ವಾಜಪೇಯಿ ಗೈರುಹಾಜರಿಯಲ್ಲಿ ಬಿಜೆಪಿಗೆ ನಡುಕ

7

ವಾಜಪೇಯಿ ಗೈರುಹಾಜರಿಯಲ್ಲಿ ಬಿಜೆಪಿಗೆ ನಡುಕ

Published:
Updated:

ಲಖನೌ: ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಮದುಮಗನಿಲ್ಲದ ಮದುವೆ ದಿಬ್ಬಣದಂತಾಗಿ ಹೋಗಿದೆ. ಸತತ ಐದು ಚುನಾವಣೆಗಳಲ್ಲಿ ಲಖನೌ ಲೋಕಸಭಾ ಕ್ಷೇತ್ರವನ್ನು ಗೆದ್ದು `ಮನೆಅಳಿಯ~ನೇ ಆಗಿಬಿಟ್ಟಿದ್ದ ಅಟಲ ಬಿಹಾರಿ ವಾಜಪೇಯಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿಯೂ ಅವರು ಪಾಲ್ಗೊಳ್ಳುತ್ತಿಲ್ಲ.ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಅವರು ಬರುವ ಸ್ಥಿತಿಯಲ್ಲಿಯೂ ಇಲ್ಲ. ರಾಜ್ಯದ ಉಳಿದ ಪ್ರದೇಶದಲ್ಲಿ ಕಂಡ ವಾಜಪೇಯಿ ಕೊರತೆ  ಲಖನೌದಲ್ಲಿ ಇನ್ನಷ್ಟು ಎದ್ದು ಕಾಣುತ್ತಿದೆ. ಮೊದಲೇ ಬಿರುಕು ಬಿಟ್ಟಿದ್ದ ಇಲ್ಲಿನ ಬಿಜೆಪಿ ಕೋಟೆ ನಡುಗುತ್ತಿದೆ.ಲಖನೌ ಒಂದು ಕಾಲದಲ್ಲಿ ಅವಧ ಸಂಸ್ಥಾನದ ರಾಜಧಾನಿಯಾಗಿ ಮೆರೆದ ಪಟ್ಟಣ. ಕಲೆ,ಸಂಸ್ಕೃತಿ, ಸಂಗೀತ,ಪಾಕ ವೈವಿಧ್ಯಕ್ಕೆ ಹೆಸರಾದ ಈ ಪಟ್ಟಣವನ್ನು ಈಗಲೂ ಉತ್ತರ ಭಾರತದ ಸಾಂಸ್ಕೃತಿಕ ರಾಜಧಾನಿ ಎನ್ನುತ್ತಾರೆ. ಈ ನಿರೀಕ್ಷೆಯಿಂದ ಇಲ್ಲಿಗೆ ಬಂದವರನ್ನು ಗೋಮತಿ ನದಿ ದಂಡೆಯಲ್ಲಿರುವ ಪಟ್ಟಣ ನಿರಾಶೆಗೊಳಿಸುತ್ತದೆ.  ಇಕ್ಕಟ್ಟಾದ ಹೊಂಡಬಿದ್ದ ರಸ್ತೆಗಳು, ಅಡ್ಡಾದಿಡ್ಡಿ ಓಡಾಡುವ ವಾಹನಗಳು, ರಸ್ತೆಗಳನ್ನು ಆಕ್ರಮಿಸಿರುವ ಒತ್ತುವರಿ, ದುರ್ನಾತ ಬೀರುವ ಚರಂಡಿ, ಕಂಡಕಂಡಲ್ಲಿ ಕಸದ ರಾಶಿಯಿಂದ ಕೂಡಿದ ಲಖನೌ ನಗರ ದೊಡ್ಡ ಕೊಳೆಗೇರಿಯಂತಿದೆ. ಹೊಸದೆಹಲಿಯ ವೆುಟ್ರೋ, ಬೆಂಗಳೂರಿನ ಉದ್ಯಾನ, ಮುಂಬೈನ ನಗರಸಾರಿಗೆ ಇಲ್ಲವೇ ಹೈದರಾಬಾದ್‌ನ ಫೈ ಓವರ್‌ನಂತಹ ನಗರ ಮೂಲಸೌಕರ್ಯದ ಯಾವ ಕುರುಹುಗಳೂ ಇಲ್ಲಿ ಇಲ್ಲ. ಈ ನಗರವನ್ನು ಹೋಲಿಸುವುದಾದರೆ `ಸಾಯುತ್ತಿರುವ ನಗರ~ವಾದ ಕೊಲ್ಕೋತ್ತಾಕ್ಕೆ ಹೋಲಿಸಬಹುದೇನೋ?ಸದ್ಯಕ್ಕೆ ಇಲ್ಲಿನ ಏಕೈಕ ಆಕರ್ಷಣೆ ಎಂದರೆ ಮುಖ್ಯಮಂತ್ರಿ ಮಾಯಾವತಿಯವರು 120 ಎಕರೆ ಪ್ರದೇಶದಲ್ಲಿ ಅಂದಾಜು 3000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸ್ಮಾರಕ ಮತ್ತು 85 ಎಕರೆ ಪ್ರದೇಶದಲ್ಲಿ ಅಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ `ಮಾನ್ಯವರ್ ಕಾನ್ಸಿರಾಮ್ ಸ್ಮಾರಕ ಸ್ಥಳ~. ಚುನಾವಣಾ ಆಯೋಗ ಸ್ಮಾರಕಗಳಲ್ಲಿರುವ ಮೂರ್ತಿಗಳಿಗೆ ಮುಸುಕು ಹಾಕಿದೆ. ಇಲ್ಲಿ ಗುರುವಾರ ನಡೆದ ಪಕ್ಷದ ರ‌್ಯಾಲಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಮಾಯಾವತಿ ಈ ಸ್ಮಾರಕಗಳನ್ನೇ ಸಾಧನೆ ಎಂದು ಬಣ್ಣಿಸಿ ಲಖನೌ ಪಟ್ಟಣವನ್ನು ನಾನು ಪ್ಯಾರಿಸ್ ಮಾಡಿದ್ದೇನೆ~ ಎಂದು ಹೇಳಿಕೊಂಡಿದ್ದಾರೆ.ತಾನು ಅಧಿಕಾರಕ್ಕೆ ಬಂದರೆ ಈ ಸ್ಮಾರಕಗಳ ಸ್ಥಳದಲ್ಲಿ ಶಾಲೆ-ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂಸಿಂಗ್ ಯಾದವ್ ಘೋಷಿಸಿದ್ದಾರೆ.ಬಿಜೆಪಿಯೂ ಹಿಂದೆ ಬಿದ್ದಿಲ್ಲ, ಆ ಸ್ಮಾರಕಗಳನ್ನು ಪುನರ್‌ವಿನ್ಯಾಸಗೊಳಿಸಿ ಬೇರೆ ರಾಷ್ಟ್ರನಾಯಕರ ಪ್ರತಿವೆುಗಳನ್ನು ಕೂಡಾ ಸ್ಥಾಪಿಸುವುದಾಗಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ. ಮಾಯಾವತಿಯವರ ಕೈಯಿಂದ ಅಧಿಕಾರ ತಪ್ಪಿದರೆ ಈ `ಸ್ಮಾರಕ ವಿವಾದ~ದಿಂದ ರಾಜ್ಯದಲ್ಲಿ ರಕ್ತಹರಿದರೂ ಯಾರು ಅಚ್ಚರಿಪಡಬೇಕಾಗಿಲ್ಲ. ಸ್ಮಾರಕ ನಿರ್ಮಾಣಗಳ ಹೊರತಾಗಿ ಮಾಯಾವತಿಯವರಿಗೆ ಲಖನೌ ಅಭಿವೃದ್ದಿ ಬಗ್ಗೆ ಯಾವ ಆಸಕ್ತಿಯೂ ಇದ್ದಂತಿಲ್ಲ. ತಪ್ಪು ಅವರೊಬ್ಬರದ್ದೇ ಅಲ್ಲ, ಬಿಹಾರವೂ ಸೇರಿದಂತೆ ಬೇರೆ ಎಲ್ಲ ರಾಜ್ಯಗಳ ಕನಿಷ್ಠ ರಾಜಧಾನಿಗಳಲ್ಲಿ ಬೀಸಿದ ಬದಲಾವಣೆಯ ಗಾಳಿ ಇಲ್ಲಿ ಕಾಣಿಸಿಕೊಂಡಿಯೇ ಇಲ್ಲ.ಹದಿಮೂರು ವರ್ಷಗಳ ಕಾಲ ಎಂಟು ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ವಾಜಪೇಯಿ. ಅದರಲ್ಲಿ ಕೊನೆಯ ಆರುವರ್ಷ ಅವರು ಪ್ರಧಾನಿಯೂ ಆಗಿದ್ದರು. ಸುಮಾರು ಎಂಟುವರ್ಷಗಳ ಕಾಲ ಸ್ವತಂತ್ರವಾಗಿ ಇಲ್ಲವೇ ಮೈತ್ರಿಕೂಟದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆ ಎಂಟೂ ವರ್ಷಗಳ ಕಾಲ ವಾಜಪೇಯಿ ಅವರ `ಕ್ಷೇತ್ರಪಾಲಕ~ ಲಾಲ್‌ಜಿ ಟಂಡನ್ ರಾಜ್ಯ ನಗರಾಭಿವೃದ್ದಿ ಸಚಿವರಾಗಿದ್ದರು. ಈ ಟಂಡನ್ ಅವರೇ ಲಖನೌ ಕ್ಷೇತ್ರಕ್ಕೆ ವಾಜಪೇಯಿ ಅವರ ಉತ್ತರಾಧಿಕಾರಿ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕನ್ನು ಗೆದ್ದಿತ್ತು. ಬಿಎಸ್‌ಪಿ ಎರಡು, ಎಸ್‌ಪಿ ಮತ್ತು ರಾಷ್ಟ್ರೀಯ ಸ್ವಾಭಿಮಾನ ಪಕ್ಷ ತಲಾ ಒಂದು ಸ್ಥಾನಗಳನ್ನು ಗಳಿಸಿದ್ದವು. ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಹೊಸ ಕ್ಷೇತ್ರವೊಂದು ಸೃಷ್ಟಿಯಾಗಿದೆ. ಆದರೆ ಲಖನೌ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಲಾಲ್‌ಜಿ ಟಂಡನ್ ಲೋಕಸಭೆಗೆ ಸ್ಪರ್ಧಿಸಿದ ಕಾರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಬಿಜೆಪಿಗೆ ನಗರ ಪ್ರದೇಶದಲ್ಲಿ ನಿಷ್ಠಾವಂತ ಮತದಾರರಿದ್ದಾರೆ. ಆದರೆ ನಾಯಕರೇ ಇಲ್ಲದಂತಾಗಿದೆ. ಈ ಕಾರಣದಿಂದಾಗಿಯೋ ಏನೋ, ಬಿಜೆಪಿಯ `ಹಳೆಯ ಹುಲಿ~ ಕಲ್‌ರಾಜ್ ಮಿಶ್ರಾ ಅವರೇ ಈ ಬಾರಿ ಲಖನೌ ಪೂರ್ವದಿಂದ ಕಣಕ್ಕಿಳಿದಿದ್ದಾರೆ. ಸುಮಾರು ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಇವರು ಎಂದೂ ನೇರ ಚುನಾವಣೆ ಎದುರಿಸದೆ ವಿಧಾನಪರಿಷತ್ ಸದಸ್ಯರಾಗಿಯೇ ಉಳಿದವರು. ಇವರೂ ಗೆದ್ದು, ಆದೃಷ್ಟದ ಬಲದಿಂದ  ಬಿಜೆಪಿಯೂ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಉಮಾಭಾರತಿ ಜತೆ ಇವರೂ ಸ್ಪರ್ಧೆಯಲ್ಲಿರಬಹುದು.ಇಳಿವಯಸ್ಸಿನ ಸಾಹಸಕ್ಕೆ ಇದೂ ಒಂದು ಕಾರಣ ಇದ್ದರೂ ಇರಬಹುದು.  ರಾಮಜನ್ಮಭೂಮಿ ಚಳುವಳಿಯ ನಂತರದ ದಿನಗಳಲ್ಲಿ ರಾಜ್ಯದ ಉಳಿದೆಲ್ಲ ಕಡೆಗಳಂತೆ ಇಲ್ಲಿಯೂ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಾ ಬಂದಿದೆ. ನಾಮ್‌ಕಾವಸ್ತೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಗೆಲ್ಲುವ ವಿಶ್ವಾಸವೇ ಇರುತ್ತಿರಲಿಲ್ಲ. ಈ ಬಾರಿ ವಾಜಪೇಯಿ ಗೈರುಹಾಜರಿಯಿಂದ ಇನ್ನಷ್ಟು ಬಡವಾಗಿರುವ ಬಿಜೆಪಿಯನ್ನು ಹೆಚ್ಚು ಆಕ್ರಮಣಕಾರಿಯಾಗಿ ಕಾಂಗ್ರೆಸ್ ಎದುರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ರೀಟಾ ಬಹುಗುಣ ಜೋಷಿ ಅವರೇ ಇಲ್ಲಿನ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಒಂದು ಕಾಲದಲ್ಲಿ ಅಪ್ಪ ಹೆಚ್.ಎನ್.ಬಹುಗುಣ ಪ್ರತಿನಿಧಿಸಿದ್ದ ಲಖನೌ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ರೀಟಾ ಬಹುಗುಣ ಸ್ಪರ್ಧಿಸಿ ಸೋತಿದ್ದರು.ನಗರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ರಾಹುಲ್‌ಗಾಂಧಿಯವರೇ ಇಲ್ಲಿಗೆ ಬಂದು ಎರಡು ದಿನ ಬೀಡುಬಿಟ್ಟಿದ್ದರು. ಹೀಗಿದ್ದರೂ ಒಂದೆರಡು ಸ್ಥಾನಗಳಿಗಿಂತ ಹೆಚ್ಚಿನ ನಿರೀಕ್ಷೆ  ಪಕ್ಷಕ್ಕೆ ಇದ್ದ ಹಾಗಿಲ್ಲ.ಬಿಎಸ್‌ಪಿಯ `ಬ್ರಾಹ್ಮಣ್ ಜೋಡೋ~ ಎಂಬ  ಸೋಷಿಯಲ್ ಎಂಜನಿಯರಿಂಗ್ ಫಲವಾಗಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಕ್ಷಿ ತಲಾಬ್ ಕ್ಷೇತ್ರದಿಂದ ನಕುಲ್‌ದುಬೆ ಎಂಬ ಬ್ರಾಹ್ಮಣ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು. ಸಚಿವರಾಗಿರುವ ದುಬೆ ಅದೇ ಕ್ಷೇತ್ರದಿಂದ ಮರುಆಯ್ಕೆ ಬಯಸಿದ್ದಾರೆ. ಈ ಪ್ರಯೋಗ ನಗರದ ಬೇರೆ ಕ್ಷೇತ್ರಗಳಲ್ಲಿ ಬಿಎಸ್‌ಪಿಗೆ ಯಶಸ್ಸು ತಂದುಕೊಟ್ಟಿಲ್ಲ. ಬಕ್ಷಿ ತಲಾಬ್ ಜತೆ  ಎರಡು ಮೀಸಲು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿರುವ ಮುಖ್ಯಮಂತ್ರಿ ಮಾಯಾವತಿಯವರಲ್ಲಿ ನಗರದ ಜನತೆಗೆ ಕೊಡುವಂತಹ ಭರವಸೆಗಳೇನು ಇಲ್ಲ. ಅವರು ಸಾಧನೆ ಎಂದು ಹೇಳಿಕೊಳ್ಳುವ ಸ್ಮಾರಕಗಳ ಬಗ್ಗೆ ನಗರದ ಮತದಾರರೂ ಆಸಕ್ತರಲ್ಲ.2002ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ವಾಜಪೇಯಿ `ಲಖನೌ ನಗರವನ್ನು ಇನ್ನೊಂದು ಬೆಂಗಳೂರು ಮಾಡುತ್ತೇನೆ, ಉತ್ತರಭಾರತದ ಸಿಲಿಕಾನ್ ಸಿಟಿ ಮಾಡುತ್ತೇನೆ~ ಎಂದು ಹೇಳಿದ್ದನ್ನು ನಾನೇ ಕೇಳಿದ್ದೆ. ಇದನ್ನು ಕೇಳಿಸಿಕೊಂಡ ಪತ್ರಕರ್ತನೊಬ್ಬ `ಬೆಂಗಳೂರು ಚೋಡಿಯೇ ಹಮ್ ತೋ ಬಿಹಾರ್ ಕೆ ವೋರ್ ಜಾ ರಹಾ ಹೈ~ ಎಂದಿದ್ದ ವ್ಯಂಗ್ಯದಿಂದ. ಲಖನೌ ಹೊಸ ಬಿಹಾರ ಕಡೆಯೂ ಹೋಗುತ್ತಿಲ್ಲ, ಇದು ಹಳೆಯ ಬಿಹಾರದ ಜತೆ ಪೈಪೋಟಿಗೆ ಬಿದ್ದಹಾಗಿದೆ. ಬದಲಾವಣೆಯ ಗಾಳಿ ಇಲ್ಲಿಯೂ ಬೀಸುತ್ತಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.ಇದು ಎಷ್ಟು ನಿಜ ಎನ್ನುವುದು ಶೇಕಡಾ 60ರಷ್ಟು 30ವರ್ಷದೊಳಗಿನ ಮತದಾರರನ್ನು ಹೊಂದಿರುವ ನಗರದಲ್ಲಿ ಭಾನುವಾರ (ಫೆ.19) ನಡೆಯುವ ಮತದಾನದ ಪ್ರಮಾಣದಿಂದ ಗೊತ್ತಾಗಬಹುದೇನೋ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry