ಗುರುವಾರ , ಮೇ 13, 2021
24 °C

ವಾಂತಿ-ಭೇದಿ ಉಲ್ಬಣ: 34 ಜನ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ತಾಲ್ಲೂಕಿನ ವ್ಯಾಸಮಲ್ಲಾಪುರ ತಾಂಡಾದಲ್ಲಿ ವಾಂತಿಭೇದಿ ಉಲ್ಬಣಿಸಿದ್ದು, 34 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಾಂತಿಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದ  ತಾಂಡದ ಲಕ್ಷ್ಮಣನಾಯ್ಕ (65) ಮತ್ತು ದಿವ್ಯಾಬಾಯಿ (5) ಎಂಬುವವರು ಬುಧವಾರ ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ 34ಕ್ಕೂ ಹೆಚ್ಚು ಜನ ಹೂವಿನಹಡಗಲಿ, ಮಾನ್ಯರಮಸಲವಾಡ ಮತ್ತು ಹರಪನಹಳ್ಳಿ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.ಕಳೆದ ಎರಡು ದಿನಗಳಿಂದ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ವಾಂತಿ-ಭೇದಿ ಉಲ್ಬಣಗೊಳ್ಳುತ್ತಿರುವುದರಿಂದ ತಾಂಡಾ ಜನತೆ ತಲ್ಲಣಗೊಂಡಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಿಂದ ಕಲುಷಿತ ನೀರು ಪೂರೈಕೆಯಾಗಿರುವುದರಿಂದ ತಾಂಡಾದಲ್ಲಿ ವಾಂತಿ-ಭೇದಿ ಉಲ್ಬಣಗೊಂಡಿದೆ ಎಂದು ಆರೋಗ್ಯ ಇಲಾಖೆಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಚರಂಡಿ ಮತ್ತು ತಿಪ್ಪೆಗುಂಡಿಗಳಲ್ಲಿ ಹಾಯ್ದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು  ಎಲ್ಲೆಂದರಲ್ಲಿ ಸೋರಿಕೆ ಉಂಟಾಗಿದ್ದರೂ ಮಾನ್ಯರ ಮಸಲವಾಡ ಗ್ರಾಮ ಪಂಚಾಯಿತಿಯವರು ದುರಸ್ತಿಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಾಂಡಾ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಾಂತಿ-ಭೇದಿ ಉಲ್ಬಣ ಸುದ್ದಿ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಮಾಧವರಾವ್ ಪಾಟೀಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಜಾಮುದ್ದೀನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪಿ.ಬಿ.ನಾಯ್ಕ ವ್ಯಾಸಮಲ್ಲಾಪುರ ತಾಂಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಂಡಿರುವ ಅಧಿಕಾರಿಗಳ ತಂಡ ಕೊಳವೆ ಬಾವಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿದೆ.ತಾಂಡದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಹಗಲು ರಾತ್ರಿ ತಲಾ ಒಬ್ಬ ವೈದ್ಯರು 6 ಜನ ಸಿಬ್ಬಂದಿಯನ್ನು ನಿಯೋಜಿಸಿ ವಾಂತಿ ಬೇಧಿ ಹತೋಟಿಗೆ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಾಧವರಾವ್‌ಪಾಟೀಲ್ ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ:

ಸಾಂಕ್ರಾಮಿಕ ರೋಗ ತಡೆಗೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿ.ಪಂ. ಸಿಇಒ ಮತ್ತು ಡಿಎಚ್‌ಒ ನೋಟಿಸ್ ಜಾರಿಗೊಳಿಸಿದ್ದರೂ ಮಾನ್ಯರಮಸಲವಾಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ನೈರ್ಮಲ್ಯ ಕಾರ್ಯ  ನಡೆಸದೇ ನಿರ್ಲಕ್ಷ್ಯ ವಹಿಸಲಾಗಿದೆ.

ಶುದ್ಧ ಕುಡಿಯುವ ನೀರು ಪೂರೈಕೆ, ಚರಂಡಿ ಸ್ವಚ್ಛತೆ, ಫಾಗಿಂಗ್ ವ್ಯವಸ್ಥೆ ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದರೂ, ಅದು ತಮಗೆ ತಲುಪಿಲ್ಲ ಎಂಬ ಕಾರಣ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ಗ್ರಾ.ಪಂ. ಕಾರ್ಯವೈಖರಿ ಕುರಿತು ಡಿಎಚ್‌ಒ ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.