ಮಂಗಳವಾರ, ಮೇ 17, 2022
23 °C

ವಹಿವಾಟು ಚೇತರಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸತತ ಮೂರು ವಾರಗಳ ಕಾಲ ಕುಸಿಯುತ್ತಲೇ ಸಾಗಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈ ವಾರ ಕೊಂಚ ಏರಿಕೆ ಕಾಣುವ ಸಾಧ್ಯತೆಗಳಿವೆ.ಈಜಿಪ್ಟ್‌ನಲ್ಲಿ ಅರಾಜಕತೆ ಕೊನೆಯಾಗಿರುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಗೋಚರಿಸುತ್ತಿರುವುದು ಪೇಟೆಯ ವಹಿವಾಟಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿವೆ.ಮೂರು ವಾರಗಳಲ್ಲಿ ಸೂಚ್ಯಂಕವು 1,279 ಅಂಶಗಳನ್ನು ಕಳೆದುಕೊಂಡಿದೆ. ಹೋಸ್ನಿ ಮುಬಾರಕ್ ಪದತ್ಯಾಗ ಮಾಡಿರುವುದು,  ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ಗೆ ಇಳಿದಿರುವುದು, ಈರುಳ್ಳಿ  ಮತ್ತು ತರಕಾರಿಗಳು ಅಗ್ಗವಾಗುತ್ತಿರುವುದು ಪೇಟೆಯ ಅನಿಶ್ಚಿತತೆಗೆ ಕೊನೆ ಹಾಡುವ ಸಾಧ್ಯತೆಗಳಿವೆ ಎಂದು ಗ್ಲೋಬ್ ಕ್ಯಾಪಿಟಲ್ಸನ ಕೆ. ಕೆ. ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಪವರ್ ಮತ್ತಿತರ ಪ್ರಮುಖ ಉದ್ದಿಮೆಗಳ ಹಣಕಾಸು ಸಾಧನೆ ಪ್ರಕಟಗೊಳ್ಳಲಿದ್ದು, ಪೇಟೆಗೆ ಚೇತರಿಕೆ ನೀಡುವ ನಿರೀಕ್ಷೆಗಳಿವೆ.ಹಲವಾರು ಕಾರಣಗಳಿಗೆ ಪೇಟೆಯಲ್ಲಿ ಮನೆ ಮಾಡಿರುವ ನಿರಾಶಾದಾಯಕ ಪರಿಸ್ಥಿತಿ ಈ ವಾರ ತಿಳಿಯಾಗುವ ಸಾಧ್ಯತೆಗಳು ಹೆಚ್ಚಿಗೆ ಇವೆ ಎಂದೂ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.‘ಸೆಬಿ’ ತನಿಖೆ ಸಾಧ್ಯತೆ: ಕಳೆದ ಕೆಲ ತಿಂಗಳುಗಳಿಂದ ಷೇರುಪೇಟೆಯಲ್ಲಿ ವಹಿವಾಟು ಕುಸಿಯಲು ಕಾರಣವಾಗುವುದಕ್ಕೆ ಕೆಲವರು ಎಸಗಿರುವ ವಂಚನೆಯೇ ಕಾರಣ ಎಂದು ಅನುಮಾನಗೊಂಡಿರುವ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಷೇರು ದಲ್ಲಾಳಿ ಸಂಸ್ಥೆಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಮ್ಯುಚುವಲ್ ಫಂಡ್‌ಗಳ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಲಿದೆ.ಪ್ರಾಥಮಿಕ ತನಿಖೆ ಪ್ರಕಾರ, ಪೇಟೆಯಲ್ಲಿ ಮೂರು ‘ಕರಡಿ ಒಕ್ಕೂಟ’ಗಳು ಕಾರ್ಯನಿರ್ವಹಿಸುತ್ತಿದ್ದು, ಮೂರು ತಿಂಗಳಲ್ಲಿ ನಷ್ಟಕ್ಕೆ ಗುರಿಯಾಗಿರುವ ಷೇರುಗಳ ಬಗ್ಗೆ ‘ಸೆಬಿ’ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.ಕೆಲ ನಿರ್ದಿಷ್ಟ ಷೇರುಗಳ ಬೆಲೆ ಕುಸಿಯುವಂತೆ ಮಾಡಲು ಕೆಲವರು ಕಾರ್ಪೊರೇಟ್ ಪ್ರತಿಸ್ಪರ್ಧಿಗಳ ಪರವಾಗಿ ಅವುಗಳನ್ನು ಗುಂಪಾಗಿ ಇಲ್ಲವೇ ಪ್ರತ್ಯೇಕವಾಗಿ ಕಡಿಮೆ ಬೆಲೆಗೆ ಖರೀದಿಸಲು ಮುಂದಾಗುವುದಕ್ಕೆ ‘ಕರಡಿ ಒಕ್ಕೂಟ’ ಎನ್ನುತ್ತಾರೆ. ಇಂತಹ ಮೋಸದ ಫಲವಾಗಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳ ಷೇರುಗಳ ಬೆಲಗಳು ಗಮನಾರ್ಹವಾಗಿ ಕುಸಿದಿವೆ. ಮಾರುಕಟ್ಟೆ ಮೌಲ್ಯದಲ್ಲಿ ಹೂಡಿಕೆದಾರರ ಒಟ್ಟಾರೆ ಸಂಪತ್ತು ಕೂಡ ್ಙ 15 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.