ಶುಕ್ರವಾರ, ಏಪ್ರಿಲ್ 16, 2021
31 °C

ವಸ್ತ್ರ ಆಗುತ್ತಿದೆಯೇ ಸಂಸ್ಕೃತಿಯ ಅಸ್ತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರ ಉಡುಗೆ ತೊಡುಗೆ ವಿಚಾರ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಒಳಪಡುತ್ತಿದೆ. ಈ ಬಗ್ಗೆ ಪರ- ವಿರುದ್ಧ ನಿಲುವುಗಳು ಆಗಾಗ್ಗೆ ಕಾವೇರುತ್ತಲೇ ಇರುತ್ತವೆ. `ನಮಗಿಷ್ಟ ಬಂದ ವಸ್ತ್ರ ಧರಿಸಲು ನಮ್ಮನ್ನು ಬಿಡಿ~ ಎಂದು ಆಗ್ರಹಿಸುವ ಒಂದು ಬಣ `ಸ್ಲಟ್‌ವಾಕ್~ನಂತಹ ಮೆರವಣಿಗೆಗಳನ್ನು ನಡೆಸುತ್ತದೆ. ಅದೇ ಇನ್ನೊಂದು ಬಣ, ಮಹಿಳೆಯರು ಮೈಮಾಟ ಎದ್ದು ಕಾಣುವ ವಸ್ತ್ರ ಧರಿಸುವುದು ಪುರುಷರನ್ನು ಪ್ರೇರೇಪಿಸುತ್ತದೆ, ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತನ್ನಿ ಎಂದು ಒತ್ತಾಯಿಸುತ್ತದೆ. ಇಂತಹ ವಾದಗಳು ಏನೇ ಇರಲಿ ರಾಜ್ಯದ ಕೆಲ ಕಾಲೇಜುಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಈಗಾಗಲೇ ವಸ್ತ್ರಸಂಹಿತೆ ಜಾರಿಯಲ್ಲಿದೆ. ಬೆಂಗಳೂರಿನ ಒಂದು ಶಾಲೆಯಂತೂ ಮಕ್ಕಳನ್ನು ಬಿಡಲು ಬರುವ ಅಪ್ಪ ಅಮ್ಮಂದಿರಿಗೂ ವಸ್ತ್ರಸಂಹಿತೆ ಜಾರಿಗೆ ತರಲು ಮುಂದಾಗಿದೆ! ಇಂತಹ ಬೆಳವಣಿಗೆಗೆ ಇತ್ತೀಚಿನ ಸೇರ್ಪಡೆ ತಲಕಾವೇರಿ.

ಜೀನ್ಸ್, ಟಿ ಶರ್ಟ್, ಸ್ಲೀವ್‌ಲೆಸ್, ಸ್ಕರ್ಟ್ ತೊಟ್ಟು ಬರುವ ಮಹಿಳೆಯರನ್ನು ಪ್ರವೇಶ ದ್ವಾರದಲ್ಲೇ ತಡೆಯಲು ತಲಕಾವೇರಿ- ಭಗಂಡೇಶ್ವರ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ. ಹಾಗಿದ್ದರೆ, ಮೌಲ್ಯಗಳ ಸಂಘರ್ಷದಿಂದ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸ ಅರಿಯದೆ ಗೊಂದಲಕ್ಕೆ ಸಿಲುಕಿರುವ ಇಂದಿನ ತಲೆಮಾರಿಗೆ ನಿಜವಾಗಲೂ ಇಂತಹದ್ದೊಂದು ವಸ್ತ್ರಸಂಹಿತೆಯ ಅಗತ್ಯ ಇದೆಯೇ? ಇದ್ದರೂ ಅದು ಕೇವಲ ಮಹಿಳೆಯರಿಗಷ್ಟೇ ಸಾಕೇ? ಪುರುಷರನ್ನೂ ಒಳಗೊಳ್ಳಬೇಕೇ ಅಥವಾ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಇಂತಹ ನಿರ್ಧಾರಗಳಿಗೆ ಆರಂಭದಲ್ಲೇ ಪ್ರತಿರೋಧ ಒಡ್ಡಬೇಕೇ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟ `ಭೂಮಿಕಾ~ ಬಳಿ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಹಿಳೆಯರು ಧರಿಸುವ ಬಟ್ಟೆಗಳ ಬಗ್ಗೆ ಸಂಸ್ಕೃತಿಯ ನೆಪದಲ್ಲಿ ಅನವಶ್ಯಕ, ಆದರೆ ಉದ್ದೇಶಪೂರ್ವಕ ವಾದ-ವಿವಾದಗಳು ಏಳುತ್ತಲೇ ಇರುತ್ತವೆ. ಸದ್ಯದ ಸಂದರ್ಭದಲ್ಲಿ ಮಹಿಳೆಯರ ವಸ್ತ್ರಸಂಹಿತೆಯ ಹಿಂದೆ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೊರೇಟ್ ದಂಧೆಯ ವೈರುಧ್ಯಗಳಿವೆ. ಧರ್ಮಗಳು ಮಹಿಳೆಯರ ವೇಷ-ಭೂಷಣಗಳನ್ನು ವಿಧಿಬದ್ಧಗೊಳಿಸಿದರೆ, ವ್ಯಾಪಾರಿ ಲೋಕ ಹೆಣ್ಣಿನ ಅಂಗಾಂಗ ಬಂಡವಾಳ ಮಾಡಿಕೊಂಡು ಸ್ವೇಚ್ಛಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ. ಜಾಹೀರಾತುಗಳ ಮೂಲಕ ಆಕರ್ಷಣೆ ಸೃಷ್ಟಿಸಿ ತುಂಡುಡುಗೆಯೇ `ಮಾಡರ್ನಿಸಂ~ ಎಂದು ಬಿಂಬಿಸುತ್ತದೆ.ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅವರು ತೊಡುವ ಗ್ಲಾಮರ್ ಬಟ್ಟೆಯೇ ಕಾರಣ ಎಂಬುದು ಮಡಿವಂತರ ಹಳಸಲು ವಾದ. ಈ ದೇಶದಲ್ಲಿ ಪ್ರತಿ ಅರ್ಧ ಗಂಟೆಗೊಂದು ಅತ್ಯಾಚಾರ ಸಂಭವಿಸುತ್ತಿರುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅರವತ್ತು ವರ್ಷದ ವೃದ್ಧೆಯರೂ ಇದ್ದಾರೆ. ಸೀರೆ ತೊಟ್ಟ ಕೂಲಿ ಕಾರ್ಮಿಕರಾದಿಯಾಗಿ ಶರೀರದ ಒಂದಿಂಚೂ ಕಾಣಿಸದಂತೆ ಬುರ್ಖಾ ಧರಿಸಿದ ಸ್ತ್ರೀಯರೂ ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ. ತಲ್ಲಣದ ಸಂಗತಿ ಎಂದರೆ ಮನೋವೈಕಲ್ಯದ ಮಹಿಳೆಯರು ಸಹ ಲೈಂಗಿಕ ದೌರ್ಜನ್ಯಕ್ಕೆ ಸಿಲುಕುತ್ತಿದ್ದಾರೆ. ಗಮನಿಸಿ. ಇವರ‌್ಯಾರೂ ಮಿಡಿ, ಮಿನಿ ಸ್ಕರ್ಟ್ ತೊಟ್ಟವರಲ್ಲ. ಆದಾಗ್ಯೂ ಇಂಥವರು ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಏನಿದರ ಅರ್ಥ?ಸೀರೆ ಅಥವಾ ಮೈಮುಚ್ಚುವ ಬಟ್ಟೆ ಭಾರತೀಯ ಮಹಿಳೆಯರ ಸಂಸ್ಕೃತಿ ಎಂದು ಹೇರುವವರು ಪಂಚೆ, ಧೋತರ, ರುಮಾಲು, ಬಾರಾಕಸಿ ಅಂಗಿ, ಟೊಪ್ಪಿಗೆಯನ್ನು ಪುರುಷರ ಮೇಲೆ ಏಕೆ ಹೇರುವುದಿಲ್ಲ? ಸಂಸ್ಕೃತಿಯ ಗುತ್ತಿಗೆಯನ್ನೂ ಮಹಿಳೆಯ ಹೆಗಲಿಗೆ ಹೊರಿಸುವ ಹಿಂದಿನ ಹುನ್ನಾರ ಏನು? ಅಷ್ಟಕ್ಕೂ ಭವ್ಯ ಭಾರತದ ಪವಿತ್ರ ಧರ್ಮಗಳ ದಿವ್ಯ ಸಂಸ್ಕೃತಿ ಮಹಿಳೆಯರ ವಸ್ತ್ರಸಂಹಿತೆಯ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತದೆ? ಸ್ತ್ರೀಯರು ಅಂಗಾಂಗ ಪ್ರದರ್ಶನ ಮಾಡುವಂತೆ ಬಟ್ಟೆ ಧರಿಸಿದರೆ ಪುರುಷರು ಪ್ರಚೋದಿತರಾಗುತ್ತಾರೆ, ಇದಕ್ಕೆ ಹೆಣ್ಣೇ ಕಾರಣ ಎಂಬ ವಾದದಲ್ಲಿ ಹುರುಳಿಲ್ಲ. ಹನ್ನೆರಡನೇ ಶತಮಾನದಲ್ಲಿಯೇ ಅಕ್ಕ ಮಹಾದೇವಿ ಇದನ್ನು ಸ್ಪಷ್ಟಪಡಿಸುತ್ತಾಳೆ.ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ

ಗಂಡು ಗಂಡಾದಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದಡೆ

ತನುವಿನ ಸೂತಕಕ್ಕೆ ತೆರಹುಂಟೆ? 

ಅಯ್ಯೊ ಮೊದಲಿಲ್ಲದ ಸೂತಕಕ್ಕೆ ಮರುಳಾಯಿತು ಜಗವೆಲ್ಲಾ.ಅಕ್ಕ, ಇಲ್ಲಿ ತುಂಬಾ ಸ್ಪಷ್ಟವಾಗಿ `ಲೈಂಗಿಕ ದೌರ್ಜನ್ಯಕ್ಕೆ ಕಾರಣ ಅಂಗಾಂಗವಲ್ಲ, ಬಟ್ಟೆಯಂತೂ ಮೊದಲೇ ಅಲ್ಲ, ಪುರುಷರ ಮನಃಸ್ಥಿತಿಯೇ ಕಾರಣ. ಇದು ಮನದ ಸೂತಕವೇ ಹೊರತು ದೇಹದ ಸಮಸ್ಯೆಯಲ್ಲ~ ಎಂದಿದ್ದಾಳೆ. ಸ್ತ್ರೀಯರನ್ನು ನೋಡುವ ಸಮಾಜದ ದೃಷ್ಟಿ ಬದಲಾಗಬೇಕೇ ಹೊರತು ವಸ್ತ್ರಸಂಹಿತೆ ಹೇರುವುದಲ್ಲ.ಮಂಗಳೂರಿನಲ್ಲಿ ಭಿನ್ನ ಧರ್ಮೀಯ ಯುವಕ-ಯುವತಿಯರು ಪರಸ್ಪರ ಮಾತಾಡಿದರೆಂದು ಅಥವಾ ಪಬ್‌ಗಳಿಗೆ ಹೋದರೆಂದು, ಇದರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಯಿತೆಂದು ದಾಳಿ ಮಾಡಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಮಿಡಿ, ಮಿನಿ, ಜೀನ್ಸ್ ತೊಟ್ಟು ಹುಡುಗಿಯರು ಶಾಲಾ ಕಾಲೇಜಿಗೆ ಬರಬಾರದೆಂದು ಫರ್ಮಾನು ಹೊರಡಿಸಲಾಗಿದೆ. ಗುಲ್ಬರ್ಗದ ಪ್ರತಿಷ್ಠಿತ ಮಹಿಳಾ ಕಾಲೇಜುಗಳು ಮಹಿಳೆಯರು ಸೀರೆ ಮಾತ್ರ ಧರಿಸಬೇಕೆಂದು ಫತ್ವಾ ಹೊರಡಿಸುತ್ತವೆ. ವಿಚಿತ್ರವೆಂದರೆ ಇದೇ ವಕ್ತಾರರು ಇನ್ನೊಂದೆಡೆ ಮುಸ್ಲಿಂ ಹುಡುಗಿಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಬರಬಾರದೆಂದು ಬೊಬ್ಬೆ ಹಾಕುತ್ತಾರೆ.ಮೈತುಂಬ ಬಟ್ಟೆ ಉಟ್ಟವರಿಗೆ ಬಟ್ಟೆ ಕಳಚೆಂದು, ತುಂಡುಡುಗೆ ತೊಟ್ಟವರಿಗೆ ಮೈತುಂಬ ಬಟ್ಟೆ ಧರಿಸಿರೆಂದು ಒತ್ತಾಯಿಸಲಾಗುತ್ತದೆ. ಈ ದ್ವಂದ್ವಗಳ ಹಿಂದೆ ಲಿಂಗಭೇದ ನೀತಿ ಮತ್ತು ಧಾರ್ಮಿಕ ವೈಷಮ್ಯಗಳು ಅಡಗಿಕೊಂಡಿವೆ. ಶಾಲಾ ಕಾಲೇಜುಗಳಲ್ಲಿ ಹೇರುತ್ತಿರುವ ವಸ್ತ್ರಸಂಹಿತೆಯ ಹಿಂದೆ ಹಣ ಮಾಡುವ ದಂಧೆಯೇ ಇದೆ. ಬಟ್ಟೆ ಅಂಗಡಿ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಶಿಕ್ಷಣ ಸಂಸ್ಥೆಗಳೇ ಉಡುಪು ವಿತರಿಸುವ ಮೂಲಕ ಹಣ ಬಾಚುವುದು ಒಂದು ಉದ್ದೇಶವಾದರೆ, ಧಾರ್ಮಿಕ ಪಂಗಡಗಳ ಕಪಿಮುಷ್ಟಿ ಇನ್ನೊಂದೆಡೆ ಇದೆ. ಮಹಿಳೆಯರ ಅಂಗಾಂಗಗಳು ತೀಕ್ಷ್ಣವೂ, ಢಾಳಾಗೂ ಕಾಣಿಸುವಂತೆ ಸಿದ್ಧ ಉಡುಪು ತಯಾರಿಸುವ ಕಾರ್ಪೊರೇಟ್ ಸಂಸ್ಥೆಗಳಿಂದಲೇ ವಂತಿಗೆ ಪಡೆಯುವ ರಾಜಕಾರಣಿಗಳು ಮತ್ತು ಶಿಕ್ಷಣದ ದಲ್ಲಾಳಿಗಳೇ ಮಹಿಳೆಯರ ಮೇಲೆ ವಸ್ತ್ರಸಂಹಿತೆಯ ನಿರ್ಬಂಧ ಹೇರುತ್ತಾರೆ. ಇದು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಹುನ್ನಾರ ಅಲ್ಲವೇ? ಇದು ಮಹಿಳೆಯರ ಹಕ್ಕಿನ ಮೇಲೆ ದಾಳಿ ಮಾಡುವ ಷಡ್ಯಂತ್ರವೆಂಬುದನ್ನು ಅರಿತೇ ಸ್ತ್ರೀ ಪರ ಚಿಂತಕರು ಜಾಹೀರಾತಿಗೆ ಮಹಿಳೆಯ ಅಂಗಾಂಗ ಸರಕಾಗುವುದನ್ನು ವಿರೋಧಿಸುತ್ತಾರೆ.ವ್ಯಂಗ್ಯವೆಂದರೆ ವಿದ್ಯಾರ್ಥಿನಿಯರು ಎಂಥ ಬಟ್ಟೆ ಧರಿಸಬೇಕೆಂದು ತಲೆ ಕೆಡಿಸಿಕೊಳ್ಳುವ ಶೈಕ್ಷಣಿಕ ದಲ್ಲಾಳಿಗಳು ಮಹಿಳಾ ಶೌಚಾಲಯ, ವಿಶ್ರಾಂತಿ ಕೋಣೆ, ನಿರ್ಭೀತ ಕಲಿಕಾ ಪರಿಸರ ನಿರ್ಮಿಸುವುದರ ಬಗ್ಗೆ ಚಿಂತಿಸುವುದೇ ಇಲ್ಲ. ಮಹಿಳೆಯರು ವ್ಯಾಸಾಂಗ ಮಾಡುತ್ತಿರುವಲ್ಲಿ ಸ್ಯಾನಿಟರಿ ಪ್ಯಾಡುಗಳನ್ನು ಒದಗಿಸಬೇಕೆಂಬ ಆದೇಶವಿದೆ. ಇಂಥ ಕನಿಷ್ಠ ಅತ್ಯವಶ್ಯಕ ಸೌಲಭ್ಯ ನೀಡಲು ಬಯಸದ ಶಿಕ್ಷಣ ಸಂಸ್ಥೆಗಳು, ವಸ್ತ್ರಸಂಹಿತೆ ಕುರಿತು ಪೈಪೋಟಿಗಿಳಿದಂತೆ ಫತ್ವಾ ಹೊರಡಿಸುತ್ತವೆ. ವ್ಯಾಪಾರಿ ಲೋಕ ಮತ್ತು ಸನಾತನ ಶಕ್ತಿಗಳು ಒಂದಾಗಿ ಮಹಿಳೆಯರ ಹಕ್ಕಿನ ಮೇಲೆ ದಾಳಿ ಮಾಡುತ್ತಿವೆ ಎಂಬುದನ್ನು ಅರಿಯಬೇಕು. ಇವುಗಳು ವಸ್ತ್ರಸಂಹಿತೆಯ ಮೂಲಕ ಲಾಭವನ್ನೂ ಮಾಡಿಕೊಳ್ಳುತ್ತಿವೆ ಮತ್ತು ಸನಾತನ ಸಾಂಪ್ರದಾಯಿಕ ಹಿಡಿತ ಬಿಗಿಗೊಳಿಸುವ ಹುನ್ನಾರವನ್ನೂ ಜಾರಿ ಮಾಡುತ್ತಿವೆ.ಡಾ. ಮೀನಾಕ್ಷಿ ಬಾಳಿ

ಅಧ್ಯಕ್ಷರು, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಗುಲ್ಬರ್ಗ

ಮೊದಲು ಗಂಡಸರಿಗಿರಲಿ!

ನಾನಾಗ ಪ್ರೌಢಶಾಲೆಯಲ್ಲಿದ್ದೆ. ನಾವಿದ್ದ ಹಳ್ಳಿಯಂತಹ ಊರಿನಲ್ಲಿ ಚೆಡ್ಡಿ ಹಾಕಿಕೊಂಡು ಶಾಲೆಗೆ ಬರುವುದೇ, ಗಂಗಾವತಿ ಪ್ರಾಣೇಶ್ ಅವರು ಹೇಳುವಂತೆ ಒಂದು ವೈಭವವಾಗಿತ್ತು. ಹೆಚ್ಚಿನವರ ಚೆಡ್ಡಿ ಕೂಡ ಕಡಲೆ ಹಿಟ್ಟು ಖಾಲಿಯಾದ ಮೇಲೆ ಉಳಿಯುವ ಚೀಲದಿಂದ ಹೊಲೆಸಿದ್ದು. ಒಂದು ದಿನ ನಾವು ನಾಲ್ಕೈದು ಸ್ನೇಹಿತರು ಶಾಲೆಗೆ ಪಂಚೆ ಉಟ್ಟುಕೊಂಡು ಬರಬೇಕೆಂದು ನಿರ್ಧರಿಸಿದೆವು. ಆದರೆ ನಾವು ಎಂತಹ ಪಂಚೆ ಎಂದು ಮಾತನಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದೆವು. ಮೂವರು ಬಿಳಿಯ ಮುಂಡು ಪಂಚೆಯಲ್ಲಿ ಬಂದರೆ, ಉಳಿದಿಬ್ಬರು ಪಟಾಪಟಿ ಲುಂಗಿಯಲ್ಲಿ ಬಂದುಬಿಟ್ಟರು. ಪ್ರಾರ್ಥನೆಯ ಸಮಯದಲ್ಲೇ ಇದನ್ನು ಗುರುತಿಸಿದ ಮುಖ್ಯೋಪಾಧ್ಯಾಯರು ಅವರಿಬ್ಬರನ್ನೂ ಮನೆಗೆ ಕಳಿಸಿದರು. ಉಳಿದ ಮೂವರೂ ಸಂಜೆಯವರೆಗೆ ಕಷ್ಟದಿಂದ ಪಂಚೆಯನ್ನು ಜಾರಿ ಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡೇ ಕುಳಿತಿದ್ದೆವು. ಮರುದಿನದಿಂದ ಇಂತಹ ಪ್ರಯೋಗಗಳನ್ನು ಮಾಡುವ ಧೈರ್ಯವಾಗಲೇ ಇಲ್ಲ!ಈ ವಸ್ತ್ರಸಂಹಿತೆ ಎನ್ನುವುದು ಎಲ್ಲ ಕಾಲ, ದೇಶಗಳಲ್ಲೂ ಇರುವುದೇ ಎನ್ನುವುದಕ್ಕಾಗಿ ಮೇಲಿನ ಘಟನೆಯನ್ನು ಹೇಳಬೇಕಾಯಿತು. ಹೆಚ್ಚಿನ ಕಡೆ ಇದನ್ನು ಇದೇ ಹೆಸರಿನಲ್ಲಿ ವ್ಯವಸ್ಥಿತವಾಗಿ, ಕಡ್ಡಾಯವಾಗಿ ಜಾರಿಗೊಳಿಸಿರುವುದಿಲ್ಲ. ಆದರೆ ಅಲಿಖಿತ ರೂಪದಲ್ಲಿರುತ್ತದೆ, ಅಷ್ಟೇ. ಹೆಣ್ಣು ಮಕ್ಕಳು ಸಮಾರಂಭಗಳೆಂದರೆ ರೇಷ್ಮೆ ಸೀರೆ, ಆಭರಣಗಳಿಂದ ಅಲಂಕೃತರಾಗುವುದು, ಮೀಟಿಂಗ್‌ಗಳಿಗೆ ಸೂಟಿನಲ್ಲೇ ಬರುವ ಕಂಪೆನಿ ಅಧಿಕಾರಿಗಳು, ರಜಾ ದಿನಗಳಲ್ಲಿ ಟೀ ಶರ್ಟು, ಜೀನ್ಸ್‌ನಲ್ಲಿ ಮಿಂಚುವ ಪಟ್ಟಣದ ಮಧ್ಯ ವಯಸ್ಸಿಗರು-  ಹೀಗೆ. ಎಷ್ಟೋದೇವಸ್ಥಾನಗಳ ಪ್ರಾಂಗಣ ದಾಟಬೇಕಾದರೆ ಗಂಡಸರು ಪಂಚೆಯಲ್ಲಿ ಟಾಪ್‌ಲೆಸ್ ಆಗಿಯೇ ಬರಬೇಕು!ಹಾಗೆ ನೋಡಿದರೆ ವ್ಯಕ್ತಿ ಸ್ವಾತಂತ್ರ್ಯದ ಹರಿಕಾರರೆಂದು ಕರೆಸಿಕೊಳ್ಳುವ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿಯೂ ಅಲಿಖಿತ ವಸ್ತ್ರಸಂಹಿತೆ ಜಾರಿಯಲ್ಲಿದ್ದೇ ಇರುತ್ತದೆ. ನಮಗೆ ಸಂವಿಧಾನದ ಮೂಲಧಾತುವನ್ನು ಒದಗಿಸಿದ ಬ್ರಿಟಿಷರು ಕೂಡ ಉಡುಪಿನ ವಿಚಾರದಲ್ಲಿ ಆಷಾಢಭೂತಿಗಳೆನಿಸುವ ಮಟ್ಟದ ಸಂಪ್ರದಾಯವಾದಿಗಳು. ಎಲ್ಲ ಕಡೆಯ ಚರ್ಚುಗಳಲ್ಲಿ ವಸ್ತ್ರಸಂಹಿತೆ ಇದೆ. ಸ್ಕರ್ಟ್ ಧರಿಸಿದರೂ ಅದರ ಉದ್ದ ಮೊಳಕಾಲಿಗಿಂತ ಕೆಳಗಿರಲೇಬೇಕು. ಮಸೀದಿಗಳು, ಗುರುದ್ವಾರಗಳಲ್ಲೂ ಅಲಿಖಿತವಾದ ನಿಯಮಗಳಿರುತ್ತವೆ.ಹಾಗೆಂದು ಎಲ್ಲ ಕಡೆಯೂ ಇರುವ ನಿಯಮಗಳನ್ನು ನಾವು ಪಾಲಿಸಬೇಕೆಂದೇನೂ ಇಲ್ಲ. ಪ್ರಶ್ನೆ ಇರುವುದು ಇದರ ಔಚಿತ್ಯದ್ದು ಮಾತ್ರ. ಬರೀ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ವಸ್ತ್ರಸಂಹಿತೆಯ ಅಗತ್ಯವಿದೆ. ಆದರೆ ನಾಗರಿಕ ಸಮಾಜವೊಂದರಲ್ಲಿ ಇದು ಚರ್ಚೆಯ ವಿಚಾರವಾಗಬಾರದು. ಹಾಗೆ ಆಗುವ ಪರಿಸ್ಥಿತಿ ಬಂದಿದೆ ಎಂದರೆ ಅಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಅತಿರೇಕಕ್ಕೆ ಒಯ್ಯಲಾಗುತ್ತದೆ ಅಥವಾ ಸಂಪ್ರದಾಯವಾದಿಗಳ ದರ್ಬಾರು ನಡೆಯುತ್ತಿದೆ ಎನಿಸುತ್ತದೆ.ಶೀಲ, ಅಶ್ಲೀಲವೆಲ್ಲಾ ವ್ಯಕ್ತಿನಿಷ್ಠವಾದದ್ದು. ಇದನ್ನೆಲ್ಲಾ ಚರ್ಚಿಸುತ್ತಾ ಕೂತರೆ ಯಾವ ತೀರ್ಮಾನಗಳಿಗೂ ಬರುವುದು ಅಸಾಧ್ಯ. ಬಹುಶಃ ಬಟ್ಟೆ ಮೈಮುಚ್ಚುವಂತೆ ಇರಬೇಕು ಎನ್ನುವುದಷ್ಟೇ ವಿಷಯವಾಗಿದ್ದರೆ ಯಾರದ್ದೂ ತಕರಾರುಗಳಿರುವುದಿಲ್ಲ. ಈ ಮೈಮುಚ್ಚುವ ಬಟ್ಟೆಯಲ್ಲಿಯೂ ಇಂತಾದ್ದನ್ನೇ ಧರಿಸಬೇಕೆಂದು ಕಡ್ಡಾಯವಾಗಿಸಿದಾಗ ಪ್ರತಿಭಟನೆಗಳು ಶುರುವಾಗುತ್ತವೆ. ಉದಾಹರಣೆಗೆ ಸ್ತ್ರೀಯರು ಪೂರ್ಣ ಮೈಮುಚ್ಚುವ ಜೀನ್ಸ್, ಟೀ ಶರ್ಟುಗಳನ್ನೇಕೆ ಧರಿಸಬಾರದು? ಇದು ಮೈಗೆ ಅಂಟಿಕೊಂಡು ಅವರ ಮೈ ಮಾಟವನ್ನು ಎತ್ತಿ ತೋರಿಸುವುದರಿಂದ ಪ್ರಚೋದನಕಾರಿಯಾಗುತ್ತದೆ ಎನ್ನುವುದು ಸಂಪ್ರದಾಯವಾದಿಗಳ ಆಂಬೋಣ. ಆದರೆ ಪ್ರಚೋದನೆಗಳ ಹುಡುಕಾಟದಲ್ಲಿ ಇರುವವರು ಸೀರೆ, ಸಲ್ವಾರ್‌ಗಳಲ್ಲಿಯೂ ಅದನ್ನು ಕಂಡುಕೊಳ್ಳುತ್ತಾರೆ! ಹಾಗೊಮ್ಮೆ ಹೆಣ್ಣು ಮಕ್ಕಳ ಬಿಗಿ ಉಡುಪು ಪ್ರಚೋದನಕಾರಿಯಾದರೆ, ಗಂಡಸರ ಬಿಗಿ ಉಡುಪು ಯಾಕೆ ಸಹನೀಯವಾಗಬೇಕು? ಅವರಿಗೆಲ್ಲಾ ತಮ್ಮ ಮೀನಖಂಡಗಳನ್ನು ತೋರಿಸುವ ಬರ್ಮುಡಾ, ಚಡ್ಡಿಗಳನ್ನು ಧರಿಸಲು ಅವಕಾಶ ಕೊಡುವುದು ಏಕೆ?ಹಾಗಾಗಿ ವಸ್ತ್ರಸಂಹಿತೆಯನ್ನು ಜಾರಿ ಮಾಡುವುದೇ ಆದರೆ ಅದು ಸ್ತ್ರೀ, ಪುರುಷರಿಬ್ಬರಿಗೂ ಸಮಾನವಾಗಿರಬೇಕು. ಈ ದೃಷ್ಟಿಯಿಂದ ನೋಡಿದರೆ ಪುರುಷರಿಗೆ ಸಂಹಿತೆಯ ಅಗತ್ಯ ಹೆಚ್ಚೇ ಇದೆ! ದಕ್ಷಿಣದ ಹೆಚ್ಚಿನ ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಗಂಡಸರ ಟಾಪ್‌ಲೆಸ್ ಪ್ರದರ್ಶನ ರದ್ದಾಗಬೇಕು! ನಮ್ಮ ವೈದಿಕರು, ಮಠಾಧೀಶರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಗುಡಾಣ ಹೊಟ್ಟೆಗಳನ್ನು ಪ್ರದರ್ಶನ ಮಾಡದೆ ಮೈಮುಚ್ಚಿಕೊಳ್ಳಬೇಕು. ಜೈನ ಮುನಿಗಳೂ ಇದಕ್ಕೆ ಹೊರತಾಗಬಾರದು.ಸ್ತ್ರೀಯರ ವಸ್ತ್ರಸಂಹಿತೆಯ ವಿಚಾರದಲ್ಲಿ ಮುಸ್ಲಿಮರದ್ದು ಒಂದು ಅತಿರೇಕವಾದರೆ, ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರದ್ದು ಇನ್ನೊಂದು ಬಗೆಯದ್ದು. ಇವರಿಬ್ಬರೂ ತಮ್ಮ ತಮ್ಮ ಪ್ರತಿಷ್ಠೆಯ ಪ್ರಶ್ನೆಗಾಗಿ ಹಿಂಸೆಗೂ ಇಳಿಯುವುದನ್ನು ಸಹಿಸುವ ನಮ್ಮ ಸರ್ಕಾರಗಳು ಮತ್ತು ಜನ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿನ ಅಸ್ಪಷ್ಟತೆಯ ದ್ಯೋತಕ.

ನಡಹಳ್ಳಿ ವಸಂತ್

ಆಪ್ತ ಸಲಹೆಗಾರರು, ಶಿವಮೊಗ್ಗ

 

ಇರಲಿ ಸ್ವಯಂ ನಿರ್ಬಂಧ

`ಏತಿ ಅಂದರೆ ಪ್ರೇತಿ ಎಂದರಂತೆ~ ಎಂಬಂತಹ ಗಾದೆ ಹುಟ್ಟಿಕೊಂಡಿರುವುದೇ ಇಂತಹ ವಿಷಯಗಳಿಗೆ ಇರಬೇಕು. ಸಂಸ್ಕೃತಿ ಕಾಪಾಡಿ ಎಂದರೆ `ಇಂತದ್ದೇ ತೊಡಬೇಕು, ಅಂತಾದ್ದೇ ಉಡಬೇಕು~ ಎಂಬ ನಿರ್ಬಂಧ, ಅವರಿಗಿಷ್ಟ ಬಂದದ್ದನ್ನ ತೊಡಲು ಬಿಡಿ ಎಂದರೆ ಲಂಗುಲಗಾಮಿಲ್ಲದೆ ಮೈಮಾಟ ಪ್ರದರ್ಶನ, ಎಲ್ಲಿದ್ದೇವೆ, ಯಾರಿದ್ದಾರೆ ಎಂಬ ಹಂಗೂ ಇಲ್ಲದೆ ಹಸಿಬಿಸಿಯಾಗೇ ಅಂಗಾಂಗ ತೋರಾಟ- ಇಂತಹ ಅತಿರೇಕಗಳು ಇಂದು ವಸ್ತ್ರಸಂಹಿತೆಯ ಸುತ್ತಾ ಸುತ್ತುತ್ತಿವೆ.ಮಹಿಳೆ ಇರಲಿ ಪುರುಷ ಇರಲಿ ಯಾರಿಗೂ ಹೀಗೇ ಇರಬೇಕು ಎಂದು ನಿರ್ಬಂಧ ವಿಧಿಸುವುದು ಎಂದೆಂದಿಗೂ ಸರಿಯಲ್ಲ. ಆದರೆ ವಾಸ್ತವದಲ್ಲಿ ನಾವಿರುವುದು (ಚಿತ್ರರಂಗ, ಅತ್ಯಂತ ಮೇಲ್‌ಸ್ತರದವರನ್ನು ಹೊರತುಪಡಿಸಿ) ಒಂದು ಚೌಕಟ್ಟಿಗೆ ಒಳಪಟ್ಟ ಸಮಾಜದೊಳಗೆ ಎಂಬುದಂತೂ ನಿಜ. ಹೀಗಿರುವಾಗ ಮಹಿಳೆ ಅಥವಾ ಪುರುಷ ಯಾರೇ ಆಗಿರಲಿ ಸಾರ್ವಜನಿಕ ಸ್ಥಳಗಳಲ್ಲಿ ದೇಹದ ಬಹುಭಾಗ ಕಾಣುವಂತಹ, ಮೈ ಬಿಗಿಯುವಂತಹ ಉಡುಪು ಧರಿಸುವ ಅಗತ್ಯ ಇದೆಯೇ? ಹಾಗೆಂದ ಮಾತ್ರಕ್ಕೆ ಸ್ಕರ್ಟ್, ಜೀನ್ಸ್, ಮಿಡಿ, ಮಿನಿ ಮಾತ್ರ ತಪ್ಪು, ಸೀರೆ, ಪಂಚೆ ತೊಟ್ಟವರೆಲ್ಲಾ ಸಂಸ್ಕೃತಿಯ ರಕ್ಷಕರು ಎಂಬಂತಹ ವಾದವೂ ಸರಿಯಲ್ಲ. ಸೀರೆಯಲ್ಲೂ ಆಧುನಿಕ ವಸ್ತ್ರಗಳನ್ನು ನಿವಾಳಿಸಿ ಒಗೆಯುವಂತೆ ಮೈ ಪ್ರದರ್ಶನ ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಿರುವಾಗ ತೊಟ್ಟ ಬಟ್ಟೆ ಯಾವುದಾದರೇನು? ಅದು ಒಂದು ಸಭ್ಯತೆಯ ಮಿತಿಯೊಳಗೆ ಇರಬೇಕಷ್ಟೇ.ಕಾಮಪಿಪಾಸುಗಳ ಪ್ರಚೋದನೆಗೆ ಹೆಣ್ಣು ಮಕ್ಕಳು ಮೈ ತೋರುವಂತೆ ಧರಿಸುವ ಬಟ್ಟೆಗಳೇ ಆಗಬೇಕೆಂದೇನೂ ಇಲ್ಲ. ಮೂಲತಃ ಅಂತಹವರ ಮನಸ್ಸೇ ಕೊಳೆತುಹೋಗಿರುವುದರಿಂದ ಮೈತುಂಬಾ ಬಟ್ಟೆ ತೊಟ್ಟವರೂ ಅವರ ಒಳಕಣ್ಣಿಗೆ ಕಾಣುವುದು ನಗ್ನರಾಗಿಯೇ. ಆದ್ದರಿಂದ `ಇಂತಹವರಲ್ಲಿ ಕಾಮ ಕೆರಳಿ ಅತ್ಯಾಚಾರಕ್ಕೆ ದಾರಿಯಾಗಬಾರದು ಎಂದರೆ ಮಹಿಳೆಯರು ಸರಿಯಾಗಿ ಬಟ್ಟೆ ತೊಡಬೇಕು~ ಎಂಬ ವಾದದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಕೇವಲ ಇವರಷ್ಟೇ ಇಡೀ ಸಮಾಜವನ್ನು ಪ್ರತಿನಿಧಿಸುವುದಿಲ್ಲವಾದ್ದರಿಂದ ಇಂತಹವರಿಗಾಗಿ ಮಹಿಳೆಯರು ತಾವು ಯಾವ ಬಗೆಯ ಬಟ್ಟೆ ತೊಡಬೇಕು ಎಂಬುದನ್ನು ನಿರ್ಧರಿಸುವ ಅಗತ್ಯವೂ ಇಲ್ಲ. ಆದರೆ ಸಮಾಜದಲ್ಲಿ ಇವರು ಮಾತ್ರವಲ್ಲದೆ, ಬೆಳೆಯುತ್ತಿರುವ ಮಕ್ಕಳು, ಹದಿವಯಸ್ಕರು, ವೃದ್ಧರು ಹೀಗೆ ಇತರ ವರ್ಗಗಳೂ ಇರುತ್ತವಲ್ಲವೇ? ಈ ಕಾರಣದಿಂದಲಾದರೂ ನಾವು ಧರಿಸುವ ಬಟ್ಟೆ ಅಶ್ಲೀಲ ಎನಿಸಿಕೊಳ್ಳದೇ ಸಭ್ಯತೆಯ ಗಡಿಯೊಳಗೇ ಇದ್ದರೆ ಒಳ್ಳೆಯದು ಎನಿಸುತ್ತದೆ.ಒಬ್ಬ ಮಹಿಳೆ ಮೈಮಾಟ ತೋರುವಂತೆ ಬಟ್ಟೆ ತೊಟ್ಟ ಮಾತ್ರದಿಂದಲೇ ವ್ಯಕ್ತಿಯೊಬ್ಬನಲ್ಲಿ ಅತ್ಯಾಚಾರದಂತಹ ಕ್ರೌರ್ಯ ಭುಗಿಲೇಳುತ್ತದೆ ಎಂಬ ಮಾತು ಎಷ್ಟು ಸರಿ ಅ್ಲ್ಲಲವೋ, ಹಾಗೇ ಇಂತಹ ಬಟ್ಟೆ ತೊಟ್ಟವರು ಸಮಾಜದ ಮೇಲೆ ಏನೇನೂ ಪರಿಣಾಮ ಬೀರುವುದಿಲ್ಲ ಎಂಬಂತಹ ವಾದವೂ ಅಷ್ಟೇ ತಪ್ಪು. ಇಲ್ಲದಿದ್ದರೆ ಒಂದು ರಸ್ತೆಯಲ್ಲಿ ಇಂದಿಗೂ ಒಬ್ಬ ಹೆಣ್ಣು ಅರೆ ನಗ್ನಳಾಗಿ ಹೋಗುತ್ತಿದ್ದರೆ ಅಥವಾ ಮೈ ಬಿರಿಯುವಂತಹ ಬಟ್ಟೆ ತೊಟ್ಟು ಎದೆ ಸೆಟೆಸಿ ನಡೆಯುತ್ತಿದ್ದರೆ (ನಗರಗಳಲ್ಲಿ ಇಂದು ಅತ್ಯಂತ ಸಾಮಾನ್ಯ ಎಂಬಂತಾಗಿರುವ) ಅಂತಹವರು ದಾರಿಹೋಕರ ಕೇಂದ್ರ ಬಿಂದು ಆಗಲೇಬಾರದಿತ್ತು. ಆದರೆ ವಾಸ್ತವ ಹಾಗಿಲ್ಲ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ? ಯಾವುದೇ ಕಚೇರಿಯಲ್ಲಿ ಅಂಗಾಂಗ ಪ್ರದರ್ಶನಕ್ಕೆ ಹೆಚ್ಚು ಒತ್ತು ಕೊಡುವಂತಹ ಬಟ್ಟೆಗಳನ್ನು ಧರಿಸಿ ಬರುವವರು ಅಲ್ಲಿನ ಸಿಬ್ಬಂದಿಯ (ಮಹಿಳೆಯರೂ ಸೇರಿದಂತೆ) ಚರ್ಚೆಯ ವಸ್ತು ಆಗದೇ ಇರುವ ಪರಿಸ್ಥಿತಿ ನಮ್ಮಲ್ಲಿದೆಯೇ?ಶಿಕ್ಷಣ, ನಡವಳಿಕೆಯಂತಹ ವಿಷಯಗಳಲ್ಲಿ ಇಂದು ಪೋಷಕರಿಗಿರುವ ಗೊಂದಲ ಮಕ್ಕಳ ಬಟ್ಟೆಯ ವಿಷಯದಲ್ಲೂ ಇದ್ದೇ ಇದೆ ಎನಿಸುತ್ತದೆ. ಇಲ್ಲದಿದ್ದರೆ ತಾನು ಮಾತ್ರ ಹಳೆಯ ಕಾಲದ ಸೀರೆಗೇ ಜೋತು ಬಿದ್ದ ಅಮ್ಮ, ತನ್ನ ಎದೆ ಮಟ್ಟ ಬೆಳೆದು ನಿಂತ ಮಗಳು ದುಪ್ಪಟ್ಟಾ ಹಂಗಿಲ್ಲದೆ ಬಿಗಿಯಾದ ಸಲ್ವಾರ್ ಕಮೀಜ್ ತೊಟ್ಟು ತನ್ನೆದುರೇ ಮೈಮಾಟ ಪ್ರದರ್ಶಿಸುತ್ತಾ ಬಿಂಕದಿಂದ ಹೋಗುವುದನ್ನು ಹೆಮ್ಮೆಯಿಂದ ನೋಡುತ್ತಾ ನಿಲ್ಲುತ್ತಿರಲಿಲ್ಲ. ತನ್ನ ಮಗಳೂ ತನ್ನಂತೇ ಸೀರೆ ಉಟ್ಟು `ಗೌರಮ್ಮ~ನಂತಾಗಬೇಕು ಎಂದು ಈಗಿನ `ಮಾಡರ್ನ್ ಅಮ್ಮಂದಿರು~ ಸಹ ಬಯಸಬೇಕು ಎಂಬುದು ಇದರರ್ಥವಲ್ಲ. ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳು ಸ್ಕರ್ಟ್, ಟಿ ಶರ್ಟ್, ಜೀನ್ಸ್ ಇತ್ಯಾದಿ ತೊಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದೇ ಅತ್ಯಾಧುನಿಕ ಶೈಲಿಯಲ್ಲಿ ಹೊಲಿಸಿದ ಸಲ್ವಾರ್ ಕಮೀಜ್‌ಗೆ ಮೇಲೊಂದು ದುಪ್ಪಟ್ಟಾ ಹೊದ್ದುಕೊಂಡರೆ, ಕೈ ಎತ್ತಿದರೆ ಸಾಕು ಸೊಂಟವನ್ನೆಲ್ಲಾ ಪ್ರದರ್ಶಿಸುವ ಟಿ ಶರ್ಟ್ ಬದಲಿಗೆ ಕೊಂಚ ಉದ್ದದ ಟಿ ಶರ್ಟ್ ಧರಿಸಿದರೆ, ಸ್ಕರ್ಟನ್ನು ಕನಿಷ್ಠ ಮಂಡಿಯಿಂದ ಕೆಳಗಿನವರೆಗಾದರೂ ತೊಟ್ಟರೆ, ಬೆನ್ನು ಪೂರಾ ತೋರುವ ಅರ್ಧ ಗೇಣಿನ ಡಿಸೈನರ್ ರವಿಕೆಯನ್ನೇ ಕನಿಷ್ಠ ಒಂದು ಗೇಣಷ್ಟಾದರೂ ಏರಿಸಿಕೊಂಡರೆ, ಕೊಂಚ ಬಗ್ಗಿದರೂ ಸಾಕು ಸ್ತನವೆಲ್ಲಾ ಕಾಣುವ ಡೀಪಾದ ಕುರ್ತಾವನ್ನೇ ಒಂದೆರಡಿಂಚು ಮೇಲಕ್ಕೆ ಹೊಲಿಸಿಕೊಂಡರೆ ಆಧುನಿಕಕ್ಕೂ ಅಸಭ್ಯಕ್ಕೂ ನಡುವಿನ ವ್ಯತ್ಯಾಸ ಅರಿತಂತೆ ಆಗುತ್ತದೆ. ಆಧುನಿಕ ಜಗತ್ತಿನೊಳಗೂ ಸಭ್ಯತೆಯ ಗಡಿ ಮೀರದಂತೆ, ಚರ್ಚೆಯ ವಸ್ತುವಾಗದಂತೆ ಇರಲು ಸಾಧ್ಯ ಎಂಬುದನ್ನು ಸಾಬೀತುಮಾಡಿದಂತೆ ಆಗುತ್ತದೆ ಅಲ್ಲವೇ? ಆದರೆ ಇದಕ್ಕೆಲ್ಲಾ ಬೇಕಿರುವುದು ವಸ್ತ್ರಸಂಹಿತೆಯಂತಹ ಬಾಹ್ಯ ನಿರ್ಬಂಧ ಅಲ್ಲ, ತನ್ನ ಸಂಸ್ಕಾರದ ಗಡಿಯನ್ನು ತಾನೇ ಗುರುತಿಸಿಕೊಳ್ಳುವ ಸ್ವಯಂ ನಿರ್ಬಂಧ.ಪ್ರಣತಿ

ಖಾಸಗಿ ಕಂಪೆನಿ ಉದ್ಯೋಗಿ, ಮೈಸೂರು

ಎರಡು ಅಲಗು

ನಮ್ಮ ದೇಶದಲ್ಲಿ ವಸ್ತ್ರಸಂಹಿತೆಯ ವಿಷಯ ಬಂದಾಗಲೆಲ್ಲ ಅದು ಯಾವಾಗಲೂ ಎರಡು ಅತಿಯಾದ ವಾದಗಳಿಗೆ ಹೋಗಿ ನಿಲ್ಲುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಒಂದೇ ಬಗೆಯ ಬಟ್ಟೆ ಒಳ್ಳೆಯದು ಎಂಬ ತಿಳಿವಳಿಕೆ ಎಲ್ಲೆಡೆ ಕಾಣಬರುವ ಸಮಾಚಾರ. ಇದು ಪ್ರಜಾಪ್ರಭುತ್ವೀಯ ನೆಲೆಯದು. ಆದರೆ ಅದರಾಚೆಗೆ, ವಯಸ್ಸಿನಲ್ಲಿ ಒಂದು ಹಂತ ದಾಟಿದ ಮಕ್ಕಳ ಮೇಲೆ, ಕೆಲಸದ ಸ್ಥಳದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹುದೇ ಬಟ್ಟೆ ಧರಿಸಬೇಕೆಂದು ಒತ್ತಡ ಹೇರುವುದು. ಇಂದು ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿ ಸಮಾನ ಭಾವನೆ ಮೂಡಿಸಬೇಕು ಎನ್ನುವುದಕ್ಕಿಂತ ಇಂಥವರಿಗೆ ಪಾಠ ಕಲಿಸಬೇಕು ಎಂಬ ಭಾವನೆಯೇ ಹೆಚ್ಚು.ಇಂತಹ ಜನಗಳಿಗೆ ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ, ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಚಲನಶೀಲವಾಗಿರುವುದು ಎಂಬ ತಿಳಿವಳಿಕೆ ಇಲ್ಲ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಇಂದು ನಾವಿಲ್ಲ. ಇವರ‌್ಯಾರೂ ಇಂದು ಬಸ್, ಮೊಬೈಲ್ ಫೋನ್, ಕಂಪ್ಯೂಟರ್ ಬಳಸದಿರಲಾರರು. ಸಂಸ್ಕೃತಿ ಎಂಬುದು ಕೇವಲ ಆಹಾರ, ಉಡುಗೆ-ತೊಡುಗೆ, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಲ್ಲ, ಇಡೀ ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ಅರಿವಿಲ್ಲದಾಗ ಇಂತಹ ದುಡುಕುಗಳು ಉಂಟಾಗುತ್ತವೆ. ಅಲ್ಲದೆ ಪಂಚೆ ಉಡುವುದು, ಸೀರೆ ತೊಡುವುದು ಮಾತ್ರ ಸಂಸ್ಕೃತಿಯಲ್ಲ, ಇನ್ನೂ ಹಲವು ಬಗೆಯ ಉಡುಗೆ ತೊಡುಗೆಗಳೂ ಇವೆ ಎಂಬ ಬಹುತ್ವದ ಕಲ್ಪನೆ ಇದ್ದಾಗಲೂ ಈ ಬಗೆಯ ಕೂಗು ಕೇಳಿಬರುವುದಿಲ್ಲ.ಆದರೆ ಒಂದು ವಿಚಾರ ಗಮನಿಸಿ, ವಸ್ತ್ರಸಂಹಿತೆಯ ಆಯುಧ ಬಹುತೇಕ ವೇಳೆ ಪ್ರಯೋಗವಾಗುವುದು ಹೆಣ್ಣಿನ ಮೇಲೆ. ಬಯಸಿದ ಬಟ್ಟೆ ಹಾಕುವುದು, ಬೇಕಿದ್ದನ್ನು ಸೇವಿಸುವುದು ಅವರವರ ಖುಷಿಗೆ ಬಿಟ್ಟ ವಿಚಾರ. ಆದರೆ ಈ ಸಂಸ್ಕೃತಿಯ ಹೆಸರಿನ ಬೇಲಿಯನ್ನು ಸದಾ ಯಾಕೆ ಹೆಣ್ಣು ಮಕ್ಕಳ ಸುತ್ತಲೇ ಕಟ್ಟಲಾಗುತ್ತದೆ? ಒಂದೊಮ್ಮೆ ಗಂಡಸರಂತೆ ಹೆಣ್ಣೂ ಇಂಥವುಗಳಿಗೆ ಒಳಗಾದರೆ ಈಕೆಯ ಬಗ್ಗೆ ಮಾತ್ರ ಯಾಕೆ ಇಂತಹ ವರ್ತನೆ ಕಾಣುತ್ತದೆ? ಹೆಣ್ಣು ಸರಿಯಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳುವ ಮಂದಿ ತಮ್ಮ ಜವಾಬ್ದಾರಿಯನ್ನು ಹೆಣ್ಣು ಮಕ್ಕಳನ್ನು ಕಾಯುವುದಕ್ಕೇ ಸೀಮಿತಗೊಳಿಸಿದ್ದಾರೆಯೇ ಎಂಬ ಪ್ರಶ್ನೆಯೂ ಏಳುತ್ತದೆ. ಹೆಣ್ಣು ಸಂಸ್ಕೃತಿಯನ್ನು ಸಿಕ್ಕಿಸುವ ಗೂಟವಾಗಿ ಕಾಣುತ್ತಾಳೆ.ನಮ್ಮ ಸಮಾಜದಲ್ಲಿ ಗಂಡು ಹೆಣ್ಣು ಪರಸ್ಪರರ ದೇಹದ ಬಗ್ಗೆ ತಿಳಿಯುವುದಕ್ಕೆ ಆರೋಗ್ಯಕರವಾದ ದಾರಿಗಳು ಇಲ್ಲ. ಅದರ ಬಗ್ಗೆ ಮಾತನಾಡುವುದು ನಿಷಿದ್ಧ. ಅವರು ಯಾವುದೋ ಮೂರನೇ ದರ್ಜೆ ಪುಸ್ತಕ ಓದಿ, ಸಿನಿಮಾ ನೋಡಿ ತಲೆತುಂಬಾ ವಿಚಿತ್ರವಾದ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಹೀಗಾದಾಗಲೇ ಹೆಣ್ಣಿನ ದೇಹವನ್ನು ಅದು ಇರುವಂತೆಯೇ ಸಹಜವಾಗಿ ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ, ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ಇದಕ್ಕೆ ಇಬ್ಬರಿಗೂ ಸರಿಯಾದ ತಿಳಿವಳಿಕೆ ನೀಡುವುದು ಮುಖ್ಯವೇ ಹೊರತು ಕಟ್ಟಿಹಾಕುವುದಲ್ಲ.ಭಾರತೀ ದೇವಿ ಪಿ.

ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹೊಳೆನರಸೀಪುರ

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.