ವಸ್ತು ಸಂಗ್ರಹಾಲಯಕ್ಕೆ ಹೊಸ ಹೊಳಪು

7

ವಸ್ತು ಸಂಗ್ರಹಾಲಯಕ್ಕೆ ಹೊಸ ಹೊಳಪು

Published:
Updated:
ವಸ್ತು ಸಂಗ್ರಹಾಲಯಕ್ಕೆ ಹೊಸ ಹೊಳಪು

ಮಡಿಕೇರಿ: ಇತಿಹಾಸ ಕೆಣಕುವವರಿಗೆ ಹಾಗೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವ ನಗರದ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಹೊಸ ಸ್ಪರ್ಷ ನೀಡುವ ಕಾರ್ಯ ಭರದಿಂದ ಸಾಗಿದ್ದು, 15-20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ನವವಧುವಿನಂತೆ ರೂಪುಗೊಳ್ಳಲಿದೆ.ಸಂಗ್ರಹಾಲಯದ ಈ ಕಟ್ಟಡವು ಕೂಡ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸುಮಾರು 150 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ರೋಮನ್ ಗೋಥಿಕ್ ಶೈಲಿಯ ಚರ್ಚ್ ಇದ್ದಾಗಿತ್ತು. ಪ್ರವೇಶ ದ್ವಾರದ ಮೇಲೆ ಎತ್ತರದ ಕಮಾನು, ವಿಶಾಲ ಸಭಾಂಗಣ ಹಾಗೂ ಪಾರದರ್ಶಕ, ಬಣ್ಣಬಣ್ಣದ ಗಾಜಿನ ಕಿಡಕಿಗಳು ಆಕರ್ಷಣೀಯವಾಗಿವೆ.ಇಂತಹ ವಿಶಿಷ್ಟವಾದ ಕಟ್ಟಡ ಇತ್ತೀಚಿನ ವರ್ಷಗಳಲ್ಲಿ ಶಿಥಿಲಗೊಂಡಿತ್ತು. ಮಳೆಗಾಲದಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ಕಟ್ಟಡದ ಒಳಗೆ ನೀರು ಜಿನುಗುಟ್ಟುತ್ತಿತ್ತು. ಗೋಡೆಗಳು ಸಹ ನಿತ್ರಾಣಗೊಂಡಿದ್ದವು. ಇದನ್ನು ಗಮನಿಸಿದ  ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆಯು ಕಟ್ಟಡದ ಪುನರುಜ್ಜೀವನಕ್ಕೆ ಮುಂದಾಗಿದೆ.ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ಕೊಡುವುದರಿಂದ ಕಟ್ಟಡದ ಸುರಕ್ಷತೆ ಬಗ್ಗೆ ವಿಶೇಷ ಗಮನ ಹರಿಸಿ, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ವಸ್ತು ಸಂಗ್ರಹಾಯಲದ ಕ್ಯೂರೇಟರ್ ರೇಖಾ ಪ್ರತಿಕ್ರಿಯೆ ನೀಡಿದರು.ಐತಿಹಾಸಿಕ ಜಿಲ್ಲೆ: ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿರುವ ಕೊಡಗು ಜಿಲ್ಲೆಯು ಐತಿಹಾಸಿಕವಾಗಿಯೂ ಸಾಕಷ್ಟು ಅವಶೇಷಗಳನ್ನು ಹೊಂದಿದೆ. ಕೊಡಗುವನ್ನು ಆಡಳಿದ ವಿವಿಧ ರಾಜ ವಂಶಸ್ಥರ ಕುರುಹುಗಳು, ವಿವಿಧ ಜನಾಂಗಗಳ ಕಲೆ, ಪ್ರಾಚೀನ ಶಿಲ್ಪಗಳು, ಸ್ಮಾರಕಗಳು, ಶಾಸನಗಳ ಪಡಿಯಚ್ಚುಗಳು ಜಿಲ್ಲೆಯಲ್ಲಿ ಲಭ್ಯ ಇವೆ.ಇವುಗಳನ್ನು ಸಂರಕ್ಷಿಸಿ ಇಡುವ ದೃಷ್ಟಿಯಿಂದ 1971ರಲ್ಲಿ ಈ ಕಟ್ಟಡದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಆರಂಭಿಸಲಾಯಿತು. ಇಲ್ಲಿ ಜೈನ ತೀರ್ಥಂಕರರ ಕಲ್ಲಿನ ಶಿಲ್ಪಗಳು, ಕಂಚಿನ ವಿಗ್ರಹಗಳು, ಹಿಂದೂ ಸಂಪ್ರದಾಯದ ಕಲ್ಲಿನ ಬಿಂಬಗಳು, ದೊರೆ ರಾಜೇಂದ್ರನ ಕಾಲದ ಒಡಿಕತ್ತಿಗಳು ಮತ್ತು ಕಳೆದ ಶತಮಾನಕ್ಕೆ ಸೇರಿದ ಕೋವಿಗಳು, ಯುದ್ಧಗತ್ತಿಗಳು, ಜಾನಪದ ಕಂಚಿನ ವಿಗ್ರಹಗಳು ಮತ್ತು ವೀರಗಲ್ಲುಗಳು ಹಾಗೂ ದಿವಂಗತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಕೆಲವು ಅಪರೂಪದ ವಸ್ತುಗಳು ಈ ಸಂಗ್ರಹಾಲಯದಲ್ಲಿ ಭದ್ರವಾಗಿವೆ.ಕ್ರಿ.ಶ. 12ರಿಂದ 15ನೇ ಶತಮಾನದ ಹಿಂದೂ ದೇವತೆಯರ, ಜೈನ ತೀರ್ಥಂಕರರ, ಜಾನಪದೀಯ ಶಿಲ್ಪಗಳು, ವೀರಗಲ್ಲುಗಳು ಇಲ್ಲಿ ಲಭ್ಯಇವೆ. ಉಮಾಮಹೇಶ ಮೂರ್ತಿ, ಕಾಳಿ ಹಾಗೂ ನೇಪಾಳದ್ದು ಎನ್ನಲಾದ ಶಿವಪಾವರ್ತಿಯರ ಕಂಚಿನ ವಿಗ್ರಹಗಳಿವೆ.ಆಯುಧಗಳ ಆಕರ್ಷಣೆ

ಕೊಡಗಿನ ವೈಶಿಷ್ಟ್ಯಪೂರ್ಣ ಆಯುಧಗಳಾದ ಒಡಿಕತ್ತಿ ಹಾಗೂ ಪೀಚೆಕತ್ತಿಗಳು ಇಲ್ಲಿವೆ. ಇವುಗಳ ಮೇಲೆ  `ವಿ' ಎಂಬ ಅಕ್ಷರ ಇರುವುದು ಇನ್ನೂ ವಿಶೇಷ. ಉದ್ದನೆಯ ಖಡ್ಗಗಳು, ಹುಲಿ ಮುಖದ ವಿನ್ಯಾಸ ಹೊಂದಿರುವ ಖಡ್ಗದ ಹಿಡಿ ಹಾಗೂ ಅದರ ಮೇಲೆ ಶ್ರೀ ಗಣೇಶ ಎಂದು ದೇವನಾಗರಿ ಲಿಪಿಯಲ್ಲಿ ಕೊರೆದ ಬರಹವಿದೆ.ಚೂರಿಗಳು, ಜಮಾದಾರ್, ಬಿಳಿ ಲೋಹದ ಕತ್ತಿಗಳು, ಒಂದು ಹಾಗೂ ಎರಡು ಕೊಳವೆ ಹೊಂದಿರುವ ಕೋವಿಗಳು, ಪಿಸ್ತೂಲ್‌ಗಳು, ವಿವಿಧ ವಿನ್ಯಾಸದ ಫಿರಂಗಿಗಳು, ಉಕ್ಕಿನ ಗುಂಡುಗಳು ಇವೆ. ಕಂಚಿನ ಫಿರಂಗಿ ಅತ್ಯಂತ ಗಮನಾರ್ಹವಾದುದು.`ವಸ್ತು ಸಂಗ್ರಹಾಲಯ ಸಂಪರ್ಕಿಸಿ'

ನಮ್ಮ ನಾಡಿನ ಇತಿಹಾಸವನ್ನು ಅರ್ಥೈಸಲು ಐತಿಹಾಸಿಕ ವಸ್ತುಗಳನ್ನು ಸಂರಕ್ಷಿಸಿಡಬೇಕಾಗಿದೆ. ಜಿಲ್ಲೆಯ ಇನ್ನೂ ಹಲವು ಭಾಗಗಳಲ್ಲಿ ಐತಿಹಾಸಿಕ ವೀರಗಲ್ಲು, ಶಿಲ್ಪಗಳು, ಕಲಾಕೃತಿಗಳು ಭೂಗರ್ಭದಲ್ಲಿ ಅಡಗಿರುವ ಸಾಧ್ಯತೆ ಇದೆ. ಇವುಗಳ ಬಗ್ಗೆ ಗಮನಕ್ಕೆ ಬಂದರೆ ಸಾರ್ವಜನಿಕರು ತಕ್ಷಣ ಈ ವಸ್ತುಸಂಗ್ರಹಾಲಯವನ್ನು ದೂರವಾಣಿ ಸಂಖ್ಯೆ 08272- 225674 ಮೂಲಕ ಸಂಪರ್ಕಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry