ಶುಕ್ರವಾರ, ಮೇ 7, 2021
20 °C

ವಾಂತಿ-ಭೇದಿ: ಕಾಳನಹುಂಡಿಗೆ ಶಾಸಕರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ವಾಂತಿ-ಭೇದಿ ಪ್ರಕರಣ ತಹಬಂದಿಗೆ ಬರುವವರೆಗೂ ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲಿಯೇ ವಾಸ್ತವ್ಯಹೂಡಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಬೇಕು~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸೂಚಿಸಿದರು.ತಾಲ್ಲೂಕಿನ ಕಾಳನಹುಂಡಿಯಲ್ಲಿ ಕಲುಷಿತ ನೀರು ಪೂರೈಕೆಯಿಂದಾಗಿ ವಾಂತಿ-ಭೇದಿ ಕಾಣಿಸಿಕೊಂಡು ವೃದ್ಧೆ ದೊಡ್ಡಮ್ಮ ಎಂಬುವರು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.ಗ್ರಾಮದ ತೆರೆದ ಚರಂಡಿಗಳಲ್ಲಿ ಕಲ್ಮಷ ಕಟ್ಟಿಕೊಂಡಿದ್ದು, ವಿಲೇವಾರಿಗೆ ಸ್ಥಳೀಯ ಆಡಳಿತ ಕ್ರಮವಹಿಸಬೇಕು. ಕುಡಿಯುವ ನೀರು ಪೂರೈಕೆಯ ಓವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಛತೆಗೆ ಒತ್ತು ನೀಡಬೇಕು. ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸಬೇಕು.

 

ಶುದ್ಧೀಕರಿಸಿದ ನೀರು ಪೂರೈಸಬೇಕು ಎಂದು ಸೂಚಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೇಮಕುಮಾರ್ ಮಾತನಾಡಿ, `ಕಾಳನಹುಂಡಿಯಲ್ಲಿ 4 ಟ್ಯಾಂಕ್‌ಗಳಿವೆ. ಐದಾರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಹೀಗಾಗಿ, ನೀರಿಲ್ಲದ ವೇಳೆ ಟ್ಯಾಂಕ್ ಶುದ್ಧೀಕರಣಕ್ಕೆ ಆದ್ಯತೆ ನೀಡಿಲ್ಲ.

 

ಈ ಹಿಂದೆಯೂ ಗ್ರಾಮದಿಂದ ನೀರು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಅನೈರ್ಮಲ್ಯದ ಪರಿಣಮ ಕುಡಿಯಲು ನೀರು ಯೋಗ್ಯವಾಗಿಲ್ಲ ಎಂದು ಗ್ರಾ.ಪಂ. ಆಡಳಿತಕ್ಕೆ ಸೂಚಿಸಲಾಗಿತ್ತು. ಆದರೂ, ನಿರ್ಲಕ್ಷ್ಯವಹಿಸಿರುವ ಪರಿಣಾಮ ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಕಾಣಿಸಿಕೊಂಡಿದೆ~ ಎಂದು ವಿವರಿಸಿದರು.ಜಿ.ಪಂ. ಸದಸ್ಯೆ ಜಿ. ನಾಗಶ್ರೀ, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮಣ್‌ರಾವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಲ್ಲಿಕಾ, ಗ್ರಾ.ಪಂ. ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ಪುರುಷೋತ್ತಮ್, ಶಿವಣ್ಣ, ಮಹದೇವಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.