ಗುರುವಾರ , ನವೆಂಬರ್ 14, 2019
22 °C

ವಾಕ್ ವಿಜ್ಞಾನ ವಿಭಾಗ: ಭಾಷಾ ಶಿಕ್ಷಕರಿಗೆ ವರದಾನ

Published:
Updated:

ಭಾ ಷೆಯ ರಚನೆಯನ್ನು ತಿಳಿಯಲು ಹೊರಟಾಗ ಮಾತಿಗೆ ಶಬ್ದ ರಚನೆ ಇರುವಂತೆ ಅರ್ಥರಚನೆ ಇರುವುದು ತಿಳಿಯುತ್ತದೆ. ಭಾಷೆ ಅನೇಕ ಧ್ವನಿಗಳ ವ್ಯವಸ್ಥೆ. ಒಂದೊಂದು ಭಾಷೆಯಲ್ಲಿ ಒಂದೊಂದು ನಿರ್ದಿಷ್ಟ ಸಂಖ್ಯೆಯ ಧ್ವನಿಗಳಿರುತ್ತವೆ.ಮಕ್ಕಳಿಗೆ ಮಾತನಾಡುವ, ಆಲಿಸುವ, ಓದುವ, ಬರೆಯುವ, ಕೌಶಲಗಳನ್ನು ಬೆಳೆಸಿದಾಗ ಭಾಷೆ ಕಲಿಸುವುದು ಸುಲಭ. ಮಕ್ಕಳಲ್ಲಿ ಸಂವಹನ ನೈಪುಣ್ಯತೆ ಬೆಳೆಸುವುದೇ ಶಾಲೆಯ ಮೂಲ ಉದ್ದೇಶ.

 

ಶುದ್ಧ ಉಚ್ಚಾರಣೆ, ತಪ್ಪಿಲ್ಲದ ಬರಹ, ನಿಖರ ಅರ್ಥಕೋಶ ಭಾಷಾ ಬೋಧನೆಯ ಮಹತ್ವದ ಅಂಶಗಳು. ವಿದ್ಯಾರ್ಥಿಗಳಲ್ಲಿ ಭಾಷಾ ಪ್ರಭುತ್ವ ಬೆಳೆಸಲು ಭಾಷಾ ಶಿಕ್ಷಕರಿಗೆ ಧ್ವನಿಶಾಸ್ತ್ರ, ಧ್ವನಿಮಾಶಾಸ್ತ್ರಗಳ ಅರಿವು ಅಗತ್ಯ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿನ ವಾಕ್ ವಿಜ್ಞಾನ ವಿಭಾಗದಲ್ಲಿ ಸ್ಪಷ್ಟ ಉಚ್ಚಾರಣೆ, ಶಬ್ದ ತರಂಗ, ಧ್ವನಿ ವಿಶ್ಲೇಷಣೆ ಇತ್ಯಾದಿಗಳ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಇದೆ.ಪ್ರಾಥಮಿಕ ಹಂತದಲ್ಲೇ ಶಿಕ್ಷಕರು ಮಕ್ಕಳಿಗೆ ಕಾಗುಣಿತ ದೋಷ, ನಾಲಿಗೆ ತೊಡರು ಶಬ್ದಗಳು, ಅಲ್ಪಪ್ರಾಣ-ಮಹಾಪ್ರಾಣ ಜ್ಞಾನ ಇತ್ಯಾದಿಗಳನ್ನು ಸರಿಯಾಗಿ ಅಭ್ಯಾಸ ಮಾಡಿಸಿದರೆ ಮಕ್ಕಳಲ್ಲಿನ ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಇಂಬು ನೀಡಿದಂತೆ.ಜಗತ್ತಿನ ಎಲ್ಲ ದೇಶಗಳ ಐತಿಹ್ಯಗಳ ಜನಪದ ಸಾಹಿತ್ಯದಲ್ಲಿ ಭಾಷೆಯ ಮಾಂತ್ರಿಕತೆಯ ಉಲ್ಲೇಖಗಳು ಸಿಗುತ್ತವೆ. ಪ್ರತಿಭಾಷೆಯೂ ಆಯಾ ಭಾಷಿಕರ ಅಭಿವ್ಯಕ್ತಿಯ ಅವಶ್ಯಕತೆ ಪೂರೈಸಲು ರೂಪುಗೊಂಡಿರುವ ಸಂವಹನ ಮಾಧ್ಯಮ.ತಂತ್ರಜ್ಞಾನ ಯುಗದಲ್ಲಿ ಕೆಲವು ಭಾಷೆಗಳಿಗೆ ವ್ಯಾಪಕ ಬಳಕೆ ಮತ್ತು ಅಳವಡಿಕೆಯ ವಿಶೇಷ ಅವಕಾಶ ಒದಗಿರುವುದರಿಂದ ಅವು ಹೆಚ್ಚು ಮುಂದುವರಿಯುತ್ತಿವೆ. ಮತ್ತೆ ಕೆಲವು ಭಾಷೆಗಳು ಅಳಿವಿನ ಅಂಚಿನಲ್ಲಿವೆ.ದೇಶೀಯ ಭಾಷೆಗಳ ಸಮಗ್ರ ಚಟುವಟಿಕೆಗಳ ಅಧ್ಯಯನ ಕೇಂದ್ರವಾಗಿರುವ ಮೈಸೂರಿನ ಭಾಷಾ (ಸಿಐಐಎಲ್)ಸಂಸ್ಥೆ ಅಳಿವಿನ ಅಂಚಿನಲ್ಲಿರುವ ಭಾಷೆಗಳನ್ನು ಪತ್ತೆ ಹಚ್ಚಿ ಅವುಗಳ ಉಳಿವಿಗೆ ಶ್ರಮಿಸುತ್ತಿದೆ.ದೇಶೀಯ ಭಾಷೆಗಳಲ್ಲಿನ ಅಕ್ಷರ ಪದಗಳಲ್ಲಿ ವೈಶಿಷ್ಟ್ಯತೆ ತಿಳಿಸುವ, ರಕ್ಷಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.ಭಾಷೆ ಬಳಕೆಯಲ್ಲಿ ಸ್ವರಭಾರ ((intonation)), ಧ್ವನಿಯಲ್ಲಿ ಏರಿಳಿತ (modulation)), ತಡೆ/ವಿರಾಮ ((pause)ಸೂಕ್ತವೇಗ ( (proper speed)ಇತ್ಯಾದಿಗಳನ್ನು ವಾಕ್ ವಿಜ್ಞಾನ ಪ್ರಯೋಗಾಲಯದಲ್ಲಿ ಭಾಷಾ ತಜ್ಞರು ನಿಖರವಾಗಿ ಕಲಿಸುತ್ತಾರೆ.ಇಲ್ಲಿ ಭಾಷಾ ಶಿಕ್ಷಕರು, ಬಿಎಡ್, ಡಿಎಡ್ ಪ್ರಶಿಕ್ಷಣಾರ್ಥಿಗಳು, ಭಾಷಾ ಸಂಶೋಧಕರಿಗೆ ತರಬೇತಿ ಶಿಬಿರ, ಪುನಃಶ್ಚೇತನ ಕಾರ್ಯಾಗಾರ, ವಿಚಾರ ಸಂಕಿರಣಗಳು ವರ್ಷದಲ್ಲಿ (10ರಿಂದ 15ದಿನ) ಮೂರ‌್ನಾಲ್ಕು ಬಾರಿ ನಡೆಯುತ್ತವೆ.ಕರ್ನಾಟಕವಷ್ಟೇ ಅಲ್ಲದೇ ಹರಿಯಾಣ, ಚಂಡೀಗಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಇತರೆಡೆಗಳಿಂದಲೂ ಶಿಕ್ಷಕರು, ಸಂಶೋಧಕರು ಶಿಬಿರಗಳಲ್ಲಿ ತರಬೇತಿ ಪಡೆದಿದ್ದಾರೆ.ಇಲ್ಲಿ ನಡೆಯುವ ತರಬೇತಿಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿನ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ  ಶಿಕ್ಷಕರಿಗೆ ಹಲವಾರು ಉಪಯೋಗಗಳು (ನೌಕರಿಯಲ್ಲಿ ಬಡ್ತಿ, ವೇತನ ಹೆಚ್ಚಳ...) ಇವೆ. ಭಾಷಾ ಶಿಕ್ಷಕರಿಗೆ ಧ್ವನಿಪೆಟ್ಟಿಗೆ, ಧ್ವನ್ಯಂಗ, ಧ್ವನಿ ತೀವ್ರತೆ, ಧ್ವನಿ ತರಂಗ, ಸ್ಪಷ್ಟ ಉಚ್ಚಾರಣೆ, ಅಲ್ಪಪ್ರಾಣ, ಮಹಾಪ್ರಾಣ ಮುಂತಾದವುಗಳ ಅರಿವು ಅಗತ್ಯ. ವಾಕ್ ವಿಜ್ಞಾನ ಪ್ರಯೋಗಾಲಯದಲ್ಲಿ ಇವೆಲ್ಲವುಗಳ ಕರಾರುವಕ್ಕಾದ ಅಧ್ಯಯನಕ್ಕೆ ಅವಕಾಶವಿದೆ.ಪ್ರಪಂಚದಲ್ಲಿನ ಭಾಷೆಗಳಲ್ಲಿನ ಧ್ವನಿಗಳನ್ನು ಗುರುತಿಸುವುದಕ್ಕೆ ಭಾಷಾಶಾಸ್ತ್ರಜ್ಞರು  The Internationational Phonetic Alphabet  ವರ್ಣಮಾಲೆಯನ್ನು ಸಿದ್ಧಪಡಿಸಿದ್ದಾರೆ. ಈ ವರ್ಣಮಾಲೆ ಮೂಲಕ ವಿವಿಧ ಸಾದೃಶ್ಯ ಸಮೇತ ಧ್ವನಿವ್ಯತ್ಪತ್ತಿ ಅಂಗಗಳ ಕಾರ್ಯವಿಧಾನ ವಿವರಿಸಲಾಗುವುದು.ಭಾಷಾ ಧ್ವನಿಗಳ ಶಾಸ್ತ್ರೀಯ ಅಧ್ಯಯನವೇ ಧ್ವನಿ ರಚನಾಶಾಸ್ತ್ರ. ಧ್ವನಿಶಾಸ್ತ್ರ (ಫೊನೆಟಿಕ್ಸ್) ಮತ್ತು ಧ್ವನಿಮಾಶಾಸ್ತ್ರ(ಫೊನೆಮಿಕ್ಸ್)- ಈ ಶಾಸ್ತ್ರದ ವಿಭಾಗಗಳು.

ಮನುಷ್ಯರ ಧ್ವನ್ಯಂಗಗಳು ಉತ್ಪಾದಿಸುವ ಅಸಂಖ್ಯಾತ ಧ್ವನಿಗಳನ್ನು ಉಚ್ಚಾರಣಾ ರೀತಿಗಳಿಗೆ ಅನುಗುಣವಾಗಿ ಪರಿಶೀಲಿಸಿ ವಿವೇಚಿಸುವುದೇ ಧ್ವನಿಶಾಸ್ತ್ರ.ಭಾಷಾಧ್ವನಿಗಳ ಸ್ವರೂಪ ವಿವರಿಸುವುದೇ ಈ ಶಾಸ್ತ್ರದ ಗುರಿ.ಭಾಷೆ, ಉಪಭಾಷೆಗಳಲ್ಲಿ ಕಂಡುಬರುವ ಕ್ರಿಯಾಶೀಲ ಹಾಗೂ ಮಹತ್ವದ ಧ್ವನಿಗಳನ್ನು ವಿವೇಚಿಸುವುದೇ ಧ್ವನಿಮಾಶಾಸ್ತ್ರ. ಭಾಷೆಗೆ ಅವಶ್ಯವಾದ ಧ್ವನಿಗಳನ್ನು ಶೋಧಿಸಿ ವರ್ಣಮಾಲೆಗೆ ಅಳವಡಿಸುವುದು ಈ ಶಾಸ್ತ್ರದ ಉದ್ದೇಶ. ಶಿಕ್ಷಣ ಕ್ಷೇತ್ರದ ಇತರ ವಿಷಯಗಳ ಅಧ್ಯಯನಕ್ಕೆ ಭಾಷೆಯೇ ಮೂಲ.ಪದ ಪ್ರಯೋಗದಲ್ಲಿ ವಿರಾಮ ದೋಷ, ಉಚ್ಚಾರಣಾ ತೊಡಕು ಭಾಷೆಗೆ ಅನರ್ಥ ಕಲ್ಪಿಸುತ್ತವೆ. ಉಚ್ಚಾರಣೆಯಲ್ಲಿ ಸೂಕ್ತ ವೇಗ, ವಿರಾಮ ಬಳಕೆಯು ಒಂದು ಕಲೆ. ವಿದ್ಯಾರ್ಥಿಗಳಿಗೆ ಸರಳವಾಗಿ, ಸುಲಲಿತವಾಗಿ, ನಿರರ್ಗಳವಾಗಿ ಭಾಷೆ ಬಳಕೆ ಕಲಿಸುವುದು ಭಾಷಾ ಶಿಕ್ಷಕರ ಹೊಣೆಗಾರಿಕೆ. ಇವಿಷ್ಟೂ ಮಕ್ಕಳಿಗೆ ಕರಗತವಾದರೆ ವಿಷಯ ಗ್ರಹಿಕೆ ಮತ್ತು ಗುಂಪು ಅಭಿವ್ಯಕ್ತಿ ಬೆಳೆಯುತ್ತದೆ.ಭಾಷಾ ಸಂಸ್ಥಾನದಲ್ಲಿನ ಸುಸಜ್ಜಿತ ಅತ್ಯಾಧುನಿಕ ಧ್ವನಿ ವಿಜ್ಞಾನ ಪ್ರಯೋಗಾಲಯದಲ್ಲಿ ಭಾಷಾ ಸಾಮ್ಯತೆ, ವಿಶ್ಲೇಷಣೆ, ಸಂಯೋಜನೆ ಉಚ್ಚಾರಣೆ ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ.ಇಲ್ಲಿ ಶಬ್ದ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಇಲ್ಲಿ ತನಿಖಾ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಕೋರ್ಟ್, ಗುಪ್ತಚರ ದಳ ನೀಡುವ ಆರೋಪಿಗಳ ಧ್ವನಿ, ದೂರವಾಣಿ ಸಂಭಾಷಣೆ ಇತ್ಯಾದಿ ಪರೀಕ್ಷೆ ನಡೆಸಿ ಇಲಾಖೆಗೆ ವರದಿ ನೀಡಲಾಗುತ್ತದೆ.ಹಿಂದಿಯಲ್ಲಿ ಸಂದೇಶ ರವಾನಿಸಲು ಅಗತ್ಯ ಸಾಫ್ಟ್‌ವೇರ್ ಅನ್ನು ಮೊಟರೊಲಾ ಕಂಪೆನಿಗೆ ಈ ಘಟಕ ತಯಾರಿಸಿ ಕೊಟ್ಟಿದೆ. 

ಹೆಚ್ಚಿನ ಮಾಹಿತಿಗೆ ದೂ: 0821-2345021 ಅಥವಾ ವೆಬ್‌ಸೈಟ್: www.ciil.orgಭಾಷಾಧ್ಯಯನಕ್ಕೆ ಸದವಕಾಶ

ವಿಶ್ವದ ಸುಮಾರು 650 ಭಾಷೆಗಳ ಧ್ವನಿಗಳು ಇಲ್ಲಿವೆ.The International Phonetic Alphabet ಸಂಕೇತಗಳನ್ನು ಬಳಸಿ ತಯಾರಿಸಿದ ವಿವಿಧ ಭಾಷೆಗಳಲ್ಲಿನ ಪದಗಳ ಉಚ್ಚಾರಣೆ ಒಳಗೊಂಡ ಸುಮಾರು 200 (ದೃಶ್ಯ/ಶ್ರವ್ಯ ಫೈಲ್‌ಗಳ) ಸಿ.ಡಿ.ಗಳಿವೆ.ವಿದ್ಯಾರ್ಥಿಗಳಲ್ಲಿ ಭಾಷಾ ಪ್ರಭುತ್ವ ಬೆಳೆಸಲು  ಭಾಷಾ ಶಿಕ್ಷಕರಿಗೆ ಧ್ವನಿಶಾಸ್ತ್ರ, ಧ್ವನಿಮಾ  ಶಾಸ್ತ್ರಗಳ ಅರಿವು ಅಗತ್ಯ. ಮೈಸೂರಿನ   ಭಾರತೀಯ ಭಾಷಾ ಸಂಸ್ಥಾನದ ವಾಕ್ ವಿಜ್ಞಾನ ವಿಭಾಗದಲ್ಲಿ  ಸ್ಪಷ್ಟ ಉಚ್ಚಾರಣೆ, ಶಬ್ದ ತರಂಗ, ಧ್ವನಿ ವಿಶ್ಲೇಷಣೆ ಇತ್ಯಾದಿಗಳ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಇದೆ. ಭಾಷೆಗಳಲ್ಲಿನ ಸಾಮ್ಯತೆ, ಸ್ಪಷ್ಟ ಉಚ್ಚಾರಣೆ, ಕಾಗುಣಿತ ದೋಷಗಳ ಕಲಿಕೆಗೆ ಸ್ವರ್ಗ ವಾಕ್ ವಿಜ್ಞಾನ ವಿಭಾಗ. -ಜಿ.ಡಿ.ಪಿ. ಶಾಸ್ತ್ರಿ, ಪ್ರವಾಚಕ -ಸಂಶೋಧನಾಧಿಕಾರಿ

ಧ್ವನಿ ವಿಜ್ಞಾನ ವಿಭಾಗ,ಸಿಐಐಎಲ್

 

ಪ್ರತಿಕ್ರಿಯಿಸಿ (+)