ವಸ್ತ್ರ ವ್ಯಾಮೋಹ: ಫ್ಯಾಷನ್ ಸಪ್ತಾಹ

7

ವಸ್ತ್ರ ವ್ಯಾಮೋಹ: ಫ್ಯಾಷನ್ ಸಪ್ತಾಹ

Published:
Updated:
ವಸ್ತ್ರ ವ್ಯಾಮೋಹ: ಫ್ಯಾಷನ್ ಸಪ್ತಾಹ

ಹೇಮಂತ ಋತುವಿನ ಚುಮುಚುಮು ಚಳಿಯಲ್ಲೂ ಮೈ ಬಿಸಿ ಏರಿಸುವ ವಾತಾವರಣ. ಸೇಂಟ್ ಮಾರ್ಕ್ಸ್ ರಸ್ತೆಯ ಬೌರಿಂಗ್ ಇನ್ಸ್‌ಟಿಟ್ಯೂಟ್‌ನ ತೆರೆದ ಆವರಣದ ಸುತ್ತಲೂ ಹಸಿರು ಹೊದ್ದು ಹಣ್ಣೆಲೆ ಉದುರಿಸುತ್ತಿದ್ದ ಬೃಹತ್ ಮರಗಳು, ತೆರೆದ ವೇದಿಕೆಗೆ ಜೋತು ಬಿದ್ದ ಹತ್ತಾರು ದೀಪಗಳು, ಅಬ್ಬರಿಸಲು ಸಿದ್ಧವಾಗಿದ್ದ ಬೃಹತ್ ಗಾತ್ರದ `ಮೈಕಾಸುರ'ರು. ಕತ್ತಲಾಗುವ ಹೊತ್ತಿಗೆ ಮೈಗೇರಿದ ಥಂಡಿಯನ್ನು ಬಿಡಿಸಲು ಗುಂಡು ಸಿದ್ಧವಾಗಿತ್ತು.ಫ್ಯಾಷನ್ ಕ್ಷೇತ್ರದ ದಿಗ್ಗಜರು, ರಾತ್ರಿ ಪಾರ್ಟಿ ಪ್ರಿಯರು ಹಾಗೂ ಮತ್ತಿತರರು ಹಿಂಡು ಹಿಂಡಾಗಿ ವೇದಿಕೆಯ ಎದುರು ಹಾಕಲಾಗಿದ್ದ ಖುರ್ಚಿಗಳಲ್ಲಿ ಆಸೀನರಾಗುತ್ತಿದ್ದರು. ಕೆಲವರ ಕೈಯಲ್ಲಿ ಮದ್ಯದ ಶೀಶೆ, ಮತ್ತೆ ಕೆಲವರ ಕೈಯಲ್ಲ ಉರಿದು ಬೂದಿಯಾಗುತ್ತಿದ್ದ ಸಿಗರೇಟು. ಬಂದ ಸ್ನೇಹಿತರ ಕೆನ್ನಗಳಿಗೆ ಕೆನ್ನ ತಾಗಿಸಿ ಒಂದು ಬಿಸಿ ಅಪ್ಪುಗೆಯೊಂದಿಗೆ ಸ್ವಾಗತಿಸಿ ಅವರನ್ನು ಆಹ್ವಾನಿಸುವ ಆತ್ಮೀಯತೆ... ಈ ಎಲ್ಲವೂ ಗೀತಾಂಜಲಿ ಪ್ರಸಾದ್ ಬಿದಪ್ಪ ಫ್ಯಾಷನ್ ವೀಕ್ 2013ರ ಒಂದು ಕಿರು ಚಿತ್ರಣ.ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯೊಂದಿಗೆ ಹಲವು ಖಾಸಗಿ ಕಂಪೆನಿಗಳು ಜತೆಗೂಡಿ ಈಚೆಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಫ್ಯಾಷನ್ ವೀಕ್‌ನಲ್ಲಿ ಹದಿನೆಂಟು ವಿನ್ಯಾಸಕಾರರು ಸಿದ್ಧಪಡಿಸಿದ ವಸ್ತ್ರಗಳಿಗೆ ಇಂದಾಣಿ ದಾಸ್‌ಗುಪ್ತ, ಬ್ರೂನಾ ಅಬ್ದುಲ್ಲಾ, ಅಕ್ವಿನ್ ಪೈಸ್, ಪ್ರಿಯಾ ನಾಯಕ್, ಜಾಕಿ ಶೆಟ್ಟಿ ಅವರಂತ ಹಿರಿಯ ರೂಪದರ್ಶಿಯರನ್ನು ಒಳಗೊಂಡಂತೆ 45 ರೂಪದರ್ಶಿಯರು ಹೆಜ್ಜೆ ಹಾಕಿದ್ದು ವಿಶೇಷ.ಮೈಸೂರು ಸಂಸ್ಥಾನದ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ರಾಯಲ್ ಹೌಸ್ ಆಫ್ ಮೈಸೂರ್, ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್, ಅಂಜಲಿ ಶರ್ಮ, ಅವಿರಾಟೆ, ಪಲ್ಲವಿ ಫೊಲಯ ದೀಪಿಕಾ ಗೋವಿಂದ್, ರೂನಾ ರಾಯ್, ಅಮಾಂಡಾ ಬಚಾಲಿ, ಯಶಸ್ವಿನಿ ನಾಯ್ಕ, ಸಾಮ್ಯಾಕ್ ಇತ್ಯಾದಿ ವಿನ್ಯಾಸಕಾರರು ಹಾಗೂ ಅವರ ಸಂಸ್ಥೆಗಳು ವಿನ್ಯಾಸ ಮಾಡಿದ ಬಗೆಬಗೆಯ ವಸ್ತ್ರಗಳು ಕಣ್ಮನ ಸೂರೆಗೊಂಡವು.ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು. ಧೂಮದ ಮರೆಯಲ್ಲಿ ಆರಂಭವಾಗುತ್ತಿದ್ದ ಫ್ಯಾಷನ್‌ಶೋಗಳಿಗಿಂತ ಭಿನ್ನವಾಗಿ ಈ ಬಾರಿ ಜ್ಯೋತಿ ಬೆಳಗುವ ಮೂಲಕ ಆರಂಭವಾಯಿತು. ದಿ ರಾಯಲ್ ಹೌಸ್ ಆಫ್ ಮೈಸೂರು ಪ್ರಸ್ತುತಪಡಿಸಿದ `ನಿಜಾಮ್' ಎಂಬ ರೇಷ್ಮೆ ಸಂಗ್ರಹೊಂದಿಗೆ ಅನಾವರಣಗೊಂಡಿತು. ಭಾರತರತ್ನ ಡಾ.ಭೀಮಸೇನ್ ಜೋಷಿ ಅವರ `ಲಕ್ಷ್ಮೀ ಬಾರಮ್ಮ' ಗೀತೆಯೊಂದಿಗೆ ಝರಿ ಸೀರೆ ತೊಟ್ಟ ಮಹಿಳಾ ರೂಪದರ್ಶಿಯರು ಹಾಗೂ ಶೇರ್ವಾನಿಯೊಂದಿಗೆ ಝರ್ದಾರಿ ಪೇಟ ತೊಟ್ಟ ರೂಪದರ್ಶಿಯರು ಮೆಲ್ಲನೆ ಹೆಜ್ಜೆ ಹಾಕುತ್ತಾ ಫ್ಯಾಷನ್ ಸಂಜೆಯ ರಂಗೇರಿಸಿದರು.ಇವರ ನಂತರದಲ್ಲಿ ಬಂದ ರೂನಾ ರಾಯ್ ಅವರ ಡೆನಿಮ್ ಬಳಸಿ ಸಿದ್ಧಪಡಿಸಿದ್ದ ಅಪ್ಪಟ ಆಧುನಿಕ ವಸ್ತ್ರಗಳ ತೊಟ್ಟ ರೂಪದರ್ಶಿಯರು ಸಂಜೆಯ ರಂಗಿನೊಂದಿಗೆ ವಾತಾವರಣಕ್ಕೆ ಮತ್ತಷ್ಟು ಕಾವು ಕೊಟ್ಟರು. ಒಬ್ಬರ ಬೆನ್ನಿಗೆ ಮತ್ತೊಬ್ಬರಂತೆ ರಾಜ್ ಶ್ರಫ್, ಅಮಂಡಾ ಬಚಾಲಿ, ನಮ್ರತಾ ಜಿ., ಹೀಗೆ ಸಾಲು ಸಾಲು ವಿನ್ಯಾಸಕಾರರು ತಮ್ಮ ವಸ್ತ್ರ ತೊಟ್ಟ ರೂಪದರ್ಶಿಯರನ್ನು ಸಿದ್ಧಪಡಿಸಿದ್ದರು.ಹಿರಿಯ ಅನುಭವಿ ರೂಪದರ್ಶಿಯರೊಂದಿಗೆ ಕಿರಿಯ ರೂಪದರ್ಶಿಯರು ಲಯಬದ್ಧ ಹೆಜ್ಜೆ ಹಾಕುವ ಮೂಲಕ ಬೆಂಗಳೂರು ಫ್ಯಾಷನ್ ಸಪ್ತಾಹಕ್ಕೆ ಕಳೆಕಟ್ಟಿದರು. ಉತ್ತರ ಕರ್ನಾಟಕದ ಸೀರೆಯುಟ್ಟು ಗಾಂಭೀರ್ಯದ ಹೆಜ್ಜೆ ಹಾಕಿದ ಸೌಂದರ್ಯ ಒಂದೆಡೆಯಾದರೆ, ನಮ್ರತಾ ವಿನ್ಯಾಸ ಮಾಡಿದ ಶ್ವೇತವರ್ಣದ ಗೌನ್‌ನಲ್ಲಿ ಗುರುತೇ ಸಿಗದಷ್ಟು ತೂಕ ಹೆಚ್ಚಿಸಿಕೊಂಡಿರುವ ಪೂಜಾ ಗಾಂಧಿ ಹೆಜ್ಜೆ ಹಾಕಿ ಫ್ಯಾಷನ್ ಸಪ್ತಾಹಕ್ಕೆ ಕಳೆಕಟ್ಟಿದ್ದು ಮತ್ತೊಂದೆಡೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry