ಶುಕ್ರವಾರ, ಮೇ 7, 2021
25 °C

ವಸತಿ ಶಾಲೆ ನಿರ್ಮಾಣಕ್ಕೆ ಅಡ್ಡಗಾಲು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ದೂದೀಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಇರುವ ರಿ.ಸ. ನಂ 141ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಕಟ್ಟಡ ನಿರ್ಮಿಸಲು ನೀಡಲಾಗಿದ್ದ ತಲಾ 10 ಎಕರೆ ಜಮೀನಿನ ಬಗ್ಗೆ ಪುನರ್ ಪರಿಶೀಲನೆ ಮಾಡಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣವು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದೆ ಎಂದು ಕಾಂಗ್ರೆಸ್ ಮುಖಂಡ, ವಕೀಲ ಬಿ.ಎಂ.ಹೊಳಿಯಪ್ಪನವರ ಹೇಳಿದರು.ಪಟ್ಟಣದಲ್ಲಿ ನ್ಯಾಯಾಧೀಕರಣದ ಆದೇಶಗಳನ್ನು ಪ್ರದರ್ಶನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಶಾಸಕರಾಗಿದ್ದ ಬಿ.ಸಿ.ಪಾಟೀಲರು ಈ ಭಾಗದ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರಕಾರದಿಂದ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮಂಜೂರಾತಿ ಮಾಡಿಸಿದ್ದರು. ಶಾಲಾ ಕಟ್ಟಡ ನಿರ್ಮಿಸುವ ಸಲುವಾಗಿ ನಿವೇಶನ ಪಡೆಯಲು ಈ ಮೊದಲು ದೂದೀಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚೆ ನಡೆಸಿ ಎರಡೂ ಶಾಲೆಗಳಿಗೆ ನಿವೇಶನ ನೀಡುವ ಬಗ್ಗೆ ಒಮ್ಮತದ ನಿರ್ಣಯದ ಠರಾವು ಮಾಡಲಾಗಿದೆ. ಅದರಂತೆ ಒಟ್ಟು 25.14 ಎಕರೆ ಹುಲ್ಲುಗಾವಲಿನಲ್ಲಿ  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 10 ಎಕರೆ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ 10 ಎಕರೆ ಬಿಟ್ಟುಕೊಟ್ಟಿದ್ದು, ಮೊರಾರ್ಜಿ ಶಾಲೆಗೆ ರಾಜ್ಯಪಾಲರ ಪರವಾಗಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶಾಲೆಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಹೆಸರಿನಿಂದ ಪಹಣಿ ಪತ್ರಿಕೆಗಳು ಈಗಾಗಲೇ ಬಂದಿವೆ ಎಂದು ತಿಳಿಸಿದರು.ವಾಸ್ತವ ಹೀಗಿದ್ದರೂ ಕೆಲವರ ರಾಜಕೀಯ ಹಿತಾಸಕ್ತಿಯ ಕಾರಣದಿಂದ ದೂದೀಹಳ್ಳಿ ಗ್ರಾಮದಲ್ಲಿ ಶಾಲೆ ಆಗದಂತೆ ಪಿತೂರಿ ನಡೆದಿದೆ. ಹಾಗಾಗಿ ಈ ಪ್ರದೇಶ ಹುಲ್ಲುಗಾವಲು ಪ್ರದೇಶ ವಾಗಿದ್ದು ಜಾನುವಾರುಗಳಿಗೆ ಮೇಯಲು ಬೇಕು ಎಂದು ಕರ್ನಾಟಕ ಮೇಲ್ಮನವಿ ನ್ಯಾಯಾ ಧೀಕರಣಕ್ಕೆ ತಕರಾರು ಸಲ್ಲಿಸಿದ್ದಾರೆ. ಅದರಂತೆ ಸದರಿ ಪ್ರಕರಣದಲ್ಲಿ ಇದೇ ಮೇ 23ರಂದು ಪುನರ್ ಪರಿಶೀಲನೆ ಮಾಡಿ ಮೂರು ತಿಂಗಳ ಒಳಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹಾವೇರಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ ಎಂದು ತಿಳಿಸಿದರು.ಇದೇ ಸ್ಥಳದ ಸುತ್ತಮುತ್ತ ಸುಮಾರು 1500 ಎಕರೆ ಅರಣ್ಯ ಪ್ರದೇಶವಿದೆ. ಇಂತಹ ಪ್ರದೇಶದಲ್ಲಿ ಗ್ರಾಮದ ಜಾನುವಾರುಗಳು ಮೇಯಲು ಯಾವುದೇ ಅಡೆತಡೆ ಇಲ್ಲ, ಆದರೆ ಶಾಲೆ ನಿರ್ಮಾಣಕ್ಕೆ ದುರುದ್ದೇಶದಿಂದ ಕೆಲವರು ಆಕ್ಷೇಪಣೆ ಸಲ್ಲಿಸುತ್ತ್ದ್ದಿದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದರಲ್ಲಿ ರಾಜಕಾರಣ ಬೆರೆಸದೇ ಶಾಲಾ ಕಟ್ಟಡ ನಿರ್ಮಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರವಿಶಂಕರ ಬಾಳಿಕಾಯಿ, ವಕೀಲ ಬಿ.ಎನ್.ಬಣಕಾರ, ಡಿ.ಸಿ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಪ.ಪಂ. ಸದಸ್ಯ ರಾಜಶೇಖರ ಹಂಪಾಳಿ, ಶಿವ ಲಿಂಗಪ್ಪ ರಂಗಕ್ಕನವರ, ವೀರಬಸಪ್ಪ ಮತ್ತೂರ, ಗುರುಶಾಂತ ಯತ್ತಿನಹಳ್ಳಿ, ಗಂಗಾಧರ ಬೊಗೇರ, ಬಿ.ಎಸ್.ಪಾಟೀಲ, ಸುರೇಶ ಬೊಗೇರ, ಹೂವಪ್ಪ ವಡ್ಡಿನಕಟ್ಟಿ, ಶ್ರೀನಿವಾಸ ಬೊಗೇರ, ಮುತ್ತಪ್ಪ ಮಾಗಡಿ, ಬಸವರಾಜ ಹುಲ್ಲತ್ತಿ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.