ವಸ್ತ್ರವಿನ್ಯಾಸಕರ ದ ಡೆಬ್ಯೂ

7

ವಸ್ತ್ರವಿನ್ಯಾಸಕರ ದ ಡೆಬ್ಯೂ

Published:
Updated:
ವಸ್ತ್ರವಿನ್ಯಾಸಕರ ದ ಡೆಬ್ಯೂ

ರೂಪದರ್ಶಿಯರು ರ‌್ಯಾಂಪ್ ಮೇಲೆ ಹೆಜ್ಜೆ ಇಡಲೇ ಬೇಡವೆ ಎಂಬಂತೆ ಹೆಜ್ಜೆ ಹಾಕುತ್ತಿದ್ದರು. ರ‌್ಯಾಂಪ್ ಕೊನೆಗೆ ಬಂದಾಗ ತಮ್ಮದೇ ಸ್ಟ್ಯಾಂಪ್ ಒತ್ತುವಂತೆ ಕ್ಯಾಮೆರಾಕ್ಕೆ ಮುಖಮಾಡಿ ನಿಲ್ಲುತ್ತಿದ್ದರು. ಆ ಕ್ಷಣ ಅಲ್ಲಿದ್ದ 17 ಜನ ವಸ್ತ್ರ ವಿನ್ಯಾಸಕರ ಎದೆಯ ಲಬ್‌ಡಬ್ ಬಡಿತವೇ ಹಿನ್ನೆಲೆಯ ಸಂಗೀತದೊಂದಿಗೆ ಸ್ಪರ್ಧಿಸುವಂತಿತ್ತು.ಅದು ವಿಲ್ಸ್ ಲೈಫ್ ಸ್ಟೈಲ್ ಪ್ರಸ್ತುತ ಪಡಿಸುವ `ದ ಡೆಬ್ಯೂ~ ಫ್ಯಾಶನ್ ಸ್ಪರ್ಧೆ.

ವಸ್ತ್ರ ವಿನ್ಯಾಸ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಒಂದು ವೇದಿಕೆಯನ್ನು ಒದಗಿಸಲು ಕಳೆದ 5 ವರ್ಷಗಳಿಂದ ವಿಲ್ಸ್ ಲೈಫ್‌ಸ್ಟೈಲ್ ಈ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಪರ್ಲ್ ಅಕಾಡೆಮಿ ಆಫ್ ಫ್ಯಾಷನ್, ನಾರ್ತರ್ನ್ ಇಂಡಿಯಾ ಆಫ್ ಫ್ಯಾಶನ್ ಟೆಕ್ನಾಲಜಿ, ಅಮಿತಿ ಸ್ಕೂಲ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ 300 ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಪ್ರವೇಶ ಪಡೆದಿದ್ದರು.ಅವರ ಪೋರ್ಟ್‌ಫೋಲಿಯೊಗಳನ್ನು ಪರಿಶೀಲಿಸಿ 31 ಜನರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಫ್ಯಾಶನ್ ಡಿಸೈನಿಂಗ್‌ನಲ್ಲಿ ಮಹತ್ವದ ಹೆಸರು ಪಡೆದಿರುವ ದೀಪಿಕಾ ಗೋವಿಂದ್ ಹಾಗೂ ರಾಜ್ ಶ್ರಾಫ್ ನೋಡುತ್ತಿದ್ದರೆ ಸ್ಪರ್ಧಿಗಳ ಎದೆಬಡಿತ ಹೆಚ್ಚುತ್ತಿತ್ತು.ದೀಪಿಕಾ ಗೋವಿಂದ್ ಹಾಗೂ ರಾಜ್‌ಶ್ರಾಫ್ ಇಬ್ಬರನ್ನೂ ಒಟ್ಟಿಗೆ ನೋಡುತ್ತಿರುವುದೇ ಖುಷಿ ತಂದಿದೆ ಎಂದು ಸ್ಪರ್ಧಿಗಳು ಹೇಳಿಕೊಂಡರು. ಇವರೆಲ್ಲ ಮೊದಲಿಗೆ ತಮ್ಮ ಚಿತ್ರ ಆಧಾರಿತ ವಿನ್ಯಾಸಗಳನ್ನು ಪರಿಶೀಲನೆಗೆ ನೀಡಿದ್ದರು. ನಂತರ ಅವರಲ್ಲಿ 17 ಜನರ ವಿನ್ಯಾಸಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.ಜನ ಜೀವನಕ್ಕೆ ಸಮೀಪದ ವಿನ್ಯಾಸಗಳನ್ನು ಆಯ್ಕೆಗೊಳಿಸಲಾಯಿತು. ತಂತ್ರಜ್ಞಾನದ ಬಳಕೆ, ವಸ್ತ್ರದ ವಿಧ, ವೈವಿಧ್ಯಮಯ ವಸ್ತ್ರಗಳ ಅಳವಡಿಕೆ ಮುಂತಾದ ಅಂಶಗಳನ್ನೂ ಪರಿಗಣಿಸಲಾಯಿತು. ಪ್ರತಿಯೊಂದು ವಿನ್ಯಾಸಕ್ಕೂ ಬಳಸಲಾಗಿರುವ ವಸ್ತ್ರವೈವಿಧ್ಯವನ್ನೂ ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಲಾಯಿತು.  ಹದಿನೇಳು ಜನರಲ್ಲಿ ನವದೆಹಲಿಯ ಆಶೀಶ್ ಢಾಕಾ ವಿಜೇತರಾದರು. ಕಪ್ಪು ಬಿಳುಪು ವರ್ಣದ ವಿನ್ಯಾಸವನ್ನು ಇವರು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಿದ್ದರು. ಇದಲ್ಲದೇ ಬಾಟಿಕ್ ಪ್ರಿಂಟ್‌ನ ಜ್ಯಾಕೆಟ್ ಗಾಢವರ್ಣದ ಟಾಪ್ ಹಾಗೂ ಟ್ರೌಶರನ್ನು ಆಶೀಶ್ ಸಿದ್ಧಪಡಿಸಿದ್ದರು. ಅವರ ಪರಿಕಲ್ಪನೆಗೂ, ವಿನ್ಯಾಸಕ್ಕೂ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ. ಕಂಪ್ಯೂಟರ್‌ನ ಸಹಾಯದಿಂದ ಇವನ್ನು ಸಿದ್ಧಪಡಿಸಿದ್ದರು. ಜನವರಿ ತಿಂಗಳಿನಲ್ಲಿ ವಿನ್ಯಾಸಗೊಳಿಸಿದ್ದನ್ನು ಉಡುಗೆಯಾಗಿ ಬದಲಿಸಬೇಕಿತ್ತು. ಪರ್ಲ್ ಫ್ಯಾಶನ್ ಅಕಾಡೆಮಿಯ ವಿದ್ಯಾರ್ಥಿ ಆಶೀಶ್ ಢಾಕಾಗೆ ಇದೇ ಮೊದಲ ಸ್ಪರ್ಧೆಯಾದ್ದರಿಂದ ಆತಂಕವೂ ಇತ್ತು. ಆದರೆ ಮೂರು ವರ್ಷಗಳ ಕಲಿಕೆ ಆತ್ಮವಿಶ್ವಾಸವನ್ನೂ ನೀಡಿತ್ತು ಎನ್ನುತ್ತಾರೆ ಆಶೀಶ್. ದೀಪಿಕಾ ಗೋವಿಂದ್‌ಗೆ ಆಶೀಶ್ ವಿನ್ಯಾಸಗಳು ಸರಳವೂ ಟ್ರೆಂಡಿಯೂ ಆಗಿರುವುದರಿಂದ ಹಾಗೂಭಾರತೀಯ ಜವಳಿಯನ್ನೇ ಹೆಚ್ಚಾಗಿ ಬಳಸಿರುವುದು ಇಷ್ಟವಾಯಿತು ಎಂದು ಆಶೀಶ್ ಸಂಭ್ರಮ ಪಡುತ್ತಾರೆ.ಪ್ರತಿವರ್ಷವೂ ಏರ್ಪಡಿಸಲಾಗುವ ಈ ಸ್ಪರ್ಧೆಯಿಂದಾಗಿ ಹೊಸ ವಸ್ತ್ರವಿನ್ಯಾಸಕರಿಗೆ ವಿದ್ಯಾರ್ಥಿ ದೆಸೆಯಿಂದಲೇ ಒಂದು ವೇದಿಕೆ ದೊರೆತಂತೆ ಆಗುತ್ತದೆ. ಅವರ ಭವಿಷ್ಯ ನಿರ್ಮಾಣವಾದಂತೆಯೂ ಆಗುತ್ತದೆ. ಹಾಗೂ ಮಾರುಕಟ್ಟೆಯಲ್ಲಿ ಹೊಸತನದ ವಿನ್ಯಾಸಗಳನ್ನು ಪರಿಚಯಿಸಿದಂತೆಯೂ ಆಗುತ್ತದೆ. ಈ ನಿಟ್ಟಿನಲ್ಲಿ `ದ ಡೆಬ್ಯೂ~ ಮಹತ್ವದ ಸ್ಪರ್ಧೆಯಾಗುತ್ತಲಿದೆ ಎಂದು ಐಟಿಸಿಯ ಲೈಫ್‌ಸ್ಟೈಲ್ ವಾಣಿಜ್ಯ ವಿಭಾಗದ ವಿಭಾಗೀಯ ಮುಖ್ಯಸ್ಥ ಅತುಲ್ ಚಂದ್ ಅಭಿಪ್ರಾಯ ಪಟ್ಟಿದ್ದಾರೆ.ಮಾರ್ಚ್ 1ರಂದು ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಸೃಜನಶೀಲ ವಿನ್ಯಾಸ, ತಾಂತ್ರಿಕತೆ, ವಾಣಿಜ್ಯದ ದೃಷ್ಟಿಯಿಂದ ಆ ವಿನ್ಯಾಸದ ಉಳಿವು ಮುಂತಾದವುಗಳನ್ನು ಮಾನ್ಯ ಮಾಡಲಾಗುತ್ತದೆ.`ದ ಡೆಬುಟ್~ ವಿಜೇತರಿಗೆ ಅಂತರ ರಾಷ್ಟ್ರೀಯ ಫ್ಯಾಶನ್ ಫೇರ್‌ಗೆ ಹೋಗಿ ಬರುವ ವೆಚ್ಚವನ್ನು ಭರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಲೈಫ್ ಸ್ಟೈಲ್ ಏರ್ಪಡಿಸಲಿರುವ ಇಂಡಿಯಾ ಫ್ಯಾಶನ್ ವೀಕ್‌ನಲ್ಲಿ ಗೌರವಿಸಲಾಗುತ್ತದೆ. .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry