ಭಾನುವಾರ, ಡಿಸೆಂಬರ್ 8, 2019
25 °C

ವಾಚ್‌ಗಳಿಂದ ಅರಳಿದ ವಿಶಿಷ್ಟ ಬೈಕ್‌ಗಳು

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಚ್‌ಗಳಿಂದ ಅರಳಿದ ವಿಶಿಷ್ಟ ಬೈಕ್‌ಗಳು

ತಿ.ನರಸೀಪುರ: ಪ್ರತಿಭೆ ಮತ್ತು ತಾಳ್ಮೆ ಇದ್ದ ವ್ಯಕ್ತಿಗಳಿಂದ ಕಸವೂ ಕಲೆಯಾಗಿ ಅರಳಬಲ್ಲದು ಎನ್ನುವುದಕ್ಕೆ ಈ ಯುವಕ ಉತ್ತಮ ಉದಾಹರಣೆ.

ಪಟ್ಟಣದ ಚಿಕ್ಕ ಅಂಗಡಿಯಲ್ಲಿ ಜೀವನೋಪಾಯಕ್ಕಾಗಿ ಬೆಳಗಿನ ವೇಳೆ ಸಣ್ಣ ಹೋಟೆಲ್ ನಡೆಸುವ ಬಿ.ಮಹೇಂದ್ರಕುಮಾರ್ ಬಿ.ಎ, ಬಿಇಡಿ ಓದಿರುವ ಯುವಕ. ವಿದ್ಯಾವಂತನಾದರೂ ಉದ್ಯೋಗ ಲಭಿಸದೇ ಹೋಟೆಲ್ ನಡೆಸುತ್ತ ಕುಟುಂಬದ ಜವಾಬ್ದಾರಿ ಹೊತ್ತಿರುವ ಈತ ಜೋಳದ ಕಡ್ಡಿ, ಸೀಮೆಸುಣ್ಣ ಮತ್ತಿತರ ವಸ್ತುಗಳನ್ನು ಬಳಸಿ ವಿವಿಧ ಆಕೃತಿಗಳನ್ನು ರಚಿಸುತ್ತಾನೆ.ಇತ್ತೀಚೆಗೆ ಕೆನಡಾದ ಡಿಮೇಟರ್ ಎಂಬ ವ್ಯಕ್ತಿ ವಾಚ್‌ಗಳಿಂದ ಬೈಕ್ ತಯಾರಿಸಿದ ವರದಿಯನ್ನು ಪತ್ರಿಕೆಗಳಲ್ಲಿ ಓದಿ ಸ್ಫೂರ್ತಿ ಪಡೆದು 5 - 6 ಹಳೆಯ ವಾಚ್‌ಗಳನ್ನು ಬಳಸಿ ಒಂದು ಬೈಕ್ ಮಾದರಿ ತಯಾರಿಸಿದ್ದಾನೆ. ವಾಚ್‌ಗಳ ಜತೆಯಲ್ಲಿ ತಂತಿಗಳನ್ನು ಬಳಸಿ ಮಾಡಿದ ಅಣ್ಣಾ ಬಾಂಡ್ ಬೈಕ್ ಗಮನ ಸೆಳೆಯುತ್ತಿದೆ.ಸೀಮೆಸುಣ್ಣದಿಂದ ಮೈಸೂರು ಅರಮನೆ, ತಾಜ್‌ಮಹಲ್, ಸೇಂಟ್ ಫಿಲೋಮಿನಾ ಚರ್ಚ್, ವಿಧಾನಸೌಧ, ಸಣ್ಣ ಮಕ್ಕಳು ಆಡುತ್ತಿರುವ ಆಕೃತಿ, ಒಂದು ಸೀಮೆಸುಣ್ಣ ಬಳಸಿ ಸರಪಳಿ ಮಾದರಿಗಳನ್ನು ಸಿದ್ಧಗೊಳಿಸಿರುವ ಈತ `ಚಿಕ್ಕ ವಯಸ್ಸಿನಿಂದಲೂ ಕೂಡ ಏನಾದರು ಹೊಸ ವಸ್ತುಗಳನ್ನು ನೋಡಿದರೆ ಅದನ್ನು ಮಾಡಬೇಕೆಂಬ ಆಸೆ ಆಗುತ್ತಿತ್ತು. ಅದನ್ನೆ ಪ್ರವೃತ್ತಿಯಾಗಿಸಿಕೊಂಡಿದ್ದೇನೆ. ಇದರಿಂದ ಹೊಟ್ಟೆ ತುಂಬುವುದಿಲ್ಲ. ಸಾಕಷ್ಟು ಸಮಯ ಕೂಡ ಬಳಕೆ ಆಗುತ್ತದೆ.ಆದರೆ ಇಂತಹ ಕಲೆಗಳಿಗೆ ಬೆಲೆ ಕೊಟ್ಟು ಪ್ರೋತ್ಸಾಹ ನೀಡುವವರ ಸಂಖ್ಯೆ ಕಡಿಮೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದು ಇದನ್ನೇ ನಂಬಿ ಕೂರುವಂತಿಲ್ಲ. ಉದ್ಯೋಗಕ್ಕೂ ಪ್ರಯತ್ನ ಮಾಡುತ್ತ ಈ ಕಲೆಯನ್ನು  ಮುಂದುವರಿಸಲು ಬಯಸುತ್ತೇನೆ' ಎನ್ನುತ್ತಾನೆ ಬಿ.ಮಹೇಂದ್ರಕುಮಾರ್.

ಪ್ರತಿಕ್ರಿಯಿಸಿ (+)