ವಾಗ್ವಾದಕ್ಕೆ ಮೀಸಲಾದ ಸಾಮಾನ್ಯ ಸಭೆ

7

ವಾಗ್ವಾದಕ್ಕೆ ಮೀಸಲಾದ ಸಾಮಾನ್ಯ ಸಭೆ

Published:
Updated:

ಮಂಡ್ಯ: ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳ ನಡುವೆ ಸಮನ್ವ ಯತೆಯ ಕೊರತೆ ಇರುವುದು ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮತ್ತೆ ಬೆಳಕಿಗೆ ಬಂದಿದ್ದು, ಸಭೆಯು ಬಿಸಿ ಮಾತಿನ ಚಕಮಕಿ, ವಾಗ್ವಾದಕ್ಕೆ ವೇದಿಕೆಯಾಯಿತು.ವಾರ್ಡ್‌ನಲ್ಲಿ ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರೊಬ್ಬರು ಹಾಜರಿದ್ದ ಶಾಸಕರ ಎದುರೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆಗೂ ನಗರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಮತ್ತು ಉಪಾಧ್ಯಕ್ಷ ಚಿಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಗೌರೀಶ್ ನಡುವೆ ಹೊಂದಾಣಿಕೆ ಕೊರತೆ ಇದೆ ಎಂಬುದು ಸಭೆಯ ಆರಂಭದಿಂದಲೇ ಗೊತ್ತಾಯಿತು.ಇದರ ಜೊತೆಗೆ, ಸದಸ್ಯರ ನಡುವೆ ಗುಂಪುಗಳಾಗಿರುವುದು, ಒಬ್ಬ ಸದಸ್ಯರು ಮಾತಿಗೆ ನಿಂತಾಗ ಇತರರು ಇನ್ನೊಂದು ಗುಂಪಿನ ಸದಸ್ಯರು ಪ್ರತಿರೋಧ ವ್ಯಕ್ತ ಪಡಿಸುವುದು ಇಡೀ ಸಭೆಯ ಉದ್ದಕ್ಕೂ ಕಾಣಿಸಿತು.ಸದಸ್ಯರಾದ ಶಂಕರೇಗೌಡ-ನಂಜುಂಡಪ್ಪ, ಚಿಕ್ಕಣ್ಣ-ನಾಗೇಂದ್ರ ಮತ್ತು ಭೈರಪ್ಪ ಮತ್ತು ಶಿವಪ್ರಕಾಶ್‌ಬಾಬು ನಡುವೆ ಮಾತು, ಮಾತಿಗೆ ಅಡ್ಡಿ ಪಡಿಸುವ ಕುರಿತೇ ವಾಗ್ವಾದವು ನಡೆಯಿತು. ಇದು, ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿತು.ಒಂದು ಹಂತದಲ್ಲಿ ಬಹುತೇಕ ಪಕ್ಷದ ಸದಸ್ಯರ ವರ್ತನೆಯಿಂದ ಬೇಸತ್ತ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್, ಸದಸ್ಯರು ಹೀಗೆ ವರ್ತಿಸುವುದು ಸರಿಯಲ್ಲ.  ಮುಂದಿನ ಸಭೆಯಿಂದ ಇಲ್ಲಿಗೆ ಮಾರ್ಷಲ್‌ಗಳನ್ನು (ಭದ್ರತಾ ಸಿಬ್ಬಂದಿ) ಕರೆಸಬೇಕಾದಿತೇನೋ ಎಂದು ಅಭಿಪ್ರಾಯಪಟ್ಟರು.ಅಮಾನತು ಎಚ್ಚರಿಕೆ: ಪದೇ ಪದೇ ಸದಸ್ಯರು ಮಧ್ಯ ಪ್ರವೇಶಿಸಿ ಮಾತನಾಡುವುದಕ್ಕೆ ಆಕ್ಷೇಪಿಸಿದ ಅಧ್ಯಕ್ಷ ಅರುಣ್ ಕುಮಾರ್, ‘ಎಲ್ಲರಿಗೂ ಅವಕಾಶವಿದೆ. ಮಧ್ಯೆ ಪ್ರವೇಶಿಸಬಾರದು. ಇದೇ ಪುನರಾವರ್ತನೆ ಆದರೆ ಆರು ತಿಂಗಳು ಅಮಾನತು ಪಡಿಸಬೇಕಾದಿತು’ ಎಂದು ಎಚ್ಚರಿಸಿದರು.ಮಾಜಿ ಸಂಸದ, ಶಾಸಕರಿಗೂ ಅನುದಾನ-ಸದಸ್ಯರ ಆಕ್ಷೇಪ

ಮಂಡ್ಯ:
ನಗರಸಭೆಯ ಅನುದಾನವನ್ನು ಮಾಜಿ ಸಂಸದ, ಮೇಲ್ಮನೆ ಸದಸ್ಯರಿಗೂ ಬಿಡುಗಡೆ ಮಾಡುವುದಕ್ಕೆ ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದರು.ಅಲ್ಲದೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದ್ದು, ಕೇವಲ ಏಳು-ಎಂಟು ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಅನುದಾನ ಬಳಕೆಯಾಗಿದೆ. ನಿಯಮ ಮೀರಿ ತುಂಡು ಗುತ್ತಿಗೆಗಳನ್ನು ನೀಡಲಾಗುತ್ತಿದೆ ಎಂದು ಉಪಾಧ್ಯಕ್ಷ ಚಿಕ್ಕಣ್ಣ ಅವರೇ ತರಾಟೆಗೆ ತೆಗೆದುಕೊಂಡರು.

ವೇದಿಕೆ ಬದಲು, ಸದಸ್ಯರ ಸ್ಥಾನದಲ್ಲಿದ್ದ  ಚಿಕ್ಕಣ್ಣ ಅವರು, ಸಭೆಯು ಆರಂಭ ವಾಗುತ್ತಿದ್ದಂತೆ ಮಾಜಿಯಾಗಿರುವ ಸಂಸದ, ಮೇಲ್ಮನೆ ಸದಸ್ಯರಿಗೂ ಅನುದಾನ ಬಿಡುಗಡೆ ಆಗಿದೆ ಎಂದು ತಕರಾರು ತೆಗೆದು, ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.ಮಾಜಿ ಸಂಸದ ಅಂಬರೀಶ್, ಮಾಜಿ ಸದಸ್ಯರಾದ ಮಧು ಮಾದೇಗೌಡ, ಕೆ.ಟಿ. ಶ್ರೀಕಂಠೇಗೌಡ ಅವರಿಗೂ ಅನುದಾನ ಬಿಡುಗಡೆಯಾಗಿದೆ. ಇದಕ್ಕೆ ನಿಯಮದಲ್ಲಿ ಅವಕಾಶವಿದೆಯಾ, ಇದ್ದರೆ ತೋರಿಸಿ ಎಂದು ಪಟ್ಟು ಹಿಡಿದರು. ಆಯುಕ್ತರಿಂದ ಸ್ಪಷ್ಟ ಉತ್ತರ ಬರಲಿಲ್ಲ.ಆಯುಕ್ತ ಮತ್ತು ಅಧ್ಯಕ್ಷರು, ಈ ಹಿಂದೆ ಆಗಿದ್ದ ನಿರ್ಣಯದ ಅನುಸಾರ ಬಿಡುಗಡೆ ಆಗಿದೆ ಎಂದು ಸಮಜಾಹಿಷಿ ನೀಡಿದರು. ಶಾಸಕ ಎಂ.ಶ್ರೀನಿವಾಸ್ ಅವರು, ಮಾಜಿ ಸದಸ್ಯರಿಗೆ ಅನುದಾನ ಬಿಡುಗಡೆ ಬೇಡ. ಅನುದಾನ ಬಂದಾಗ ಸದಸ್ಯರ ಅವಧಿ ಇದ್ದರೆ ಬಿಡುಗಡೆ ಮಾಡಬಹುದು ಎಂದರು.ವಿ.ವಿ.ರಸ್ತೆ ಫುಟ್‌ಪಾತ್ ಪ್ರಕರಣ: ವರ್ಕ್ ಆರ್ಡರ್ ನೀಡದೇ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಒಂದು ಕಡೆ ಫುಟ್‌ಪಾತ್ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಚಿಕ್ಕಣ್ಣ ಆರೋಪಿಸಿದರು.ವರ್ಕ್ ಆರ್ಡರ್ ಇನ್ನೂ ನೀಡಿಲ್ಲ. ಈಗಾಗಲೇ ಕೆಲಸ ನಡೆಯುತ್ತಿದೆ. ಯಾವ ನಿಯಮದಡಿ ನೀಡಲಾಗಿದೆ ಎಂದು ಆಯುಕ್ತ ರನ್ನು ಪ್ರಶ್ನಿಸಿದರು. ಅಲ್ಲದೆ, ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯ ಆಗುತ್ತಿದೆ. ಕೇವಲ ಏಳು-ಎಂಟು ಸದಸ್ಯರ ವಾರ್ಡ್ ಗಳಿಗಷ್ಟೇ ನೆರವಾಗುತ್ತಿದೆ ಎಂದು ದೂರಿದರು.35 ಜನ ಸದಸ್ಯರಿರುವಾಗ, ಕೆಲವೇ ಸದಸ್ಯರ ವಾರ್ಡ್‌ಗಳಿಗೆ ಏಕೆ ಆದ್ಯತೆ ನೀಡುತ್ತೀರಿ. ಸಭೆಯಲ್ಲಿ ಅನುಮೋದನೆ ಆಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ನಾಗೇಂದ್ರ, ಶಿವಪ್ರಕಾಶ್ ಬಾಬು, ನಾಗಮ್ಮ, ಪದ್ಮಾವತಿ ಅವರೂ ದನಿಗೂಡಿಸಿದರು.ವ್ಯಕ್ತಿಗತವಾಗಿಯೇ ಹೆಚ್ಚಿನ ಚರ್ಚೆಗೆ ಒತ್ತು ನೀಡಲಾಗುತ್ತಿದೆ ಎಂಬುದನ್ನು ಗಮನಿಸಿದ ನಾಗೇಂದ್ರ ಅವರು, ಅಧ್ಯಕ್ಷರು, ಉಪಾ ಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ನಡುವೆ ಹೊಂದಾಣಿಕೆ ಇಲ್ಲ. ದಯವಿಟ್ಟು ಸಮನ್ವಯ ಸಮಿತಿರಚಿಸಿ ಎಂದು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry