ಭಾನುವಾರ, ಜೂನ್ 20, 2021
23 °C

ವಸ್ತು ಖರೀದಿ ವೇಳೆ ಎಚ್ಚರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಬೇಕಾದರೆ ಶಿಕ್ಷಣದ ಅವಶ್ಯಕತೆಯಿದೆ. ಶಿಕ್ಷಣವಿಲ್ಲದಿದ್ದರೆ ಗ್ರಾಹಕರಿಗೆ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಪರಿಜ್ಞಾನ ಮೂಡಲು ಸಾಧ್ಯವಾಗದು~ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಬಿ.ಎ. ಹರೀಶ್‌ಗೌಡ ಗುರುವಾರ ಇಲ್ಲಿ ಹೇಳಿದರು.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ನಗರದ ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದಲ್ಲಿ ಏರ್ಪಡಿಸಿದ್ದ `ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ-2012~ ಉದ್ಘಾಟಿಸಿ ಅವರು ಮಾತನಾಡಿದರು.`ಕಾನೂನುಬಾಹಿರವಾಗಿ ಜಾಹೀರಾತುಗಳ ಮೂಲಕ ಮಾರಾಟ ಮಾಡುತ್ತಿರುವ ಔಷಧಿಗಳನ್ನು ಸೇವಿಸದೆ, ವೈದ್ಯರು ಶಿಫಾರಸು ಮಾಡುವ ಔಷಧಿಗಳನ್ನು ಮಾತ್ರ ಸೇವಿಸಿದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ, ಇಂತಹ ಕಾನೂನುಬಾಹಿರ ಔಷಧಿಗಳ ಮಾರಾಟದ ಬಗ್ಗೆ ಔಷಧ ನಿಯಂತ್ರಣ ಇಲಾಖೆಗೆ ದೂರು ಸಲ್ಲಿಸಬಹುದು~ ಎಂದು ಮನವಿ ಮಾಡಿದರು.`ಇತ್ತೀಚೆಗೆ ಟೀ ಪುಡಿಗೆ ಬೇರೆ ಎಲೆಯ ಪುಡಿಯನ್ನು ಕಲಬೆರಕೆ ಮಾಡುತ್ತಿರುವುದಲ್ಲದೆ ಬಣ್ಣ ಬರಲು ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಐ.ಎಸ್.ಐ. ಚಿಹ್ನೆ ಹೊಂದಿರುವ ಪದಾರ್ಥಗಳನ್ನು ಮಾತ್ರ ಖರೀದಿಸಬೇಕು~ ಎಂದು ಸಲಹೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತ ಡಾ.ಕೆ.ಎಚ್. ಗೋವಿಂದರಾಜ್, `ನಮ್ಮ ಹಣ, ನಮ್ಮ ಹಕ್ಕು~ ಎಂಬ ಈ ವರ್ಷದ ಗ್ರಾಹಕ ಹಕ್ಕುಗಳ ದಿನಾಚರಣೆಯ ಘೋಷ ವಾಕ್ಯದಂತೆ ತಮ್ಮ ಹಣ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಗ್ರಾಹಕರ ಜವಾಬ್ದಾರಿಯಾಗಿದೆ ಎಂದರು.ಆಹಾರ, ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಜಿ.ಜಗದೀಶ್, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕ ಜಿ.ಎಸ್. ನಾಯಕ್ ಉಪಸ್ಥಿತರಿದ್ದರು. ಜಂಟಿ ನಿರ್ದೇಶಕಿ ಸುಜಾತಾ ಡಿ.ಪ್ರಸನ್ನ ಸ್ವಾಗತಿಸಿದರು.ಸಮಾರಂಭದಲ್ಲಿ ಗ್ರಾಹಕ ಹಕ್ಕುಗಳ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.