಯಾರ್ಥಿನಿಯರು ಅಡುಗೆ ಸಹಾಯಕಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರಲ್ಲದೇ, ಕೂಡಲೇ ಅವಳನ್ನು ಕೃತ್ಯವನ್ನು ಮೇಲ್ವಿಚಾರಕಿಯರ ಗಮನಕ್ಕೆ ತಂದಿದ್ದಾರೆ. ಆಗ ಅವರು ಇದೊಂದು ಸಲ ಏನೋ ತಪ್ಪು ಮಾಡಿದ್ದಾಳೆ. ಇನ್ನೊಮ್ಮೆ ಈ ರೀತಿ ಘಟನೆ ಮರುಗಳಿಕಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.ಮೇಲ್ವಿಚಾರಕಿಯರ ಮಾತಿಗೆ ಮನ್ನಣೆ ನೀಡದ ವಿದ್ಯಾರ್ಥಿನಿಯರು, ಅಡುಗೆ ಸಹಾಯಕಿ ಅಡುಗೆ ಸಾಮಗ್ರಿಗಳನ್ನು ಕದ್ದೊಯ್ಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎರಡು ಬಾರಿ ಸಿಕ್ಕಿಹಾಕಿಕೊಂಡು ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಳಲ್ಲದೇ, ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಳು. ಈಗ ಮತ್ತೆ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ್ದಾಳೆ. ತಮಗೆ ಅಡುಗೆ ಮಾಡಲು ನೀಡಿದ ಸಾಮಗ್ರಿಗಳಲ್ಲಿ ಕಡಿಮೆ ಸಾಮಗ್ರಿ ಉಪಯೋಗಿ ಅಡುಗೆ ಮಾಡುತ್ತಾಳಲ್ಲದೇ ಉಳಿದಿದ್ದನ್ನು ಮನೆಗೆ ಒಯ್ಯುತ್ತಾಳೆ ಎಂದು ಆರೋಪಿಸಿದರು.ಅದು ಅಲ್ಲದೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಾಗಲೆಲ್ಲ. ಈ ವಿಷಯವನ್ನು ದೊಡ್ಡದು ಮಾಡಬೇಡಿ. ದೊಡ್ಡದು ಮಾಡಿದರೆ, ನಿಮ್ಮೆದುರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಗೆ ಬೆದರಿಕೆ ಹಾಕುತ್ತಾಳೆ ಎಂದು ವಿದ್ಯಾರ್ಥಿನಿಯರು ದೂರಿದರು.ಹಿಂದೆ ಒಂದೆರಡು ಬಾರಿ ಇದೇ ರೀತಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಾಗ ಬೈದು ಬುದ್ದಿ ಹೇಳಿದ್ದೆ. ಪ್ರತಿ ಬಾರಿಯೂ ಕಾಲಿಗೆ ಬಿದ್ದು ಇದೊಂದು ಸಲ ತಪ್ಪಾಗಿದೆ. ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿದರೂ, ಕಳ್ಳತನ ಮಾಡುವುದನ್ನು ನಿಲ್ಲಿಸಿಲ್ಲ ಎಂದು ವಸತಿ ನಿಲಯ ಮೇಲ್ವಿಚಾರಕಿ ವನಿತಾ ಅವರು ತಾಲ್ಲೂಕು ಬಿಸಿಎಂ ಅಧಿಕಾರಿಗಳಿಗೆ ತಿಳಿಸಿದರು.ವಸತಿ ನಿಲಯದಿಂದ ನಿತ್ಯ ಸಾಮಗ್ರಿಗಳನ್ನು ಒಯ್ಯುವುದಿಲ್ಲ, ವಾರಕ್ಕೊಮ್ಮೆ ಒಯ್ಯುತ್ತೇನೆ. ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ತರಹದ ಕೆಲಸ ಮಾಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ನಿರ್ಮಲಾ, ತಾಲ್ಲೂಕು ಅಧಿಕಾರಿ ಎಸ್. ವಿ. ಬನ್ನೂರ ಅವರನ್ನು ಕೇಳಿಕೊಂಡರು.ಆದರೆ, ವಿದ್ಯಾರ್ಥಿನಿಯರು ಪ್ರತಿ ಸಲವು ಇದೇ ರೀತಿ ಹೇಳುವ ಇವರನ್ನು ತಕ್ಷಣವೇ ಅಮಾನತ್ ಮಾಡಬೇಕೆಂದು ಒತ್ತಾಯಿಸಿದರು.ಅಡುಗೆ ಸಾಮಗ್ರಿ ಮನೆ ಒಯ್ಯುವ ಆರೋಪವಿರುವ ಅಡುಗೆ ಸಹಾಯಕಿ ನಿರ್ಮಲಾ ಮಾಹೂರಕರ ಅವಳನ್ನು ಬೇರೆ ಕಡೆ ವಿದ್ಯಾರ್ಥಿ ವಸತಿ ನಿಲಯಕ್ಕೆ ವರ್ಗಾಯಿಸಲಾಗುವುದು. ಈ ಪ್ರಕರಣ ಕುರಿತು ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದು ಬಿಸಿಎಂ ತಾಲ್ಲೂಕು ಅಧಿಕಾರಿ ಎಸ್.ವಿ.ಬನ್ನೂರ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು. ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮತ್ತಿರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)