ಭಾನುವಾರ, ನವೆಂಬರ್ 17, 2019
28 °C

ವಸತಿ ಪ್ರದೇಶದಲ್ಲಿ ಬಾರ್: ಅರ್ಜಿ ಇತ್ಯರ್ಥ

Published:
Updated:

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ಬಾರ್‌ಗಳನ್ನು ತೆರೆಯಲು ಅವಕಾಶ ನೀಡಿರುವ ಕಾರಣ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂದು ದೂರಿ, ರಾಜಾರಾವ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ಇತ್ಯರ್ಥಪಡಿಸಿದೆ.ರಾಜಾ ರಾವ್ ಬರೆದ ಪತ್ರವನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು.ಸರ್ಕಾರದ ಪರ ಹೇಳಿಕೆ ಸಲ್ಲಿಸಿದ ವಕೀಲ ಆರ್. ದೇವದಾಸ್, `ಪತ್ರದಲ್ಲಿ ಉಲ್ಲೇಖಿಸಿರುವ, ನಿಯಮ ಉಲ್ಲಂಘಿಸಿರುವ ಮದ್ಯದ ಅಂಗಡಿಗಳು ಮತ್ತು ಬಾರ್‌ಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಗೊಂಡಿದೆ' ಎಂದು ತಿಳಿಸಿದರು. ಇದನ್ನು ಆಧರಿಸಿ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.`ವಸತಿ ಪ್ರದೇಶಗಳಾದ ವಿವೇಕ ನಗರ, ದೊಮ್ಮಲೂರು, ಮೈಸೂರು ರಸ್ತೆಯ ಕೆಲವೆಡೆ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕಷ್ಟಪಟ್ಟು ಹಣ ಕೂಡಿಟ್ಟು, ಮನೆ ನಿರ್ಮಿಸಿಕೊಂಡ ಹಿರಿಯ ನಾಗರಿಕರಿಗೆ ಈ ಬಾರ್‌ಗಳು ಮತ್ತು ಮದ್ಯದಂಗಡಿಗಳಿಂದ ತೊಂದರೆ ಆಗುತ್ತಿದೆ' ಎಂದು ಪತ್ರದಲ್ಲಿ ಹೇಳಲಾಗಿತ್ತು.ಗಾಳಿ ಆಂಜನೇಯ ದೇವಸ್ಥಾನದ ಅಕ್ಕ-ಪಕ್ಕದಲ್ಲೂ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಈ ಮದ್ಯದಂಗಡಿಗಳನ್ನು ತೆರವು ಮಾಡಬೇಕು ಅಥವಾ ದೇವಸ್ಥಾನವನ್ನೇ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಬೇಕು. ಅಬಕಾರಿ ಮಾಫಿಯಾವು ಮರಳು ಮಾಫಿಯಾ ಹಾಗೂ ಗಣಿ ಮಾಫಿಯಾಗಿಂತ ಬಲಿಷ್ಠವಾಗಿದೆ ಎಂದು ರಾಜಾ ರಾವ್ ದೂರಿದ್ದರು.

ಪ್ರತಿಕ್ರಿಯಿಸಿ (+)