ವಸತಿ ಸಂಕೀರ್ಣ ಮೈ`ಸೂರು'

7

ವಸತಿ ಸಂಕೀರ್ಣ ಮೈ`ಸೂರು'

Published:
Updated:
ವಸತಿ ಸಂಕೀರ್ಣ ಮೈ`ಸೂರು'

ಒಂದು ಬೆಚ್ಚನೆ ಗೂಡಿರಲು

ವೆಚ್ಚಕ್ಕಿಷ್ಟು ಹೊನ್ನಿರಲು

ಇಚ್ಛೆ ಅರಿವ ಸತಿಯಿರಲು

ಮೆಚ್ಚಿದಾಕ್ಷಣ ಒಲಿದಿರಲು

ಸ್ವರ್ಗ ಲೋಕದಾ ಚಿಂತೆ ಯಾಕ್ಹೇಳಯ್ಯ...

ಇದು ಬೆಚ್ಚನೆ ಗೂಡಿನ ಬಗ್ಗೆ ಕವಿಗಿರುವ ಕಲ್ಪನೆ.

ಈ ಮೊದಲು ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳಬೇಕು ಎಂದರೆ ನಿವೃತ್ತಿವರೆಗೂ ಕಾಯಬೇಕಿತ್ತು. ಇಲ್ಲವೇ ಸಾಲ-ಸೋಲ ಮಾಡಿ ಅಥವಾ ಜೀವಮಾನವಿಡೀ ಕಷ್ಟಪಟ್ಟು ದುಡಿದು, ಕೂಡಿಟ್ಟ ಹಣದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳಬಹುದಾಗಿತ್ತು. ಆದರೆ, ಜಾಗತೀಕರಣ ಹಾಗೂ ಐಟಿ-ಬಿಟಿ ಕ್ರಾಂತಿಯಿಂದಾಗಿ ಇಂದು ಬಹುಬೇಗ ಸ್ವಂತ ಮನೆ ಹೊಂದಲು ಸಾಧ್ಯವಾಗಿದೆ. ಆದಾಗ್ಯೂ, ಬಡ ಮತ್ತು ಮಧ್ಯಮ ವರ್ಗದವರಿಗೆ `ಸ್ವಂತ ಸೂರಿನ ಕನಸು' ಸ್ವಲ್ಪ ಕಷ್ಟವೇ.ಬೆಂಗಳೂರು ಇನ್ನಿಲ್ಲದಂತೆ ಬೆಳೆದಿದೆ, ಬೆಳೆಯುತ್ತಲೇ ಇದೆ. ಬೆಂಗಳೂರು ಹೊರತುಪಡಿಸಿದರೆ ಸಾಂಸ್ಕೃತಿಕ ನಗರಿ ಮೈಸೂರು ಕೂಡ ತನ್ನ ಉದ್ದಗಲಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೈಸೂರಿನಿಂದ ನಂಜನಗೂಡು, ಹುಣಸೂರು, ಬೆಂಗಳೂರು, ಬನ್ನೂರು ಹಾಗೂ ತಿ.ನರಸೀಪುರದೆಡೆಗೆ ಸಾಗುವ ಮಾರ್ಗಗಳತ್ತ ಕಣ್ಣು ಹಾಯಿಸಿದರೆ ನೂರಾರು ಬಡಾವಣೆಗಳು ಕಾಣಸಿಗುವುದೇ ಇದಕ್ಕೆ ಸಾಕ್ಷಿ.

ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳವಣಿಗೆ ಕಾಣಲು ಬಹು ಮುಖ್ಯ ಕಾರಣವೆಂದರೆ ಬೆಂಗಳೂರು-ಮೈಸೂರು ಮಧ್ಯೆ ಇರುವ 3 ಗಂಟೆ ಅವಧಿಯಲ್ಲಿ ಪ್ರಯಾಣದ ಅಂತರ ದಿನೇ ದಿನೇ ತಗ್ಗುತ್ತಿರುವುದು.ಬೆಂಗಳೂರು ಹೊರತುಪಡಿಸಿದರೆ ಮೈಸೂರು ಎರಡನೇ ಐಟಿ ಕ್ಷೇತ್ರವಾಗಿ ಬೆಳೆಯುತ್ತಿದೆ. ಪ್ರಯಾಣಿಕರನ್ನು ಸ್ವಾಗತಿಸಲು ಅರಳಿ ನಿಂತಿರುವ ಗುಲ್‌ಮೊಹರ್ ಮರಗಳು, ಗಮನ ಸೆಳೆಯುವ ಪಾರಂಪರಿಕ ಕಟ್ಟಡಗಳು, ಸಂಚಾರ ದಟ್ಟಣೆ ಮುಕ್ತ ರಸ್ತೆಗಳು, ಸ್ವಚ್ಛ ಪರಿಸರ, ಕೆಲವು ಬಡಾವಣೆಗಳಲ್ಲಿ 24/7 ಕುಡಿಯುವ ನೀರಿನ ವ್ಯವಸ್ಥೆ... ಇವು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಮೈಸೂರಿನತ್ತ ಸೆಳೆಯುತ್ತಿರುವ ಪ್ರಮುಖ ಅಂಶಗಳು. ಅಂತೆಯೇ, ಅಪಾರ್ಟ್‌ಮೆಂಟ್ ಸಂಸ್ಕೃತಿ ಬೆಂಗಳೂರು ನಂತರದ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡಗೂ ಕಾಲಿರಿಸಿದೆ.ಮೈಸೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ಆರಂಭವಾದ ಬಳಿಕ, ಮೈಸೂರಿನಲ್ಲಿ ಸೂರು ಹೊಂದ ಬಯಸುವ ಬಹುತೇಕರ ಚಿತ್ತ ಅಪಾರ್ಟ್‌ಮೆಂಟ್‌ಗಳತ್ತ ನೆಟ್ಟಿದೆ. ನಿವೇಶನ ಖರೀದಿಸಿ, ತಮ್ಮಿಷ್ಟದ ಮನೆ ಕಟ್ಟಿಕೊಳ್ಳಬೇಕು ಎಂದರೆ ಹುಣಸೂರು, ಊಟಿ (ನಂಜನಗೂಡು) ರಸ್ತೆಯಲ್ಲಿ ಕನಿಷ್ಠ 10ರಿಂದ 15 ಕಿ.ಮೀ ದೂರ ಸಾಗಬೇಕು. ಅಷ್ಟು ದೂರ ಹೋಗುವುದು ಬೇಡ ಎಂದಾದರೆ `ಅಪಾರ್ಟ್‌ಮೆಂಟ್' ಮೊರೆ ಹೋಗಬಹುದು.ಇದರಿಂದಾಗಿ ವಿಶ್ವೇಶ್ವರ ನಗರ, ಜಯಲಕ್ಷ್ಮೀಪುರಂ, ಗೋಕುಲಂ, ಬೃಂದಾವನ ಬಡಾವಣೆಗಳಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಜಯಲಕ್ಷ್ಮೀಪುರಂ ಬಡಾವಣೆಯಲ್ಲಿ ಬೇಡಿಕೆ ಸ್ವಲ್ಪ ಹೆಚ್ಚಾಗಿಯೇ ಇದೆ. ಇದಕ್ಕೆ ಕಾರಣ, ಅದು ನಗರದ ಮಧ್ಯ ಭಾಗದಲ್ಲಿರುವುದು.ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಗಗನಮುಖಿಯಾಗಿರುವುದರಿಂದ ಅನಿವಾರ್ಯವಾಗಿ ಅಪಾರ್ಟ್‌ಮೆಂಟ್‌ಗಳನ್ನು ಆಶ್ರಯಿಸುವವರ ಸಂಖ್ಯೆ ನಿದಾನವಾಗಿ ಹೆಚ್ಚುತ್ತಿದೆ.ಮೈಸೂರಿನಲ್ಲಿ ಸದ್ಯ 100ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. 50ಕ್ಕೂ ಹೆಚ್ಚು ವಸತಿ ಸಂಕೀರ್ಣಗಳು ನಿರ್ಮಾಣ ಹಂತದಲ್ಲಿವೆ. ಯಾದವಗಿರಿ ಹಾಗೂ ಜಯಲಕ್ಷ್ಮೀಪುರಂ ನಗರದ ಅತ್ಯಂತ ಹಳೆಯ ಬಡಾವಣೆಗಳಾಗಿದ್ದು, ಇಲ್ಲಿನ ಬಹುತೇಕ ನಿವೇಶನಗಳು 100*100 ಅಳತೆಯಲ್ಲಿವೆ. ಹೀಗಾಗಿ, ಈಗ ಇರುವ ಹಳೆಯ ಮನೆಯನ್ನು ಉರುಳಿಸಿ `ಚಿಕ್ಕದಾದರೂ ಚೊಕ್ಕದಾಗಿರಲಿ' ಎಂಬಂತೆ `ಅಪಾರ್ಟ್‌ಮೆಂಟ್'ಗಳನ್ನು ನಿರ್ಮಿಸಲಾಗುತ್ತಿದೆ.ಇನ್ನು ಕೈಗಾರಿಕಾ ಪ್ರದೇಶವಾದ ವಿಶ್ವೇಶ್ವರ ನಗರದಲ್ಲಿ ಬಹುತೇಕ ಕೈಗಾರಿಕೆಗಳು ಸ್ಥಗಿತಗೊಂಡಿವೆ(ಸಿಕ್ ಇಂಡಸ್ಟ್ರೀಸ್). ಈ ಬಡಾವಣೆಯಲ್ಲಿ ಪ್ರತಿಯೊಂದು ನಿವೇಶನ 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಿದೆ. ಈ ಕಾರಣದಿಂದಾಗಿಯೇ, ಸ್ಥಗಿತಗೊಂಡ ಕಾರ್ಖಾನೆಗಳ ಮಾಲೀಕರು ಆ ಜಾಗದಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.ಮೈಸೂರಿನಲ್ಲಿ ರೂ. 18 ಲಕ್ಷದಿಂದ ಆರಂಭವಾಗುವ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್(ಮನೆ)ಗಳ ಬೆಲೆ ರೂ. 60 ಲಕ್ಷವರೆಗೂ ಇದೆ. ಗ್ರಾಹಕರು ತಮಗಿಷ್ಟವಾದ ಬೆಲೆ ಹಾಗೂ ಬಡಾವಣೆಗಳಲ್ಲಿ ಅಪಾರ್ಟ್‌ಮೆಂಟ್ ಖರೀದಿಸಲು ಸಾಕಷ್ಟು ಆಯ್ಕೆಗಳೂ ಇವೆ.ನಗರದಲ್ಲಿ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆಗಳು ಸಕಲ ಸೌಲಭ್ಯಗಳನ್ನು ಒಳಗೊಂಡ ಮಧ್ಯಮ ಮತ್ತು ಬೃಹತ್ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. `ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಮನೆ ಬೇಕು ಎಂದು ಕನಸುವವರ ಸಂಖ್ಯೆ ಹೆಚ್ಚು. ಶಾಲೆ-ಕಾಲೇಜು, ಕಚೇರಿ, ಆಸ್ಪತ್ರೆ, ಮಾರುಕಟ್ಟೆ ಸಮೀಪವಿದ್ದರೆ ಅನುಕೂಲ ಎಂಬ ಗ್ರಾಹಕರ ಬಯಕೆಯೇ ಅಪಾರ್ಟ್‌ಮೆಂಟ್ ಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ' ಎನ್ನುವುದು ನಗರದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸುವ ರಿಯಲ್ ಎಸ್ಟೇಟ್ ಉದ್ಯಮಿಗಳ ಅಭಿಪ್ರಾಯ.ಎಫ್‌ಎಆರ್ ದೊಡ್ಡ ಸಮಸ್ಯೆ!

ಮೈಸೂರಿನಲ್ಲಿ ನಿವೇಶನ ಹಾಗೂ ಅಪಾರ್ಟ್‌ಮೆಂಟ್‌ಗಳ ಬೆಲೆ ಹೆಚ್ಚಾಗಲು `ಫ್ಲೋರ್ ಏರಿಯಾ ರೇಷಿಯೊ' (ಎಫ್‌ಎಆರ್) ಬಹು ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಉದ್ದ-ಅಗಲಗಳಲ್ಲಿ ಬೆಳೆಯಬೇಕಾದ ನಗರ ಮೇಲ್ಮುಖವಾಗಿ ದಿಗಂತದತ್ತ ಮುಖ ಮಾಡಿದೆ.ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದ್ದು, 10 ಸಾವಿರ ಚದರ ಅಡಿ ಜಾಗದಲ್ಲಿ 25ರಿಂದ 30 ಸಾವಿರ ಚದರ ಅಡಿ ಮನೆಗಳನ್ನು ನಿರ್ಮಿಸಬಹುದು. ಆದರೆ, ಮೈಸೂರಿನಲ್ಲಿ ಪಾರಂಪರಿಕ ನಗರ ಎಂಬ ಹಣೆಪಟ್ಟಿಯಿಂದಾಗಿ 10ರಿಂದ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ.ಬೆಂಗಳೂರಿನಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ 50 ಮನೆ ನಿರ್ಮಿಸಿದರೆ, ಮೈಸೂರಿನಲ್ಲಿ 25 ಮನೆಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಬೆಂಗಳೂರಿಗೆ ಹೋಲಿಸಿದರೆ ಮೈಸೂರಿನಲ್ಲಿ ಅಪಾರ್ಟ್‌ಮೆಂಟ್‌ಗಳ ಬೆಲೆ ಸ್ವಲ್ಪ ಹೆಚ್ಚಾಗಿದೆ. `ಮೈಸೂರಿನಲ್ಲಿ ಒಂದು ನಿವೇಶನ ಖರೀದಿಸುವ ಬೆಲೆಯಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ 2 ಬೆಡ್ ರೂಂನ ಫ್ಲ್ಯಾಟ್ ಖರೀದಿಸಬಹುದು. ಹೀಗಾಗಿ ಮೈಸೂರಿನಲ್ಲೂ ಈಗ ನಿವೇಶನಗಳ ಬದಲು ಅಪಾರ್ಟ್‌ಮೆಂಟ್ ಖರೀದಿಸುವವ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸುರಕ್ಷತೆ ದೃಷ್ಟಿಯಿಂದ ಹಿರಿಯ ನಾಗರಿಕರು ಅಪಾರ್ಟ್‌ಮೆಂಟ್‌ಗಳ ಮೊರೆ ಹೋಗುತ್ತಿದ್ದಾರೆ' ಎನ್ನುತ್ತಾರೆ `ಎಫ್‌ಎನ್ ಇನ್‌ಫ್ರಾಸ್ಟ್ರಕ್ಚರ್'  ನಿರ್ದೇಶಕ ಎ.ವಿ.ಶ್ರೀಧರ್.`ಅಪಾರ್ಟ್‌ಮೆಂಟ್‌ನಲ್ಲಿ ಭದ್ರತೆ'

`ಅಪಾರ್ಟ್‌ಮೆಂಟ್‌ಗಳಲ್ಲಿ ಭದ್ರತೆ ಇರುತ್ತದೆ. ಮಕ್ಕಳಿಗೆ ನೆರೆ ಹೊರೆಯಲ್ಲೇ ಸ್ನೇಹಿತರು ಸಿಗುತ್ತಾರೆ. ಮನೆಯ ಯಾವುದೇ ದುರಸ್ತಿ ಕೆಲಸಗಳ ಬಗ್ಗೆ ತಲೆ ಬಿಸಿ ಇರುವುದಿಲ್ಲ. ನೀರು, ವಿದ್ಯುತ್ ಸಮಸ್ಯೆ ಇರುವುದಿಲ್ಲ. ಶಾಲೆ-ಕಾಲೇಜು, ಕಚೇರಿ, ಮಾರುಕಟ್ಟೆಗೆ ದೂರ ಹೋಗಬೇಕಾಗಿಲ್ಲ. ಅಕ್ಕಪಕ್ಕದವರು ಚೆನ್ನಾಗಿದ್ದರೆ ಅಪಾರ್ಟ್‌ಮೆಂಟ್ ಜೀವನ ಚೆನ್ನಾಗಿರುತ್ತದೆ. ನಾವಿರುವ ಅಪಾರ್ಟ್‌ಮೆಂಟ್‌ನಲ್ಲಿ 10 ಮನೆಗಳಿವೆ. ಎಲ್ಲರೂ ಅನ್ಯೋನ್ಯವಾಗಿದ್ದೇವೆ. ಕೂಡು ಕುಟುಂಬದ ಹಾಗೆ ಇದ್ದೇವೆ. ಮನೆ ಕಳವು ಪ್ರಕರಣಗಳ ಭಯವೂ ಇಲ್ಲ. ನಗರ ಹೊರವಲಯದಲ್ಲಿ ಸ್ವಂತ ಮನೆ ಕಟ್ಟಿದರೆ ಇಷ್ಟು ಸೌಲಭ್ಯಗಳು ಸಿಗುವುದಿಲ್ಲ'.

-ಕೃಷ್ಣ ವಿ.ಪ್ರಸಾದ್, ವಿ.ವಿ.ಮೊಹಲ್ಲಾ ನಿವಾಸಿಸುರಕ್ಷತೆ ಕಾರಣ ಬೇಡಿಕೆ ಹೆಚ್ಚು

ಹಿರಿಯ ನಾಗರಿಕರು ಹಾಗೂ ಯುವ ದಂಪತಿ ಹೆಚ್ಚಾಗಿ ಅಪಾರ್ಟ್‌ಮೆಂಟ್‌ಗಳಲ್ಲಿಯೇ ಮನೆ ಹೊಂದಲು ಬಯಸುತ್ತಾರೆ. ಸುರಕ್ಷತೆ ದೃಷ್ಟಿಯಿಂದಲೂ ಇದು ಅನುಕೂಲ. ನಿವೇಶನಗಳ ಬೆಲೆಯೂ ದಿನೇ ದಿನೇ ಹೆಚ್ಚುತ್ತಿದೆ. ನಗರ ಹೊರ ವಲಯದಲ್ಲಿ 30್ಡ40 ನಿವೇಶನ ಖರೀದಿಸಿ, ಮನೆ ಕಟ್ಟುವ ಬೆಲೆಯಲ್ಲಿ ನಗರದ ಹೃದಯ ಭಾಗದ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಬೆಡ್ ರೂಂನ ಫ್ಲ್ಯಾಟ್ ಖರೀದಿಸಬಹುದು.ಅಲ್ಲದೇ, ಶಾಲೆ, ಕಚೇರಿ, ಮಾರುಕಟ್ಟೆ, ಆಸ್ಪತ್ರೆಗೆ ಹೋಗಲು ಅನುಕೂಲವಾಗುತ್ತದೆ. ಅಪಾರ್ಟ್‌ಮೆಂಟ್‌ನಲ್ಲಿ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿ ಇರುವುದರಿಂದ ಪರ ಊರುಗಳಿಗೆ ನೆಮ್ಮದಿಯಿಂದ ತೆರಳಬಹುದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲೂ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

-ಜಗದೀಶ್ ಬಾಬು, ಮಾಜಿ ಅಧ್ಯಕ್ಷ,  ಕ್ರೆಡೈ ಮೈಸೂರುಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry