ಭಾನುವಾರ, ಜೂನ್ 20, 2021
25 °C

ವಸತಿ ಯೋಜನೆಗೆ ಚಿಕಿತ್ಸೆ ಯಾವಾಗ...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ಮನೆಗಳ ಅನುಷ್ಠಾನದ ಕುರಿತು ತಪಾಸಣೆಗಾಗಿ ಗ್ರಾಮಗಳಿಗೆ ಭೇಟಿ ನೀಡಿದಾಗ ಅದರ ಕರಾಳ ಮುಖ ಹೊರ ಚಾಚಿದೆ. ಮನೆ ನಿರ್ಮಿಸದೆ ಲಕ್ಷಾಂತರ ಹಣ ಎತ್ತಿಹಾಕಿದ ತಾಲ್ಲೂಕಿನ ಗೋಗಿ(ಪಿ), ಗೋಗಿ(ಕೆ), ಬೆಂಡಬೆಂಬಳಿ, ವಡಿಗೇರಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯೋಜನೆ ಮುಗ್ಗರಿಸಿದ್ದನ್ನು ಸ್ವತಃ ತನಿಖಾಧಿಕಾರಿಗಳು ಲಿಖಿತವಾಗಿ ಸಂಬಂಧಪಟ್ಟ ಇಲಾಖೆಗೆ ದೂರು ಹಾಗೂ ವರದಿ ಸಲ್ಲಿಸಿದ್ದಾರೆ.ಬಡ ಜನತೆಗೆ ಸೂರು ಒದಗಿಸುವ ಮಹತ್ವಕಾಂಕ್ಷೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ಎಚ್ಚರಗೊಳ್ಳಬೇಕಾಗಿದೆ. ಗ್ರಾಮೀಣ ಪ್ರದೇಶದ ನಿಜವಾದ ಸೂರು ವಂಚಿತ ಜನತೆಗೆ ಯೋಜನೆ ಗಗನ ಕುಸುಮವಾಗಿದೆ. ನಿವೇಶನ ಮಂಜೂರಾದ ತಕ್ಷಣ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿ, ಕಾರ್ಯದರ್ಶಿ ಹಾಗೂ ಮೇಲ್ವಿಚಾರಕರು ಶಾಮೀಲಾಗಿ ಮನೆ ನಿರ್ಮಿಸದೆ ಹಣ ಗುಳುಂ ಮಾಡುವ ವ್ಯವಸ್ಥಿತ ಜಾಲವು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ವರ್ಷಗಳಿಂದ ಸಾಗುತ್ತಲೇ ಬರುತ್ತಿರುವುದು ಬೆಳಕಿನಷ್ಟೆ ಸತ್ಯವಾಗಿದೆ.ರಾಜಕೀಯ ಪ್ರಭಾವದಿಂದ  ಗ್ರಾಮಸಭೆ ಹೆಸರಿನಲ್ಲಿ ಸಿದ್ದಪಡಿಸಲಾಗುವ ಫಲಾನುಭವಿಗಳ ಪಟ್ಟಿಯಲ್ಲಿ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಇಲ್ಲವೆ ರಕ್ತ ಸಂಬಂಧಿಗಳಿದೆ ಸಿಂಹಪಾಲು. ಅಲ್ಲಿಂದಲೇ ಶುರುವಾಗುವ ಅಕ್ರಮ ನಂತರ ನಿವೇಶನ ಮಂಜೂರಾದ ತಕ್ಷಣ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕಂತುಗಳ ಪ್ರಕಾರ ಹಣವನ್ನು ವ್ಯವಸ್ಥಿತವಾಗಿ ಲಪಟಾಯಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ರೈತ ನಾಗಪ್ಪ.ಕೇವಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೊಂಡರೆ ಸಾಲದು. ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಖೊಟ್ಟಿ ದಾಖಲೆಗಳನ್ನು ನೀಡಿದ ಫಲಾನುಭವಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎನ್ನುತ್ತಾರೆ ರೈತ ಮುಖಂಡ ಹೈಯ್ಯಾಳಪ್ಪ ಹೈಯ್ಯಾಳಕರ್.ಮನೆ ಗುಳುಂ ಹಗರಣವು ಪಾಪಸಕಳ್ಳಿಯಂತಾಗಿದೆ. ಹಲವಾರು ವರ್ಷಗಳಿಂದ ಸೂರು ವಂಚಿತರಿಗೆ   ಮನೆ ಹಂಚಿಕೆಯ ಭಾಗ್ಯವು ಸ್ಥಳೀಯ ರಾಜಕೀಯ ಮುಖಂಡರಿಗೆ ಮೃಷ್ಟಾನ್ನವಾಗಿದೆ. ಯೋಜನೆ ದುರ್ಬಳಕೆಯಾಗುತ್ತಿದ್ದರು ಕೂಡಾ  ಹಿರಿಯ ಅಧಿಕಾರಿಗಳು ಮಾತ್ರ ಜಾಣ ಕಿವುಡರಾಗಿದ್ದಾರೆ ಎಂದು ಬಿಜೆಪಿಯ ರೈತ ಮೋರ್ಚಾದ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸೋಂಕು ರೋಗದಂತೆ ಯೋಜನೆ ಅಕ್ರಮವು ಪಸರಿಸಿದೆ. ದೋರನಹಳ್ಳಿ, ಸಗರ, ವನದುರ್ಗ, ರಸ್ತಾಪೂರ, ಮುಡಬೂಳ, ಸಿರವಾಳ, ಚಾಮನಾಳ ಮದ್ರಿಕಿ ಹೀಗೆ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ವಿಚಾರಣೆ ನಡೆಸಿದರೆ ಅಕ್ರಮದ ಹೂರಣವು ಹೊರ ಬರುವುದು.

ವಸತಿ ಯೋಜನೆ ಅನುಷ್ಠಾನದ ಕುರಿತು ಸಮಗ್ರವಾಗಿ ಉನ್ನತಮಟ್ಟದ ಪ್ರತ್ಯೇಕ ತಂಡದಿಂದ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಯೋಜನೆ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಎಷ್ಟು ವರ್ಷಗಳವರೆಗೆ ಇದೇ ಅಕ್ರಮವನ್ನು ಮುಂದುವರೆಸುತ್ತಿರಿ.

ಅನಾವಶ್ಯಕವಾಗಿ ಸಾರ್ವಜನಿಕ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ವಿವಿಧ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣದ ಬಗ್ಗೆ ತಪಾಸಣೆ ನಡೆಸಿದರೆ ಸ್ಪಷ್ಟವಾದ ಚಿತ್ರಣ ಹೊರಬೀಳುವುದು ಎನ್ನುವುದು ರೈತ ಮುಖಂಡ ಕಾಶಿಂಪಟೇಲ್‌ರ ಅನಿಸಿಕೆ.ಸರ್ಕಾರದ ವಸತಿ ಯೋಜನೆ ಮಾತ್ರ ಬಡ ಜನತೆಯಿಂದ ದೂರವಾಗಿದೆ. ಗ್ರಾಮದಲ್ಲಿನ ಪ್ರಭಾವಿ ವ್ಯಕ್ತಿಗಳ ಹಾಗೂ ಉಳ್ಳವರ ಪಾಲಾಗಿ ಮಾರ್ಪಟ್ಟಿದೆ. ಸರ್ಕಾರ ಯೋಜನೆ ಬಗ್ಗೆ ಚಿಂತನೆ ನಡೆಸುವುದು ಈಗ ಸಕಾಲ ಹಾಗೂ ಜರೂರು ಹೌದು.

     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.