ಸೋಮವಾರ, ಡಿಸೆಂಬರ್ 9, 2019
25 °C

ವಸತಿ ಪ್ರದೇಶ: ವಾಣಿಜ್ಯ ಕಟ್ಟಡ ಸಲ್ಲ - ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಸತಿ ಪ್ರದೇಶ: ವಾಣಿಜ್ಯ ಕಟ್ಟಡ ಸಲ್ಲ - ಹೈಕೋರ್ಟ್

ಬೆಂಗಳೂರು: `ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ (ಆರ್‌ಎಂಪಿ)-2015~ರ ಅಡಿಯಲ್ಲಿ ಒಳಪಡುವ ಪ್ರದೇಶಗಳನ್ನು ವಸತಿ ಬಳಕೆಗೆ ಹೊರತಾಗಿ ಇನ್ನಾವುದೇ ಉದ್ದೇಶಕ್ಕೂ ಬಳಸಲು ಅನುಮತಿ ನೀಡದಂತೆ ಹೈಕೋರ್ಟ್ ಸರ್ಕಾರಕ್ಕೆ ಬುಧವಾರ ನಿರ್ದೇಶಿಸಿದೆ.`ಮಲ್ಲೇಶ್ವರ, ವಿ.ವಿ.ಪುರ, ರಾಜಾಜಿನಗರ, ಆರ್.ಟಿ.ನಗರ, ಜಯನಗರ, ವಿಜಯನಗರ, ರಿಚ್‌ಮಂಡ್ ಟೌನ್ ಮುಂತಾದ ಪ್ರದೇಶಗಳಲ್ಲಿ ವಸತಿ ಬಳಕೆಗೆಂದೇ ಕೆಲವು ನಿವೇಶನಗಳನ್ನು ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯಲ್ಲಿ ಗೊತ್ತು ಮಾಡಲಾಗಿದೆ. ಕಟ್ಟಡಗಳ ಮರು ನಿರ್ಮಾಣ ಅಥವಾ ಮರು ಅಭಿವೃದ್ಧಿ ಹೆಸರಿನಲ್ಲಿ ಬೇರೆ ಉದ್ದೇಶಕ್ಕೆ ನೀಡಬಾರದು~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.ಈ ಯೋಜನೆಯ ರದ್ದತಿಗೆ ಕೋರಿ ನಗರದ `ಸಿಟಿಜನ್ಸ್ ಆ್ಯಕ್ಷನ್ ಫೋರಂ~, `ಸದಾಶಿವನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ~ ಸೇರಿದಂತೆ ಅನೇಕ ಮಂದಿ 2008ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.ಆದರೆ ಈ ಅರ್ಜಿಯು ಇತ್ಯರ್ಥಗೊಳ್ಳುವ ಮಧ್ಯೆ, ಒಂದು ವೇಳೆ ವಾಣಿಜ್ಯ ಬಳಕೆಗೆ ಅನುಮತಿ ಪಡೆದುಕೊಂಡಿದ್ದರೆ, ಆ ಕುರಿತು ಮುಂದಿನ ವಿಚಾರಣೆ ವೇಳೆ (ಫೆ.3) ಆದೇಶಿಸುವುದಾಗಿ ಪೀಠ ಸ್ಪಷ್ಟಪಡಿಸಿದೆ.

`ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ತಿಳಿಸಿದ್ದರೂ, ಇದುವರೆಗೆ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ಈಗಾಗಲೇ ಅನುಮತಿ ಪಡೆದುಕೊಂಡಿರುವ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ಹೊರಡಿಸಲು ನಾವು ಅಸಹಾಯಕರಾಗಿದ್ದೇವೆ. ಆದುದರಿಂದ ಈ ಕುರಿತು ಮುಂದಿನ ವಿಚಾರಣೆ ವೇಳೆ ತಿಳಿಸಲಾಗುವುದು~ ಎಂದು ಪೀಠ ಹೇಳಿದೆ.ಅರ್ಜಿಯ ಹಿನ್ನೆಲೆ: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ರೂಪಿಸಿರುವ ನಿಯಮಕ್ಕೆ ವ್ಯತಿರಿಕ್ತವಾಗಿ ಬಿಡಿಎ ಮನಸೋ ಇಚ್ಛೆ 2007ರ ಜೂನ್ 25ರಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅರ್ಜಿದಾರರು ದೂರಿದ್ದಾರೆ.1995ರಲ್ಲಿ ನಗರದಲ್ಲಿ ಹಸಿರು ವಲಯವು ಶೇ 56ರಷ್ಟಿತ್ತು. ಆದರೆ ಈ ಯೋಜನೆಯಿಂದಾಗಿ ಹಸಿರು ವಲಯವು ಶೇ 35ಕ್ಕೆ  ಇಳಿದಿದೆ. ಅಷ್ಟೇ ಅಲ್ಲದೇ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುವ ಸಂಭವವಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಈ ಮೊದಲು ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕೆ ಭಿನ್ನವಾದ ಸ್ಥಳವನ್ನು ಗುರುತು ಮಾಡಲಾಗಿತ್ತು. ಆದರೆ ಈಗ ಎಲ್ಲವನ್ನೂ ಮಿಶ್ರ ಮಾಡಲಾಗಿದೆ. ಈ ರೀತಿ ಒಟ್ಟಿಗೆ ಎಲ್ಲ ಸಂಕೀರ್ಣಗಳಿಗೆ ಅನುಮತಿ ನೀಡಿದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಜಲಮಂಡಳಿಯ ತಜ್ಞರು ವರದಿ ನೀಡಿದ್ದಾರೆ. ಆದರೆ ಇದನ್ನು ಕೂಡ ಬಿಡಿಎ ಕಡೆಗಣಿಸಿದೆ ಎಂದು ಅರ್ಜಿದಾರರು ದೂರಿದ್ದಾರೆ.ಸಿಡಿಪಿ ಎಂದು ಗುರುತು ಮಾಡಿರುವ ಪ್ರದೇಶದಲ್ಲಿ ನಿರ್ಮಾಣ ಆಗಲಿರುವ ಕಟ್ಟಡಗಳು ತನ್ನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು 2008ರಲ್ಲಿಯೇ ಕೋರ್ಟ್ ತಿಳಿಸಿತ್ತು.

ಬಿಲ್ಡರ್‌ಗಳ ಲಾಬಿ

`ಪರಿಷ್ಕೃತ ಅಭಿವೃದ್ಧಿ ಯೋಜನೆ~ಯಂತೆ ಕೇವಲ ವಸತಿ ಬಳಕೆಗೆ ನಿವೇಶನ ಬಳಸಿಕೊಳ್ಳುವಂತೆ ಆದೇಶ ಹೊರಡಿಸಿದರೆ ಅದು ಜನರಿಗೆ ತೊಂದರೆ ಆಗುತ್ತದೆ~ ಎಂದು ಸರ್ಕಾರದ ಪರ ವಕೀಲರು ವಿಚಾರಣೆ ವೇಳೆ ಅಭಿಪ್ರಾಯಪಟ್ಟರು.ಅದಕ್ಕೆ ನ್ಯಾ.ಸೇನ್ ಅವರು, `ಇದೇನು ಸರ್ಕಾರವನ್ನು ನಿಯಂತ್ರಿಸಲು ಬಿಲ್ಡರ್‌ಗಳು ನಡೆಸುತ್ತಿರುವ ಲಾಬಿಯೇ~ ಎಂದು ಪ್ರಶ್ನಿಸಿದರು. ಅದಕ್ಕೆ ವಕೀಲರು ಮೌನ  ತಳೆದರು.

ಪ್ರತಿಕ್ರಿಯಿಸಿ (+)