ಮಂಗಳವಾರ, ಮಾರ್ಚ್ 9, 2021
23 °C

ವಸತಿ ಯೋಜನೆ ಅನುಷ್ಠಾನಕ್ಕೆ ಲಂಚ: ಆರೋಪ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಸತಿ ಯೋಜನೆ ಅನುಷ್ಠಾನಕ್ಕೆ ಲಂಚ: ಆರೋಪ

ಹೊಸಪೇಟೆ: ಸರ್ಕಾರದ ವಸತಿ ಯೋಜನೆ ಅನುಷ್ಠಾನಕ್ಕಾಗಿ ತಾಲ್ಲೂಕು ಪಂಚಾಯ್ತಿ ನೊಡಲ್‌ ಅಧಿಕಾರಿ ಮಹೇಶ್‌ ಅವರು ಫಲಾನುಭವಿಗಳಿಂದ ಹಣ ಪಡೆದು ಚೆಕ್‌ ನೀಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆರೋಪಿಸಿದರು.



ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣ­ದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಸತಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಚರ್ಚೆಯಲ್ಲಿ ಪಕ್ಷಾತೀತ ಆರೋಪ ಕೇಳಿ ಬಂತು. 



ಚರ್ಚೆ ಆರಂಭಿಸಿದ ಮೆಟ್ರಿ ಕ್ಷೇತ್ರದ ಸದಸ್ಯ ಸಿ.ಡಿ.ಮಹದೇವ ಅವರು, ‘ಬಸವ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹಣ ಮಂಜೂರು ಮಾಡದೆ ಅನರ್ಹ ಫಲಾನುಭವಿಗಳಿಗೂ ಹಣ ಮಂಜೂರು ಮಾಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.



ಮಹದೇವ ಅವರ ಆರೋಪಕ್ಕೆ ದನಿಗೂಡಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೋರಿ ಫಕೀರಪ್ಪ, ‘ನೊಡಲ್‌ ಅಧಿಕಾರಿ ಮಹೇಶ್‌ ಅವರು ಹಣ ಕೇಳಿದ್ದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಆದರೆ, ಸಭೆಯಲ್ಲಿ ಬಹಿರಂಗಪಡಿಸಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇನೆ. ಇದೆಲ್ಲವನ್ನು ಬದಿಗೊತ್ತಿ ಕಾನೂನು ಬದ್ಧವಾಗಿ ಕಾರ್ಯನಿರ್ವ­ಹಿ­ಸಬೇಕು’ ಎಂದು ತಾಕೀತು ಮಾಡಿದರು.



‘ಒಬ್ಬ ಫಲಾನುಭವಿಗಳಿಗೆ ಎರಡೆರೆಡು ಬಾರಿ ಹಣ ಪಾವತಿಸಲಾಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆದರೆ, ಬಡ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸುಮ್ಮನಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಹಣ ಪಾವತಿಗೆ ಕ್ರಮ ಕೈಗೊಳ್ಳಿ’ ಎಂದು ಸದಸ್ಯ ರಹಮತುಲ್ಲಾ ಗೌಡ ಆಗ್ರಹಿಸಿದರು.



ವಸತಿ ಯೋಜನೆಯ ನೊಡಲ್‌ ಅಧಿಕಾರಿ ಮಹೇಶ್‌ ಪ್ರತಿಕ್ರಿಯಿಸಿ, ‘ವಸತಿ ನಿಗಮದ ನಿಯಮಾವಳಿ ಪ್ರಕಾರ ಫಲಾನುಭವಿಗಳಿಗೆ ಹಣ ಪಾವತಿ ಮಾಡುವಂತೆ ನಿರ್ದೇಶನವಿದೆ. ಫಲಾನುಭವಿ ಮನೆ ಕಟ್ಟಿಕೊಳ್ಳುವಾಗ ಮೂರು ಹಂತಗಳಲ್ಲಿ ಛಾಯಾಚಿತ್ರಗಳನ್ನು ಒದಗಿಸಬೇಕು. ಅಲ್ಲದೆ, ಗ್ಲೋಬಲ್‌ ಪೊಸೆಷನಿಂಗ್‌ ವ್ಯವಸ್ಥೆ(ಜಿಪಿಎಸ್‌)ಅಡಿ ಕಡ್ಡಾಯವಾಗಿ ಸೇರಿಸಬೇಕು. ಇಲ್ಲದಿದ್ದರೆ ಹಣ ಪಾವತಿಸಲು ಸಾಧ್ಯವಿಲ್ಲ’ ಎಂದರು.



‘ಆದರೆ, ಕಂಪ್ಲಿ ಭಾಗದಲ್ಲಿ ಕೆಲವು ಫಲಾನುಭವಿಗಳು ವಸತಿ ನಿಗಮದಿಂದ ಅನುಮೋದನೆ ದೊರೆಯುವ ಮೊದಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ, ಮನೆ ನಿರ್ಮಾಣದ ಮೂರು ಹಂತಗಳ ಛಾಯಾಚಿತ್ರಗಳನ್ನು ಹೊಂದಿಲ್ಲ. ಈ ಕಾರಣದಿಂದ ಇಂಥ ಫಲಾನುಭವಿಗಳಿಗೆ ಹಣ ಪಾವಸುವುದು ಸಾಧ್ಯವಿಲ್ಲ. ತಾವು ಯಾರಿಂದಲೂ ಹಣ ಪಡೆದು ಚೆಕ್‌ ನೀಡಿಲ್ಲ’ ಎಂದು ಮಹೇಶ್‌ ಸ್ಪಷ್ಟಪಡಿಸಿದರು.



ಮಧ್ಯೆ ಪ್ರವೇಶಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ, ‘ವಸತಿ ನಿಗಮದ ನಿಯಮಗಳನ್ನು ಉಲ್ಲಂಘಿಸಿ ಫಲಾನುಭವಿಗಳಿಗೆ ಹಣ ಪಾವತಿ ಅಸಾಧ್ಯ. ಆದರೂ ನಿಗಮಕ್ಕೆ ಇನ್ನೊಂದು ಬಾರಿ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿಕೊಳ್ಳಲಾಗುವುದು. ಹತ್ತು ದಿನಗಳ ಒಳಗಾಗಿ ಪ್ರಸ್ತಾವನೆ ಕಳುಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮಹೇಶ್‌ ಅವರಿಗೆ ಸೂಚಿಸಿದರು.



ಸಭಾತ್ಯಾಗ: ಟಿಎಸ್‌ಪಿ ಹಾಗೂ ಎಸ್‌ಸಿಪಿ ಯೋಜನೆ ಅಡಿ ಅರಣ್ಯ ಇಲಾಖೆಯು ಕಾಯ್ದಿಟ್ಟ ಅರಣ್ಯ ಪ್ರದೇಶದ ನೆರೆಯ ಗ್ರಾಮಗಳ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಿಲಿಂಡರ್‌ ವಿತರಿಸಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಕಾಕುಬಾಳು ಗ್ರಾಮದ 150 ಫಲಾನುಭವಿಗಳಿಗೆ ಮಾತ್ರ ಸಿಲಿಂಡರ್ ವಿತರಿಸಲಾಗಿದ್ದು, ಉಳಿದ ಗ್ರಾಮಗಳನ್ನು ಕಡೆಗಣಿಸಲಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿಯೂ ಸದಸ್ಯರನ್ನು ಕಡೆಗಣಿಸಲಾಗಿದೆ’ ಎಂದು ಸದಸ್ಯರು ಆರೋಪಿಸಿದರು.



ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ಶ್ರೀಧರ್‌, ‘ಸರ್ಕಾರದ ಸುತ್ತೋಲೆ ಪ್ರಕಾರ ಕಾಕುಬಾಳು ಗ್ರಾಮದ ಫಲಾನುಭವಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಈ ಯೋಜನೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕೆ ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ಯೋಜನೆ ಅಲ್ಲವಾಗಿದ್ದರಿಂದ ಇದನ್ನು ಸದಸ್ಯರ ಗಮನಕ್ಕೆ ತಂದಿಲ್ಲ. ಈಗ ಅಧ್ಯಯನಕ್ಕಾಗಿ ಮೊದಲ ಹಂತವಾಗಿ ಕೇವಲ ಒಂದು ಗ್ರಾಮಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಗ್ರಾಮಗಳಿಗೂ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.



ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ಯೋಜನೆ ಅಲ್ಲ ಎಂಬ ಅಧಿಕಾರಿಯ ಮಾತಿನಿಂದ ಕುಪಿತರಾದ ಸದಸ್ಯ ರಹಮತುಲ್ಲಾ ಗೌಡ, ‘ತಾಲ್ಲೂಕು ಪಂಚಾಯ್ತಿಗೆ ಈ ಯೋಜನೆ ಸಂಬಂಧವಿಲ್ಲ ಎಂದ ಮೇಲೆ ಸಾಮಾನ್ಯ ಸಭೆಗೆ ಏಕೆ ಬಂದಿರಿ. ಹೀಗೆ ಮಾತನಾಡುವ ಮೂಲಕ ಸದಸ್ಯರಿಗೆ ಅವಮಾನ ಮಾಡಿದ್ದೀರಿ’ ಎಂದು ಆರೋಪಿಸಿದರು.



‘ಅರಣ್ಯ ಇಲಾಖೆಯ ಯೋಜನೆಗಳಿಗೆ ತಾಲ್ಲೂಕು ಪಂಚಾಯ್ತಿ ಸಂಬಂಧವಿಲ್ಲ ಎಂದ ಮೇಲೆ ಸಭೆಯಲ್ಲಿ ಚರ್ಚಿಸಿ ಯಾವುದೇ ಪ್ರಯೋಜನವಿಲ್ಲ. ಸಭೆಯಲ್ಲಿ ಪಾಲ್ಗೊಳ್ಳೂವುದಿಲ್ಲ’ ಎಂದು ಸದಸ್ಯ ಮಹದೇವು ಸೇರಿದಂತೆ ಎಲ್ಲ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು.



ನಂತರ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌ ತಳವಾರ ಹಾಗೂ ಕೋರಿ ಫಕೀರಪ್ಪ ಮತ್ತಿತರರು ಸದಸ್ಯರನ್ನು ಮನವೊಲಿಸಿ ಸಭೆಗೆ ಕರೆತಂದರು. ನಂತರ ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಸಲಾಯಿತು.



ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ವಹಿಸಿದ್ದರು. ಉಪಾಧ್ಯಕ್ಷೆ ದಾಕ್ಷಾಯಿಣಮ್ಮ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.