ಮಂಗಳವಾರ, ಅಕ್ಟೋಬರ್ 15, 2019
25 °C

ವಸತಿ ಯೋಜನೆ ಚುರುಕಿಗೆ ಸೂಚನೆ

Published:
Updated:

ತಿಪಟೂರು: ಬಡವರಿಗೆ ನಿವೇಶನ ಒದಗಿಸುವ ಇಂದಿರಾ ಅವಾಸ್, ಬಸವ ವಸತಿ ಯೋಜನೆಯ ಪ್ರಗತಿ ಚುರುಕುಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದ ಸಹಾಯಕ ವ್ಯವಸ್ಥಾಪಕ ರವಿಕುಮಾರ್ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸಭಾಗಂಣದಲ್ಲಿ ಮಂಗಳವಾರ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಸತಿ ಯೋಜನೆ ಹಣವನ್ನು ಸಕಾಲಕ್ಕೆ, ಸಮರ್ಪಕವಾಗಿ ಬಳಸಿ ಬಡವರ ಮನೆ ನಿರ್ಮಾಣಕ್ಕೆ ನೆರವಾಗುವಲ್ಲಿ ತಾಲ್ಲೂಕಿನ ಅಧಿಕಾರಿಗಳು ತೀರಾ ಹಿಂದೆ ಬಿದ್ದಿದ್ದಾರೆ. ತೊಡಕು ನಿವಾರಿಸಿಕೊಂಡು ಪ್ರಗತಿಯ ವೇಗ ಹೆಚ್ಚಿಸಬೇಕು ಎಂದು ಹೇಳಿದರು.ಹಳೆ ಯೋಜನೆಗೆ ಹೊಸ ರೂಪ ನೀಡಿ ಸಹಾಯಧನ ಮೊತ್ತವನ್ನು ರೂ. 20ರಿಂದ 50 ಸಾವಿರಕ್ಕೆ ಏರಿಸಿ, ಬ್ಯಾಂಕ್‌ನಿಂದಲೂ ರೂ. 10 ಸಾವಿರ ಸಾಲ ವ್ಯವಸ್ಥೆ ಮಾಡಿದ್ದರೂ ಯೋಜನೆ ಕುಂಠಿತವಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಪ್ರತಿ ತಾಲ್ಲೂಕಿಗೆ ತಲಾ ಎರಡು ಸಾವಿರ ಮನೆ ನೀಡಿದ್ದರೂ ಬಳಸಿಕೊಳ್ಳಲು ಹಿಂದೆ ಬಿದ್ದಿರುವ ಏಳೆಂಟು ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯೂ ಒಂದು ಎಂದರು.ನಿಗಮದ ಅಧಿಕಾರಿಗಳಾದ ಪರಶುರಾಮಗೌಡ, ಬಸಪ್ಪ, ವೀಣಾ, ಗೀತಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.

Post Comments (+)