ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿದ ತಂಡ

7

ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿದ ತಂಡ

Published:
Updated:

ಬೆಂಗಳೂರು: ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಅಧ್ಯಕ್ಷರೂ ಆದ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಧ್ರುವ ವಿಜಯ್ ಸಿಂಗ್ ನೇತೃತ್ವದ ತಂಡ ಗುರುವಾರ ರಾತ್ರಿ ನಗರಕ್ಕೆ ಆಗಮಿಸಿತು. ತಜ್ಞರ ಮತ್ತೊಂದು ತಂಡ ಬೆಳಿಗ್ಗೆಯೇ ನಗರಕ್ಕೆ ಬಂದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದೆ.ತಮಿಳುನಾಡು ಸರ್ಕಾರದ ಸಭೆ ಮುಗಿಸಿಕೊಂಡು ಚೆನ್ನೈನಿಂದ ರಾತ್ರಿ 7ಕ್ಕೆ ಬಂದ ಸಿಂಗ್ ಅವರು ಶುಕ್ರವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಮತ್ತಿತರ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.ರಾಜ್ಯ ಸರ್ಕಾರದ ಅಭಿಪ್ರಾಯ ಸಂಗ್ರಹಿಸುವ ಸಿಂಗ್ ಅವರು ಸಭೆ ನಂತರ ದೆಹಲಿಗೆ ತೆರಳಲಿದ್ದಾರೆ. ಅವರು ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೂಡ ಆಗಿದ್ದಾರೆ.ಕೊಯಮತ್ತೂರಿನಲ್ಲಿರುವ ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಮಹೇಂದ್ರನ್ ಕೂಡ ನಾಳಿನ ಸಭೆಯಲ್ಲಿ ಹಾಜರಿರುತ್ತಾರೆ.ಇವರಲ್ಲದೆ, ನಾಲ್ಕು ಮಂದಿ ತಜ್ಞರ ತಂಡ ನಗರಕ್ಕೆ ಬಂದಿದ್ದು, ಅದು ಜಲಾನಯನ ಪ್ರದೇಶದಲ್ಲಿ ಪ್ರವಾಸ ಮಾಡಲಿದೆ. ಕೇಂದ್ರ ಜಲ ಆಯೋಗದ ನಿರ್ದೇಶಕ ಪಿ.ಪಿ.ಪಾಂಡೆ, ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಟಿ.ಎಸ್.ಜೇಕಬ್, ಸೂಪರಿಂಟೆಂಡೆಂಟ್ ಎಂಜಿನಿಯರ್ ರಂಗಾರೆಡ್ಡಿ ಮತ್ತು ಕೇಂದ್ರ ಕೃಷಿ ಸಚಿವಾಲಯದ ಉಪ ಆಯುಕ್ತ (ಬೆಳೆ) ಡಾ.ಪ್ರದೀಪ್‌ಕುಮಾರ್ ಷಾ ತಂಡದಲ್ಲಿರುವ ಅಧಿಕಾರಿಗಳು.ಇವರ ಪೈಕಿ ಜೇಕಬ್ ಮತ್ತು ರಂಗಾರೆಡ್ಡಿ ಅವರು ತುಮಕೂರು ಜಿಲ್ಲೆಯಲ್ಲಿ ಗುರುವಾರ ಪ್ರವಾಸ ಮಾಡಿದ್ದು, ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿದ್ದಾರೆ. ಶುಕ್ರವಾರ ಮತ್ತು ಶನಿವಾರ ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ತಂಡದ ಸದಸ್ಯರು ಬೆಳಗ್ಗೆ 11 ಗಂಟೆಗೆ ಮದ್ದೂರಿಗೆ ಆಗಮಿಸಿ, ನಂತರ ಕ್ಷೇತ್ರ ವೀಕ್ಷಣೆ ಮಾಡಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಭೇಟಿ ನೀಡುವರು. ಹೇಮಗಿರಿ, ಮಂದಗೆರೆ ಹಾಗೂ ಹೇಮಾವತಿ ಎಡದಂಡೆ ನಾಲೆಗಳನ್ನೂ ತಂಡವು ವೀಕ್ಷಿಸಲಿದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಸಾದಿಕ್ ತಿಳಿಸಿದ್ದಾರೆ.ಕಾವೇರಿ ಉಸ್ತುವಾರಿ ಸಮಿತಿ ಇದೇ 8ರ ಬದಲು 11ರಂದು ದೆಹಲಿಯಲ್ಲಿ ಸಭೆ ಸೇರಲಿದೆ. ಆ ವೇಳೆಗೆ ಎರಡೂ ರಾಜ್ಯಗಳಲ್ಲಿನ ವಸ್ತುಸ್ಥಿತಿ ವರದಿಯನ್ನು ತಜ್ಞರ ತಂಡ ನೀಡಲಿದೆ.ಶೆಟ್ಟರ್: ಕೇಂದ್ರ ತಂಡದ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ರಾತ್ರಿ `ಕೃಷ್ಣಾ~ದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಕಾವೇರಿ ನದಿ ಪ್ರಾಧಿಕಾರದ ಸಭೆ ನಂತರ ಎಲ್ಲ ಬೆಳವಣಿಗೆಗಳನ್ನು ಕೇಂದ್ರ ತಂಡಕ್ಕೆ ನೀಡಲು ಶೆಟ್ಟರ್ ಸಲಹೆ ನೀಡಿದ್ದಾರೆ.

 

ಕೇಂದ್ರ ತಂಡಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದಿರುವ ಕಾರಣ ಕೇಂದ್ರ ಅಧ್ಯಯನ ತಂಡ ರಸ್ತೆ ಮಾರ್ಗದ ಬದಲಿಗೆ ವಾಯು ಮಾರ್ಗದ ಮೂಲಕ ಸಮೀಕ್ಷೆ ನಡೆಸಲಿದೆ.ರಾಜ್ಯ ಸರ್ಕಾರದ ಸಲಹೆ ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ. ಎರಡು ಹೆಲಿಕಾಪ್ಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಯನ್ನು ಹೆಲಿಕಾಪ್ಟರ್ ಮೂಲಕವೇ ತಜ್ಞರ ತಂಡ ಪರಿಶೀಲಿಸಲಿದೆ. ಹಾಗೆಯೇ ಕಬಿನಿಗೆ ತೆರಳುವ ತಂಡ ಅಲ್ಲಿ ರಸ್ತೆ ಮೂಲಕ ಅಣೆಕಟ್ಟೆ ಬಳಿ ಹೋಗಿ ನೀರಿನ ಸಂಗ್ರಹವನ್ನು ವೀಕ್ಷಿಸಲಿದೆ. ಬಳಿಕ ರೈತರ ಜಮೀನುಗಳಿಗೂ ಭೇಟಿ ನೀಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಶನಿವಾರ, ಹೇಮಾವತಿ ಮತ್ತು ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿನ ಬೆಳೆಗಳನ್ನು ವೀಕ್ಷಿಸಲಿದೆ. ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ತಜ್ಞರ ತಂಡಕ್ಕೆ ಬಿಗಿ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry