ಮಂಗಳವಾರ, ಮೇ 18, 2021
31 °C

ವಸತಿ ಶಾಲೆ ರದ್ದು ಇಲ್ಲ: ಸಚಿವ ಆಂಜನೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದಿನ ಸರ್ಕಾರ ಮಂಜೂರು ಮಾಡಿದ್ದ 74 ವಸತಿ ಶಾಲೆಗಳನ್ನು ರದ್ದು ಮಾಡುವುದಿಲ್ಲ. ಶಾಲೆ ಆರಂಭಕ್ಕೆ ಅಗತ್ಯವಿರುವ ನಿವೇಶನ ದೊರಕುವುದು ತುಂಬಾ ತಡವಾದರೆ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಸೋಮವಾರ ವಿಧಾನ ಪರಿಷತ್‌ಗೆ ತಿಳಿಸಿದರು.ಕಳೆದ ವರ್ಷ ಮಂಜೂರು ಮಾಡಿದ್ದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಆರಂಭಿಸದೇ ಇರುವ ರಾಜ್ಯ ಸರ್ಕಾರದ ತೀರ್ಮಾನ ಕುರಿತು ಬಿಜೆಪಿಯ ಹಲವು ಸದಸ್ಯರು ಸರ್ಕಾರದ ಗಮನ ಸೆಳೆದಿದ್ದರು. ಈ ಕುರಿತು ಉತ್ತರಿಸಿದ ಸಚಿವರು, 74 ಕಡೆಗಳಲ್ಲೂ ವಸತಿ ಶಾಲೆಗಳ ಆರಂಭಕ್ಕೆ ಅಗತ್ಯವಿರುವ ವಿಸ್ತೀರ್ಣದ ನಿವೇಶನವೇ ಇಲ್ಲ. ಈ ಕಾರಣದಿಂದ ಈ ವರ್ಷ ಆ ಶಾಲೆಗಳನ್ನು ಆರಂಭಿಸಲು ಸಾಧ್ಯವೇ ಇಲ್ಲ ಎಂದರು.ಈ ಹಿಂದೆ ಆರಂಭಿಸಿರುವ 200 ವಸತಿ ಶಾಲೆಗಳು ದನದ ಕೊಟ್ಟಿಗೆಯಂತಹ ಬಾಡಿಗೆ ಮನೆಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ 350 ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಇವೆ. ಅಲ್ಲಿ ಸರಿಯಾದ ಮೂಲಸೌಕರ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇನ್ನೂ 74 ಶಾಲೆಗಳನ್ನು ತರಾತುರಿಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸಿದರೆ ಸಮಸ್ಯೆ ಬಿಗಡಾಯಿಸುತ್ತದೆ ಎಂದು ಹೇಳಿದರು.10 ಎಕರೆ ವಿಸ್ತೀರ್ಣದ ನಿವೇಶನ ದೊರೆಯುವ ಸ್ಥಳದಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಕಟ್ಟಡ ನಿರ್ಮಾಣ ಮುಗಿದ ಬಳಿಕವೇ ಶಾಲೆಗಳಿಗೆ ಅನುಮತಿ ನೀಡಲಾಗುವುದು. ನಿವೇಶನ ಖರೀದಿಗೆ ಇಲಾಖೆಯಲ್ಲಿ ಸಾಕಷ್ಟು ಹಣ ಇದೆ. ಒಂದು ತಿಂಗಳೊಳಗೆ ನಿವೇಶನ ಖರೀದಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿಯವರಿಂದ ಖರೀದಿಸಲಾಗುವುದು ಎಂದರು.ಪ್ರತಿ ಹೋಬಳಿಯಲ್ಲೂ ಒಂದು ವಸತಿ ಶಾಲೆ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚಿಸಿದ್ದಾರೆ. ಕಳೆದ ವರ್ಷ ಶಾಲೆ ಮಂಜೂರು ಮಾಡಿದ್ದ ಸ್ಥಳಗಳಲ್ಲಿ ದೀರ್ಘ ಕಾಲದವರೆಗೂ ನಿವೇಶನ ದೊರಕದೇ ಇದ್ದರೆ, ಅಂತಹ ಶಾಲೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುವುದು. ಕಳೆದ ವರ್ಷ ಮಂಜೂರಾಗಿದ್ದ ಶಾಲೆಗಳಿಗಾಗಿ ಕೌನ್ಸೆಲಿಂಗ್ ಪೂರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಸಮೀಪದ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.