ಭಾನುವಾರ, ಜೂಲೈ 5, 2020
22 °C

ವಹಿವಾಟು ನಿರ್ಧರಿಸಲಿರುವ ಆರ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಂಗಳವಾರ ಪ್ರಕಟಗೊಳ್ಳಲಿರುವ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಯ ತ್ರೈಮಾಸಿಕ ಪರಾಮರ್ಶೆಯನ್ನು ಮುಂಬೈ ಷೇರುಪೇಟೆ ಕಾತರದಿಂದ ಎದುರು ನೋಡುತ್ತಿದ್ದು, ಇದು ಈ ವಾರದ ವಹಿವಾಟಿನ ಗತಿಯನ್ನು ನಿರ್ಧರಿಸುವುದೆಂದು ನಂಬಲಾಗಿದೆ. ಕಳೆದ ವಾರ ಸಾಕಷ್ಟು ಏರಿಳಿತ ಕಂಡ ಸಂವೇದಿ ಸೂಚ್ಯಂಕವು ಈ ವಾರವೂ ಅಂತಹದ್ದೇ ಬೆಳವಣಿಗೆಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.ಎರಡು ವಾರಗಳ ಕಾಲ ತೀವ್ರ ಹಿನ್ನಡೆ ಕಂಡಿದ್ದ ಗೂಳಿಯು (ಖರೀದಿ ಆಸಕ್ತಿ), ಕೆಲಮಟ್ಟಿಗೆ ಪ್ರತಿರೋಧ ತೋರಿ ನೆಲೆ ಗಟ್ಟಿ ಮಾಡಿಕೊಂಡಿದೆ. ಆದರೆ, ಕರಡಿ (ಮಾರಾಟ ಒತ್ತಡ)  ಹೋರಾಟ ಮುಂದುವರೆಸಿದ್ದು, ತನ್ನ ಬಿಗಿ ಹಿಡಿತವನ್ನು ಸುಲಭವಾಗಿ ಬಿಟ್ಟುಕೊಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಗ್ಗ ಜಗ್ಗಾಟದ ಫಲವಾಗಿ ಪೇಟೆಯಲ್ಲಿ ವಹಿವಾಟು ತೀವ್ರ ಏರಿಳಿತಕ್ಕೆ ಕಾಣುತ್ತಿದೆ ಎಂದು ಐಐಎಫ್‌ಎಲ್‌ನ ಸಂಶೋಧನಾ ಮುಖ್ಯಸ್ಥ ಅಮರ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.ವಾಯಿದಾ ಮತ್ತು ಆಯ್ಕೆ (ಎಫ್‌ಆಂಡ್ ಒ) ಹಾಗೂ ಆರ್‌ಬಿಐನ ಹಣಕಾಸು ನೀತಿ ಬಗ್ಗೆ ವಹಿವಾಟುದಾರರು ತಮ್ಮೆಲ್ಲ ಗಮನ ಕೇಂದ್ರೀಕರಿಸಿದ್ದಾರೆ. ಬ್ಯಾಂಕ್ ಬಡ್ಡಿ ದರ ಹೆಚ್ಚಳವನ್ನು ಷೇರುಪೇಟೆಯು ಸ್ವಾಗತಿಸಲಾರದು. ಇದರಿಂದ ಸಾಲ ದುಬಾರಿಯಾಗಿ, ಬೇಡಿಕೆ ಕುಸಿಯುವುದೇ ಇದಕ್ಕೆ ಕಾರಣ. ಈ ಪ್ರತಿಕೂಲ ಬೆಳವಣಿಗೆ ಮಧ್ಯೆಯೇ, ಕಾರ್ಪೊರೇಟ್ ದೈತ್ಯ ಸಂಸ್ಥೆ ರಿಲಯನ್ ಇಂಡಸ್ಟ್ರೀಸ್‌ನ ಶೇ 28ರಷ್ಟು ನಿವ್ವಳ ಲಾಭವು ಪೇಟೆಯಲ್ಲಿ ಉತ್ಸಾಹ ಮೂಡಿಸುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಪೇಟೆಯಿಂದ ದೂರ ಸರಿದಿರುವುದರಿಂದ ಈ ತಿಂಗಳಲ್ಲಿ ವಹಿವಾಟು ದುರ್ಬಲವಾಗಿಯೇ ಇದೆ. ಇದೇ ಪರಿಸ್ಥಿತಿ ಇನ್ನಷ್ಟು ಸಮಯ ಮುಂದುವರೆಯುವ ಸಾಧ್ಯತೆಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.