ವಸ್ತುಸ್ಥಿತಿ ಮನದಟ್ಟು

7

ವಸ್ತುಸ್ಥಿತಿ ಮನದಟ್ಟು

Published:
Updated:

ಬೆಂಗಳೂರು: ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಕಾವೇರಿ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಧ್ರುವ ವಿಜಯ್ ಸಿಂಗ್ ಅವರಿಗೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ವಸ್ತುಸ್ಥಿತಿ ಬಗ್ಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಶುಕ್ರವಾರ ಮನದಟ್ಟು ಮಾಡಿದರು.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಅಭಿವೃದ್ಧಿ ಆಯುಕ್ತ ಕೌಶಿಕ್ ಮುಖರ್ಜಿ ಮತ್ತು ತಾಂತ್ರಿಕ ಸಲಹೆಗಾರ (ನೀರಾವರಿ) ಮನು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.`ಕಾವೇರಿ ಜಲಾನಯನ ಪ್ರದೇಶದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲೆ ಕೊನೆ ಭಾಗದ ರೈತರಿಗೆ ಇನ್ನೂ ನೀರು ತಲುಪಿಲ್ಲ. ಇಂತಹ ಸಂದರ್ಭದಲ್ಲಿ ಈ ತಿಂಗಳ 15ರವರೆಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಟ್ಟರೆ ರಾಜ್ಯದ ರೈತರ ಸ್ಥಿತಿ ಮತ್ತಷ್ಟು ಚಿಂತಾಜನಕ ಆಗಲಿದೆ. ಬೆಳೆದು ನಿಂತ ಬೆಳೆ ಒಣಗಲಿದೆ. ಹೀಗಾಗಿ ನೀರು ಬಿಡಬೇಕು ಎನ್ನುವ ಆದೇಶಕ್ಕೆ ತಡೆ ನೀಡುವಂತೆ ಕಾವೇರಿ ನದಿ ಪ್ರಾಧಿಕಾರಕ್ಕೆ ಸಲಹೆ ನೀಡಬೇಕು~ ಎಂದು ಅಧಿಕಾರಿಗಳು ಮನವಿ ಮಾಡಿದರು.`ಮೇ ತಿಂಗಳವರೆಗೆ ನೀರಾವರಿಗೆ 116 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಜತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ಸಲುವಾಗಿ 15 ಟಿಎಂಸಿ ಅಡಿ, ಇತರ ನಗರ ಪ್ರದೇಶಗಳಿಗೆ 7.2 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈ ಬೇಡಿಕೆಯನ್ನು ಲಭ್ಯ 64 ಟಿಎಂಸಿ ಅಡಿ ನೀರಿನಿಂದ ಪೂರೈಸಲು ಸಾಧ್ಯ ಇಲ್ಲ. ಹೀಗಾಗಿ ನೀರು ಬಿಡುವುದು ಕಷ್ಟಸಾಧ್ಯ~ ಎಂದು ರಾಜ್ಯದ ಅಧಿಕಾರಿಗಳು ವಿವರಿಸಿದರು ಎನ್ನಲಾಗಿದೆ.ಒಳಹರಿವು: `
2002ರ ನಂತರ ಈ ಸಲವೇ ಸಂಕಷ್ಟ ಸ್ಥಿತಿ ಎದುರಾಗಿರುವುದು. ಒಳಹರಿವು ಹೆಚ್ಚಿದ್ದರೆ ನೀರು ಬಿಡುವುದಕ್ಕೆ ಯಾವ ಅಭ್ಯಂತರವೂ ಇರಲಿಲ್ಲ. ಒಳಹರಿವು ಬಹುತೇಕ ನಿಂತು ಹೋಗಿದೆ. ಇಷ್ಟಕ್ಕೂ ತಮಿಳುನಾಡು ಮುಂದಿನ ಬೆಳೆಗೆ ಈಗಲೇ ನೀರು ಶೇಖರಣೆ ಮಾಡುತ್ತಿದೆ. ಆದರೆ, ನಮ್ಮಲ್ಲಿ ಈಗಿರುವ ಬೆಳೆಗೇ ನೀರು ಸಾಕಾಗುತ್ತಿಲ್ಲ. ತಮಿಳುನಾಡಿನಲ್ಲಿ ಈಶಾನ್ಯ ಮಾರುತದ ಮಳೆ ಅಕ್ಟೋಬರ್‌ನಲ್ಲಿ ಬರಲಿದೆ. ಅದರ ಅನುಕೂಲ ಕರ್ನಾಟಕಕ್ಕೆ ಹೆಚ್ಚು ಆಗುವುದಿಲ್ಲ. ಮಳೆಯಾದರೂ ಅಣೆಕಟ್ಟೆಗಳಿಂದ ಕೆಳ ಭಾಗದಲ್ಲಿ ಆಗುತ್ತದೆ. ಆ ನೀರು ಕೂಡ ತಮಿಳುನಾಡಿಗೇ ಹರಿದು ಹೋಗುತ್ತದೆ~ ಎಂದು ರಾಜ್ಯದ ಅಧಿಕಾರಿಗಳು ವಿವರಿಸಿದರು ಎಂದು ಗೊತ್ತಾಗಿದೆ.ನೀರು ಬಿಡುವುದು ಕಷ್ಟ ಎಂಬುದಕ್ಕೆ ಪೂರಕವಾಗಿ ಅಧಿಕಾರಿಗಳು ಅಂಕಿ-ಸಂಖ್ಯೆಗಳನ್ನು ನೀಡುವಾಗ ಧ್ರುವ ಸಿಂಗ್ ಅವರು, `ತಮಿಳುನಾಡು ಸರ್ಕಾರದ ಅಧಿಕಾರಿಗಳು ಕೂಡ ಅವರದೇ ಸಮಸ್ಯೆಗಳನ್ನು ಹೇಳಿದ್ದಾರೆ.  ಎಲ್ಲವನ್ನೂ ಅಧ್ಯಯನ ಮಾಡಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು~ ಎನ್ನುವ ಭರವಸೆಯನ್ನು ನೀಡಿದರು ಎನ್ನಲಾಗಿದೆ.ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಾಚಾರಿ, ಸಣ್ಣ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ (ದಕ್ಷಿಣ) ಸಿ.ಎಸ್. ಜಯಚಂದ್ರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಸಿಎಂ ಭೇಟಿ: ಧ್ರುವ ಸಿಂಗ್ ದೆಹಲಿಗೆ ವಾಪಸಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಮುಖ್ಯ ಕಾರ್ಯದರ್ಶಿಯವರು ಈ ಭೇಟಿಗೆ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೂ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದರು ಎನ್ನಲಾಗಿದೆ.ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸ್ಥಿತಿ ಎದುರಾಗಿದೆ. ರಾಜ್ಯದ ರೈತರನ್ನು ಉಳಿಸುವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry