ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಣೆ

7
ಬಡವರಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಣೆ

Published:
Updated:

ಮಂಗಳೂರು:  ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೂ ವಿಸ್ತರಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಂತನೆ ನಡೆಸಿದ್ದು ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಆರೋಗ್ಯ ಸೇವೆ ಒದಗಿಸಲಿದೆ.  ರಾಜ್ಯದ ವಿವಿಧೆಡೆಯ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಸುಸಜ್ಜಿತವಾದ 158 ಆಸ್ಪತ್ರೆಗಳಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು. ಟಿ. ಖಾದರ್‌, ಇವುಗಳಲ್ಲಿ 9 ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಾಗಿವೆ. ರಾಜ್ಯದ ಗಡಿ ಭಾಗದಲ್ಲಿ ವಾಸಿಸುತ್ತಿರುವ ಬಿ.ಪಿ.ಎಲ್‌ ಕುಟುಂಬದವರ ಅನುಕೂಲಕ್ಕಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳ ಕೆಲವು ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.ನೋಂದಾಯಿತ ಆಸ್ಪತ್ರೆಗಳು ಯೋಜನೆಯ ಫಲಾನುಭವಿಗೆ ನಗದು ರಹಿತ ಚಿಕಿತ್ಸೆ ಒದಗಿಸುತ್ತವೆ. ಚಿಕಿತ್ಸೆಯ ವೆಚ್ಚವನ್ನು ಸರ್ಕಾರದ ನಿಗದಿತ ದರದ ಪ್ರಕಾರ ಆಸ್ಪತ್ರೆಗೆ ಪಾವತಿಸಲಾಗುವುದು. ಇದು ಕನಿಷ್ಠ 20 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಇರುತ್ತದೆ. ರೋಗ ಪತ್ತೆಯಿಂದ ಹಿಡಿದು ರೋಗಿಯು ಆಸ್‍ಪತ್ರೆಯಿಂದ ಬಿಡುಗಡೆ ಆಗುವವರೆಗೆ ತಪಾಸಣೆ, ಚಿಕಿತ್ಸೆ, ಊಟ, ವಸತಿ, ಪ್ರಯಾಣ ವೆಚ್ಚವನ್ನು ಒಳಗೊಂಡಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ 10 ದಿನಗಳ ಚಿಕಿತ್ಸೆ, ಚಿಕಿತ್ಸೆಯ ಅಡ್ಡ ಪರಿಣಾಮಗಳಿಗೆ ಚಿಕಿತ್ಸೆಯೂ ಒಳಗೊಂಡಿರುತ್ತದೆ ಎಂದು ಹೇಳಿದರು.ವ್ಯವಸ್ಥೆ: ಬಿಪಿಎಲ್‌ ಕಾಡುರ್ದಾರರಿಗೆ 1.5 ಲಕ್ಷ ರೂ. ಮೊತ್ತದ ಚಿಕಿತ್ಸೆ, ವಿಶೇಷ ಸಂದರ್ಭದಲ್ಲಿ ಅಗತ್ಯವಿದ್ದರೆ 50ಸಾವಿರ ರೂ. ಹೆಚ್ಚುವರಿ ಚಿಕಿತ್ಸಾ ಸೌಲಭ್ಯ. ಒಂದು ವರ್ಷದಲ್ಲಿ ಕುಟುಂಬದ ಯಾವುದೇ ಐದು ಜನರಿಗೆ ಮಾತ್ರ ಚಿಕಿತ್ಸೆ. ನೋಂದಾಯಿತ ಆಸ್ಪತ್ರೆಗಳಲ್ಲಿ ಸರ್ಕಾರದ ಕಡೆಯಿಂದ ಆರೋಗ್ಯಮಿತ್ರ ಕಾರ್ಯಕರ್ತರು ಇರುತ್ತಾರೆ. ಪ್ರಕರಣವೊಂದಕ್ಕೆ ಅವರಿಗೆ 250 ರೂ. ಪ್ರೋತ್ಸಾಹ ಧನ ನೀಡುವುದಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಥವಾ ಮಹಿಳೆಯರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದಲ್ಲಿ 350 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಆಶಾ ಕಾರ್ಯಕರ್ತೆಯರೂ ಜನರಿಗೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ವ್ಯಾಪ್ತಿಯಲ್ಲಿ 70 ಮಂದಿ ಆರೋಗ್ಯ ಮಿತ್ರ ಕಾರ್ಯಕರ್ತರು ಇರುತ್ತಾರೆ.ಯೋಜನೆ ವ್ಯಾಪ್ತಿಗೆ ಬರುವ ಕಾಯಿಲೆಗಳು: ಹೃದ್ರೋಗ , ಕ್ಯಾನ್ಸರ್‌, ನರರೋಗ, ಮೂತ್ರಪಿಂಡ ಕಾಯಿಲೆ, ಸುಟ್ಟ ಗಾಯ, ಅಪಘಾತ, ನವಜಾತ ಶಿಶುವಿಗೆ ಸಂಬಂಧಿಸಿದ ರೋಗಗಳು.ಗುರುತಿಸಲಾಗಿರುವ ಆಸ್ಪತ್ರೆಗಳು: ಎ.ಜೆ. ಆಸ್‍ಪತ್ರೆ ಮತ್ತು ಸಂಶೋಧನಾ ಕೇಂದ್ರ, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ, ಜಸ್ಟೀಸ್‌ ಕೆ. ಎಸ್‌. ಹೆಗಡೆ ಚಾರಿಟೇಬಲ್‌ ಆಸ್ಪತ್ರೆ, ಕಸ್ತೂರ್‌ಬಾ  ಆಸ್ಪತ್ರೆ, ಯುನಿಟಿ ಹೆಲ್ತ್‌ ಕಾಂಪ್ಲೆಕ್ಸ್‌ ಯುನಿಟ್‌ ಆಫ್‌ ಯುಸಿಎಚ್‌ಎಸ್‌, ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ, ವೆನ್‌ಲಾಕ್‌, ಒಮೆಗಾ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಮಂಗಳೂರು ಇನ್‌ಸ್ಟಿಟ್ಯೂಷನ್‌ ಆಫ್‌ ಆಂಕಾಲಜಿ, ಕೆಎಂಸಿ ಮಂಗಳೂರು (ಮಾತುಕತೆ ಪ್ರಗತಿಯಲ್ಲಿದೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry