ವಾಜಪೇಯಿ ಕೃಷಿ ವಿಕಾಸ ಯೋಜನೆ

7

ವಾಜಪೇಯಿ ಕೃಷಿ ವಿಕಾಸ ಯೋಜನೆ

Published:
Updated:

ಬೆಂಗಳೂರು: ಒಂದು ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಪರಿಶಿಷ್ಟ ಜಾತಿ, ಪಂಗಡದವರ ಭೂಮಿಯನ್ನು ದತ್ತು ಪಡೆದು ಸರ್ಕಾರದ ವತಿಯಿಂದಲೇ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ‘ವಾಜಪೇಯಿ ಕೃಷಿ ವಿಕಾಸ ಯೋಜನೆ’ಯನ್ನು ರೂಪಿಸಲಾಗಿದೆ ಎಂದು ಕೃಷಿ ಸಚಿವ ಉಮೇಶ್ ಕತ್ತಿ ಶುಕ್ರವಾರ ಇಲ್ಲಿ ತಿಳಿಸಿದರು.ರಾಜ್ಯದಲ್ಲಿ ಸುಮಾರು 76 ಲಕ್ಷ ಕುಟುಂಬಗಳು ಕೃಷಿಯಲ್ಲಿ ತೊಡಗಿವೆ. ಈ ಪೈಕಿ 8 ಲಕ್ಷ ಪರಿಶಿಷ್ಟ ಜಾತಿ ಮತ್ತು ಐದು ಲಕ್ಷ ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬಗಳಾಗಿವೆ. ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿಯ ಒಂದು ಲಕ್ಷ ಹಾಗೂ ಪಂಗಡದ 50 ಸಾವಿರ ಕುಟುಂಬಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ರೈತರ ಭೂಮಿಯನ್ನು ದತ್ತು ಪಡೆದು ಕೊಳವೆಬಾವಿ ಕೊರೆಸುವುದರ ಜೊತೆಗೆ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ, ರಾಸಾಯನಿಕ ಇತ್ಯಾದಿಗಳನ್ನು ಒದಗಿಸಲಾಗುವುದು. ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 90ರಷ್ಟನ್ನು ಸರ್ಕಾರವೇ ಭರಿಸಲಿದೆ. ಇನ್ನುಳಿದ ಶೇ 10ರಷ್ಟನ್ನು ಮಾತ್ರ ರೈತರು ಭರಿಸಬೇಕಾಗುತ್ತದೆ. ಅವರಿಗೂ ಜವಾಬ್ದಾರಿ ಬರಲಿ ಎಂಬ ಕಾರಣಕ್ಕಾಗಿ ಸ್ವಲ್ಪ ಭಾಗವನ್ನು ಭರಿಸುವಂತೆ ಮಾಡಲಾಗಿದೆ ಎಂದರು.ಇದೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆಯಾಗಲಿದ್ದು, ಕೃಷಿ, ರೇಷ್ಮೆ, ಸಹಕಾರ, ತೋಟಗಾರಿಕೆ, ಸಣ್ಣ ನೀರಾವರಿ, ಜಲಸಂಪನ್ಮೂಲ, ಪಶು ಸಂಗೋಪನೆ, ಇಂಧನ ಸೇರಿದಂತೆ ಎಂಟು ಇಲಾಖೆಗಳು ಇದರಲ್ಲಿ ಸೇರಲಿದ್ದು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ಪೀಕರಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಶ್ಲಾಘಿಸಿದರು.2010-11ನೇ ಸಾಲಿನಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಶೇ 102ರಷ್ಟು ಪ್ರಗತಿಯಾಗಿದೆ. 120 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಆದರೆ 125 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದರು.ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುವುದನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು. ಬರುವ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಭೂ ಚೇತನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು.ಸದ್ಯ 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಎರಡು ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry