ವಸ್ತ್ರಸಂಹಿತೆ ಎಂಬ ಮುಗಿಯದ ವಿವಾದ

7

ವಸ್ತ್ರಸಂಹಿತೆ ಎಂಬ ಮುಗಿಯದ ವಿವಾದ

Published:
Updated:
ವಸ್ತ್ರಸಂಹಿತೆ ಎಂಬ ಮುಗಿಯದ ವಿವಾದ

ಮರ್ಯಾದಾ ಹತ್ಯೆಗಳಿಗೆ ಕಾರಣವಾಗುತ್ತಿರುವ ಖಾಪ್ ಪಂಚಾಯ್ತಿ ಹಾಗೂ ಹೆಣ್ಣುಭ್ರೂಣ ಹತ್ಯೆಗಳಿಂದಾಗಿ ಗಂಡು-ಹೆಣ್ಣುಗಳ ಅನುಪಾತದಲ್ಲಿನ ತೀವ್ರ ಕುಸಿತದ ವಿದ್ಯಮಾನಗಳಿಗೆ ಹರಿಯಾಣ ಕುಖ್ಯಾತಿ ಪಡೆದಿದೆ. ಪುರುಷ ಪ್ರಾಬಲ್ಯದ ಸಂಸ್ಕೃತಿಯನ್ನು ಧ್ವನಿಸಲು ಇಷ್ಟು ಸಾಲದೆಂಬಂತೆ ಈಗ ಅಲ್ಲಿ ಹೊರಡಿಸಿರುವ `ಉಡುಪು ಸಂಹಿತೆ~ಯ ಆದೇಶ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.

 

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ರೇಣು ಎಸ್ ಫೂಲಿಯಾ (ಮೇ 4 ರ ನಂತರ ಕರ್ನಾಲ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ) ಅವರ ಪರವಾಗಿ ಏಪ್ರಿಲ್18ರಂದು ಹೊರಡಿಸಲಾದ ಸುತ್ತೋಲೆ, ಜೀನ್ಸ್ ಹಾಗೂ ಟಿ-ಷರ್ಟ್ ಧರಿಸಿ ಕಚೇರಿಗೆ ಬರುವುದನ್ನು ಇಲಾಖೆ ಸಿಬ್ಬಂದಿಗೆ ನಿಷೇಧಿಸಿದೆ. ಸಭ್ಯ ಉಡುಪುಗಳನ್ನು ಧರಿಸಲು ಈ ಸುತ್ತೋಲೆ ಸಲಹೆ ನೀಡಿದೆ.ಸಭ್ಯ ಉಡುಪು ಎಂದರೆ ಮಹಿಳೆಯರಿಗೆ `ಸೀರೆ/ ದುಪ್ಪಟ್ಟಾ ಇರುವ ಸಲ್ವಾರ್ ಕಮೀಜ್. ಪುರುಷರಿಗೆ ಪ್ಯಾಂಟ್-ಷರ್ಟ್. ವಿಪರ್ಯಾಸ ಎಂದರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಿಂದ ಹಿಡಿದು ಹಣಕಾಸು ಕಮಿಷನರ್, ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರವರೆಗೆ ಎಲ್ಲರೂ ಮಹಿಳೆಯರೇ. ತಾಲಿಬಾನೀಕರಣ ಸಂಸ್ಕೃತಿಯನ್ನು ಧ್ವನಿಸುವ ಈ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕೆಂದು ಹರಿಯಾಣದ ಪ್ರಮುಖ ಪ್ರತಿಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ್ (ಐಎಎಲ್‌ಡಿ) ಒತ್ತಡ ಹೇರಿರುವ ಸಂದರ್ಭದಲ್ಲೇ ಹರಿಯಾಣ ಸರ್ಕಾರ ಈ ಸುತ್ತೋಲೆಯನ್ನು ಸಮರ್ಥಿಸಿಕೊಂಡಿದೆ. `ಸಭ್ಯ~ ಹಾಗೂ `ಅಸಭ್ಯ~ ಎಂಬ ಪದಗಳ ಕುರಿತಂತೆ ಇಲಾಖೆ ನೌಕರರಿಗೆ ಆಕ್ಷೇಪವೇನಾದರೂ ಇದ್ದಲ್ಲಿ ಆ ಪದಗಳನ್ನಷ್ಟೇ ಕೈಬಿಡಲಾಗುವುದು. ಆದರೆ ಆದೇಶವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸಾಮಾಜಿಕ ನ್ಯಾಯ, ಸಬಲೀಕರಣ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಗೀತಾ ಭುಕ್ಕಲ್ ಸ್ಪಷ್ಟಪಡಿಸಿದ್ದಾರೆ.ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಹಾಗೂ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್)ಗಳಲ್ಲಿ, ಇಲಾಖೆಯ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತ್ದ್ದಿದು ಅವರಲ್ಲಿ ಹೆಚ್ಚಿನವರು ಮಹಿಳೆಯರೇ.ಈ ಆದೇಶ ಸಹಜವಾಗಿಯೇ ಅವರಲ್ಲಿ ಅಸಮಾಧಾನ ಮೂಡಿಸಿದೆ. `ಮಹಿಳೆಯರ ಸ್ಥಾನಮಾನ ರಕ್ಷಣೆಗಾಗಿ ದುಡಿಯುವ ಮಹಿಳೆಯರು ನಾವು. ಆದರೆ ಡ್ರೆಸ್‌ಕೋಡ್‌ನ ಈ ಆದೇಶ ಹಾಸ್ಯಾಸ್ಪದ. ನಮ್ಮ ಇಷ್ಟದ ಉಡುಪಿನ ಆಯ್ಕೆಗೂ ಇಲಾಖೆ ನಮಗೆ ಅವಕಾಶ ನೀಡುತ್ತಿಲ್ಲ~ ಎಂಬುದು ಅನೇಕ ನೌಕರರ ಅಳಲು.ಹೆಣ್ಣುಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ಲಂಗ ದಾವಣಿ, ನಂತರ ಸೀರೆ ಉಡಲೇಬೇಕೆಂಬ ನಿರ್ಬಂಧಗಳನ್ನು ಕುಟುಂಬಗಳಲ್ಲಿ ಹಿಂದೆಲ್ಲಾ ಹೇರಲಾಗುತ್ತಿತ್ತು. ಇಂತಹ ನಿರ್ಬಂಧಗಳನ್ನು ಈಗ ಸಾರ್ವಜನಿಕವಾಗಿ ಹೇರಲಾಗುತ್ತಿರುವುದು ಇತ್ತೀಚಿನ ದಶಕಗಳ ಬೆಳವಣಿಗೆ. ವಿಶೇಷವೆಂದರೆ `ಉಡುಪು ಸಂಹಿತೆ~ ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನೇ ಉದ್ದೇಶಿಸಿರುತ್ತದೆ.ವಿದ್ಯಾರ್ಥಿನಿಯರು `ಪ್ರಚೋದನಾತ್ಮಕ ಪಾಶ್ಚಿಮಾತ್ಯ ಉಡುಪು~ ಧರಿಸಬಾರದೆಂಬ ಆದೇಶವನ್ನು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಜಾರಿಗೊಳಿಸಿರುವುದೂ ಈಗ ಸುದ್ದಿಯಲ್ಲಿದೆ. ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಟೆನ್ನಿಸ್ ಆಡುವಾಗ ಧರಿಸುತ್ತಿದ್ದ ಉಡುಪು ಈ ಹಿಂದೆ ವಿವಾದದ ಬಿಂದುವಾಗಿತ್ತು.

 

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿನ ಪ್ರೌಢಶಾಲೆ ಶಿಕ್ಷಕಿ ತಾಂದ್ರಾ ಬರ್ಮನ್‌ರಿಗೆ `ಸೀರೆ ಉಡುವುದು ಕಡ್ಡಾಯ~ಎಂದು ಶಾಲಾ ಆಡಳಿತ ಸಮಿತಿ ಇತ್ತೀಚೆಗೆ ತಾಕೀತು ಮಾಡಿತ್ತು. ಆದರೆ ಎಲ್ಲದಕ್ಕೂ ಎಡಗೈಯನ್ನೇ ಬಳಸುವ ತಮಗೆ ಬೋರ್ಡ್ ಮೇಲೆ ಬರೆಯಲು ಹಾಗೂ ನಿತ್ಯದ ಬಸ್ ಪ್ರಯಾಣಕ್ಕೆ ಸೀರೆ ಆರಾಮದಾಯಕವಲ್ಲ ಎಂದು ಬರ್ಮನ್ ಪಟ್ಟುಹಿಡಿದಿದ್ದರು.

 

ಈ ನಿಟ್ಟಿನಲ್ಲಿ, ಬರ್ಮನ್‌ರನ್ನು ಬೆಂಬಲಿಸಿದ ಜಿಲ್ಲಾ ಶಾಲಾ ಇನ್‌ಸ್ಪೆಕ್ಟರ್ ಈ ಕುರಿತ ದೂರು ವಾಪಸ್ ತೆಗೆದುಕೊಳ್ಳಲು ಶಾಲಾ ಪ್ರಿನ್ಸಿಪಾಲರಿಗೆ ಕಿವಿಮಾತು ಹೇಳಿದ್ದು ವಿಶೇಷ. `ಹೈಕೋರ್ಟ್ ತೀರ್ಪಿನ ಪ್ರಕಾರ, ಇಂತಹದೇ ಉಡುಪು ತೊಡಬೇಕೆಂಬ ನಿರ್ಬಂಧ ಹೇರಲಾಗದು~ ಎಂದು ಅವರು ಈ ಶಿಕ್ಷಕಿಯ ನಿಲುವನ್ನು ಸಮರ್ಥಿಸಿಕೊಂಡ್ದ್ದಿದಾರೆ. ಮಹಿಳೆಯರ ವೇಷಭೂಷಣ ಯಾವಾಗಲೂ ಏಕೆ ಚರ್ಚೆಯ ವಸ್ತುವಾಗುತ್ತದೆ ಎಂಬುದೇ ಪ್ರಶ್ನೆ. ಸೂಕ್ತ ಉಡುಪು ಧರಿಸಬೇಕೆಂದು ಮಹಿಳೆಗೇ ಹೆಚ್ಚು ಏಕೆ ಹೇಳಲಾಗುತ್ತದೆ?

`ಸೂಕ್ತವಾಗಿ ಉಡುಪು ತೊಡುವುದು~ ಎಂದರೆ ಅಂಗಾಂಗಗಳನ್ನು ಪ್ರದರ್ಶಿಸದಿರುವುದು.ಇಲ್ಲಿರುವುದು ಲೈಂಗಿಕ ಆಕರ್ಷಣೆಯ ಭೀತಿ. ಇದು ಬದುಕಿನ ರೀತಿನೀತಿ, ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿಬಿಡಬಹುದೆಂಬ ಆತಂಕ ಪುರುಷ ಪ್ರಧಾನ ಸಂಸ್ಕೃತಿಯ ಆಳದಲ್ಲಿದೆ. ವಿಧವೆಯರಿಗೆ ವಿಧಿಸಲಾಗುತ್ತಿದ್ದ ಉಡುಪಿನ ನಿರ್ಬಂಧಗಳೂ ಇದಕ್ಕೆ ಉದಾಹರಣೆ. ಸಂಸ್ಕೃತಿಯ ಹೆಸರಲ್ಲಿ ಹೆಣ್ಣನ್ನು ನಿಯಂತ್ರಿಸುವ ಈ ಮನಃಸ್ಥಿತಿ ಜಗತ್ತಿನ ಅನೇಕ ಕಡೆ ಒಂದಲ್ಲ ಒಂದು ವಿಧದಲ್ಲಿ ವ್ಯಕ್ತವಾಗುತ್ತಲೇ ಇದೆ.ಇರಾನಿನಲ್ಲಿ ಈಗ ಸರಿಯಾದ ಉಡುಪು ಧರಿಸದ ಮಹಿಳೆಯರ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆ, ಬೇಸಿಗೆಗೆ ಹಾಯೆನಿಸುವ ಚಿಕ್ಕ ಕೋಟ್‌ಗಳು ಅಥವಾ ಹಗುರವಾದ ಬಟ್ಟೆಗಳನ್ನು ಧರಿಸಲು ಇರಾನ್ ಮಹಿಳೆಯರು ಬಯಸುತ್ತಾರೆ. ತಲೆಯನ್ನು ಮುಚ್ಚುವ ವಸ್ತ್ರ (ಹಿಜಾಬ್) ಚಿಕ್ಕದಾಗುತ್ತದೆ.ಇದರಿಂದ ಸಾಮಾನ್ಯವಾಗಿ ಕಾಣುವುದಕ್ಕಿಂತ ಹೆಚ್ಚಿನ ಕೇಶ ಗೋಚರವಾಗುತ್ತದೆ. ಆದರೆ ಇದನ್ನು `1981ರ ಇಸ್ಲಾಮಿಕ್ ಉಡುಪು ಕಾನೂನಿನ ಉಲ್ಲಂಘನೆ~ ಎಂದು ಭಾವಿಸಿ ಇದಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಇರಾನ್‌ನಲ್ಲಿ ತಲೆಗೂದಲನ್ನು ಲೈಂಗಿಕ ಆಕರ್ಷಣೆಯ ಕೇಂದ್ರವಾಗಿ ಪರಿಗಣಿಸುವುದರಿಂದ ಅಲ್ಲಿನ ಮಹಿಳೆಯರು ಕೂದಲನ್ನು ಪೂರ್ತಿ ಮುಚ್ಚಿಕೊಳ್ಳಲೇಬೇಕು.ದೇಹದ ಉಬ್ಬುತಗ್ಗುಗಳನ್ನು ಮರೆಯಾಗಿಸಲು ಉದ್ದದ ಸಡಿಲವಾದ ಉಡುಪುಗಳನ್ನೇ ತೊಡಬೇಕು. ಕೈ ಮತ್ತು ಮುಖ ಬಿಟ್ಟು ತಲೆಯಿಂದ ಕಾಲ್ಬೆರಳಿನವರೆಗೆ ದೇಹವನ್ನು ಇಡಿಯಾಗಿ ಮುಚ್ಚುವ ಕಪ್ಪು ಬಣ್ಣದ `ಚಡರ್~ ಅನ್ನು ಅಲ್ಲಿ ಆದರ್ಶ ಉಡುಪು ಎಂದು ಪರಿಗಣಿಸಲಾಗಿದೆ. ಸಡಿಲವಾದ  ಈ `ಚಡರ್~ಅನ್ನೇ ಹೆಚ್ಚಿನ ಸಾಂಪ್ರದಾಯಿಕ ಮುಸ್ಲಿಂ ಮಹಿಳೆಯರು  ಧರಿಸುತ್ತಾರೆ.  ಟೆಹರಾನ್ ಪೊಲೀಸ್ ಮುಖ್ಯಸ್ಥ ಹೊಸೀನ್ ಸಜೆಡೀನಿಯಾ ಹೇಳುವಂತೆ  `ಕೆಟ್ಟ ತಲೆವಸ್ತ್ರ. ಕೆಟ್ಟ ಉಡುಪು ಹಾಗೂ ಅಶ್ಲೀಲ ಬಟ್ಟೆ ತೊಟ್ಟ ಮಾಡೆಲ್ ಥರಹದ ಮಹಿಳೆ~ಯರ ವಿರುದ್ಧ ಕ್ರಮ ಜರುಗಿಸಲು `ನೈತಿಕ ಪೊಲೀಸರು~ ಸನ್ನದ್ಧರಾಗಿ ಬೀದಿಬೀದಿಗಳ್ಲ್ಲಲ್ಲಿ ನಿಂತಿರುತ್ತಾರೆ. `ಕಡಿಮೆ ಬಟ್ಟೆ~ ತೊಟ್ಟಿದ್ದಾರೆಂದರೆ ಆ ಮಹಿಳೆಯಲ್ಲಿನ `ನೈತಿಕತೆ ಕಡಿಮೆ~ ಎಂದು ಅಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಇದರಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಇರಾನ್‌ನಲ್ಲಿ ಬಂಧನಕ್ಕೊಳಗಾಗಿ ದಂಡ ತೆರುವುದು ಮಾಮೂಲಾಗಿದೆ. ಹೀಗಾಗಿ ಸೂಕ್ತವಲ್ಲದ ಉಡುಪು ಆಮದು ಮಾಡುವವರು ಹಾಗೂ ಬಟ್ಟೆ ತಯಾರಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಕಳೆದ ತಿಂಗಳು ಸಜೆಡೀನಿಯಾ ಹೇಳಿದ್ದಾರೆ.ಮೂರು ದಶಕಗಳ ಹಿಂದೆ, ಮಹಿಳೆಯ ದೇಹ ಕುರಿತ ಪರಿಕಲ್ಪನೆಗಳನ್ನೆಲ್ಲಾ ಒಡೆದು ಹೊಸ ಚಿಂತನೆಗಳನ್ನು ಮೂಡಿಸುವಂತಹ ಒಂದು ಪುಸ್ತಕವನ್ನು  ಬಾಸ್ಟನ್‌ನ `ಹೆಲ್ತ್ ಕಲೆಕ್ಟಿವ್~ ಪ್ರಕಟಿಸಿತ್ತು. `ಅವರ್ ಬಾಡೀಸ್,    ಅವರ್‌ಸೆಲ್ವ್ಸ್~ ಎಂಬುದು ಈ ಪುಸ್ತಕದ ಶೀರ್ಷಿಕೆ. ತನ್ನ ದೇಹದೊಂದಿಗೆ ಮಹಿಳೆಗಿರುವ ಸಂಬಂಧವನ್ನು ಈ ಪುಸ್ತಕ ಪುನರ್‌ವ್ಯಾಖ್ಯಾನಿಸಿತ್ತು.`ನಮ್ಮ ದೇಹದೊಂದಿಗೆ ನಮ್ಮ ಭಾವನೆಗಳು ನಕಾರಾತ್ಮಕವಾದದ್ದು....ನಾವಿರುವ ರೀತಿಯ ಬಗ್ಗೆ ನಮಗೆ ಸರಿ ಎನಿಸುವುದೇ ಇಲ್ಲ. ಒಂದು ಬಗೆಯ ಅಹಿತ ಭಾವ, ಕೊರತೆಯನ್ನು ಅನುಭವಿಸುತ್ತೇವೆ......ನಮ್ಮ ದೇಹ ನಮ್ಮದಲ್ಲವೇನೊ ಎಂದು ಭಾವಿಸುವಂತೆ ನಮಗೆ ಉತ್ತೇಜನ ನೀಡಲಾಗುತ್ತದೆ~. ಆದರೆ ಮಹಿಳೆಯರು ತಾವಿರುವಂತಹ ರೀತಿಯ ಬಗ್ಗೆ ಸಕಾರಾತ್ಮಕ ಭಾವವನ್ನು ಹೇಗೆ ತಾಳಬೇಕು ಎಂಬ ವಾದಗಳನ್ನು ಈ ಪುಸ್ತಕದಲ್ಲಿ ಮಂಡಿಸಲಾಗಿತ್ತು. ಈಗಲೂ, ದೇಹದ ಕುರಿತಾಗಿ ಕೀಳರಿಮೆಯ ಭಾವವನ್ನು ಹೆಣ್ಣಿನಲ್ಲಿ ಮೂಡಿಸುವುದೂ ಅವಳನ್ನು ನಿಯಂತ್ರಿಸುವ ಒಂದು ಕ್ರಮ. ಉಡುಪಿನ ಚರ್ಚೆಗಳು ಹೆಣ್ಣಿನಲ್ಲಿ ಆ ಕೀಳರಿಮೆಯ ಭಾವವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೆಣ್ಣುಮಕ್ಕಳು ಜೀನ್ಸ್ ಹಾಗೂ ಮಿನಿ ಸ್ಕರ್ಟ್ ಧರಿಸುವುದರ ವಿರುದ್ಧ 2005ರಲ್ಲಿ ಶಿವಸೇನೆಯ ಮುಖವಾಣಿ `ಸಾಮ್ನಾ~ದಲ್ಲಿ ಎಚ್ಚರಿಕೆ ನೀಡಲಾಗಿತ್ತು.ಲೈಂಗಿಕ ದುರ್ವರ್ತನೆಗಳ ಹೆಚ್ಚಳ ಪ್ರಕರಣಗಳಿಗೆ ಪ್ರಚೋದನಕಾರಿ ವೇಷಭೂಷಣವೇ ಕಾರಣ ಎಂದೂ ಅದು ಹೇಳಿತ್ತು. `ಅಂತಹ ಬಟ್ಟೆಗಳಿಂದ ಆತ ಪ್ರಚೋದಿತನಾದರೆ ಆತನನ್ನು ದೂಷಿಸುವುದು ಎಷ್ಟು ಸರಿ?~ ಎಂಬಂತಹ ಆಘಾತಕಾರಿ ಪ್ರಶ್ನೆಯನ್ನು ಅದು ಮುಂದಿಟ್ಟಿತ್ತು.ಸರಿಯಾಗಿ ಬಟ್ಟೆ ಧರಿಸಿರದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದಲ್ಲಿ ಪುರುಷರನ್ನು ದೂಷಿಸಲಾಗುವುದಿಲ್ಲ ಎಂಬಂತಹ ತರ್ಕ ಈಗಲೂ ಮುಂದುವರಿದಿದೆ. ಈ ತರ್ಕಗಳನ್ನು ಜವಾಬ್ದಾರಿಯುತ ಹುದ್ದೆಗಳಲ್ಲಿರುವ ಉನ್ನತ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ಶಿಕ್ಷಣ ತಜ್ಞರುಗಳೇ ಮಂಡಿಸುತ್ತಾ ಹೋಗುತ್ತಿರುವುದು ಮಾತ್ರ ಆತಂಕಕಾರಿ.

 

ಈ ಸಾಂಸ್ಕೃತಿಕ ಪೂರ್ವಗ್ರಹಗಳ ಬಿಡುಗಡೆ ಈ ಶತಮಾನದಲ್ಲಿ ಸಾಧ್ಯವಿಲ್ಲವೇನೊ ಎಂಬಂತಹ ಅಸಹಾಯಕತನ, ಮಹಿಳೆಯ ಅಭದ್ರತೆಯನ್ನು ಸಮಾಜದಲ್ಲಿ ಹೆಚ್ಚಿಸುತ್ತಲೇ ಸಾಗಿದೆ.ಮಹಿಳೆಯರು ತಲೆಯ ಮೇಲೆ ಯಾವ ವಸ್ತ್ರ ಧರಿಸಬೇಕು ಅಥವಾ ಧರಿಸಬಾರದು ಎಂಬುದರ ಕುರಿತಾಗಿ ರೂಪಿಸಲಾಗಿರುವ ಯೂರೋಪಿಯನ್ ಕಾನೂನುಗಳು ಮುಸ್ಲಿಮರು ಹಾಗೂ ಶತಶತಮಾನಗಳಿಂದ ಯೂರೋಪಿನ ಭಾಗವಾಗಿಯೇ ಇದ್ದ ಈ ಧರ್ಮದ ವಿರುದ್ಧ ತಾರತಮ್ಯಕ್ಕೆ ಉತ್ತೇಜನ ನೀಡಿದಂತಾಗುತ್ತಿದೆ ಎಂದು ಈ ಮಧ್ಯೆ ಅಂತರರಾಷ್ಟ್ರೀಯ ಕ್ಷಮಾದಾನ ಸಂಸ್ಥೆ ಅಭಿಪ್ರಾಯಪಟ್ಟಿದೆ.ಕಣ್ಣುಗಳಿಗೆ ಮಾತ್ರ ಸಣ್ಣ ಕಿಂಡಿ ಬಿಟ್ಟಿರುವಂತಹ ಮುಖದ ಪರದೆ `ನಿಕಾಬ್~ ಹಾಗೂ ಕಣ್ಣುಗಳ ಭಾಗದಲ್ಲಿ ರಂಧ್ರಗಳ ಜಾಲರಿ ಇರುವ ಬುರ್ಕಾ ಧರಿಸುವಂತಹ ಯೂರೋಪಿಯನ್ ಮುಸ್ಲಿಮರ ಪ್ರಮಾಣ ಅತಿ ಕಡಿಮೆ.ಇದನ್ನು ಬಹಿಷ್ಕರಿಸುವುದು, ಇಸ್ಲಾಮಿಕ್ ವೇಷಭೂಷಣ ಧರಿಸಿದವರನ್ನೆಲ್ಲಾ ಗುಮಾನಿಯಿಂದ ಕಾಣುವಂತಹ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಕ್ಷಮಾದಾನ ಸಂಸ್ಥೆಯ ವರದಿ ಅಭಿಪ್ರಾಯಪಟ್ಟಿದೆ.

 

ಬುರ್ಖಾ ವಿರೋಧಿ ಚಳವಳಿ ಯೂರೋಪಿನಲ್ಲಿ ಈಗ ವ್ಯಾಪಕವಾಗಿದೆ. ಫ್ರಾನ್ಸ್‌ನಲ್ಲಿ 2010ರ ಏಪ್ರಿಲ್‌ನಿಂದಲೇ ಮುಖ ಪರದೆ ಬಹಿಷ್ಕರಿಸಿರುವ ಕಾನೂನು ಜಾರಿಯಾಗಿದೆ.ಬೆಲ್ಜಿಯಂ, ಇಟಲಿ, ಸ್ಪೇನ್, ನೆದರ್‌ಲೆಂಡ್, ಸ್ಕ್ಯಾಂಡಿನೇವಿಯ ಹಾಗೂ ಜರ್ಮನಿಯಂತಹ ರಾಷ್ಟ್ರಗಳಲ್ಲೂ ಈ ಆಂದೋಲನ ಜಾರಿಯಲ್ಲಿದೆ. ಅನೇಕ ರಾಷ್ಟ್ರಗಳಲ್ಲಿ ನಿಷೇಧಗಳೂ ಜಾರಿಯಾಗಿವೆ. ನಮ್ಮದೇ ರಾಜ್ಯದ ಮಂಗಳೂರಿನ ಕಾಲೇಜುಗಳ್ಲ್ಲಲೂ ಬುರ್ಖಾ ಧರಿಸುವ ವಿಚಾರ ವಿವಾದವಾಗಿದ್ದುದನ್ನು ಸ್ಮರಿಸಬಹುದು.ಒಟ್ಟಾರೆ ಉಡುಪು ಸಂಹಿತೆಯ ಮೀಮಾಂಸೆ ಸಂಕೀರ್ಣವಾದುದು. ರಾಜಕಾರಣಿಗಳು ಹಾಗೂ ಜಾಗತೀಕರಣದ ನಂತರ ತಲೆ ಎತ್ತಿರುವ `ಸಂಸ್ಕೃತಿಯ ಪುನರುಜ್ಜೀವನ~ದ ವಕ್ತಾರರಿಗೆ, ತಮ್ಮ ತಮ್ಮ ರಾಜಕೀಯ ಸೂಚಿಗಳ ಪ್ರತಿಪಾದನೆಗೆ ಹೆಣ್ಣಿನ ಉಡುಪು ಸಾಧನವಾಗಿ ಬಳಕೆಯಾಗುತ್ತಿದೆ ಎಂಬುದು ಸ್ಪಷ್ಟ.ಈ ಎಲ್ಲಾ ರಾಜಕೀಯದಾಟಗಳಲ್ಲಿ ಮಹಿಳೆಯ ದನಿ ಅಡಗಿಹೋಗುತ್ತಿದೆ. ಜೊತೆಗೆ, ಮುಕ್ತತೆ, ಸ್ವಚ್ಛಂದತೆಯ ಪ್ರಭಾವ ಬೀರುತ್ತಿರುವ ಮಾರುಕಟ್ಟೆ ಶಕ್ತಿಗಳ ಹಿಡಿತದಲ್ಲಿ ಸಿಲುಕಿರುವ ಯುವಜನತೆ, ನೀತಿ-ಅನೀತಿಗಳ ಜಗ್ಗಾಟದಲ್ಲಿ ನಿಜವಾದ ಮೌಲ್ಯಗಳ ಬೆಳಕು ಕಾಣದೆ ಗೊಂದಲದಲ್ಲಿರುವುದೂ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry